ಆಳುವ ವರ್ಗಗಳು ಸದಾ ಸಮಾಜದಲ್ಲಿನ ಪ್ರಬಲ ವರ್ಗಗಳ ಭಾಷೆಯಲ್ಲೇ ಮಾತನಾಡಲಿಚ್ಚಿಸುತ್ತದೆ. ಪ್ರಜಾಪ್ರಭುತ್ವದಲ್ಲೂ ಸಹ ಸಾಂವಿಧಾನಿಕ ಮಾರ್ಗಗಳ ಮೂಲಕವೇ ಪ್ರಬಲ ವರ್ಗಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಪ್ರಾಬಲ್ಯ ಸಾಧಿಸುವ ಸಾಧ್ಯತೆಗಳಿರುವುದರಿಂದ ಆಡಳಿತ ವ್ಯವಸ್ಥೆಯ ಎಲ್ಲ ಕವಲುಗಳಲ್ಲೂ ಇದೇ ವರ್ಗಗಳ ಅಭಿಪ್ರಾಯ, ಪ್ರತಿಪಾದನೆ ಮತ್ತು ತಾತ್ವಿಕ ನೆಲೆಗಳು ತಮ್ಮ ಪಾರಮ್ಯ ಕಂಡುಕೊಳ್ಳುತ್ತವೆ. ವರ್ತಮಾನ ಭಾರತದ ಸಂದರ್ಭದಲ್ಲಿ ಈ ವರ್ಗಗಳನ್ನು ನಾವು ಮೂರು ಮಜಲುಗಳಲ್ಲಿ ಗುರುತಿಸಬಹುದು. ಮೊದಲನೆಯದು ಊಳಿಗಮಾನ್ಯ ವ್ಯವಸ್ಥೆಯ ಪಳೆಯುಳಿಕೆಗಳಾಗಿಯೇ ಈಗ ಕಾರ್ಪೋರೇಟ್ ಮಾರುಕಟ್ಟೆಯ ವಾರಸುದಾರರಾಗಿ ರೂಪಾಂತರಗೊಂಡಿರುವ ಔದ್ಯಮಿಕ ವರ್ಗ. ಎರಡನೆಯದು ಪ್ರಜಾಪ್ರಭುತ್ವದ ನೆರಳಿನಲ್ಲೇ, ಸಾಂವಿಧಾನಿಕ ಮಾರ್ಗದಲ್ಲೇ ಜನಪ್ರಾತಿನಿಧ್ಯದ ವಾರಸುದಾರಿಕೆ ವಹಿಸಿಕೊಂಡಿರುವ ಅಧಿಕಾರ ರಾಜಕಾರಣದ ಉತ್ತರಾಧಿಕಾರಿಗಳು. ಮೂರನೆಯದು ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಆಧುನಿಕತೆಯ ಕವಚದೊಂದಿಗೆ ಯಥಾವತ್ತಾಗಿ ಕಾಪಾಡಿಕೊಂಡು ಬಂದಿರುವ ಸಾಂಸ್ಕೃತಿಕ ಆಧಿಪತ್ಯದ ವಾರಸುದಾರರು. ಈ ಮೂರೂ ವರ್ಗಗಳನ್ನು ಚುನಾವಣಾ ರಾಜಕಾರಣದ ಅಂಗಳದಲ್ಲಿ ಪ್ರತ್ಯೇಕಿಸಬಹುದಾದರೂ, ಪ್ರಭುತ್ವದ ಆಡಳಿತ ನೀತಿಗಳನ್ನು ರೂಪಿಸುವ ಸಂದರ್ಭದಲ್ಲಿ ಏಕಾಭಿಪ್ರಾಯ ಹೊಂದಿರುವ ಒಂದು ಗುಂಪಾಗಿ ಕಾಣಬಹುದು.
ಸಾಮಾಜಿಕವಾಗಿ ಭಾರತ ತನ್ನ ಸಾಂವಿಧಾನಿಕ ಮೌಲ್ಯಗಳಿಗನುಗುಣವಾಗಿ ಎಷ್ಟೇ ಸಮಾನತೆಯ ಹಾದಿಯಲ್ಲಿ ಸಾಗುತ್ತಿದ್ದರೂ, ಪ್ರಬಲ ಜಾತಿ ಸಮುದಾಯಗಳು ಗ್ರಾಮದಿಂದ ದೆಹಲಿಯವರೆಗೆ ತಮ್ಮ ಆಧಿಪತ್ಯವನ್ನು ಸಾಧಿಸಿವೆ. ಸಮತಲ ನೆಲೆಯಲ್ಲಿ ಕಾಣಬಹುದಾದ ಸಮಾನತೆಯ ಹಾದಿಗಳು ಲಂಬ ನೆಲೆಯಲ್ಲಿ ಸಮತೋಲನವನ್ನು ಕಳೆದುಕೊಳ್ಳುವುದನ್ನೂ ಗಮನಿಸುತ್ತಿದ್ದೇವೆ. ಹಾಗಾಗಿಯೇ ಮೀಸಲಾತಿಯ ಫಲಾನುಭವಿಗಳೂ ಕೆಲವೊಮ್ಮೆ ಲಂಬನೆಲೆಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಊಳಿಗಮಾನ್ಯ ಧೋರಣೆ ಮತ್ತು ಪಿತೃಪ್ರಧಾನ ಮನಸ್ಥಿತಿ ಇಂದಿಗೂ ಜೀವಂತವಾಗಿರುವ ಭಾರತೀಯ ಸಮಾಜದಲ್ಲಿ ಈ ಮೇಲರಿಮೆಯ ಅಹಮಿಕೆಗಳು ಮತ್ತು ಶ್ರೇಷ್ಠತೆಯ ಜೀವಂತಿಕೆಯೇ ಇಲ್ಲಿನ ಕಾರ್ಪೋರೇಟ್ ಮಾರುಕಟ್ಟೆ ವ್ಯವಸ್ಥೆಯ ಬಂಡವಾಳಶಾಹಿ ಅಭಿವೃದ್ಧಿ ಮಾರ್ಗಗಳನ್ನು ಇಂದಿಗೂ ರಕ್ಷಿಸುತ್ತಿವೆ. ಸಾಮಾಜಿಕ ಸಮಾನತೆಯೊಂದಿಗೆ ಆರ್ಥಿಕ ಸಮಾನತೆಯನ್ನೂ ಸಾಧಿಸದಿದ್ದರೆ ಪ್ರಜಾಪ್ರಭುತ್ವ ಪರಿಪೂರ್ಣವಾಗುವುದಿಲ್ಲ ಎಂಬ ಅಂಬೇಡ್ಕರ್ ಅವರ ಮಾತುಗಳನ್ನು ಇಲ್ಲಿ ಗಮನಿಸಬೇಕಾಗುತ್ತದೆ. ಬಂಡವಾಳಶಾಹಿ ಆರ್ಥಿಕತೆಯನ್ನೇ ಪೋಷಿಸಿಕೊಂಡು ಬಂದಿರುವ ಭಾರತದ ಆಳುವ ವರ್ಗಗಳು, ಪಕ್ಷಾತೀತವಾಗಿ ಈ ತರತಮಗಳನ್ನೂ ಕಾಪಾಡಿಕೊಂಡು ಬಂದಿವೆ. ಭಾರತದ ಮೇಲ್ಪದರದ ಶೇ 10ರಷ್ಟು ಜನರ ಬಳಿ ದೇಶದ ಶೇ 77ರಷ್ಟು ಸಂಪತ್ತು ಕ್ರೋಢೀಕೃತವಾಗಿದ್ದರೆ, ಶೇ 57ರಷ್ಟು ರಾಷ್ಟ್ರೀಯ ಆದಾಯದ ಪಾಲನ್ನು ಹೊಂದಿದೆ. ಶೇ 1ರಷ್ಟು ಜನರ ಬಳಿ ಶೇ 22ರಷ್ಟು ರಾಷ್ಟ್ರೀಯ ಆದಾಯ ಶೇಖರಣೆಯಾಗಿದೆ. 2017ರ ನಂತರ ಉತ್ಪಾದನೆಯಾದ ಶೇ 73ರಷ್ಟು ರಾಷ್ಟ್ರೀಯ ಸಂಪತ್ತು ಮೇಲ್ಪದರದ ಶೇ 1ರಷ್ಟು ಜನರ ಪಾಲಾಗಿದೆ.
ಭಾರತ ಜಾಗತಿಕ ಬಂಡವಾಳ ಮಾರುಕಟ್ಟೆಯಲ್ಲಿ ಯಾವ ಸ್ಥಾನವನ್ನು ಗಳಿಸಿದರೂ, ತಳಮಟ್ಟದ ವಾಸ್ತವ ಸನ್ನಿವೇಶವನ್ನು ಗಮನಿಸಿದಾಗ ಅನೌಪಚಾರಿಕ ಕ್ಷೇತ್ರವೇ ಅತಿ ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿರುವುದು ಕಂಡುಬರುತ್ತದೆ. ಎನ್ಎಸ್ಎಸ್ಒ ಬಿಡುಗಡೆ ಮಾಡಿರುವ ಇತ್ತೀಚಿನ ಅಧಿಕೃತ ವರದಿಯ ಪ್ರಕಾರ ಭಾರತದ ಕಾರ್ಮಿಕರಲ್ಲಿ ಶೇ 93ರಷ್ಟು ಅನೌಪಚಾರಿಕ ವಲಯದಲ್ಲಿದ್ದಾರೆ. ಕೋವಿದ್ ಲಾಕ್ಡೌನ್ ಸಂದರ್ಭದಲ್ಲಿ ತೀವ್ರ ಆಘಾತಕ್ಕೊಳಗಾದ ಈ ವಲಯ ನಂತರ ಚೇತರಿಸಿಕೊಂಡಿದ್ದರೂ, ಮುಂಚಿನ ಸ್ಥಿತಿಗೆ ತಲುಪಲು ಸಾಧ್ಯವಾಗಿಲ್ಲ. 2021ರ ಸಮೀಕ್ಷೆಯ ಪ್ರಕಾರ ದೇಶದಲ್ಲಿರುವ ಒಟ್ಟು 6.36 ಕೋಟಿ ಉದ್ಯಮಗಳ ಪೈಕಿ ಶೇ 99.7ರಷ್ಟು ಉದ್ದಿಮೆಗಳು ಅಸಂಘಟಿತ ಕ್ಷೇತ್ರದಲ್ಲಿದೆ. ನೋಂದಣಿಯಾಗಿರುವ ಔಪಚಾರಿಕ ಕ್ಷೇತ್ರದ ಉದ್ದಿಮೆಗಳ ಸಂಖ್ಯೆ ಕೇವಲ 1 ಲಕ್ಷ 70 ಸಾವಿರ ಅಥವಾ ಶೇ 0.3ರಷ್ಟಿದೆ. ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದಿರುವ ಶ್ರಮಿಕರ ನೆರವಿಗೆ ಸೂಕ್ತ ಯೋಜನೆಗಳನ್ನು ರೂಪಿಸುವ ಸಲುವಾಗಿ ರಚಿಸಿರುವ ಇ-ಶ್ರಮ್ ಪೋರ್ಟಲ್ನಲ್ಲಿ ಅನೌಪಚಾರಿಕ ಕ್ಷೇತ್ರದ ಎಲ್ಲ ದುಡಿಮೆಗಾರರೂ ನೋಂದಣಿ ಮಾಡಿಸಬೇಕಿದೆ. ನಿಖರವಾಗಿ ಈ ವಲಯದಲ್ಲಿರುವ ಕಾರ್ಮಿಕರನ್ನು ಗುರುತಿಸುವುದೇ ಸಾಧ್ಯವಾಗದೆ ಇರುವುದರಿಂದ ನೋಂದಾಯಿತ 27.69 ಕೋಟಿ ಕಾರ್ಮಿಕರ ಪೈಕಿ ಶೇ 94ರಷ್ಟು ಕಾರ್ಮಿಕರ ಮಾಸಿಕ ಆದಾಯ 10 ಸಾವಿರ ರೂಗಳಿಗಿಂತಲೂ ಕಡಿಮೆ ಇದೆ.
ನೋಂದಾಯಿತವಾಗಿರುವ 27.69 ಕೋಟಿ ಕಾರ್ಮಿಕರ ಪೈಕಿ ಶೇ 74ರಷ್ಟು ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳ ಕಾರ್ಮಿಕರಿದ್ದಾರೆ. ಶೇ 45.32 ಒಬಿಸಿ, ಶೇ 20.95 ಪರಿಶಿಷ್ಟ ಜಾತಿ ಮತ್ತು ಶೇ 8.17ರಷ್ಟು ಪರಿಶಿಷ್ಟ ಪಂಗಡಗಳ ಕಾರ್ಮಿಕರಿದ್ದಾರೆ. ಅನೌಪಚಾರಿಕ ಕ್ಷೇತ್ರದಲ್ಲಿ ಶೇ 94.11ರಷ್ಟು ಕಾರ್ಮಿಕರ ಮಾಸಿಕ ಆದಾಯ 10 ಸಾವಿರ ರೂಗಳಿಗಿಂತಲೂ ಕಡಿಮೆ ಇದೆ. ಶೇ 4.36ರಷ್ಟು ಕಾರ್ಮಿಕರ ಮಾಸಿಕ ಆದಾಯ 10 ರಿಂದ 15 ಸಾವಿರ ರೂಗಳಷ್ಟಿದೆ. ದೇಶದಲ್ಲಿ ಒಟ್ಟು 38 ಕೋಟಿ ಅನೌಪಚಾರಿಕ ವಲಯದ ಕಾರ್ಮಿಕರಿರುವುದಾಗಿ ಅಂದಾಜು ಮಾಡಲಾಗಿದ್ದು, ಈ ದತ್ತಾಂಶಗಳನ್ನು ಪರಿಶೀಲಿಸಿದರೆ ದೇಶದ ಆರ್ಥಿಕತೆಯಲ್ಲಿ ಅಸಮಾನತೆ ಢಾಳಾಗಿ ಕಾಣುತ್ತದೆ. ಈ ಕಾರ್ಮಿಕ ಕುಟುಂಬಗಳಿಗೆ ಸರ್ಕಾರದ ಕಲ್ಯಾಣ ಯೋಜನೆಗಳನ್ನು ತಲುಪಿಸುವುದು ಇ-ಶ್ರಮ್ ಪೋರ್ಟಲ್ನ ಸ್ಥಾಪಿತ ಉದ್ದೇಶವಾಗಿದೆ. ಈ ಸಮೀಕ್ಷೆಯ ಅನುಸಾರ ನೋಂದಾಯಿತ ಶೇ 61.72ರಷ್ಟು ಕಾರ್ಮಿಕರ ವಯಸ್ಸು 18 ರಿಂದ 40 ವರ್ಷಗಳಷ್ಟಿದೆ. ಶೇ 22.12ರಷ್ಟು ಕಾರ್ಮಿಕರು 40 ರಿಂದ 40 ವಯೋಮಾನದವರಾಗಿದ್ದಾರೆ. ಶೇ 2.98ರಷ್ಟು ಕಾರ್ಮಿಕರ ವಯೋಮಾನ 16 ರಿಂದ 18 ವರ್ಷಗಳಾಗಿವೆ. ನೋಂದಾಯಿತ ಮಹಿಳಾ ಕಾರ್ಮಿಕರ ಸಂಖ್ಯೆ ಶೇ 52.18ರಷ್ಟಿದೆ. ಕೃಷಿ ಕ್ಷೇತ್ರವನ್ನು ಅವಲಂಬಿಸಿದ ಕಾರ್ಮಿಕರ ಸಂಖ್ಯೆಯೇ ಶೇ 52.11ರಷ್ಟಿದೆ. ಅಂದರೆ ಅರ್ಧಕ್ಕಿಂತಲೂ ಹೆಚ್ಚಿನ ಅಸಂಘಟಿತ ಕಾರ್ಮಿಕರು ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳನ್ನೇ ಅವಲಂಬಿಸಿರುವುದು ಭಾರತೀಯ ಆರ್ಥಿಕತೆಯ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ.
ಈ ಅಸಮಾನತೆಗಳು ಢಾಳಾಗಿ ಕಾಣುತ್ತಿರುವಂತೆಯೇ ದೇಶದ ಅನೌಪಚಾರಿಕ ವಲಯದ ಲಕ್ಷಾಂತರ ದುಡಿಮೆಯ ಕೈಗಳು ಬೀದಿಪಾಲಾಗುತ್ತಿವೆ. ಓಲಾ, ಊಬರ್, ಜಮೋಟೋ, ಸ್ವಿಗಿ ಮುಂತಾದ ಆದಾಯ ಮಾರ್ಗಗಳಲ್ಲಿ ಎದುರಾಗುತ್ತಿರುವ ಬಿಕ್ಕಟ್ಟು ಈ ದೇಶದ ನಿರುದ್ಯೋಗಿ ಯುವ ಜನತೆಯನ್ನು ಬಾಣಲೆಯಿಂದ ಬೆಂಕಿಗೆ ಬೀಳಿಸುತ್ತಿವೆ. ತಾತ್ಕಾಲಿಕವಾಗಿ ಜೀವನ ನಿರ್ವಹಣೆಗೆ ನೆರವಾಗುವ ಯಾವುದೇ ಉದ್ಯೋಗವೂ ಒಂದು ಸುಸ್ಥಿರ ಸಮಾಜವನ್ನು ನಿರ್ಮಿಸಲು ಪೂರಕವಾಗಿರುವುದಿಲ್ಲ. ಬಹುಶಃ ಇನ್ನು ಹತ್ತು ವರ್ಷಗಳಲ್ಲಿ ಭಾರತ ಈ ಸಂದಿಗ್ಧತೆಯನ್ನು ಎದುರಿಸುತ್ತದೆ. ಸ್ವಯಂ ಉದ್ಯೋಗ, ಕೌಶಲ್ಯಾಧಾರಿತ ಉದ್ಯೋಗ ಮತ್ತು ತ್ವರಿತ ಆದಾಯ ಗಳಿಕೆಯ ಮಾರ್ಗಗಳು ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿ ಅದ್ಭುತ ಫಲಿತಾಂಶಗಳನ್ನು ತೋರುವುದಾದರೂ, ದೀರ್ಘಾವಧಿಯಲ್ಲಿ ಒಂದು ಅಸ್ಥಿರ ಸಮಾಜವನ್ನು ಸೃಷ್ಟಿಸುವುದನ್ನು ಹಲವು ದೇಶಗಳಲ್ಲಿ ಕಾಣಬಹುದು. ಹಾಗೆಯೇ ಮಾರುಕಟ್ಟೆ ವ್ಯವಸ್ಥೆ ರೂಪಿಸುವ ಉದ್ಯೋಗಾವಕಾಶಗಳು ಹಣಕಾಸು ಬಂಡವಾಳದ ಅವಶ್ಯಕತೆಗಳಿಗನುಗುಣವಾಗಿಯೇ ಇರುವುದರಿಂದ, ಈ ನೌಕರಿಯನ್ನು ಅವಲಂಬಿಸುವವರು ಮಾರುಕಟ್ಟೆ ವ್ಯತ್ಯಯಗಳ ಮೊದಲ ಬಲಿ ಆಗುತ್ತಾರೆ. ಈ ಬಲಿಪೀಠಗಳನ್ನು ಸೃಷ್ಟಿಸಲೆಂದೇ ಸರ್ಕಾರಗಳು ಹಲವು ಯೋಜನೆಗಳನ್ನೂ, ಆಡಳಿತ ನೀತಿಗಳನ್ನೂ ರೂಪಿಸುತ್ತಿರುತ್ತವೆ. ಹಾಗಾಗಿಯೇ ಇಂದು ಲಕ್ಷಾಂತರ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಬಿಸಿಯೂಟ ಯೋಜನೆಯ ನೌಕರರು ತಮ್ಮ ಬದುಕಿನ ಘನತೆಗಾಗಿ, ಹಕ್ಕಿಗಾಗಿ ಹೋರಾಡುವಂತಾಗಿದೆ.

ದೇಶದ ಒಂದು ಬೃಹತ್ ಜನಸಮೂಹ ತಮ್ಮ ಜೀವನ ನಿರ್ವಹಣೆಗೆ ಪರದಾಡುತ್ತಿರುವುದನ್ನು ಅಧಿಕೃತ ಅಂಕಿಅಂಶಗಳೇ ಸಾಬೀತುಪಡಿಸುತ್ತವೆ. ಕರ್ನಾಟಕದಲ್ಲೇ 42 ಸಾವಿರ ಆಶಾ ಕಾರ್ಯಕರ್ತೆಯರು ತಮ್ಮ ಸೇವಾ ಭತ್ಯೆಗಳಿಗಾಗಿ, ಸುಭದ್ರ ನೌಕರಿಗಾಗಿ ಹೋರಾಡುತ್ತಿದ್ದಾರೆ. ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ಆಶಾ ಕಾರ್ಯಕರ್ತೆಯರು ಕನಿಷ್ಟ ವೇತನದೊಂದಿಗೆ, ಉದ್ಯೋಗ ಭದ್ರತೆ ಇಲ್ಲದೆ ಅನಿಶ್ಚಿತ ಬದುಕು ಎದುರಿಸುತ್ತಿದ್ದಾರೆ. ಕರ್ನಾಟಕದಲ್ಲಿ 60 ವರ್ಷ ದಾಟಿದ ಕಾರಣಕ್ಕಾಗಿಯೇ ಹೊರಹಾಕಲ್ಪಟಿರುವ 12 ಸಾವಿರ ಬಿಸಿಯೂಟ ಯೋಜನೆಯ ಮಹಿಳೆಯರು ತಮ್ಮ ಜೀವನ ಭದ್ರತೆಗಾಗಿ ಹೋರಾಡುತ್ತಿದ್ದಾರೆ. ದೇಶಾದ್ಯಂತ 13 ಲಕ್ಷ ಅಂಗನವಾಡಿ ನೌಕರರು, ಬಹುಪಾಲು ಮಹಿಳೆಯರು, ಹೊಸ ಶಿಕ್ಷಣ ನೀತಿಯ ಪರಿಣಾಮ ತಮ್ಮ ನೆಲೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ದೇಶದ ಬಹುದೊಡ್ಡ ಉದ್ಯೋಗದಾತ ಸಾರ್ವಜನಿಕ ಸಂಸ್ಥೆ ರೈಲ್ವೆ ಇಲಾಖೆಯಲ್ಲಿ 72 ಸಾವಿರ ಹುದ್ದೆಗಳನ್ನು ರದ್ದುಪಡಿಸಲಾಗಿದೆ. ಬಿಜೆಪಿ ಸಂಸದ ವರುಣ್ ಗಾಂಧಿ ಇತ್ತೀಚೆಗೆ ಹೇಳಿದಂತೆ 60 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಉಳಿದಿವೆ. ಭಾರತದ ಬೃಹತ್ ಜನಸಮೂಹದ ಬದುಕಿನ ಪ್ರಶ್ನೆಯಾಗಿರುವ ಈ ಸಮಸ್ಯೆಗಳು ಇಂದಿನ ಸಾರ್ವಜನಿಕ ಸಂಕಥನದ ಒಂದು ಭಾಗವಾಗಬೇಕಿತ್ತು. ಆದರೆ ಭಾರತ ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ, 45 ವರ್ಷಗಳಲ್ಲೇ ಅತಿ ಹೆಚ್ಚಿನ ನಿರುದ್ಯೋಗ ಪ್ರಮಾಣ ದಾಖಲಾಗಿದ್ದರೂ, ಎಂಟು ವರ್ಷಗಳಲ್ಲೇ ಅತಿ ಹೆಚ್ಚು ಹಣದುಬ್ಬರ ದಾಖಲಾಗಿದ್ದರೂ ಸಾರ್ವಜನಿಕ ಹಾಗೂ ಬೌದ್ಧಿಕ ವಲಯದ ಸಂಕಥನಗಳು ಭಿನ್ನ ಮಾರ್ಗದಲ್ಲಿ ಸಾಗುತ್ತಿವೆ. ಈ ವಿಕೃತ ಬೆಳವಣಿಗೆಯ ಮೂಲವನ್ನು ನಾವು ಸಾಂಸ್ಕೃತಿಕ ಹಾಗೂ ರಾಜಕೀಯ ಭೂಮಿಕೆಗಳಲ್ಲಿ ಶೋಧಿಸಬೇಕಿದೆ.
ಇಲ್ಲಿ ಬೌದ್ಧಿಕ ವಲಯದ ತಾತ್ವಿಕ ಗ್ರಹಿಕೆ ಮತ್ತು ಸಾಂಸ್ಕೃತಿಕ ವಲಯದ ಪ್ರಾಮಾಣಿಕತೆ ಮುಖ್ಯವಾಗುತ್ತದೆ. ರಾಜಕೀಯ ಮತ್ತು ಸೈದ್ಧಾಂತಿಕ ನಿಲುಮೆಗಳು ವಸ್ತುನಿಷ್ಠವಾಗದೆ ಹೋದರೆ ಸತ್ಯದ ಸಮಾಧಿಯಾಗುತ್ತದೆ. ತಾವು ಅನುಕರಿಸುವ ನಾಯಕರಲ್ಲಿ ಸರ್ವಶ್ರೇಷ್ಠತೆಯನ್ನು, ಸಾರ್ವಭೌಮತ್ವವನ್ನು ಕಾಣುವಂತಹ ವಂಧಿಮಾಗದ ಸಂಸ್ಕೃತಿಯನ್ನು ತಳಮಟ್ಟದವರೆಗೂ ತಲುಪಿಸಿರುವ ಭಾರತದ ರಾಜಕೀಯ ಪರಂಪರೆ ಇಂದು ದೇಶದ ಭವಿಷ್ಯತ್ತಿಗೆ ಮುಳುವಾಗಲಿದೆ. ಆಂತರಿಕ ಪ್ರಜಾತಂತ್ರದ ಮೌಲ್ಯಗಳನ್ನೇ ಮರೆತಿರುವ ರಾಜಕೀಯ ಪಕ್ಷಗಳು ಅಧಿಕಾರ ರಾಜಕಾರಣವನ್ನು ಒಂದು ಅವಕಾಶದ ಭೂಮಿಕೆ ಎಂದು ಭಾವಿಸದೆ, ತಮ್ಮ ವಾರಸುದಾರಿಕೆ ಅಥವಾ ಉತ್ತರಾಧಿಕಾರದ ವೇದಿಕೆ ಎಂದು ಭಾವಿಸುತ್ತಿರುವುದೇ ಇಂದಿನ ಸಕಲ ಸಮಸ್ಯೆಗಳಿಗೆ ಕಾರಣವಾಗಿದೆ. ವರ್ತಮಾನದ ಭಾರತ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಈ ದೇಶದ ಸಂಸ್ಕೃತಿಯಷ್ಟೇ ವೈವಿಧ್ಯಮಯ ಅಷ್ಟೇ ಜಟಿಲ. ಆದರೆ ಈ ಸಮಸ್ಯೆಗಳಿಗೆ ಅಧಿಕಾರ ರಾಜಕಾರಣ ಸೂಚಿಸುತ್ತಿರುವ ಪರಿಹಾರ ಮಾರ್ಗಗಳು ಜನಸಾಮಾನ್ಯರಿಗೆ ಅರ್ಥವೇ ಆಗದಷ್ಟು ಸಂಕೀರ್ಣವಾಗಿರುತ್ತವೆ. ಹಾಗಾಗಿಯೇ ಎಲ್ಲ ಅಭಿವೃದ್ಧಿ ಕಾರ್ಯಗಳನ್ನೂ ಡ್ರೋನ್ ಮೂಲಕ ವೀಕ್ಷಿಸುತ್ತಿದ್ದೇನೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯಿಂದ ಇಡೀ ದೇಶವೇ ಪುಳಕಿತವಾಗುತ್ತದೆ.
ಆದರೆ ಈ ಡ್ರೋನ್ ವೀಕ್ಷಣೆಗೆ ಕರ್ನಾಟಕದ ಭ್ರಷ್ಟಾಚಾರದ ಕೂಪಗಳು ನಿಲುಕದೆ ಹೋಗುತ್ತವೆ. ರಾಜಕೀಯ ಭ್ರಷ್ಟಾಚಾರ ಭಾರತದ ಆಡಳಿತ ವ್ಯವಸ್ಥೆಯ ಒಂದು ಅವಿಭಾಜ್ಯ ಅಂಗ ಎನ್ನುವ ವಾಸ್ತವವನ್ನು ಅರಿತಿದ್ದರೂ ಜನಸಾಮಾನ್ಯರು ಭ್ರಷ್ಟರನ್ನೇ ಪೋಷಿಸಲು ತತ್ವ ಸಿದ್ಧಾಂತಗಳ ಮೊರೆ ಹೋಗುತ್ತಿದ್ದಾರೆ. ಕರ್ನಾಟಕದಲ್ಲಿ ಕೇಳಿಬರುತ್ತಿರುವ 40 % ಕಮಿಷನ್ ದಂಧೆ, ಪಿಎಸ್ಐ ಪರೀಕ್ಷೆಯ ಹಗರಣ, ಕೆಪಿಎಸ್ಸಿ ಹಗರಣ ಇವೆಲ್ಲವೂ ಕೇವಲ ಅಧಿಕಾರಶಾಹಿಯ ಚೌಕಟ್ಟಿನಲ್ಲೇ ಕಂಡುಬರುತ್ತವೆ. ಸಾರಿಗೆ ನೌಕರರ ಸಂಘಟಿತ ಶಕ್ತಿಯನ್ನು ಭಂಗಗೊಳಿಸುವ ಉದ್ದೇಶದಿಂದಲೇ ತಮ್ಮ ಪರಿಣತ ಕ್ಷೇತ್ರವನ್ನು ಬಿಟ್ಟು ಕಾರ್ಮಿಕ ಸಂಘಟನೆಗೆ ಮುಂದಾದ ಕೋಡಿಹಳ್ಳಿ ಚಂದ್ರಶೇಖರ್ ಈಗ ಬೃಹತ್ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದರೂ, ಪ್ರಾಮಾಣಿಕತೆಯನ್ನೇ ಹೊದ್ದಿಕೊಂಡಿರುವ ಆಮ್ ಆದ್ಮಿ ಪಕ್ಷ ಅವರನ್ನು ಉಚ್ಚಾಟಿಸಲು ಹಿಂಜರಿಯುತ್ತದೆ. ಕಾನೂನು ಪಾಲನೆ ರಕ್ಷಣೆ ಮತ್ತು ಸಾರ್ವಜನಿಕ ಸ್ವಾಸ್ಥ್ಯದ ಹೊಣೆ ಹೊರಬೇಕಾಗಿರುವ ಪೊಲೀಸ್ ಇಲಾಖೆಯ ನೇಮಕಾತಿ ಪ್ರಕ್ರಿಯೆಯಲ್ಲೇ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವಾಡುತ್ತಿದೆ. ಈ ಎಲ್ಲ ಬೆಳವಣಿಗೆಗಳೂ ಅಭಿವೃದ್ಧಿ ಕಾಮಗಾರಿಗಳ ಒಂದು ಭಾಗವಾಗಿಯೇ ಇರುವಾಗ, ಡ್ರೋನ್ ವೀಕ್ಷಣೆಯಲ್ಲಿ ಕಾಣದೆ ಹೋಗುವುದಾದರೂ ಹೇಗೆ ? ಇಷ್ಟೆಲ್ಲಾ ಅಕ್ರಮಗಳ ನಡುವೆಯೂ ಸರ್ಕಾರಗಳು ಅಬಾಧಿತವಾಗಿರುತ್ತವೆ, ಸಂಬಂಧಪಟ್ಟ ಸಚಿವರು ʼಮೇಲಿನವರʼ ಕೃಪಾಕಟಾಕ್ಷದೊಂದಿಗೆ ನಿರಾಳವಾಗಿರುತ್ತಾರೆ. ಸಾರ್ವಜನಿಕ ವಲಯದಲ್ಲೂ ಇದು ಯಾವುದೇ ಪ್ರತಿರೋಧದ ದನಿಗಳನ್ನು ಮೂಡಿಸುವುದಿಲ್ಲ. ಏಕೆಂದರೆ ಜನಸಾಮಾನ್ಯರ ಸಾಮಾಜಿಕ ಪ್ರಜ್ಞೆ ಯಾವುದೋ ಒಂದು ನಿಷ್ಠೆಗೊಳಗಾಗಿ ನಿಷ್ಕ್ರಿಯವಾಗಿರುತ್ತದೆ.

ಈ ತಾರತಮ್ಯಗಳನ್ನು ಯಥಾವತ್ತಾಗಿ ಕಾಪಾಡಲೆಂದೇ ಅಥವಾ ಮತ್ತಷ್ಟು ಕಂದರಗಳನ್ನು ಸೃಷ್ಟಿಸುವ ಸಲುವಾಗಿಯೇ ರೂಪಿಸಲಾಗುವ ಆಡಳಿತ ನೀತಿಗಳನ್ನು ಜಾರಿಗೊಳಿಸಲು ಗ್ರಾಮ ಮಟ್ಟದಿಂದ ದೆಹಲಿಯವರೆಗೂ ಒಂದು ಸಾಮಾಜಿಕ ವ್ಯವಸ್ಥೆ ಇನ್ನೂ ಜೀವಂತವಾಗಿದೆ. ಈ ಸಾಮಾಜಿಕ ಚೌಕಟ್ಟು ಶತಮಾನಗಳ ಬುನಾದಿ ಇರುವ ಜಾತಿ ವ್ಯವಸ್ಥೆಯಿಂದ ನಿಯಂತ್ರಿಸಲ್ಪಡುತ್ತದೆ. ದಿನನಿತ್ಯ ಕೇಳಿಬರುವ ಜಾತಿ ದೌರ್ಜನ್ಯಗಳು ನಮ್ಮ ಆಂತರಿಕ ಪ್ರಜ್ಞೆಯನ್ನು ಕದಡುತ್ತಿಲ್ಲ. ಏಕೆಂದರೆ ದೌರ್ಜನ್ಯಕ್ಕೊಳಗಾಗುತ್ತಿರುವುದು ಆರ್ಥಿಕ ನೆಲೆಯಲ್ಲಿ ಕೆಳಸ್ತರಕ್ಕೆ ಸೇರಿದವರಾಗಿದ್ದಾರೆ. ಇಲ್ಲಿರುವ ಜಾತ್ಯತೀತ ಲಕ್ಷಣ ರಾಜಕೀಯ ನೆಲೆಯಲ್ಲಾಗಲೀ, ಸಾಂಸ್ಕೃತಿಕ ನೆಲೆಯಲ್ಲಾಗಲೀ ಕಂಡುಬರುವುದಿಲ್ಲ. ಅಂದರೆ, ಮತನಿರಪೇಕ್ಷವಾಗಿ, ಜಾತಿ ಗೋಡೆಗಳನ್ನು ಮೀರಿದ ಒಂದು ಅಸಮಾನತೆ ನಮ್ಮ ಸಮಾಜದಲ್ಲಿ ಬೇರೂರುತ್ತಿದೆ. ಶ್ರೀಮಂತಿಕೆ ಮತ್ತು ದಾರಿದ್ರ್ಯತೆಯ ನಡುವಿನ ಕಂದರದಲ್ಲಿ ಹುದುಗಿಹೋಗುವ ಅಸಂಖ್ಯಾತ ಅಸಹಾಯಕ ದನಿಗಳು ತಮ್ಮ ಪ್ರತಿರೋಧವನ್ನು ದಾಖಲಿಸಲೂ ಸಾಧ್ಯವಾಗದಂತೆ ಕಾಯ್ದೆ ಕಾನೂನುಗಳನ್ನು ರೂಪಿಸಲಾಗುತ್ತಿದೆ. ಎಲ್ಲ ಜಾತಿ ಮತದ ನೆಲೆಗಳಲ್ಲಿ ವಿಸ್ತರಿಸಿರುವ ಈ ತಾರತಮ್ಯಗಳನ್ನು ವಿರೋಧಿಸಲು ಅತ್ಯವಶ್ಯವಾದ ಒಂದು ಜಾತ್ಯತೀತ ಭೂಮಿಕೆಯನ್ನು ಶೈಶಾವಸ್ಥೆಯಲ್ಲೇ ಭಗ್ನಗೊಳಿಸಲಾಗುತ್ತಿದೆ.
ಯಾವುದೇ ಭೌಗೋಳಿಕ ರಾಷ್ಟ್ರದ ಸಾಮಾಜಿಕ ಮತ್ತು ಸಾಂಸ್ಕೃತಿಕ ವಾತಾವರಣದಲ್ಲಿ ಜಾಗೃತವಾಗಿರಬೇಕಾದ ಸಾರ್ವಜನಿಕ ಅರಿವು ಮತ್ತು ಸಾಮಾಜಿಕ ಪ್ರಜ್ಞೆಯನ್ನು ಮೊಳಕೆಯಲ್ಲೇ ಚಿವುಟಿ, ಯಾವುದೋ ಒಂದು ಆಧಿಪತ್ಯಕ್ಕೊಳಪಡಿಸುವ ನಿಟ್ಟಿನಲ್ಲಿ ಇಂದು ರಾಷ್ಟ್ರ ರಾಜಕಾರಣ ಬೆಳೆಯುತ್ತಿದೆ. ಅಂತರಿಕವಾಗಿ ಜಾತಿ, ಉಪಜಾತಿ, ಒಳಜಾತಿ ಮತ್ತು ಮೇಲ್ಜಾತಿಗಳ ಆಧಿಪತ್ಯಗಳು ಬಲವಾಗುತ್ತಿರುವಂತೆಯೇ ವ್ಯಾಪಕ ನೆಲೆಯಲ್ಲಿ ಮತಧರ್ಮಗಳ ಆಧಿಪತ್ಯದ ನೆಲೆಗಳೂ ಪ್ರಬಲವಾಗುತ್ತಿವೆ. ಈ ಆಧಿಪತ್ಯದ ನೆಲೆಗಳು ತಮ್ಮ ಸಾಂಸ್ಥಿಕ, ಸಾಂಘಿಕ ಅಸ್ತಿತ್ವವನ್ನು ಕಾಪಾಡಿಕೊಳ್ಳಲೆಂದೇ ಸಾರ್ವಜನಿಕ ಸಂಕಥನಗಳ ನಿರೂಪಣೆಗಳನ್ನೂ ನಿರ್ಧರಿಸುತ್ತವೆ. ಆಳುವ ವರ್ಗಗಳು ಈ ಆಧಿಪತ್ಯದ ನೆಲೆಗಳನ್ನೇ ಬಳಸಿಕೊಂಡು ಇಂತಹ ಸಾಪೇಕ್ಷ ನಿರೂಪಣೆಗಳಿಗೆ ಸಾರ್ವತ್ರಿಕತೆಯನ್ನು ಕಲ್ಪಿಸಲು ಸಾಂವಿಧಾನಿಕ ಮಾರ್ಗಗಳನ್ನೇ ಅನುಸರಿಸುತ್ತವೆ. ತಂತ್ರಜ್ಞಾನ ಯುಗದಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಡಿಜಿಟಲ್ ವೇದಿಕೆಗಳು ಇದಕ್ಕೆ ಸಹಾಯಕವಾಗಿರುತ್ತವೆ. ಇಂದು ಸಾರ್ವಜನಿಕವಾಗಿ ಬಹುಚರ್ಚಿತವಾಗಿರುವ ಪಠ್ಯ ಪರಿಷ್ಕರಣೆಯೂ ಇದರ ಒಂದು ಭಾಗವಷ್ಟೇ ಆಗಿದೆ. ಹಿಂದುತ್ವ ರಾಜಕಾರಣ ಈ ಮೇಲ್ಜಾತಿ, ಮೇಲ್ವರ್ಗ ಮತ್ತು ವೈದಿಕಶಾಹಿ ಸಾಂಸ್ಕೃತಿಕ ನೆಲೆಗಳ ಸಮ್ಮಿಶ್ರಣವಾಗಿರುವುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಈ ಆಧಿಪತ್ಯ ರಾಜಕಾರಣದ ಮಹತ್ವಾಕಾಂಕ್ಷೆಗೆ ಒಂದು ಪ್ರಜಾಸತ್ತಾತ್ಮಕ ಪ್ರತಿರೋಧದ ನೆಲೆಯನ್ನು ರೂಪಿಸುವುದು ಈ ಸಂದರ್ಭದ ಅನಿವಾರ್ಯತೆಯೂ ಆಗಿದೆ. ಭಾರತದ ಸಂವಿಧಾನ ಈ ನಿಟ್ಟಿನಲ್ಲಿ ನಮಗೆ ದಾರಿದೀಪವಾಗಬಹುದು ಹಾಗೆಯೇ ನಮ್ಮೊಳಗಿನ ಜಾಗೃತ ಸಾಮಾಜಿಕ ಪ್ರಜ್ಞೆ ಬೆಳಕಿನ ಕಿಂಡಿಯೂ ಆಗಬಹುದು.









