ಟಿವಿ, ರೇಡಿಯೋ ಮಾಧ್ಯಮಗಳಿಲ್ಲದ ಸಮಯದಲ್ಲಿ ಜನರಿಗೆ ರಂಗಭೂಮಿ ಮನರಂಜನೆ ಒದಗಿಸುತ್ತಿತ್ತು. ಕಾಲಾಂತರದಲ್ಲಿ ಗ್ರಾಮೀಣ ಭಾಗದಲ್ಲಿ ರಂಗಭೂಮಿ ಕಲಾವಿದರು ಸಾಮಾಜಿಕ ಬದಲಾವಣೆಗಳಲ್ಲಿ, ಹೋರಾಟಗಳಲ್ಲಿ ಪ್ರಮುಖ ಪಾತ್ರ ವಹಿಸಿದರು. ದಿನ ಕಳೆದಂತೆ ಧಾರ್ಮಿಕವಾಗಿ, ಪೌರಾಣಿಕ ನಾಟಕ ಮಾಡುತ್ತಾ ಜನರಿಗೆ ಧರ್ಮದ ಬಗ್ಗೆ ಅರಿವೂ ಮೂಡಿಸುವ ಕೆಲಸ ಈ ರಂಗಭೂಮಿ ಕಲಾವಿದರು ಮಾಡಿಕೊಂಡು ಬಂದರು. ಕಾಲ ಕ್ರಮೇಣ ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿ ಎಂದು ಭಿನ್ನವಾಗುತ್ತಾ ಸಾಗಿ ಇದೀಗ ಜೀವನೋಪಾಯಕ್ಕಾಗಿ ನಾಟಕ ಕಂಪನಿಗಳಾಗಿ ಬದಲಾಗುತ್ತಾ ಬಂದಿವೆ.
ಕರ್ನಾಟಕದಲ್ಲಿ ನಾಟಕ ಕಂಪನಿಗಳು ಉಚ್ರಾಯ ಸ್ಥಿತಿಯಲ್ಲಿದ್ದಾಗ ಅನೇಕ ಮೇರು ನಟರು ಬೆಳಕಿಗೆ ಬಂದರು. ಅನೇಕರು ಚಲನಚಿತ್ರಗಳಲ್ಲಿ ಉತ್ತಮ ಹೆಸರುಗಳಿಸಿದರು. ರಂಗಭೂಮಿಯಿಂದ ಬಂದ ಕಲಾವಿದರು ಪ್ರಶಸ್ತಿ, ಹಣ, ಅಧಿಕಾರ ಎಲ್ಲವನ್ನು ಪಡೆದರು. ಆದರೆ ಇದೀಗ ಕಾಲ ಬದಲಾಗುತ್ತದೆ. ಒಂದು ಕಾಲದಲ್ಲಿ ಸಾಮಾಜಿಕ ಹೋರಾಟಗಳಲ್ಲಿ ಜನರಿಗೆ ಆಸರೆಯಾಗಿದ್ದ ರಂಗಭೂಮಿ ಕಲಾವಿದರಿಗೆ ಯಾರಾದರೂ ಆಸರೆಯಾಗಿ ನಿಲ್ಲಬೇಕಾದ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಕೋವಿಡ್!
ಹೌದು. ರಾಜ್ಯದಲ್ಲಿ ಒಂದು ಕಾಲದಲ್ಲಿ ಸಣ್ಣ ಹಾಗೂ ದೊಡ್ಡ ಕಂಪನಿ ಸೇರಿದಂತೆ 70ಕ್ಕೂ ಅಧಿಕ ನಾಟಕ ಕಂಪನಿಗಳಿದ್ದವು. ಕ್ರಮೇಣ ಅವುಗಳ ಸಂಖ್ಯೆ ಇಳಿಯುತ್ತಾ ಕಳೆದ ಕೆಲ ವರ್ಷಗಳಲ್ಲಿ ಅವುಗಳ ಸಂಖ್ಯೆ 40 ರಿಂದ 50 ಬಂದಿದೆ. ಆದರೆ ಕೋವಿಡ್ ಭಾರತಕ್ಕೆ ಕಾಲಿಟ್ಟಿದ್ದೆ ತಡ ಕಂಪನಿ ನಾಟಕಗಳು ಒಂದೊಂದಾಗೆ ಬಾಗಿಲು ಮುಚ್ಚಿದವು. ಸದ್ಯ ರಾಜ್ಯದಲ್ಲಿ 26 ನಾಟಕ ಕಂಪನಿಗಳು ಅಧಿಕೃತವಾಗಿ ನಾಟಕ ಪ್ರದರ್ಶನ ಮಾಡುತ್ತಿವೆ.
ಎ.ಬಿ.ಸಿ ಎಂದು ನಾಟಕ ಕಂಪನಿಗಳನ್ನು ವಿಂಗಡಣೆ ಮಾಡಲಾಗಿದ್ದು, ಅವುಗಳಿಗೆ ಸರ್ಕಾರ ವರ್ಷಕ್ಕೆ ಅನುಧಾನ ನೀಡುತ್ತದೆ. ಆದರೆ ಅದು ಭಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದೆ. ಗ್ರೇಡ್ ಆಧಾರದ ಮೇಲೆ ಸರ್ಕಾರ ಅನುಧಾನ ನೀಡುತ್ತದೆ. 25 ವರ್ಷ ಮೇಲ್ಪಟ್ಟ ಕಂಪನಿಗಳನ್ನು A ಗ್ರೇಡ್ ಕಂಪನಿಯಾಗಿದ್ದು, ಸರ್ಕಾರ ಅವುಗಳಿಗೆ ವರ್ಷಕ್ಕೆ 9 ರಿಂದ 10 ಲಕ್ಷದ ವರೆಗೆ ಅನುದಾನ ನೀಡುತ್ತದೆ. 15 ವರ್ಷ ಮೇಲ್ಪಟ್ಟ ಕಂಪನಿಗಳಿಗೆ 6 ಲಕ್ಷ ಅನುದಾನ ನೀಡುತ್ತದೆ. ಆದರೆ ಸರ್ಕಾರದ ಈ ಅನುದಾನ ಕೋವಿಡ್ ಬಂದಾಗಿನಿಂದ ಸರಿಯಾದ ಸಮಯಕ್ಕೆ ಸಿಗದೆ ಕಲಾವಿದರ ಬದುಕು ಅತಂತ್ರವಾಗಿದೆ.
ಕೋವಿಡ್ ಹೊಡೆತಕ್ಕೆ ರಂಗಭೂಮಿ ಕಲಾವಿದರು ಅಕ್ಷರಶಃ ನಲುಗಿ ಹೋಗಿದ್ದಾರೆ. ಕೊರೋನಾ ಕಾರಣದಿಂದಾಗಿ ಎರಡು ವರ್ಷಗಳಿಂದ ಬಂದ್ ಆಗಿದ್ದ ನಾಟಕ ಕಂಪನಿಗಳು ಕೆಲವು ತಿಂಗಳಿಂದ ಆರಂಭವಾಗಿದ್ದವು. ಆದರೆ ಇದೀಗ ಮತ್ತೆ ಕೋವಿಡ್, ಓಮಿಕ್ರಾನ್ ಆತಂಕ ಇಡೀ ರಂಗಭೂಮಿ ಕಲಾವಿದರನ್ನು ಕಣ್ಣಿರಲ್ಲಿ ಕೈ ತೊಳೆಯುವಂತೆ ಮಾಡಿದೆ.
ಸಾಮಾನ್ಯವಾಗಿ ರಾತ್ರಿ ವೇಳೆ ಪ್ರೇಕ್ಷಕರು ನಾಟಕ ನೋಡಲು ಬರುವುದು ಹೆಚ್ಚು. ಈ ಕಾರಣಕ್ಕಾಗಿ ಹೆಚ್ಚಿನ ನಾಟಕಗಳು ಸಂಜೆ ಹಾಗೂ ರಾತ್ರಿ ವೇಳೆ ಆಯೋಜನೆ ಮಾಡಲಾಗುತ್ತದೆ. ಆದರೆ ಇದೀಗ ನೈಟ್ ಕರ್ಫೂ ರಂಗಭೂಮಿ ಕಲಾವಿದರ ಬಾಳಲ್ಲಿ ಕತ್ತಲೆ ಮೂಡಿಸಿದೆ. ವಿಜಯಪುರ ನಗರದ ಹೊರಭಾಗದಲ್ಲಿ ಹಲವು ನಾಟಕ ಕಂಪನಿಗಳು ಟೆಂಟ್ ಹಾಕಿ ನಾಟಕ ಪ್ರದರ್ಶನ ನಡೆಸುತ್ತಿವೆ. ಕಳೆದ ಒಂದು ತಿಂಗಳಿಂದ ವಿವಿಧ ಜಿಲ್ಲೆಯ ನಾಟಕ ಕಂಪನಿಗಳು ನಗರಕ್ಕೆ ಆಗಮಿಸಿ ಟೆಂಟ್ ಹಾಕಿವೆ. ಹೊಸ ವರ್ಷಾಚರಣೆ ಹಾಗೂ ವಿಜಯಪುರ ಸುಪ್ರಸಿದ್ಧ ಸಿದ್ದೇಶ್ವರ ಜಾತ್ರೆ ವೇಳೆ ಉತ್ತಮ ಆದಾಯ ಪಡೆಯಬಹುದು ಎಂದು ಆಶಾಭಾವನೆ ಹೊಂದಿದ್ದರು. ಆದರೆ ಕೋವಿಡ್ ಮೂರನೇ ಅಲೆ ಆತಂಕ ಕಲಾವಿದನ್ನು ನಡು ನೀರಲ್ಲಿ ನೀಲ್ಲಿಸಿದೆ. ನೈಟ್ ಕರ್ಫೂ ಕಾರಣದಿಂದ ರಾತ್ರಿ ಪ್ರದರ್ಶನ ಬಂದ್ ಮಾಡಿದ್ದಾರೆ. ದಿನಕ್ಕೆ ಕೇವಲ ಎರಡು ಆಟಗಳು ಮಾತ್ರ ಪ್ರದರ್ಶನ ಮಾಡಲಾಗುತ್ತಿದೆ. ಜೊತೆಗೆ ಸಿದ್ದೇಶ್ವರ ಜಾತ್ರೆ ರದ್ದು ಮಾಡಿದ ಕಾರಣ ಪ್ರೇಕ್ಷಕರ ಆಗಮಿಸೋದು ಅನುಮಾನವಾಗಿರುವ ಕಾರಣ ಕಲಾವಿದರು ಸಂಕಷ್ಟ ಅನುಭವಿಸುವಂತಾಗಿದೆ.
ಸಾಮಾನ್ಯವಾಗಿ ಒಂದು ನಾಟಕ ಕಂಪನಿಗಳು 25 ರಿಂದ 30 ಜನ ಕಲಾವಿದರು, 10 ಜನ ಸಹಾಯಕರು ಸೇರಿದಂತೆ 40 ಜನ ಕೆಲಸ ಮಾಡುತ್ತಾರೆ. ಕೆಲಸ ಮಾಡುವ ಪ್ರತಿಯೊಬ್ಬರಿಗೂ ಪ್ರತಿದಿನ ಸಂಬಳ ನೀಡುವುದು ಕಡ್ಡಾಯವಾಗಿರುತ್ತದೆ.
ಇದರಲ್ಲಿ ಮಹಿಳಾ ಕಲಾವಿದರಿಗೆ ಹೆಚ್ಚಿನ ಸಂಭಾವನೆ ನೀಡಬೇಕಾಗುತ್ತದೆ. ಮಹಿಳಾ ಕಲಾವಿದರಿಗೆ ದಿನಕ್ಕೆ ಒಂದು ಸಾವಿರ, ಪುರುಷ ಕಲಾವಿದರಿಗೆ 600 ರಿಂದ 800 ಸಂಬಳ ನೀಡಲಾಗುತ್ತೆ. ಇದರ ಜೊತೆಗೆ ಜಾಗದ ಬಾಡಿಕೆ, ಕರೆಂಟ್ ಬಿಲ್ ಸೇರಿದಂತೆ ಉಳಿದ ಖರ್ಚು ಸೇರಿ ಪ್ರತಿದಿನ 15 ರಿಂದ 16 ಸಾವಿರ ಖರ್ಚಾಗುತ್ತದೆ. ಆದರೆ ಪ್ರೇಕ್ಷಕರ ಕೊರತೆಯಿಂದಾಗಿ ದಿನಕ್ಕೆ 5000 ಗಳಿಸೋದು ಕೂಡಾ ಕಂಪನಿಗಳಿಗೆ ಸಂಕಷ್ಟವಾಗುತ್ತಿದ್ದು, ಹೀಗಾದ್ರೆ ರಂಗಭೂಮಿ ಉಳಿಯುವುದು ಹೇಗೆ ಅನ್ನೋ ಆತಂಕ ಎದುರಾಗಿದೆ.
ನೈಟ್ ಕರ್ಫೂ ಮುನ್ನ ಪ್ರತಿದಿನ 200 ಪ್ರೇಕ್ಷಕರು ಆಗಮಿಸುತ್ತಿದ್ದರು. ಆದರೆ ಇದೀಗ 50 ರಿಂದ 60 ಪ್ರೇಕ್ಷಕರು ಮಾತ್ರ ಬರುತ್ತಿದ್ದು, ನಷ್ಟದಲ್ಲೇ ನಾಟಕ ಪ್ರದರ್ಶನ ಮಾಡುವಂತಾಗಿದೆ. ಹೀಗಾಗಿ ಸರ್ಕಾರ ನಮ್ಮ ಸಹಾಯಕ್ಕೆ ನಿಲ್ಲಬೇಕು ಎಂದು ಕಲಾವಿದರು ಮನವಿ ಮಾಡಿದ್ದಾರೆ.