
ಸಾಮಾಜಿಕ-ರಾಜಕೀಯ ಸಂಕಥನಗಳು ವರ್ತಮಾನದ ನೆಲೆಯಲ್ಲಿ ನಡೆಯಬೇಕಿವೆ
ನಾ ದಿವಾಕರ
ಭಾಗ 1
ವರ್ತಮಾನದ ಭಾರತ ವಿಕಾಸದ ದಾರಿಯಲ್ಲಿ ದಾಪುಗಾಲು ಹಾಕುತ್ತಿದ್ದರೂ, ವೈಜ್ಞಾನಿಕ ಸಾಧನೆ, ಆರ್ಥಿಕ ಮುನ್ನಡೆ ಮತ್ತು ಬೌದ್ಧಿಕ ಉನ್ನತಿಯ ಗುರಿಯೊಂದಿಗೆ ಸಾಗುತ್ತಿದ್ದರೂ, ದೇ಼ಶದುದ್ದಕ್ಕೂ ಸಮಾಜಗಳ ಒಳಹೊಕ್ಕು ನೋಡಿದಾಗ ಅಲ್ಲಿ ನಮಗೆ ಕಾಣುವ ಚಿತ್ರಣವೇ ಬೇರೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಬೇಕಾದ ರಾಜಕೀಯ ಅಧಿಕಾರ ಕೇಂದ್ರಗಳು ಹಂತಹಂತವಾಗಿ ಈ ಮೌಲ್ಯಗಳನ್ನು ಶಿಥಿಲಗೊಳಿಸುತ್ತಿರುವ ಹೊತ್ತಿನಲ್ಲಿ ಸಮಾಜದ ತಳಮಟ್ಟದಲ್ಲಿರುವ ಬಹುಸಂಖ್ಯಾತ ಜನತೆ ತಮ್ಮ ಭವಿಷ್ಯದ ಬಗ್ಗೆ ಆತಂಕಗಳನ್ನೇ ಹೆಚ್ಚು ಹೊಂದಿರುವುದು ಢಾಳಾಗಿ ಕಾಣುತ್ತದೆ. ನೆಲದ ವಾಸ್ತವಗಳನ್ನು (Ground Realities) ಅಥವಾ ಸಾಮಾಜಿಕ ಪಿರಮಿಡ್ಡುಗಳ ತಳಪಾಯದಲ್ಲಿರುವ ದುಡಿಯುವ ಜನತೆಯ ನಾಡಿಮಿಡಿತವನ್ನು ಅರಿಯುವಲ್ಲಿ ಭಾರತದ ರಾಜಕಾರಣ ವಿಫಲವಾಗಿರುವುದು ಈ ಸಮಸ್ಯೆಗಳನ್ನು ಮತ್ತಷ್ಟು ಜಟಿಲಗೊಳಿಸುತ್ತಿದೆ.

ಆದರೆ ಈ ಬೆಳವಣಿಗೆಗಳಿಗೆ ವಿಶಾಲ ಸಮಾಜದ ಬೌದ್ಧಿಕ ನೆಲೆಗಳು, ಭಿನ್ನ ಚಿಂತನಾಧಾರೆಗಳು ಮತ್ತು ಸೈದ್ಧಾಂತಿಕ ಆಲೋಚನೆಗಳು ಕುರುಡಾಗಿಲ್ಲ ಎನ್ನುವುದೂ ಗಮನಿಸಬೇಕಾದ ಅಂಶ. ಶೈಕ್ಷಣಿಕ ವಲಯಗಳಲ್ಲಿ, ಬೌದ್ಧಿಕ ವಾತಾವರಣದಲ್ಲಿ, ಕಲೆ-ಸಂಸ್ಕೃತಿ ಮತ್ತು ಆದ್ಯಾತ್ಮಿಕ ಪರಿಸರದಲ್ಲಿ, ಸಾಂಸ್ಥಿಕವಾಗಿ ಹಾಗೂ ಸಾಂಘಿಕವಾಗಿ ಈ ಜಟಿಲ ಸಿಕ್ಕುಗಳನ್ನು ಬಿಡಿಸುವ, ಒಳಬಿರುಕುಗಳನ್ನು ಗ್ರಹಿಸಿ ಸರಿಪಡಿಸುವ ಹಾಗೂ ಸವಾಲುಗಳನ್ನು ಎದುರಿಸುವ ಆಲೋಚನಾ ವಿಧಾನಗಳು, ಸೈದ್ಧಾಂತಿಕ ನೆಲೆಗಳಲ್ಲಿ ಕ್ರಿಯಾಶೀಲವಾಗಿವೆ. ಭಾರತ ವೈವಿಧ್ಯಮಯ ಸಂಸ್ಕೃತಿ, ಧರ್ಮ, ಭಾಷೆಗಳಿಂದ ಕೂಡಿರುವಂತೆಯೇ, ತಾತ್ವಿಕ ಚಿಂತನೆಗಳಲ್ಲೂ ವೈವಿಧ್ಯವನ್ನು ಕಾಪಾಡಿಕೊಂಡು ಬಂದಿವೆ. ಹಲವು ಸಿದ್ಧಾಂತಗಳು, ತತ್ವಶಾಸ್ತ್ರೀಯ ನೆಲೆಯಲ್ಲಿ , ಆಧ್ಯಾತ್ಮಿಕ ನೆಲೆಯಲ್ಲಿ ಜನಸಾಮಾನ್ಯರ ಜೀವನದಲ್ಲಿ ಪ್ರಭಾವಶಾಲಿಯಾಗಿ ಸ್ಥಾಪಿತವಾಗಿವೆ.
ಸಂಕಥನಗಳ ದಿಕ್ಕು ಮತ್ತು ಮಾದರಿ
ಆದರೆ ಸಮಸ್ಯೆ ಇರುವುದು ಈ ಸಂಕಥನಗಳು ಸಾಗುತ್ತಿರುವ ಹಾದಿ ಮತ್ತು ಅನುಸರಿಸಲಾಗುತ್ತಿರುವ ಮಾದರಿಗಳಲ್ಲಿ. ಭಾರತೀಯ ಸಮಾಜ ಇನ್ನೂ ಸಹ ಮನ್ವಂತರದ ಹಾದಿಯಲ್ಲಿದೆ. ಸಮಾಜ ಸುಧಾರಣೆ ಎಂಬ ಉದಾತ್ತ ಚಿಂತನೆಯ ಪ್ರಯತ್ನಗಳನ್ನು 12ನೆ ಶತಮಾನದಿಂದಲೂ ಕಾಣುತ್ತಲೇ ಇದ್ದೇವೆ, 19 ಮತ್ತು 20ನೆ ಶತಮಾನಗಳನ್ನು ಸಮಾಜ ಸುಧಾರಣೆಯ ಯುಗ ಎಂದೇ ಬಣ್ಣಿಸುವಷ್ಟು ಮಟ್ಟಿಗೆ ಕ್ರಾಂತಿಕಾರಿ ಸುಧಾರಣೆಗಳ ಚಿಂತನೆಗಳಿಗೆ ಸಾಕ್ಷಿಯಾಗಿದೆ. ಭಾರತವನ್ನು ಶತಮಾನಗಳಿಂದಲೂ ಕಾಡುತ್ತಿರುವ ಶ್ರೇಣೀಕೃತ ಜಾತಿ, ಧಾರ್ಮಿಕ ಸಾಂಪ್ರದಾಯಿಕತೆ ಅಥವಾ ಸನಾತನವಾದ, ಸಾಂಸ್ಕೃತಿಕ ತಾರತಮ್ಯಗಳು ಈ ಸುಧಾರಣಾ ಕ್ರಮಗಳಿಂದ ಅಮೂಲಾಗ್ರ ಪರಿವರ್ತನೆಯನ್ನು ಕಂಡಿಲ್ಲ ಬದಲಾಗಿ, ರೂಪಾಂತರಗೊಂಡು 21ನೆ ಶತಮಾನದ ಡಿಜಿಟಲ್ ಯುಗದಲ್ಲೂ ಚಾಲ್ತಿಯಲ್ಲಿವೆ.
ಪಿತೃಪ್ರಧಾನತೆ, ಊಳಿಗಮಾನ್ಯತೆ, ಮಹಿಳಾ ಅಧೀನತೆ, ಅಸ್ಪೃಶ್ಯತೆ, ಜಾತಿ ಭೇದಗಳು ಮತ್ತು ಎಲ್ಲ ರೀತಿಯ ಶೋಷಣೆ ಮತ್ತು ತಾರತಮ್ಯದ ವಿಧಾನಗಳು ಡಿಜಿಟಲ್ ಯುಗದ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅದರ ಸಾಧನಗಳನ್ನು ಬಳಸಿಕೊಂಡೇ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಸುಧಾರಣಾ ಕ್ರಮಗಳಿಂದ ಸಮಾಜದಲ್ಲಿ ಚಿಗುರೊಡೆಯಬೇಕಾಗಿದ್ದ ಔದಾತ್ಯಗಳಾಗಲೀ, ಔನ್ನತ್ಯಗಳಾಗಲೀ ಭಾರತದ ಸಾಂಪ್ರದಾಯಿಕ ಸಮಾಜವನ್ನು ಕಿಂಚಿತ್ತೂ ಅಲುಗಾಡಿಸಿಲ್ಲ ಎನ್ನುವುದನ್ನು ಮೇಲ್ನೋಟಕ್ಕೇ ಕಾಣಬಹುದು. ಇದರ ಒಂದು ಕಾರಣವನ್ನು ಸ್ಥಾಪಿತ ಸಾಮಾಜಿಕ ವ್ಯವಸ್ಥೆಯ ಆಳವಾದ ಬೇರುಗಳಲ್ಲಿ ಗುರುತಿಸಬಹುದಾದರೆ, ಮತ್ತೊಂದು ಕಾರಣವನ್ನು ಸುಧಾರಣಾ ಕ್ರಮಗಳ ಫಲಾನುಭವಿ ಸಮಾಜ/ಸಮುದಾಯಗಳ ಅವಜ್ಞೆಯಲ್ಲಿ ಗುರುತಿಸಬಹುದು. ಇದೇ ಅವಜ್ಞೆಯನ್ನು ಸಂವಿಧಾನದ ಫಲಾನುಭವಿ ಸಮಾಜಗಳಲ್ಲೂ ಒಂದು ಹಂತದವರೆಗೆ ಕಾಣಬಹುದು.

ಈ ದೃಷ್ಟಿಕೋನದಿಂದ ನೋಡಿದಾಗ ನಮ್ಮ ನಡುವಿನ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಸಂಕಥನಗಳ ಸ್ವರೂಪ, ವಿಧಾನ ಮತ್ತು ಹಾದಿ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಈ ಮೂರೂ ಆಯಾಮಗಳಲ್ಲಿ ಕಾಲಕಾಲಕ್ಕೆ ಹೊಸ ರೂಪಗಳನ್ನು ಪಡೆದುಕೊಳ್ಳುವ ಶೈಕ್ಷಣಿಕ-ಬೌದ್ಧಿಕ-ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಸಂಕಥನಗಳು ಭಾರತದ ಚರಿತ್ರೆಯನ್ನು ಮರುವಿಮರ್ಶೆಗೆ ಒಳಪಡಿಸುತ್ತಲೇ ವರ್ತಮಾನದ ಸಮಾಜವನ್ನು ಮತ್ತು ಭವಿಷ್ಯದ ಹಾದಿಯನ್ನು ಕಂಡುಕೊಳ್ಳುವ ರೀತಿಯಲ್ಲಿ ಇರಬೇಕಾಗುತ್ತದೆ. ಆದರೆ ಪ್ರಸ್ತುತ ಸಂದರ್ಭದ ಸಂಕಥನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಬಹುತೇಕ ವಾದ-ಸಂವಾದಗಳು, ಚರ್ಚೆಗಳು ಸ್ವಾತಂತ್ರ್ಯಪೂರ್ವ ಭಾರತದ ಚರಿತ್ರೆಯನ್ನು ಮತ್ತೆಮತ್ತೆ ಹೇಳುವ ಮತ್ತು ಆ ಯುಗದ ದಾರ್ಶನಿಕರ ತಾತ್ವಿಕ ನೆಲೆಗಳನ್ನೇ ಪುನರುಚ್ಛರಿಸುವ ಮಾದರಿಯನ್ನು ಅನುಸರಿಸುತ್ತಿರುವುದು ಕಾಣುತ್ತದೆ. ಇದನ್ನು ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಮತ್ತು ಧಾರ್ಮಿಕ ನೆಲೆಗಳಲ್ಲಿ ಪ್ರತ್ಯೇಕವಾಗಿ ನಿಕಷಕ್ಕೊಡ್ಡಬಹುದು.
ಸಂಕಥನಗಳ ಮಾದರಿ-ವಿನ್ಯಾಸ
ವಸಾಹತು ದಾಸ್ಯದಿಂದ ಭಾರತ ವಿಮೋಚನೆ ಪಡೆದ 78ನೆ ವರ್ಷವನ್ನು ಇಷ್ಟರಲ್ಲೇ ಆಚರಿಸಲಿದ್ದೇವೆ. ಈ ಸಂದರ್ಭದಲ್ಲಿ ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ನಡೆದುಬಂದ ಹಾದಿಯನ್ನು ಪುನಃಪುನಃ ವಿಮರ್ಶೆಗೊಳಪಡಿಸುವುದು ನಾಗರಿಕ ಕರ್ತವ್ಯ ಎನ್ನುವುದು ದಿಟ. ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚನೆಯ ಸಂದರ್ಭದಲ್ಲೇ ಹೇಳಿರುವಂತೆ ಮೌಲಿಕ ನೆಲೆಯಲ್ಲಿ ʼಪ್ರಜಾಪ್ರಭುತ್ವʼ ಭಾರತದ ನೆಲದ ಗುಣ ಅಲ್ಲ. ಶತಮಾನಗಳ ಊಳಿಗಮಾನ್ಯತೆ ಮತ್ತು ರಾಜಪ್ರಭುತ್ವಗಳ ನೆರಳಿನಲ್ಲೇ ಸಾಗಿಬಂದ ಭಾರತಕ್ಕೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪರಿಚಯಿಸುವ ಮಹತ್ಕಾರ್ಯವನ್ನು ನೆರವೇರಿಸಿದವರು ಸ್ವಾತಂತ್ರ್ಯದ ಪೂರ್ವಸೂರಿಗಳು, ವಿಶೇಷವಾಗಿ ಅಂಬೇಡ್ಕರ್, ಗಾಂಧಿ, ಲೋಹಿಯಾ ಮತ್ತಿತರರು. ವಸಾಹತುಶಾಹಿಯ ವಿರುದ್ದದ ಹೋರಾಟದ ನಡುವೆಯೂ ನೆಲೆ ಕಂಡುಕೊಂಡಿದ್ದ ಸನಾತನ ಚಿಂತನೆಗಳು ಮತ್ತು ಪ್ರಾಚೀನ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳನ್ನು ಬದಿಗೊತ್ತಿ, ನೈಜ ಪ್ರಜಾತಂತ್ರದ ಚೌಕಟ್ಟಿನಲ್ಲಿ ಸಂವಿಧಾನವನ್ನು ರಚಿಸಿದ್ದು ಚಾರಿತ್ರಿಕ ವಾಸ್ತವ.

ಈಗ ನಾವು ಏಳು ದಶಕಗಳ ಪ್ರಜಾಸತ್ತೆಯ ಫಲಾನುಭವಿಗಳಾಗಿದ್ದೇವೆ. ಇದರ ಒಳಹೊರಗನ್ನು, ಸೂಕ್ಷ್ಮ ಒಳಸುಳಿಗಳನ್ನು ಹಾಗೂ ವ್ಯತ್ಯಯ-ವೈರುಧ್ಯಗಳನ್ನು ನಿಕಷಕ್ಕೊಡ್ಡುತ್ತಲೇ ವಿಮರ್ಶಾತ್ಮಕವಾಗಿ ನೋಡುವ ಸಮಯ ಬಂದಿದೆ. ಏಕೆಂದರೆ 1947ರ ಆಶಯಗಳು ಎಲ್ಲೋ ಕಳೆದುಹೋಗುತ್ತಿವೆ ಎಂಬ ಭಾವನೆ ದಟ್ಟವಾಗುತ್ತಿದೆ. ಇದು ಸಕಾರಣವೂ ಆಗಿದೆ. ಏಕೆಂದರೆ ಅಂಬೇಡ್ಕರ್ ಬಯಸಿದ ರಾಜಕೀಯ-ಸಾಮಾಜಿಕ-ಆರ್ಥಿಕ ಸಮಾನತೆ ಇಂದಿಗೂ ಸಾಧ್ಯವಾಗಿಲ್ಲ. ಈ ಸಂದಿಗ್ಧತೆಯ ನಡುವೆಯೇ ನಡೆಯುತ್ತಿರುವ ರಾಜಕೀಯ ಸಂಕಥನಗಳ ಸ್ವರೂಪ ಹೇಗಿರಬೇಕು ? ಚರಿತ್ರೆಯ ತಪ್ಪು ಹೆಜ್ಜೆಗಳನ್ನು ಗುರುತಿಸುತ್ತಾ, ಚಾರಿತ್ರಿಕ ವ್ಯಾಖ್ಯಾನ-ನಿರೂಪಣೆಗಳನ್ನು ನಿಷ್ಕರ್ಷೆಗೊಳಪಡಿಸುತ್ತಾ, ವರ್ತಮಾನದ ವಾಸ್ತವಗಳನ್ನು ವಸ್ತುನಿಷ್ಠವಾಗಿ ವಿಮರ್ಶಿಸುವ ಮತ್ತು ಮರು ನಿರೂಪಣೆಗೊಳಪಡಿಸುವ ದಿಕ್ಕಿನಲ್ಲಿ ಇರಬೇಕಲ್ಲವೇ ? ಏಕೆಂದರೆ ಈಗ ನಡೆಯುವ ಸಂಕಥನಗಳು ಭವಿಷ್ಯದ ಭಾರತಕ್ಕೆ ತಾತ್ವಿಕ ತಳಹದಿಯನ್ನು ಒದಗಿಸಬೇಕಾಗುತ್ತದೆ.
ಆದರೆ ಇಲ್ಲಿ ನಮಗೆ ಕಾಣುತ್ತಿರುವ ಸಿಕ್ಕುಗಳೇ ಭಿನ್ನವಾಗಿದೆ. ಎಲ್ಲ ಸಾಂಸ್ಥಿಕ-ಸಾಂಘಿಕ ಸಂಕಥನಗಳನ್ನೂ, ಸಿದ್ದಾಂತಗಳ ಸೀಮೆಯನ್ನು ದಾಟಿ, ಸೂಕ್ಷ್ಮವಾಗಿ ಗಮನಿಸಿದಾಗ, ವರ್ತಮಾನದ ವಾಸ್ತವಗಳನ್ನು ಒಳಹೊಕ್ಕು ನೋಡುವುದಕ್ಕಿಂತಲೂ ಹೆಚ್ಚಾಗಿ, ಚರಿತ್ರೆಯ ರಾಜಕೀಯ ಚಿಂತನೆ ಮತ್ತು ಚಿಂತಕರನ್ನು ಮುಖಾಮುಖಿಯಾಗಿಸುತ್ತಾ ಅವರ ನಡುವಿನ ತಾತ್ವಿಕ ಭಿನ್ನಮತಗಳನ್ನೇ ಪ್ರಧಾನವಾಗಿ ಚರ್ಚಿಸಲಾಗುತ್ತಿದೆ. ಸಾವರ್ಕರ್-ಗೋಲ್ವಾಲ್‌ಕರ್ vs ಗಾಂಧಿ, ಗಾಂಧಿ-ತಿಲಕ್ vs ಅಂಬೇಡ್ಕರ್, ನೆಹರೂ vs ಲೋಹಿಯಾ vs ಅಂಬೇಡ್ಕರ್, ಗಾಂಧಿ-ಅಂಬೇಡ್ಕರ್ vs ಕಾರ್ಲ್ ಮಾರ್ಕ್ಸ್ , ಹೀಗೆ ಈ ಚಿಂತಕರ ವಿಚಾರಧಾರೆಗಳನ್ನು ತುಲನಾತ್ಮಕವಾಗಿ ವಿಮರ್ಶಿಸುವುದರಲ್ಲೇ ಹೆಚ್ಚಿನ ಸಮಯ ವ್ಯಯವಾಗುತ್ತಿದೆ. ಇದು ಅಗತ್ಯ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಇದಕ್ಕಿಂತಲೂ ಅಗತ್ಯವಾಗಬೇಕಾಗಿರುವುದು ವರ್ತಮಾನದ ರಾಜಕಾರಣದಲ್ಲಿ ರೂಪಾಂತರಗೊಂಡು, ಕ್ರಿಯಾಶೀಲವಾಗಿರುವ ಇದೇ ಚಿಂತಕರ ತಾತ್ವಿಕ ನಿರೂಪಣೆಗಳು.

ರಾಜಕೀಯ ಸಂಕಥನಗಳು
ಸಾವರ್ಕರ್ ಪ್ರತಿಪಾದಿಸಿದ ಹಿಂದುತ್ವದ ಒಳಸೂಕ್ಷ್ಮಗಳನ್ನು ಚಾರಿತ್ರಿಕ ನೆಲೆಯಲ್ಲಿ ಪರಾಮರ್ಶಿಸಿ ನಿರಾಕರಿಸುವುದು/ಸ್ವೀಕರಿಸುವುದು ಬೌದ್ಧಿಕ ನೆಲೆಯಲ್ಲಿ ಅಗತ್ಯವೇನೋ ಹೌದು. ಆದರೆ ಇಂದು ಬಿಜೆಪಿ ಅನುಸರಿಸುತ್ತಿರುವ ʼಹಿಂದುತ್ವʼ ರಾಜಕಾರಣವು ಗೋಲ್ವಾಲ್‌ಕರ್ ಚಿಂತನೆಗಳನ್ನೂ ಸಮೀಕರಿಸಿಕೊಂಡು, ಅಪಾಯಕಾರಿ ದಿಕ್ಕಿನಲ್ಲಿ ಸಾಗುತ್ತಿದೆ. ಸಾವರ್ಕರ್ ಪ್ರತಿಪಾದಿಸಿದ ಭೌಗೋಳಿಕ ಭಾರತಕ್ಕೂ, 21ನೆ ಶತಮಾನದ ಜಾಗತೀಕರಣಕ್ಕೆ ತೆರೆದುಕೊಂಡಿರುವ ಸ್ವತಂತ್ರ ಭಾರತಕ್ಕೂ ಇರುವ ವ್ಯತ್ಯಾಸವನ್ನು, ಬಂಡವಾಳಶಾಹಿಯ ನವ ಉದಾರವಾದಿ ಸ್ವರೂಪದ ಮೂಲಕ, ಕಾರ್ಪೋರೇಟ್ ಮಾರುಕಟ್ಟೆಯ ಮೂಲಕ ನೋಡಬಹುದಾಗಿದೆ. ಈ ದೃಷ್ಟಿಯಿಂದಲೇ ಬಿಜೆಪಿ ನಾಯಕತ್ವವು ಸಾವರ್ಕರ್-ಗೋಲ್ವಾಲ್‌ಕರ್ ತತ್ವಗಳನ್ನು ಸಮಕಾಲೀನಗೊಳಿಸುವ ಮೂಲಕ ಅನುಸರಿಸುತ್ತಿದೆ. ಈ ನಿಟ್ಟಿನಲ್ಲಿ ಮಿಲೆನಿಯಂ ಸಮೂಹವನ್ನು ಒಳಗೊಳ್ಳುವ ಮೂಲಕ ಭವಿಷ್ಯದ ಬುನಾದಿಯನ್ನು ಭದ್ರಪಡಿಸಿಕೊಳ್ಳುತ್ತಿದೆ.
ಆದರೆ ಈ ಇಬ್ಬರು ನಾಯಕರಿಗೆ ನಾವು ಮುಖಾಮುಖಿಯಾಗಿಸುವ ಗಾಂಧಿ ನಮ್ಮ ನಡುವೆ ಎಷ್ಟು ಚರ್ಚೆಗೊಳಗಾಗುತ್ತಿದ್ದಾರೆ ? ಗಾಂಧಿ ಪ್ರತಿಪಾದಿಸಿದ ಗ್ರಾಮ ಸ್ವರಾಜ್ ಮತ್ತಿತರ ಕಲ್ಪನೆಗಳು ವರ್ತಮಾನಕ್ಕೆ ಪೂರಕವಾಗಿದೆಯೋ ಇಲ್ಲವೋ ಎನ್ನುವುದು ಚರ್ಚಾಸ್ಪದ. ಆದರೆ ಗಾಂಧಿ ಬೋಧಿಸಿದ ಅಹಿಂಸಾತ್ಮಕ ಮಾರ್ಗಗಳು, ಗ್ರಾಮೀಣ ಭಾರತದ ಮೂಲಕ ದೇಶದ ಸರ್ವತೋಮುಖ ಅಭಿವೃದ್ಧಿಯನ್ನು ನೋಡುವ ದಾರ್ಶನಿಕತೆ ಮತ್ತು ಗ್ರಾಮೀಣ ಕೈಗಾರಿಕೆಗಳ ಅಭಿವೃದ್ಧಿ ಇತ್ಯಾದಿಗಳನ್ನು ಗಾಂಧಿಯನ್ನು ಆರಾಧಿಸುವ ರಾಜಕೀಯ ಪಕ್ಷಗಳೂ ಎಷ್ಟರ ಮಟ್ಟಿಗೆ ಪರಾಮರ್ಶಿಸುತ್ತಿವೆ ? ಕೇವಲ ಭಜನೆ-ಆರಾಧನೆಯ ಮಟ್ಟಕ್ಕೆ ಸೀಮಿತಗೊಳಿಸುವ ಮೂಲಕ, ಅಧಿಕಾರ ರಾಜಕಾರಣದ ಗಾಂಧಿವಾದಿಗಳು ಸಾಮಾಜಿಕ ತಾರತಮ್ಯ ಮತ್ತು ಆರ್ಥಿಕ ಅಸಮಾನತೆಗಳನ್ನು ಗಂಭೀರವಾಗಿ ಚರ್ಚಿಸುತ್ತಲೇ ಇಲ್ಲ.

ಗಾಂಧಿ ಏನು ಹೇಳಿದ್ದಾರೆ ಎನ್ನುವುದಕ್ಕಿಂತಲೂ, ಅವರ ಬೋಧನೆಯನ್ನು ನಾವು ಎಷ್ಟರಮಟ್ಟಿಗೆ ಅಳವಡಿಸಲು ಸಾಧ್ಯವಾಗಿದೆ ಅಥವಾ ಏಕೆ ಅಳವಡಿಸಲಾಗುತ್ತಿಲ್ಲ ಎಂದು ನಿಷ್ಕರ್ಷೆ ಮಾಡುವ ಸಂಕಥನದ ಮಾದರಿಗಳನ್ನು ಎಲ್ಲೂ ಕಾಣಲಾಗುವುದಿಲ್ಲ. ನೂರಾರು ವಿಚಾರ ಸಂಕಿರಣಗಳು ನಡೆಯುತ್ತಿದ್ದರೂ, ಈ ವ್ಯತ್ಯಯವನ್ನು ಆತ್ಮವಿಮರ್ಶೆಯ ನೆಲೆಯಲ್ಲಿ ಸಂವಾದಿಸುವ ಬೌದ್ಧಿಕ ಕ್ರಿಯೆಯನ್ನು ಕಾಣಲಾಗುತ್ತಿಲ್ಲ. ಚಾರಿತ್ರಿಕ ವ್ಯಕ್ತಿಗಳನ್ನು ಅವರ ಸಿದ್ಧಾಂತಗಳನ್ನು ಮುಖಾಮುಖಿಯಾಗಿಸಿ ಅವಲೋಕಿಸುವಷ್ಟೇ ಮುಖ್ಯವಾದದ್ದು, ವರ್ತಮಾನದ ಸಮಾಜಕ್ಕೆ ಬೇಕಾದ ಪುರೋಗಾಮಿ ಚಿಂತನೆಗಳನ್ನು ನಾವು ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದ್ದೇವೆ ಎಂಬ ಆತ್ಮವಿಮರ್ಶೆ ಅಗತ್ಯವಿದೆ. ನಮ್ಮ ರಾಜಕೀಯ ಸಂಕಥನಗಳು ಈ ನಿಟ್ಟಿನಲ್ಲಿ ಸಾಗುತ್ತಿಲ್ಲ.
ಗಾಂಧಿ-ಅಂಬೇಡ್ಕರ್-ಮುಖಾಮುಖಿ
ಇದೇ ಸೂತ್ರವನ್ನು ಇತರ ದಾರ್ಶನಿಕರ ವಿಚಾರಧಾರೆಗಳಿಗೂ ವಿಸ್ತರಿಸಿ ನೋಡಿದಾಗ ನಮಗೆ ಪ್ರಧಾನವಾಗಿ ಕಾಣುವುದು ಅಂಬೇಡ್ಕರ್, ಗಾಂಧಿ ಮತ್ತು ಮಾರ್ಕ್ಸ್. ಅಂಬೇಡ್ಕರ್ ಸಮಾಜವಾದಿ ಸಿದ್ಧಾಂತವನ್ನು ತಾತ್ವಿಕವಾಗಿ ಒಪ್ಪಿಕೊಂಡ ದಾರ್ಶನಿಕ ಚಿಂತಕರು. ಗಾಂಧಿ ಸಮಾಜವಾದವನ್ನು ಭಾವನಾತ್ಮಕ ನೆಲೆಯಲ್ಲಿ ಕಂಡ ವ್ಯಕ್ತಿ. ಹಾಗಾಗಿಯೇ ಇಬ್ಬರ ಸ್ವಾತಂತ್ರ್ಯ ಹೋರಾಟಗಳನ್ನು ಗಮನಿಸಿದಾಗ ಕಾಣುವುದೇನೆಂದರೆ , ಗಾಂಧಿ ʼ ದೇಶ ʼ ಅಥವಾ ʼ ಸ್ವತಂತ್ರ ಭಾರತ ʼ ದ ಕಲ್ಪನೆಯನ್ನು ಭೌಗೋಳಿಕ ನೆಲೆಯಲ್ಲಿ ರಾಷ್ಟ್ರೀಯವಾದ ಮೂಲಕ ವ್ಯಾಖ್ಯಾನಿಸಿದ್ದರು. ಆದರೆ ಅಂಬೇಡ್ಕರ್ ಈ ಕಲ್ಪನೆಗಳನ್ನು ಸಮಾಜದ ತಳಸ್ತರದ ಶೋಷಿತ-ದಮನಿತ-ಅವಕಾಶವಂಚಿತ ಜನಸಮುದಾಯಗಳ ನಡುವೆ ನಿಂತು ವ್ಯಾಖ್ಯಾನಿಸಿದ್ದರು. ಹಾಗಾಗಿಯೇ ಗಾಂಧಿ ಕಲ್ಪನೆಯ ಸಮಾನತೆ ವರ್ಗ ವ್ಯತ್ಯಯಗಳಿಂದ ಹೊರತಾಗಿ ಕಂಡರೆ, ಅಂಬೇಡ್ಕರ್ ತಮ್ಮ ಸಮಾನತೆಯ ಕಲ್ಪನೆಯನ್ನು ಭಾರತದ ಶ್ರೇಣೀಕೃತ ಸಮಾಜದಲ್ಲಿ ಬೇರೂರಿರುವ ಸ್ತರೀಯ ಹಾಗೂ ಜಾತೀಯ ಮೇಲು-ಕೀಳುಗಳ ನೆಲೆಯಲ್ಲಿ ವ್ಯಾಖ್ಯಾನಿಸಿದ್ದರು.
ಇವರೊಡನೆ ಮಾರ್ಕ್ಸ್‌ನನ್ನು ಮುಖಾಮುಖಿಯಾಗಿಸುವಾಗ, ವರ್ಗ ಸಮಾಜದ ಒಳಬಿರುಕುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಭಾರತದಲ್ಲಿ ಪ್ರತಿಯೊಂದು ಜಾತಿಯೂ ಒಂದು ವರ್ಗ ಎಂಬ ಅಂಬೇಡ್ಕರ್ ಅವರ ಆಲೋಚನೆಯನ್ನು ಮಾರ್ಕ್ಸ್‌ವಾದಿ ನೆಲೆಯಲ್ಲಿ ವಿಸ್ತರಿಸಿದಾಗ, ಇಂದಿಗೂ ತಳಸಮುದಾಯಗಳಲ್ಲೂ, ಕೆಳಸ್ತರದ ಸಮಾಜದಲ್ಲೂ ಕಾಣಬಹುದಾದ ವರ್ಗ ತಾರತಮ್ಯಗಳನ್ನು ಪ್ರತಿಯೊಂದು ಜಾತಿಯ ಆಂತರ್ಯದಲ್ಲೂ ಕಾಣಬಹುದಲ್ಲವೇ ? ವರ್ತಮಾನದಲ್ಲಿ ನಿಂತು ನೋಡಿದಾಗ, ಸಂವಿಧಾನದ ಫಲಾನುಭವಿ ಜಾತಿಗಳು ಈಗ ವರ್ಗಗಳಾಗಿ ರೂಪುಗೊಂಡು, ತಾವು ಸಾಗಿಬಂದ ಸಾಮುದಾಯಿಕ ಬದುಕನ್ನು ಹಿಂತಿರುಗಿ ನೋಡುವ ವ್ಯವಧಾನವನ್ನೇ ಕಳೆದುಕೊಂಡಿರುವುದು ಢಾಳಾಗಿ ಕಾಣುತ್ತದೆ. ಈ ಆರ್ಥಿಕ ಮೇಲ್ವರ್ಗಗಳು, ಮೇಲ್ಪದರದ ಸಮಾಜವೂ ಸಹ ಜಾತಿಗೋಡೆಗಳನ್ನು ದಾಟಿ ಹಿಂದುತ್ವ ರಾಜಕಾರಣಕ್ಕೆ ಒತ್ತಾಸೆಯಾಗಿ ನಿಂತಿರುವುದನ್ನು ಹೇಗೆ ವ್ಯಾಖ್ಯಾನಿಸಬೇಕು ?
ಈ ಜಿಜ್ಞಾಸೆ ನಮ್ಮನ್ನು ಕಾಡಬೇಕಲ್ಲವೇ ? ಕಾಡುವುದೇ ಆದರೆ ನಮ್ಮ ರಾಜಕೀಯ ಸಂಕಥನಗಳಲ್ಲಿ, ಅಂಬೇಡ್ಕರ್ ಅಥವಾ ಮಾರ್ಕ್ಸ್ ಏನು ಹೇಳಿದ್ದರು ಎನ್ನುವ ಪ್ರಶ್ನೆಗಿಂತಲೂ ಮುಖ್ಯವಾಗಿ ಕಾಡಬೇಕಿರುವುದು, ಈ ವಿಚಾರಧಾರೆಯನ್ನು ಅಂಬೇಡ್ಕರ್‌ವಾದಿ-ಮಾರ್ಕ್ಸ್‌ವಾದಿ ಸಂಘಟನೆಗಳು ಎಷ್ಟರ ಮಟ್ಟಿಗೆ ಅಳವಡಿಸಿಕೊಂಡು, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಲು ಸಾದ್ಯವಾಗಿದೆ ಎಂಬ ಪ್ರಶ್ನೆ. ನಾವು ಆಯೋಜಿಸುವ ವಿಚಾರ ಸಂಕಿರಣಗಳು ಅಲ್ಲಿ ಪುಂಖಾನುಪುಂಖವಾಗಿ ಹೊರಬರುವ ಸಮಕಾಲೀನ ನಿರೂಪಣೆಗಳು ಈ ರೀತಿಯ ರಾಜಕೀಯ ಸಂಕಥನವನ್ನು ಹುಟ್ಟುಹಾಕುತ್ತಿವೆಯೇ ? ಇಲ್ಲ ಎಂದಾದರೆ ನಾವು ಸ್ವ-ವಿಮರ್ಶೆಯ ಮಾರ್ಗವನ್ನು ತೊರೆದು ಸಾಗುತ್ತಿದ್ದೇವೆ ಎಂದೇ ಅರ್ಥ. ಉಪವಾಸ ಇರುವ ವ್ಯಕ್ತಿಗೆ ತತ್ವಶಾಸ್ತ್ರ ಬೋಧಿಸಬೇಡಿ ಎಂಬ ವಿವೇಕಾನಂದರ ವಿವೇಕಯುತ ಮಾತಿಗೂ ನಾವು ಕಿವಿಗೊಡುತ್ತಿಲ್ಲ.

ಮುಂದುವರೆಯುತ್ತದೆ,,,,,,