
ನಾ ದಿವಾಕರ
ಭಾರತೀಯ ಸಮಾಜದ ಎಲ್ಲ ಸ್ತರಗಳಲ್ಲೂ ಸಮಾನವಾಗಿ ಗುರುತಿಸಬಹುದಾದ ಒಂದು ಲಕ್ಷಣ ಎಂದರೆ ʼ ನೈತಿಕ ಅಧಃಪತನ ಮತ್ತು ಮಾನವೀಯ ಮೌಲ್ಯಗಳ ಅವನತಿ ʼ. ಬದಲಾಗುತ್ತಿರುವ ಭಾರತ ರಾಜಕೀಯವಾಗಿ ಭಿನ್ನ ಹಾದಿಯಲ್ಲಿ ಕ್ರಮಿಸಿದೆ, ಆರ್ಥಿಕವಾಗಿ ಏರುಗತಿಯಲ್ಲಿದೆ, ಸಾಂಸ್ಕೃತಿಕವಾಗಿ ಏಕಮುಖಿಯಾಗುತ್ತಿದೆ ಹಾಗೂ ಸಾಮಾಜಿಕವಾಗಿ ಅಧಃಪತನದ ಹಾದಿಯಲ್ಲಿದೆ. ಈ ವ್ಯತ್ಯಯ ಮತ್ತು ವೈರುಧ್ಯಗಳನ್ನು ವಿಶ್ಲೇಷಿಸುವ, ಮರು ನಿರ್ವಚಿಸುವ ಮತ್ತು ಮರು ವ್ಯಾಖ್ಯಾನಿಸುವ ಜವಾಬ್ದಾರಿ ಇರುವ ನಾಗರಿಕ ಬೌದ್ಧಿಕ ವಲಯಗಳಲ್ಲಿ (Civic intellectual arena) ನಿರಂತರವಾಗಿ ನಡೆಯುತ್ತಿರುವ ಸಂವಾದ-ಸಂಕಥನಗಳು, ಈ ಸಂಕೀರ್ಣ ಸವಾಲುಗಳನ್ನು ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಒಳಗಿನಿಂದಲೇ ಉದ್ಭವಿಸುತ್ತಿರುವ ಫ್ಯಾಸಿಸಂನ ಕರಾಳ ವ್ಯವಸ್ಥೆಯ ನೆಲೆಯಲ್ಲಿ ನಿಷ್ಕರ್ಷೆಗೊಳಪಡಿಸಲಾಗುತ್ತಿದೆ.

ಸಂವಿಧಾನವನ್ನು ಗ್ರಾಂಥಿಕವಾಗಿ ನೋಡುವಾಗ ಅಥವಾ ಭಾವನಾತ್ಮಕವಾಗಿ ಅದನ್ನೇ ಒಂದು ʼಧರ್ಮʼಕ್ಕೆ ಸಮೀಕರಿಸಿದಾಗ, ಅದರ ವ್ಯಾಪ್ತಿಯೊಳಗೇ ನಡೆಯಬಹುದಾದ ರಾಜಕೀಯ ಬೆಳವಣಿಗೆಗಳೆಲ್ಲವೂ ʼ ಸಾಂವಿಧಾನಿಕ ಸಮ್ಮತಿ ʼ ಪಡೆದುಕೊಳ್ಳುತ್ತವೆ. ಹಾಗಾಗಿಯೇ ಪ್ರಜಾಸತ್ತಾತ್ಮಕ ಸಂಸ್ಥೆಗಳು ಶಿಥಿಲವಾಗುತ್ತಿದ್ದರೂ, ಪ್ರಜಾಪ್ರಭುತ್ವೀಯ ಸಾಂಸ್ಥಿಕ ಪ್ರಕ್ರಿಯೆಗಳು (Institutional Process) ಹಾದಿ ತಪ್ಪುತ್ತಿದ್ದರೂ, ಪ್ರಜಾಪ್ರಭುತ್ವವವನ್ನು ಕಾಪಾಡಬೇಕಾದ ಅಧಿಕಾರ ರಾಜಕಾರಣವು ಕಡುಭ್ರಷ್ಟವಾಗುತ್ತಿದ್ದರೂ, ಭಾರತೀಯ ಪ್ರಜಾತಂತ್ರ ಗಟ್ಟಿಯಾಗಿದೆ ಎಂಬ ಭಾವನೆ ಜನಸಾಮಾನ್ಯರಲ್ಲಿ ದಟ್ಟವಾಗುತ್ತಿದೆ. ಈ ಭರವಸೆಯನ್ನು ದೃಢೀಕರಿಸುವ ರೀತಿಯಲ್ಲಿ ʼ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ ʼ ಎಂಬ ಸಾರ್ವತ್ರಿಕ ಅಭಿಪ್ರಾಯವೂ ಮಾನ್ಯತೆ ಪಡೆಯುತ್ತದೆ.

ಭ್ರಮೆ ಮತ್ತು ವಾಸ್ತವಗಳ ನಡುವೆ
ಈ ಭಾವನೆ ಭ್ರಮಾತ್ಮಕವಾಗುವ ಮುನ್ನ ನಮ್ಮ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ. ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠ ಎಂಬ ಖ್ಯಾತಿ ಗಳಿಸಿರುವುದು ಅದರೊಳಗಿನ ಸಮಾನತೆ ಮತ್ತು ಬಹುತ್ವದ ಆಶಯಗಳ ಪರಿಣಾಮ. ಈ ಸಂವಿಧಾನದ ಅಡಿ ಚುನಾಯಿತವಾಗುವ ಸರ್ಕಾರಗಳು ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಆಡಳಿತ ನೀತಿಗಳನ್ನು ರೂಪಿಸಿ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಒಳಗೊಂಡಂತಹ ಸಮ ಸಮಾಜದ ಸಂಹಿತೆಗಳನ್ನು ಅನುಸರಿಸುವವರೆಗೂ ಪ್ರಜಾಪ್ರಭುತ್ವ, ಒಂದು ವ್ಯವಸ್ಥೆಯಾಗಿ, ಗಟ್ಟಿಯಾಗಿರುತ್ತದೆ. ಸಂವಿಧಾನವೇ ನಮ್ಮ ಧರ್ಮ ಎಂದಾಗ, ಆ ʼಧರ್ಮʼವನ್ನು ನಿಯಂತ್ರಿಸುತ್ತಿರುವವರು, ನಿರ್ವಹಿಸುವವರು, ಅದರೊಳಗಿನ ಸಂಹಿತೆಗಳನ್ನು ವ್ಯಾಖ್ಯಾನಿಸಿ ಅನುಷ್ಠಾನಗೊಳಿಸುತ್ತಿರುವವರು ಯಾರು ಎಂಬ ಪ್ರಶ್ನೆ ನಿರ್ಣಾಯಕವಾಗುತ್ತದೆ.
ಆಡಳಿತ ವ್ಯವಸ್ಥೆ ಎನ್ನುವುದು ಸ್ಥಾವರರೂಪಿ ಅಲ್ಲ. ಅದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಹಿಗ್ಗಿಸುವ, ಕುಗ್ಗಿಸುವ, ಸಂಕುಚಿತಗೊಳಿಸುವ, ವಿಸ್ತರಿಸುವ ಸ್ವಾತಂತ್ರ್ಯ ಚುನಾಯಿತ ಸರ್ಕಾರಗಳಿಗೆ ಇದ್ದೇ ಇರುತ್ತದೆ. ಇದು ಪ್ರಜಾಸತ್ತೆಯ ಮೂಲ ಸತ್ವ. ಈ ಪ್ರಕ್ರಿಯೆಗಳಿಗೆ ಲಿಖಿತ ಸಂವಿಧಾನದಲ್ಲಿ ಕೊಂಚ ಅವಕಾಶ ಇದ್ದರೂ ಸಹ, ಬಹುಸಂಖ್ಯಾವಾದವನ್ನು (Majoritarianism) ಪೋಷಿಸುವ ರಾಜಕೀಯ ಶಕ್ತಿಗಳು ತಮ್ಮ ಸೈದ್ದಾಂತಿಕ ಹಿತಾಸಕ್ತಿಗಳಿಗೆ ಅನುಗುಣವಾಗಿ ಸಾಂವಿಧಾನಿಕ ಸಂಹಿತೆಗಳನ್ನು ಬದಲಾಯಿಸುತ್ತಲೇ ಇರುತ್ತವೆ. ಜನರಿಂದಲೇ ಚುನಾಯಿತರಾಗುವ ಪ್ರತಿನಿಧಿಗಳನ್ನು Law makers ಅಂದರೆ ಕಾನೂನು ರೂಪಿಸುವವರು ಎಂದೇ ಕರೆಯಲಾಗುತ್ತದೆ. ಈ ಸದಸ್ಯರು ಸಂವಿಧಾನದ ಚೌಕಟ್ಟಿನಲ್ಲೇ ರೂಪಿಸುವ ಕಾಯ್ದೆ ಕಾನೂನುಗಳು ಸಮಾಜವನ್ನು ನಿಯಂತ್ರಿಸುತ್ತವೆ. ಸಾಮಾಜಿಕ ಅಪಸವ್ಯಗಳನ್ನು ಸರಿಪಡಿಸುತ್ತವೆ.

ಈ ರಾಜಕೀಯ ಸಂರಚನೆಯ ಸುತ್ತ ಕಳೆದ ಐದಾರು ದಶಕಗಳಿಂದಲೂ ಸಾರ್ವಜನಿಕ ಚರ್ಚೆ, ಸಂವಾದ, ವಿಚಾರ ಸಂಕಿರಣಗಳು ನಡೆಯುತ್ತಿದ್ದು, ಈ ಸಂಕಥನಗಳಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಶಾಸನಗಳನ್ನು ಮರುವಿಮರ್ಶೆ ಮಾಡಲಾಗುತ್ತಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಶಿಥಿಲವಾಗುತ್ತಿದೆ ಅಥವಾ ಸಂವಿಧಾನ ಅಪಾಯದಲ್ಲಿದೆ ಎಂಬ ಆತಂಕದ ನಡುವೆಯೇ ನೈತಿಕ ಮೌಲ್ಯಗಳ ಕುಸಿತವೂ ಸಹ ಗಂಭೀರ ಚರ್ಚೆಗೊಳಗಾಗುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಹಿಂದುತ್ವ ರಾಜಕೀಯ, ಕಾರ್ಪೋರೇಟ್ ಆರ್ಥಿಕ ನೀತಿ ಮತ್ತು ಕೋಮುವಾದ-ಮತೀಯವಾದದ ಸಾರ್ವತ್ರೀಕರಣ (Universalisation) ಸಕ್ರಿಯವಾಗಿರುವುದರಿಂದ ಸಂವಿಧಾನ ರಕ್ಷಣೆ ಜನಪರ ಸಂಘಟನೆಗಳ ಮೂಲ ಧ್ಯೇಯವಾಗಿ ಪರಿಣಮಿಸಿದೆ.
ಮೌಲ್ಯಗಳ ಸೃಷ್ಟಿ ಮತ್ತು ಪ್ರಸರಣ
ವಾಸ್ತವದಲ್ಲಿ ಸಂವಿಧಾನಕ್ಕೆ ರಕ್ಷಣೆಯ ಅಗತ್ಯವಿಲ್ಲ. ಸಾಂವಿಧಾನಿಕ ನಿಯಮಗಳ ಪಾಲನೆ ಮುಖ್ಯವಾಗಬೇಕು. ಇದನ್ನು ಪಾಲಿಸುವ/ಅನುಸರಿಸುವ ಜವಾಬ್ದಾರಿ ಹೊತ್ತ ರಾಜಕೀಯ ಪಕ್ಷಗಳು ತಮ್ಮ ಆಡಳಿತಾವಧಿಯಲ್ಲಿ , ಸಂವಿಧಾನ ಒದಗಿಸುವ ಶಾಸನಾತ್ಮಕ ಅವಕಾಶಗಳನ್ನೇ ಬಳಸಿಕೊಂಡು, ಪ್ರಜಾಪ್ರಭುತ್ವ ವಿರೋಧಿ ಶಾಸನಗಳನ್ನು ಜಾರಿಗೊಳಿಸಿರುವುದು ಚಾರಿತ್ರಿಕ ಸತ್ಯ. ಇದನ್ನು 1967ರ ಯುಎಪಿಎ ಕಾಯ್ದೆ, ತುರ್ತುಪರಿಸ್ಥಿತಿಯಿಂದ ವರ್ತಮಾನದ ಮತಾಂತರ ನಿಷೇಧ, ಗೋಹತ್ಯೆ ನಿಷೇಧ ಮತ್ತು ಶಿಕ್ಷಣ-ಆರೋಗ್ಯದ ಕಾರ್ಪೋರೇಟೀಕರಣದವರೆಗೂ ಗುರುತಿಸಬಹುದು. ಈ ಯಾವುದೇ ಶಾಸನಗಳು ಗ್ರಾಂಥಿಕವಾಗಿ ಸಂವಿಧಾನ ವಿರೋಧಿ ಅಲ್ಲವಾದರೂ ಪ್ರಜಾತಂತ್ರ ವಿರೋಧಿ ಎಂದೇ ಗುರುತಿಸಲಾಗುತ್ತದೆ. ಏಕೆಂದರೆ ಈ ಶಾಸನಗಳು ಮೂಲ ಪ್ರಜಾಪ್ರಭುತ್ವೀಯ ಮೌಲ್ಯಗಳಿಗೆ (Democratic Values) ವ್ಯತಿರಿಕ್ತವಾಗಿ ಕಾಣುತ್ತವೆ.

ಈ ಮೌಲ್ಯಗಳು ಉತ್ಪತ್ತಿಯಾಗುವುದು ವಿಶಾಲ ಸಮಾಜದ ಆವರಣದಲ್ಲಿ. ಸಾಮಾನ್ಯವಾಗಿ ಜನರು ಅಪೇಕ್ಷಿಸುವ ಪ್ರಜಾಸತ್ತಾತ್ಮಕ-ಸಾಂವಿಧಾನಿಕ ಮೌಲ್ಯಗಳ ಮೂಲ ಬೇರು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿದೆ, ಸಾಂಸ್ಕೃತಿಕ ನಾಡಿಗಳಲ್ಲಿದೆ ಹಾಗೂ ಎಲ್ಲ ವರ್ಗಗಳ ಜನರ ಮನಸ್ಥಿತಿಯಲ್ಲಿ ಅಡಗಿದೆ. ಈ ಬೇರುಗಳಿಗೆ ಶತಮಾನಗಳ ಇತಿಹಾಸವಿದೆ, ಭವ್ಯ ಪರಂಪರೆ ಎಂಬ ಆತ್ಮರತಿಯೂ ನಮ್ಮಲ್ಲಿದೆ. ಮಂದಿರ ಮಸೀದಿಗಳಿಗಾಗಿ ಭೂಮಿಯನ್ನು ಬಗೆದು ನೋಡುವ ರಾಜಕೀಯ ಪಕ್ಷಗಳಿಗೆ ಈ ಬೇರುಗಳಲ್ಲಿ ಬೆರೆತಿರುವ ಜೀವವಿರೋಧಿ ತಂತುಗಳು ಗಮನಕ್ಕೆ ಬರುವುದಿಲ್ಲ. ಪಿತೃಪ್ರಧಾನತೆ, ಯಜಮಾನಿಕೆಯ ಊಳಿಗಮಾನ್ಯತೆ, ಶೋಷಣೆಯ ಧಾರ್ಮಿಕ ಸಂಹಿತೆಗಳು ಹಾಗೂ ಇವೆಲ್ಲವನ್ನೂ ಕಾಪಿಟ್ಟುಕೊಳ್ಳುವುದಕ್ಕಾಗಿಯೇ ಪ್ರಬಲ ಮೇಲ್ವರ್ಗ-ಮೇಲ್ಜಾತಿ-ಮೇಲ್ಪದರದ (Uppper Class–Upper Caste–Elite) ಸಮಾಜಗಳು ಕಟ್ಟಿಕೊಡುವ ಅಂಧಾನುಕರಣೆ̧ಯ ಮೌಢ್ಯಾಚರಣೆಯ ಮಾದರಿಗಳು, ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉತ್ಪಾದಿಸುವ ಕಾರ್ಖಾನೆಗಳಾಗಿ ಕಾರ್ಯನಿರ್ವಹಿಸುತ್ತವೆ.
ಸಂವಾದದ ಹೊಸ ಹಾದಿಗಳು
ವರ್ತಮಾನದ ಸಂಕೀರ್ಣ ಪರಿಸ್ಥಿತಿಯಲ್ಲಿ ಭಾರತವನ್ನು ಕಾಡುತ್ತಿರುವ ಜಟಿಲ ಸವಾಲುಗಳನ್ನು ಚರ್ಚಿಸುವಾಗ ನಾವು ಈ ಸಮಾಜದ ಕಡೆಗೆ ನೋಡಬೇಕಾಗುತ್ತದೆ. ಬಂಡವಾಳಶಾಹಿ, ಮಾರುಕಟ್ಟೆ, ರಾಜಕೀಯ ಫ್ಯಾಸಿಸಂ, ಕೋಮುವಾದ, ಮತಾಂಧತೆ ಈ ಎಲ್ಲ ವಿದ್ಯಮಾನಗಳನ್ನು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಚೌಕಟ್ಟುಗಳಲ್ಲಿಟ್ಟು ಸಾವಿರಾರು ವಿಚಾರಸಂಕಿರಣಗಳು ನಡೆಯುತ್ತವೆ. ಇಂದಿಗೂ ನಡೆಯುತ್ತಿವೆ. ಆದರೆ ಕೊಳೆತುಹೋಗುತ್ತಿರುವ ಸಮಾಜದ ಆಂತರಿಕ ಬೇಗುದಿಯನ್ನು, ತಳಮಳಗಳನ್ನು ಗುರುತಿಸಿ, ಪರಿಹಾರೋಪಾಯಗಳನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಸಾರ್ವಜನಿಕ ಸಂಕಥನಗಳು ಸೃಷ್ಟಿಯಾಗುತ್ತಿಲ್ಲ. ಕೊಳೆತ ಸ್ಥಿತಿಯಲ್ಲಿರುವ (Rotten state) ಸಮಾಜವನ್ನು ಸರಿಪಡಿಸಲು ಯಾವ ಸಿದ್ದಾಂತವೂ ನೆರವಾಗುವುದಿಲ್ಲ ಎಂಬ ಎಚ್ಚರಿಕೆ ನಮ್ಮಲ್ಲಿರಬೇಕು.

ಸಾಮಾನ್ಯವಾಗಿ ಇಂತಹ ಸಾಮಾಜಿಕ ಅವನತಿಯನ್ನು ಸಾಹಿತ್ಯಿಕ ರಚನೆಗಳು ಗುರುತಿಸಿ ದಾಖಲಿಸುತ್ತವೆ. ಗದ್ಯ, ಕಾವ್ಯ ಮತ್ತು ದೃಶ್ಯ ಮಾಧ್ಯಮಗಳ ಮೂಲಕ ಬಾಧಿತ ಜನರನ್ನು ಜಾಗೃತಗೊಳಿಸುವ, ಕಾರಣಕರ್ತ ವ್ಯವಸ್ಥೆಯನ್ನು ವಿಮರ್ಶಿಸುವ ತನ್ಮೂಲಕ ತಳಸಮಾಜದ ಜನತೆಗೆ ಸಾಂತ್ವನದ ಪರಿಹಾರೋಪಾಯಗಳನ್ನು ಸೂಚಿಸುವ ಮಹತ್ತರ ಕಾರ್ಯವನ್ನು ಸಾಹಿತ್ಯ, ರಂಗಭೂಮಿ ಮತ್ತಿತರ ಸಂವಹನ ಮಾಧ್ಯಮಗಳು ನೆರವೇರಿಸಬೇಕಾಗುತ್ತದೆ. ಚರಿತ್ರೆಯ ಪುಟಗಳಲ್ಲಿ ಇದರ ಸಾಧ್ಯತೆಗಳನ್ನು ಇಂದಿಗೂ ಗುರುತಿಸಬಹುದು. ದುರದೃಷ್ಟವಶಾತ್ ಕನ್ನಡವನ್ನೂ ಸೇರಿದಂತೆ ಭಾರತೀಯ ಸಾಹಿತ್ಯ ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ. ಇಡೀ ದೇಶವನ್ನೇ ತಲ್ಲಣಗೊಳಿಸಿದ ಕೋವಿದ್-19 ಸಂದರ್ಭವೂ ಸಹ ಸಾಹಿತ್ಯಿಕ ಅಭಿವ್ಯಕ್ತಿಗೆ ಪ್ರೇರಣೆ ನೀಡದಿರುವುದು ಬದಲಾದ ಭಾರತದ ಕುರುಹಾಗಿ ಕಾಣುತ್ತದೆ.
![]()
ಸಾಮಾಜಿಕ ವ್ಯಾಧಿಯ ಲಕ್ಷಣಗಳು
ಮಹಿಳಾ ದೌರ್ಜನ್ಯ, ಅತ್ಯಾಚಾರ, ವರದಕ್ಷಿಣೆ ಸಾವು, ಜಾತಿ ದೌರ್ಜನ್ಯ, ಗುಂಪು ಥಳಿತ, ಗೋರಕ್ಷಾ ಹತ್ಯೆಗಳು, ಲವ್ ಜಿಹಾದ್ ಕೊಲೆಗಳು, ಮರ್ಯಾದೆಗೇಡು ಹತ್ಯೆ ಈ ಎಲ್ಲ ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ಇವೆಲ್ಲವೂ ನಮ್ಮ ಸಾಮಾಜಿಕ ವ್ಯವಸ್ಥೆಯ ಬೇರುಗಳಲ್ಲೇ ಇರುವ ವೈಪರೀತ್ಯಗಳಿಂದಲೇ ಉದ್ಭವಿಸುತ್ತವೆ. ಪುರುಷಾಧಿಪತ್ಯ , ಜಾತಿ ಶ್ರೇಷ್ಠತೆ ಮತ್ತು ಧಾರ್ಮಿಕ ಅಹಮಿಕೆ ಮಹಿಳಾಧೀನತೆಗೆ ಮತ್ತು ತಳಸಮಾಜದ ಮೇಲಿನ ಕ್ರೂರ ಹಲ್ಲೆಗಳಿಗೆ ಪ್ರೇರಣೆ ನೀಡುತ್ತದೆ. ಈ ಪ್ರೇರಕ ಶಕ್ತಿಗಳನ್ನು ಕೇವಲ ಬ್ರಾಹ್ಮಣಶಾಹಿಯಲ್ಲಿ ಅಥವಾ ಮೇಲ್ಜಾತಿಯ ಚೌಕಟ್ಟಿನಲ್ಲಿ ಗುರುತಿಸುವುದು, ಸಮಾಜದ ದಿಕ್ಕು ತಪ್ಪಿಸುತ್ತದೆ. ಏಕೆಂದರೆ ಇವೆಲ್ಲವೂ ಮಾನವ ಸಮಾಜದ ಮನಸ್ಥಿತಿಯಿಂದ ವ್ಯಕ್ತವಾಗುವ ಕ್ರೌರ್ಯದ ಲಕ್ಷಣಗಳು. ಸಾರ್ವತ್ರಿಕವಾಗಿಯೇ ನೋಡಬೇಕಾಗುತ್ತದೆ. ಧಾರ್ಮಿಕ ಸಂಹಿತೆಗಳಾಗಲೀ, ಸೈದ್ಧಾಂತಿಕ ಕಟ್ಟಳೆಗಳಾಗಲೀ ಈ ಕ್ರೂರ ಮನಸ್ಥಿತಿಗೆ ಔಷಧವಾಗುವುದಿಲ್ಲ.
21ನೆ ಶತಮಾನದಲ್ಲಿ ಈ ಸಾಮಾಜಿಕ ವ್ಯಾಧಿಗಳನ್ನು (Social Malaise) ಗುರುತಿಸುವುದರೊಂದಿಗೇ, ಮಿಲೆನಿಯಲ್ ಸಮಾಜ, ಅಂದರೆ ಯುವ ಸಮುದಾಯವನ್ನು ಕಾಡುತ್ತಿರುವ ಮೊಬೈಲ್ ಗೀಳು, ಮಾದಕ ವಸ್ತುಗಳ ಸೇವನೆ ಮತ್ತು ಇತರ ಸಾಮಾಜಿಕ ವ್ಯಸನಗಳನ್ನೂ ವಿಮರ್ಶೆಗೊಳಪಡಿಸಬೇಕಿದೆ. ತಂತ್ರಜ್ಞಾನದ ಅಭಿವೃದ್ಧಿಯೇ ಇದಕ್ಕೆ ಕಾರಣ ಎಂದು ಹೇಳಲಾಗುವುದಿಲ್ಲ. ತಂತ್ರಜ್ಞಾನ ಬಳಕೆಯಲ್ಲಿ ಯುವ ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯುವುದರಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ವಿಫಲವಾಗಿದೆ ಎಂದು ಹೇಳಬಹುದು. ಎಲ್ಲ ಧರ್ಮಗಳೂ ತಮ್ಮ ಔದಾತ್ಯದ ನೆರಳಲ್ಲೇ ಬೆಳೆಯುತ್ತಿದ್ದರೂ, ಈ ಸಮಾಜವನ್ನು ತಹಬಂದಿಗೆ ತರುವಂತಹ ಸಾಂಸ್ಥಿಕ ಪ್ರಯೋಗಗಳು ಎಲ್ಲಿಯೂ ನಡೆಯುತ್ತಿಲ್ಲ. ಪುರಾಣ, ಮಿಥ್ಯೆ ಮತ್ತು ಚರಿತ್ರೆಯ ವೈಭವೀಕರಣದಲ್ಲೇ ತೃಪ್ತರಾಗುವ ಧರ್ಮ ಪರಿಚಾರಕರಿಗೆ ವರ್ತಮಾನದ ರೋಗಗಳು ಆದ್ಯತೆಯ ವಿದ್ಯಮಾನ ಆಗುವುದೂ ಇಲ್ಲ.
![]()
ಏಕೆಂದರೆ ಗತದ ವೈಭವೀಕರಣ ಭವಿಷ್ಯದ ಅಡಿಪಾಯವನ್ನು ರಕ್ಷಿಸುತ್ತದೆ. ಸಾಂಪ್ರದಾಯಿಕ ಸಮಾಜದಲ್ಲಿ ಇದಕ್ಕೆ ಅಗತ್ಯವಾದ ಭೂಮಿಕೆಗಳೂ ಹೇರಳವಾಗಿರುತ್ತವೆ. ವರ್ತಮಾನದ ಸಮಾಜವನ್ನು ಕಾಡುತ್ತಿರುವ ಗಾಯಗಳು ವ್ರಣವಾಗುವ ಸ್ಥಿತಿ ತಲುಪಿದರೂ, ಅದರ ಕಾರಣವನ್ನು ʼ ಅನ್ಯ ʼದಲ್ಲಿ ಗುರುತಿಸುವ ಪ್ರತಿಗಾಮಿ ಧೋರಣೆ ಎಲ್ಲ ಧರ್ಮಗಳಲ್ಲೂ ಬೇರೂರಿರುವುದರಿಂದ, ರೋಗಗ್ರಸ್ತ ಸಮಾಜಕ್ಕೆ ʼ ನಾವೇನೂ ಕಾರಣಕರ್ತರಲ್ಲ ʼ ಎಂಬ ಅಹಂಭಾವ ಸಾರ್ವತ್ರಿಕವಾಗಿ ಸೃಷ್ಟಿಯಾಗುತ್ತದೆ. ಇತ್ತೀಚೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ಮರ್ಯಾದೆಗೇಡು ಹತ್ಯೆಗೆ ಬಲಿಯಾದ ಹೆಣ್ಣುಮಗುವಿನ ಬಲಿಪೀಠವನ್ನು ಈ ಅಹಂಭಾವದ ಬಯಲಿನಲ್ಲಿ ಗುರುತಿಸಬಹುದು. ಇಲ್ಲಿ ಸಾಂಸ್ಥಿಕ ಕ್ರೌರ್ಯವನ್ನು ವ್ಯಕ್ತಿಗತ ನೆಲೆಯಲ್ಲಿಟ್ಟು ನೋಡುವುದರ ಮೂಲಕ, ಸಮಾಜ ಮತ್ತು ಸಮುದಾಯ , ತನ್ನ ಬೇರುಗಳು ವಿಷಪೂರಿತವಾಗುತ್ತಿರುವುದನ್ನು ಕಂಡೂ ಕಾಣದಂತೆ ವರ್ತಿಸುತ್ತವೆ.
ದಿಕ್ಕು ತಪ್ಪುತ್ತಿರುವ ಸಮಾಜ
ಇತ್ತೀಚಿನ ಕೆಲವು ಘಟನೆಗಳಲ್ಲಿ ಈ ಸೂಕ್ಷ್ಮಗಳನ್ನು ಗುರುತಿಸಬಹುದು. ಉತ್ತರಪ್ರದೇಶದ ಘಜಿಯಾಬಾದ್‌ನಲ್ಲಿ ಅಪ್ರಾಪ್ತ ವಯಸ್ಸಿನ ಮೂವರು ಸೋದರಿಯರು ಮೊಬೈಲ್ ಗೀಳಿಗೆ ಅಂಟಿಕೊಂಡು, ಭ್ರಮಾಧೀನರಾಗಿ, ಜಿಗುಪ್ಸೆಗೊಳಾಗಾಗಿ ಮನೆಯ ಒಂಬತ್ತನೆ ಮಹಡಿಯಿಂದ ಕೆಳಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊಬೈಲ್ ವ್ಯಸನ ಮತ್ತು ಸಾಮಾಜಿಕ ಮಾಧ್ಯಮಗಳ (Social media) ಅನಾಹುತಕಾರಿ ಸಾಧನಗಳು ಇಂತಹ ನೂರಾರು ಸಾವುಗಳಿಗೆ ಕಾರಣವಾಗುತ್ತಿವೆ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ ಹತ್ತನೆ ತರಗತಿಯ ವಿದ್ಯಾರ್ಥಿ ಸಂಕೇತ್, ತನ್ನ ಸಹಪಾಠಿಗಳಿಂದಲೇ ಹಲ್ಲೆಗೊಳಗಾಗಿ ಮೃತಪಟ್ಟಿದ್ದಾನೆ. ಈ ಬಾಲಕನನ್ನು ಹೊಡೆದು ಕೊಂದ ಏಳು ಜನರೂ ಅಪ್ರಾಪ್ತರೇ ಆಗಿದ್ದಾರೆ. ರಾಜಕೀಯ ಪಕ್ಷಗಳಿಗೆ, ವಿಶೇಷವಾಗಿ ಬಿಜೆಪಿಗೆ, ಕೊಂದವರು ಮುಸ್ಲಿಮರು ಸತ್ತವನು ಹಿಂದೂ ಎನ್ನುವುದಷ್ಟೇ ಮುಖ್ಯವಾಗುತ್ತದೆ. ಈ ಎಳೆಯ ವಯಸ್ಸಿಗೇ ಮಕ್ಕಳಲ್ಲಿ ಮತ್ತೊಬ್ಬರನ್ನು ಕೊಲ್ಲುವ ಮನಸ್ಥಿತಿ ಹೇಗೆ ಇರಲು ಸಾಧ್ಯ ಎಂಬ ಪ್ರಶ್ನೆ ಪ್ರಜ್ಞಾವಂತ ಸಮಾಜವನ್ನು ಕಾಡಬೇಕಿದೆ.

ಇಂತಹ ಘಟನೆಗಳು ನೂರಾರು ನಡೆದಿವೆ. ಬೆಂಗಳೂರಿನ ವಿಜ್ಞಾನ ನಗರದಲ್ಲಿ 33 ವರ್ಷದ ತಂತ್ರಜ್ಞ (Techie) ನೊಬ್ಬ ತನ್ನ ತಂದೆ ತಾಯಿಯನ್ನೇ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಹತ್ಯೆ ಮಾಡಿದ ಯುವಕ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದುದಾಗಿ ವರದಿಯಾಗಿದ್ದರೂ, ಮಾನಸಿಕ ಖಿನ್ನತೆ ಯುವ ಸಮುದಾಯದಲ್ಲಿ ಏಕೆ ಹೆಚ್ಚಾಗುತ್ತಿದೆ ಎಂದು ಶೋಧಿಸುವುದು ಸಮಾಜದ ಜವಾಬ್ದಾರಿಯಾಗಿರುತ್ತದೆ. ಮತ್ತೊಂದು ಘಟನೆಯಲ್ಲಿ, ತಾನು ಅಲ್ಪಾಯುಷಿ ಎಂದು ಭವಿಷ್ಯ ನುಡಿದ ಜೋತಿಷಿಯೊಬ್ಬನ ಮಾತನ್ನು ನಂಬಿ ಖಿನ್ನಳಾಗಿ ವಿವಾಹಕ್ಕೆ ಸಿದ್ಧವಾಗುತ್ತಿದ್ದ 33 ವರ್ಷದ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವುದು ವರದಿಯಾಗಿದೆ. ಈ ಸಾವಿಗೆ ಉತ್ತರದಾಯಿ ಯಾರು ? ಅಥವಾ ತಮ್ಮ ಪುತ್ರನಿಂದಲೇ ಕೊಲೆಗೀಡಾದ ಪೋಷಕರಿಗೆ ಉತ್ತರ ಹೇಳುವವರಾರು ? ಸಂಕೇತ್‌ನನ್ನು ಹತ್ಯೆ ಮಾಡಿದ ಬಾಲಕರ ವರ್ತನೆಗೆ ಕಾರಣ ಯಾರು ?
ಈ ಪ್ರಶ್ನೆಗಳಿಗೆ ಸಮಾಜ ಉತ್ತರ ಶೋಧಿಸಬೇಕಿದೆ. ಇತ್ತೀಚೆಗೆ ಪ್ರಜಾವಾಣಿ ಪತ್ರಿಕೆಯಲ್ಲಿ ವರದಿಯಾಗಿರುವ ಕರ್ನಾಟಕದ ಅಪರಾಧಿಕ ಜಗತ್ತಿನ ಅಂಕಿಸಂಖ್ಯೆಗಳನ್ನು ನೋಡಿದರೆ, ನಾವಿರುವುದು ಡಿಜಿಟಲ್ ಯುಗದಲ್ಲೋ ಅಥವಾ ಶಿಲಾಯುಗದಲ್ಲೋ ಎಂಬ ಅನುಮಾನ ಮೂಡುತ್ತದೆ. ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಪೋಕ್ಸೋ ಪ್ರಕರಣಗಳು (ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು) ಶೇಕಡಾ 42ರಷ್ಟು ಹೆಚ್ಚಾಗಿವೆ. 2021ರಲ್ಲಿ 2,884 2025ರಲ್ಲಿ 4,096 ಪ್ರಕರಣಗಳು ದಾಖಲಾಗಿವೆ. ಪರಿಶಿಷ್ಟರ ಮೇಲಿನ ಜಾತಿ ದೌರ್ಜನ್ಯಗಳು 1,751 ರಿಂದ 2,277ಕ್ಕೆ ಏರಿವೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳು 4,915 ರಿಂದ 5,324ಕ್ಕೆ ಏರಿವೆ. ಎನ್‌ಡಿಪಿಎಸ್ ಕಾಯ್ದೆ, ಅಂದರೆ ಮಾದಕ ವಸ್ತು ಸೇವನೆಯಿಂದಾಗುವ ಅಪರಾಧಗಳು 5,780 ರಿಂದ 5,930ಕ್ಕೆ ಏರಿವೆ. (ಪ್ರಜಾವಾಣಿ 21 ಫೆಬ್ರವರಿ 2026) .

ಅಪರಾಧಿಕ ಜಗತ್ತಿನ ಒಳನೋಟ
ಇದು ಏನನ್ನು ಸೂಚಿಸುತ್ತದೆ ? ಈ ಅಪರಾಧಗಳ ಹೆಚ್ಚಳವನ್ನು ರಾಜಕೀಯ ಪರಿಭಾಷೆಯಲ್ಲಿ ವ್ಯಾಖ್ಯಾನಿಸುವಾಗ ಫ್ಯಾಸಿಸಂ, ಬಂಡವಾಳಶಾಹಿ ಮಾರುಕಟ್ಟೆ ಇತ್ಯಾದಿಗಳು ಮುನ್ನಲೆಗೆ ಬರುತ್ತವೆ. ಧಾರ್ಮಿಕ ಪರಿಭಾಷೆಯಲ್ಲಿ ಸಾಮುದಾಯಿಕ ಲಕ್ಷಣಗಳನ್ನೇ ಕಾರಣವಾಗಿ ವ್ಯಾಖ್ಯಾನಿಸಲಾಗುತ್ತದೆ. ಸಾಂಸ್ಕೃತಿಕ ಪರಿಭಾಷೆಯಲ್ಲಿ ಸಮಾಜವನ್ನು ನಿಯಂತ್ರಿಸುವ ಸಂಸ್ಕೃತಿ ಮತ್ತು ವ್ಯವಸ್ಥೆಯನ್ನು ನಿಷ್ಕರ್ಷೆ ಮಾಡಲಾಗುತ್ತದೆ. ಇವೆಲ್ಲವನ್ನೂ ದಾಟಿ ನೋಡಿದಾಗ ನಮಗೆ ಅಲ್ಲಿ ರೋಗಗ್ರಸ್ತ ಸಮಾಜವೊಂದು ಕಾಣುತ್ತದೆ. ಈ ಎಲ್ಲ ಅಪರಾಧಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಮಾತ್ರ ಪರಾಮರ್ಶಿಸಿ ಎಸ್‌ಎಸ್‌ಎಲ್‌ಸಿ ಮಾರ್ಕ್ಸ್‌ಕಾರ್ಡ್‌ನ ರೀತಿಯಲ್ಲಿ ಪ್ರಕಟಿಸುವ ಸರ್ಕಾರಗಳಿಗೆ ಈ ಸಮಾಜದ ಗೋಚರಿಸುವುದೇ ಇಲ್ಲ.
ಇದನ್ನು ಗುರುತಿಸಬೇಕಿರುವುದು ವಿಶಾಲ ಸಮಾಜ, ನಾಗರಿಕ ಸಂಘಟನೆಗಳು ಮತ್ತು ಸಮಾಜಮುಖಿ ಮನಸ್ಥಿತಿಯೇನಾದರೂ ಇದ್ದರೆ ಅಂತಹ ಚುನಾಯಿತ/ಪರಾಜಿತ ಜನಪ್ರತಿನಿಧಿಗಳು ಹಾಗೂ ನಾಗರಿಕ/ಸಾರ್ವಜನಿಕ ಸಂಸ್ಥೆಗಳು (Civic/Public Institutions) . ಈ ಸಾಮಾಜಿಕ ವ್ಯಸನಗಳಿಗೆ ಕಾರಣಗಳನ್ನು ಸಾಮಾಜಿಕ ಚೌಕಟ್ಟಿನಲ್ಲೇ ಗುರುತಿಸುವ ಮೂಲಕ, ವಿಶಾಲ ನೆಲೆಯಲ್ಲಿ ಕಾಣುವ ಸಾಮಾಜಿಕ ವ್ಯಾಧಿಗಳಿಗೆ (Social Malaise) ಚಿಕಿತ್ಸಕ ದಾರಿಗಳನ್ನು ಯೋಚಿಸುವುದು ನಮ್ಮ ಆದ್ಯತೆಯಾಗಬೇಕಿದೆ. ನಾವು ಆಯೋಜಿಸುವ ವಿಚಾರ ಸಂಕಿರಣ, ಸಮ್ಮೇಳನಗಳಲ್ಲಿ, ವಿಶ್ವವಿದ್ಯಾಲಯಗಳ ಸಂವಾದಗಳಲ್ಲಿ ಇದು ಆದ್ಯತೆ ಪಡೆಯಬೇಕಿದೆ. ಈ ಅಂಕಿಅಂಶಗಳು ರೋಗಗ್ರಸ್ತ ಸಮಾಜದ ಸೂಚಕಗಳಾಗಿ ಕಾಣುತ್ತವೆ. ಒಳಹೊಕ್ಕು ನೋಡಿದರೆ ಇದೇ ಸಮಾಜದ ಕೊಳೆತ ಸ್ಥಿತಿಯನ್ನೂ (Rotten state) ಗುರುತಿಸಲು ಸಾಧ್ಯ.

ಈ ಚಿಕಿತ್ಸಕ ಮಾದರಿಗಳನ್ನು ಶೋಧಿಸಿ ಪರಿಹಾರೋಪಾಯಗಳನ್ನು ಕಂಡುಹಿಡಿಯದೆ ಹೋದರೆ ಮೇಲ್ನೋಟದ ಸೌಂದರ್ಯಕ್ಕೆ ಮರುಳಾಗಿ ಆಂತರಿಕ ವ್ಯಾಧಿಗಳನ್ನು ಅಲಕ್ಷಿಸಿದಂತಾಗುತ್ತದೆ. ಬಹುಶಃ ಭಾರತೀಯ ಸಮಾಜ ಈ ಸ್ಥಿತಿಯನ್ನು ತಲುಪುತ್ತಿದೆ ಎಂಬ ಆತಂಕವಾದರೂ ನಮ್ಮನ್ನು ಕಾಡಬೇಕಲ್ಲವೇ ? ಸಮಾಜಮುಖಿಯಾಗಿ ಯೋಚಿಸಿದರೆ ಸಾಲದು, ಸಮಾಜದ ಕಡೆಯೇ ನೋಡಿ ಒಳಹೊಕ್ಕು ನೋಡುವಂತಾಗಬೇಕು. ಆಗ ಮಾತ್ರ ನೆಲದಾಳದಲ್ಲಿರುವ ಕರಾಳ ಚಿತ್ರಣ ಗೋಚರಿಸಲು ಸಾಧ್ಯ.
-೦-೦-೦-೦-೦-






