
ಡಿಜಿಟಲ್ ತಂತ್ರಜ್ಞಾನದ ಯುಗದಲ್ಲೂ ಭಾರತೀಯ ಸಮಾಜವನ್ನು ಒಳಹೊಕ್ಕು ನೋಡಿದಾಗ ಕಾಣುವುದು ಸಾಂಪ್ರದಾಯಿಕ ಸಂರಚನೆಗಳು ಹಾಗೂ ಮತ-ಧರ್ಮ-ಸಂಸ್ಕೃತಿಗಳ ನೆಲೆಯಲ್ಲೇ ರೂಪುಗೊಂಡ ಬಹು ಆಯಾಮದ ಸಮಾಜಗಳು. ಭಾರತದಲ್ಲೇ ಉಗಮಿಸಿದ ಎಲ್ಲ ಮತಗಳೂ ಗ್ರಾಂಥಿಕವಾಗಿ ಕೂಡು ಬಾಳ್ವೆಯ ತತ್ವಗಳನ್ನೇ ಪ್ರತಿಪಾದಿಸುವುದೊಂದು ವಿಶೇಷ. ಇಸ್ಲಾಂ, ಕ್ರೈಸ್ತ ಮತಗಳೂ ಸಹ ತಾತ್ವಿಕ ನೆಲೆಯಲ್ಲಿ ವಿಶ್ವ ಭ್ರಾತೃತ್ವವನ್ನೇ ಪ್ರತಿಪಾದಿಸುತ್ತವೆ. ವೇದೋಪನಿಷತ್ತುಗಳು, ಕುರಾನ್ ಬೈಬಲ್ ಗುರುಗ್ರಂಥಗಳು, ಬೌದ್ಧ ಸಂಹಿತೆಗಳು ಪಂಪನ ʼ ಮನುಜ ಜಾತಿ ತಾನೊಂದೇ ವಲಂ ʼ ಎಂಬ ಉದಾತ್ತ ಚಿಂತನೆಯನ್ನು ತಮ್ಮದೇ ಎಂದು ವಾದಿಸುತ್ತವೆ. ಹಿಂದೂ ಧಾರ್ಮಿಕ ನೆಲೆಯಲ್ಲಿ ʼ ವಸುದೈವ ಕುಟುಂಬಕಂ ʼ ವರ್ತಮಾನದ ಬಲಪಂಥೀಯ ರಾಜಕಾರಣದಲ್ಲೂ ಧ್ವನಿಸುತ್ತಿರುತ್ತದೆ.
ಇಂತಹ ಒಂದು ಸಮಾಜ ಸಹಜವಾಗಿಯೇ ಮನುಷ್ಯರ ನಡುವೆ ಭೇದಭಾವಗಳಿಲ್ಲದ, ದ್ವೇಷಾಸೂಯೆಗಳಿಲ್ಲದ ಒಂದು ವಾತಾವರಣಕ್ಕೆ ನಿದರ್ಶನಪ್ರಾಯವಾಗಿ ಕಾಣಬೇಕಿತ್ತು. ಈ ತಾತ್ವಿಕ ನೆಲೆಯಲ್ಲೇ ಭಾರತದ ಸಂವಿಧಾನವೂ ಸಹ ʼಎಲ್ಲರನ್ನೂ ಒಳಗೊಳ್ಳುವʼ (All Inclusive) ಸಮಾಜವನ್ನು, ಸ್ವಾತಂತ್ರ್ಯ ಸಮಾನತೆ ಮತ್ತು ಸೋದರತ್ವ-ಸೋದರಿತ್ವದ ಭೂಮಿಕೆಯ ಮೇಲೆ ಕಟ್ಟಲು ಅಪೇಕ್ಷಿಸುತ್ತದೆ. ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಆಳ್ವಿಕೆಯನ್ನು ಒಪ್ಪಿಕೊಂಡ ಭಾರತ 78 ವರ್ಷಗಳಲ್ಲಿ ಮನುಷ್ಯರ ನಡುವಿನ ಗೋಡೆಗಳನ್ನು ಕೆಡವಿ, ಸಮುದಾಯಗಳನ್ನು ವಿಭಜಿಸುವ ಬೇಲಿಗಳನ್ನು ಕಿತ್ತುಹಾಕಿ, ಸಮಾಜಗಳನ್ನು ಒಂದುಗೂಡಿಸುವ ʼ ಸರ್ವ ಜನಾಂಗದ ಶಾಂತಿಯ ತೋಟ ʼ ವನ್ನು ನಿರ್ಮಿಸಬೇಕಿತ್ತು.

ವರ್ತಮಾನದ ದುರವಸ್ಥೆಯ ನಡುವೆ
ವಿಪರ್ಯಾಸ ಎಂದರೆ 2025ರ ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ಯುಗದಲ್ಲೂ ಸಹ ಭಾರತದಲ್ಲಿ ದ್ವೇಷ-ಅಸೂಯೆ-ಹಿಂಸೆ-ಕ್ರೌರ್ಯ-ತಾರತಮ್ಯ ಮತ್ತು ದೌರ್ಜನ್ಯಗಳು ಸಮಾಜದ ಎಲ್ಲ ಸ್ತರಗಳನ್ನೂ, ಎಲ್ಲ ವಲಯಗಳನ್ನೂ ಆವರಿಸಿಕೊಂಡಿವೆ. ʼ ಎಲ್ಲರನ್ನೂ ಪ್ರೀತಿಸು ʼ ಎಂಬ ಉದಾತ್ತ ಮನೋಭಾವವನ್ನೇ ಮಾರುಕಟ್ಟೆ ಸರಕಿನಂತೆ ವಿನಿಮಯ ಮಾಡುತ್ತಾ, ಬಳಕೆಯ ವಸ್ತುವಿನಂತೆ ಪರಿಗಣಿಸುತ್ತಾ, ಪ್ರೀತಿ-ವಾತ್ಸಲ್ಯ-ಮಮತೆ-ಸ್ನೇಹ ಎಲ್ಲವನ್ನೂ ಸಾಪೇಕ್ಷಗೊಳಿಸಿರುವ ಹಂತದಲ್ಲಿ ನಾವಿದ್ದೇವೆ. ಜಾತಿ ವ್ಯವಸ್ಥೆಯ ಬೇರುಗಳು ಗಟ್ಟಿಯಾಗುತ್ತಿರುವಂತೆಯೇ, ಧಾರ್ಮಿಕ ಸಂಪ್ರದಾಯಗಳು ರೂಪಾಂತರಗೊಂಡು ಸುಶಿಕ್ಷಿತ ನಗರ ಜೀವನದಲ್ಲೂ ಹಾಸುಹೊಕ್ಕಿರುವುದರಿಂದ, ಪ್ರಾಚೀನ ಸಮಾಜದ ಶ್ರೇಷ್ಠತೆ, ಪಾವಿತ್ರ್ಯತೆ ಮತ್ತು ಮೇಲರಿಮೆಗಳು ಸುಶಿಕ್ಷಿತ ಸಮಾಜವನ್ನು ಪುನಃ ಆವರಿಸಿವೆ.
ಆಚರಣಾತ್ಮಕವಾಗಿ ಈ ಬೆಳವಣಿಗೆಗಳು ಭಾರತೀಯ ಸಮಾಜದ ಪ್ರೀತಿಯ ಸೆಲೆಗಳನ್ನು ಬಲಪಡಿಸುವ ಬದಲು ದುರ್ಬಲಗೊಳಿಸುತ್ತಿದ್ದು, ಆರ್ಥಿಕ ಮೇಲರಿಮೆ ಮತ್ತು ಸಾಮಾಜಿಕ ಪ್ರಾಬಲ್ಯ , ಪ್ರಾಚೀನ ಸಮಾಜದ ಊಳಿಗಮಾನ್ಯತೆ, ಪಿತೃಪ್ರಧಾನತೆ, ಗಂಡಾಳಿಕೆ ಮತ್ತು ಜಾತಿ ಶ್ರೇಣಿಯ ಶ್ರೇಷ್ಠತೆಯನ್ನು ಮರುಸ್ಥಾಪಿಸುತ್ತಿವೆ. ಸಮಾಜಶಾಸ್ತ್ರೀಯ ದೃಷ್ಟಿಯಿಂದ ನೋಡಿದಾಗ, ಸಮಾಜಗಳಲ್ಲಿ ಕಾಣಲಾಗದ ಔದಾತ್ಯಗಳನ್ನು ಮತ್ತು ಆದರ್ಶಗಳನ್ನು ಒಟ್ಟು ವ್ಯವಸ್ಥೆಯಲ್ಲಾಗಲೀ, ರಾಜಕೀಯದಲ್ಲಾಗಲೀ, ಸಾಂಸ್ಕೃತಿಕ ವಲಯದಲ್ಲಾಗಲೀ ಕಾಣಲು ಸಾಧ್ಯವೇ ಇಲ್ಲ. ಹಾಗಾಗಿ ಪ್ರಾಚೀನ ಭಾರತದ ಮೇಲು-ಕೀಳುಗಳ ಅಹಮಿಕೆಯೇ ದೇಶದ ರಾಜಕಾರಣವನ್ನೂ ಆವರಿಸಿಕೊಂಡು ತನ್ನ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಿದೆ. ಕಳೆದ ಮೂರು ದಶಕಗಳಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಸಾಂಸ್ಕೃತಿಕ ರಾಜಕಾರಣ ಮತ್ತು ಅದರ ಸುತ್ತಲಿನ ಅಧಿಕಾರ ಕೇಂದ್ರಗಳು ಈ ಬೇರುಗಳಿಗೆ ನೀರೆರೆಯುತ್ತಾ, ಸ್ವತಂತ್ರ ಭಾರತದಲ್ಲಿ ಅಪವಾದವಾಗಿದ್ದ ʼ ರಾಜಕೀಯ ದ್ವೇಷ ಅಸೂಯೆಗಳನ್ನು ʼ ಚುನಾವಣಾ ರಾಜಕಾರಣದಲ್ಲೂ ʼ ವ್ಯವಸ್ಥಿತವಾಗಿ ಅನುಸರಿಸಲಾಗುತ್ತಿದೆ.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ರಾಜಕೀಯ ವಿರೋಧ-ಪ್ರತಿರೋಧ ಆರಂಭದಿಂದಲೂ ಗುರುತಿಸಬಹುದಾದ ವಿದ್ಯಮಾನ. ಆದರೆ ಎಡ-ಬಲ-ನಡು ಪಂಥೀಯ ರಾಜಕೀಯ ಸಿದ್ದಾಂತಗಳ ನಡುವೆಯೂ ವೈಯುಕ್ತಿಕ ನೆಲೆಯಲ್ಲಿ ಅಥವಾ ಪಕ್ಷದ ಚೌಕಟ್ಟಿನಲ್ಲಿ ಪರಸ್ಪರ ದ್ವೇಷ ಎಂದೂ ಇರಲಿಲ್ಲ. ಸೈದ್ಧಾಂತಿಕವಾಗಿ ಕಡು ವಿರೋಧಿಗಳಾಗಿದ್ದರೂ ಅದು ಕೇವಲ ಆಡಳಿತ, ಆಳ್ವಿಕೆ ಮತ್ತು ನೀತಿ ನಿರೂಪಣೆಗಳಿಗೆ ಸೀಮಿತವಾಗಿತ್ತು. 1980ರ ನಂತರದಲ್ಲಿ ಕೋಮುವಾದ-ಮತೀಯ ರಾಜಕಾರಣ ತಳಮಟ್ಟದವರೆಗೂ ವ್ಯಾಪಿಸಿದ ಪರಿಣಾಮ ಸಾಮಾಜಿಕ-ಮತೀಯ ದ್ವೇಷಗಳು ರಾಜಕೀಯ ಸ್ವರೂಪ ಪಡೆದಿದ್ದು ವರ್ತಮಾನದ ದುರಂತ. 2025ರಲ್ಲಿ ಈ ದ್ವೇಷ ಪ್ರಜಾಪ್ರಭುತ್ವದ ಬೇರುಗಳನ್ನೇ ಶಿಥಿಲಗೊಳಿಸುವಷ್ಟು ಬೆಳೆದಿದೆ. ತಮ್ಮ ಪಕ್ಷಕ್ಕೆ ಮತ ನೀಡದಿದ್ದರೆ, ಕ್ಷೇತ್ರದ ಜನರಿಗೆ ಸಾಂವಿಧಾನಿಕ ಸವಲತ್ತುಗಳನ್ನೂ ಒದಗಿಸುವುದಿಲ್ಲ ಎಂಬ ಬೆದರಿಕೆಯ ಮಾತುಗಳು ಬಿಜೆಪಿ ಅಭ್ಯರ್ಥಿಗಳಿಂದ ಕೇಳಿಬರುತ್ತಿವೆ. ಅಂದರೆ ರಾಜಕೀಯ ವಿರೋಧ ದ್ವೇಷವಾಗಿ ಬದಲಾದರೆ ಮತದಾರರೂ ಸಹ ಇದಕ್ಕೆ ಗುರಿಯಾಗಬಹುದು ಎಂಬ ಹೊಸ ಸಂದೇಶವನ್ನು ನೀಡಲಾಗುತ್ತಿದೆ.
ಅಧಿಕಾರ ರಾಜಕಾರಣದ ಅಡ್ಡ ಪರಿಣಾಮಗಳು
ರಾಜಕೀಯದಲ್ಲಿ ಅಧಿಕಾರವೇ ಅಂತಿಮ ಗುರಿ ಎನ್ನುವುದು ಪಾರಂಪರಿಕ ತಿಳುವಳಿಕೆ. ಆದರೆ ಅಧಿಕಾರ ಗಳಿಸಲು ಸೈದ್ಧಾಂತಿಕ-ತಾತ್ವಿಕ ವಿರೋಧಿಗಳನ್ನು ದ್ವೇಷಿಸುವುದು, ಈ ವರ್ತನೆಗೆ ಸಾಮಾಜಿಕ ಮನ್ನಣೆ ಪಡೆಯುವ ಸಲುವಾಗಿ ಇತಿಹಾಸದಿಂದ ವರ್ತಮಾನದವರೆಗೆ ಮಿಥ್ಯೆಗಳನ್ನು ಸೃಷ್ಟಿಸುವುದು ಮತ್ತು ಜಾತಿ-ಮತ-ಧರ್ಮದ ಅಸ್ಮಿತೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ʼ ಅನ್ಯರನ್ನು ಸೃಷ್ಟಿಸುವುದು (Othering ) , ಭಾರತದ ಮಟ್ಟಿಗೆ, 21ನೆ ಶತಮಾನದ ರಾಜಕೀಯ ಅವಿಷ್ಕಾರ. ಮನಃಶಾಸ್ತ್ರೀಯ ದೃಷ್ಟಿಯಿಂದ ನೋಡಿದಾಗ ಇದು ಹೊಸ ಅವಿಷ್ಕಾರವಲ್ಲ, ಬದಲಾಗಿ ಭಾರತದ ಶ್ರೇಣೀಕೃತ, ಸಾಂಪ್ರದಾಯಿಕ ಸಮಾಜದಲ್ಲಿ ವೈಯುಕ್ತಿಕ ಅಥವಾ ಕೌಟುಂಬಿಕ ನೆಲೆಯಲ್ಲಿ ಕಾಣಲಾಗುತ್ತಿದ್ದ ದುಷ್ಟತನದ ರಾಜಕೀಯ ರೂಪಾಂತರ .ಹಾಗಾಗಿಯೇ ಮನುಷ್ಯರಲ್ಲಿ ಇರಬಹುದಾದ ದ್ವೇಷಾಸೂಯೆಗಳ ಪ್ರವೃತ್ತಿಯನ್ನು ರಾಜಕೀಯವಾಗಿ ನಿರ್ಬಂಧಿಸಲು ʼ ದ್ವೇಷ ರಾಜಕಾರಣ ಮತ್ತು ದ್ವೇಷ ಅಪರಾಧ (ನಿರ್ಬಂಧಕ) 2025 ಒಂದು ಕಾಯ್ದೆಯಾಗಿ ಜಾರಿಯಾಗಲಿದೆ.
ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಈ ವಿಧೇಯಕವನ್ನು ಮಂಡಿಸಿದ್ದು, ಬಿಜೆಪಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಆದರೆ ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರ್ಕಾರ ಇಂತಹುದೇ ಶಾಸನವನ್ನು ಜಾರಿಗೊಳಿಸಿರುವುದನ್ನು ಕರ್ನಾಟಕದ ಬಿಜೆಪಿ ನಾಯಕರು ಮರೆತಂತಿದೆ. ದ್ವೇಷ ಭಾಷಣ ಅಥವಾ ದ್ವೇಷ ಪೂರಿತ ಸಂದೇಶವನ್ನು ಸಾರ್ವಜನಿಕವಾಗಿ ಹರಡುವ ಅಪರಾಧಿಗಳಿಗೆ 1 ರಿಂದ 10 ವರ್ಷಗಳ ಜೈಲು ಶಿಕ್ಷೆ ಮತ್ತು ನಗದು ದಂಡವನ್ನು ವಿಧಿಸುವ ನಿಯಮವನ್ನು ರೂಪಿಸಲಾಗಿದೆ. ಈ ಕಾಯ್ದೆಯ ದುರುಪಯೋಗವಾಗುತ್ತದೆ ಎಂಬ ಬಿಜೆಪಿಯ ಆರೋಪಕ್ಕೆ ಸಾಕ್ಷಿಯೇನಾದರೂ ಇದ್ದರೆ ಅದು ಮಹಾರಾಷ್ಟ್ರದಲ್ಲೇ ಕಾಣಬೇಕಲ್ಲವೇ ? ಯಾವುದೇ ಕಾಯ್ದೆಯಾದರೂ, ಆಳುವ ಪಕ್ಷಗಳು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿದ್ದು, ಸಾಂವಿಧಾನಿಕ ನೈತಿಕತೆಯೊಂದಿಗೆ ಆಡಳಿತ ನಿರ್ವಹಿಸಿದರೆ , ದುರುಪಯೋಗದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ದುರದೃಷ್ಟವಶಾತ್ ಭಾರತದ ರಾಜಕಾರಣದಲ್ಲಿ ಪಕ್ಷಗಳು ಈ ನೈತಿಕತೆಯ ಗಡಿಯನ್ನು ದಾಟಿ, ಅಸ್ಮಿತೆ, ಅಸ್ತಿತ್ವ ಮತ್ತು ಶಾಶ್ವತ ಅಧಿಕಾರದ ವ್ಯಾಮೋಹಕ್ಕೆ ಬಲಿಯಾಗಿವೆ. ಈ ಕಾಯ್ದೆಯ ದುರುಪಯೋಗವಾಗುವುದೇ ಆದರೆ ಈ ಕಾರಣಗಳಿಗಾಗಿ ಆಗುತ್ತದೆ, ಇದು ಪಕ್ಷಗಳ ವಿವೇಕ, ವಿವೇಚನೆ ಮತ್ತು ನೈತಿಕ ಮೌಲ್ಯಗಳ ಪ್ರಶ್ನೆ.
ಮಸೂದೆಯ ಅಗತ್ಯತೆ ವಿರೋಧದ ವಿರೋಧಾಭಾಸ

ಸಾರ್ವಜನಿಕ ಚರ್ಚೆಗಳಲ್ಲೂ ಈ ವಿಧೇಯಕಕ್ಕೆ ಸಂಪ್ರದಾಯವಾದಿಗಳಿಂದ, ಧಾರ್ಮಿಕ ನೇತಾರರಿಂದ ಕೇಳಿಬಂದರೆ ಅಚ್ಚರಿಯೇನಿಲ್ಲ. ಆದರೆ ನಾಗರಿಕತೆಯ ಉತ್ತುಂಗದಲ್ಲಿರುವ ದೇಶವೊಂದು, ವೈಜ್ಞಾನಿಕವಾಗಿ ತಂತ್ರಜ್ಞಾನದಲ್ಲಿ ವಿಶ್ವದ ಮುಂಚೂಣಿಯಲ್ಲಿರುವ ದೇಶವೊಂದು, ದ್ವೇಷಾಸೂಯೆಯಂತಹ ಮಾನವ ಸಮಾಜದ ದುರ್ಗುಣವೊಂದನ್ನು, ಸಾಮಾಜಿಕ ಬಹಿಷ್ಕಾರದಂತಹ ಅಮಾನುಷ ಪದ್ಧತಿಯನ್ನು ನಿರ್ಬಂಧಿಸಲು ಶಾಸನವನ್ನು ಅವಲಂಬಿಸುವುದು, ತಲೆತಗ್ಗಿಸುವ ವಿಚಾರ ಅಲ್ಲವೇ ? ಇಂದಿಗೂ ಸಹ ದೇಶದ ಬಹುಪಾಲು ಜನತೆ ಧಾರ್ಮಿಕ ಕಟ್ಟಳೆಗಳಿಗೆ, ನಿರ್ಬಂಧಗಳಿಗೆ, ಧರ್ಮಶಾಸ್ತ್ರದ ನಿಯಮಾವಳಿಗಳಿಗೆ ಶ್ರದ್ಧಾಭಕ್ತಿಯಿಂದ, ಗೌರವದಿಂದ ಮಾನ್ಯತೆ ನೀಡುತ್ತಾರೆ. ಇದು ಎಲ್ಲ ಮತ-ಧರ್ಮಗಳಲ್ಲೂ ಗುರುತಿಸಬಹುದಾದ ಸಮಾನ ಎಳೆ. ಹೀಗಿದ್ದರೂ ಈ ದುಷ್ಟತನವನ್ನು ನಿಗ್ರಹಿಸಲು ಶಾಸನಾತ್ಮಕ ಕ್ರಮ ಏಕೆ ಅನಿವಾರ್ಯವಾಗಿದೆ ?
ಭಾರತದ ಸಾಂಪ್ರದಾಯಿಕ, ಧಾರ್ಮಿಕ ಸಮಾಜದ ವೈಫಲ್ಯ ಇಲ್ಲಿ ಎದ್ದು ಕಾಣುತ್ತದೆ. Policing A society shows its moral vulnerability , ಸಮಾಜವೊಂದನ್ನು ಕಾನೂನಾತ್ಮಕವಾಗಿ ನಿಯಂತ್ರಿಸುವುದು ಆ ಸಮಾಜದ ನೈತಿಕ ದೌರ್ಬಲ್ಯವನ್ನು ಸೂಚಿಸುತ್ತದೆ. 78 ವರ್ಷಗಳ ಪ್ರಜಾಪ್ರಭುತ್ವೀಯ ಸಮಾಜದಲ್ಲಿ, ಸಾಂವಿಧಾನಿಕ ಆಳ್ವಿಕೆಯಲ್ಲಿ ಸಮಸ್ತ ಜನತೆಗೂ , ಎಲ್ಲ ಸಮುದಾಯಗಳಿಗೂ ಧಾರ್ಮಿಕ ಹಾಗೂ ಉಪಾಸನಾ ಸ್ವಾತಂತ್ರ್ಯವನ್ನು ಕಲ್ಪಿಸಿರುವುದು ಕೇವಲ ಆಯಾ ಸಮಾಜಗಳ ಅಥವಾ ಧಾರ್ಮಿಕ ಸಂಪ್ರದಾಯಗಳ ಅಸ್ತಿತ್ವವನ್ನು ಕಾಪಾಡಿಕೊಳ್ಳಲೆಂದೇ ? ಈ ಪ್ರಶ್ನೆಯನ್ನು ಈಗಲಾದರೂ ಕೇಳಿಕೊಳ್ಳಬೇಕಿದೆ. ಕುಗ್ರಾಮದಿಂದ ದೇಶದ ರಾಜಧಾನಿಯವರೆಗೂ ವ್ಯಾಪಿಸುರುವ ಧಾರ್ಮಿಕ ಬೋಧಕರ ವರ್ಗ, ತಮ್ಮ ತಮ್ಮ ಧರ್ಮಗಳ ಅನುಯಾಯಿಗಳಿಗೆ ನೈತಿಕ ಮೌಲ್ಯಗಳನ್ನು ಕಲಿಸಿಯೇ ಇಲ್ಲವೇ ?

ಲಕ್ಷಾಂತರ ಸಂಖ್ಯೆಯಲ್ಲಿರುವ ದೇವಸ್ಥಾನ, ಚರ್ಚ್, ಮಸೀದಿ, ಮದರಸಾ, ಮಠಗಳು, ಅಧ್ಯಾತ್ಮಿಕ ಕೇಂದ್ರಗಳು , ಶ್ರದ್ಧಾ ಕೇಂದ್ರಗಳು ಇನ್ನೂ ಹೆಚ್ಚಿನ ಸಂಖ್ಯೆಯ ಧಾರ್ಮಿಕ ಉಪನ್ಯಾಸಕರನ್ನು, ಬೋಧಕರನ್ನು ವ್ಯವಸ್ಥಿತವಾಗಿ ಪೋಷಿಸುತ್ತಿವೆ. ದಿನಕ್ಕೆ 30 ನಿಮಿಷಗಳ ಕಾಲ, 30 ರಿಂದ 50 ಯುವಜನಕ್ಕೆ ಮತ್ತು ಹಿರಿಯರಿಗೆ ನೈತಿಕತೆಯ ಬಗ್ಗೆ , ದುಷ್ಟಗುಣಗಳನ್ನು ವರ್ಜಿಸಿ ಸಹಬಾಳ್ವೆ ನಡೆಸುವ ಬಗ್ಗೆ, ದ್ವೇಷ, ಅಸೂಯೆ, ಹಿಂಸೆಯನ್ನು ಮರೆತು ಮಾನವೀಯ ಸಮಾಜವನ್ನು ಕಟ್ಟುವ ಬಗ್ಗೆ ಉಪನ್ಯಾಸ ಮಾಡಿದ್ದಲ್ಲಿ, ಈ ವೇಳೆಗೆ ಭಾರತೀಯ ಸಮಾಜ ಮಾನವೀಯವಾಗಿ ಕಾಣುತ್ತಿತ್ತು. ಜಾತಿ ಧರ್ಮಗಳ ಕಾರಣದಿಂದ ಪರಸ್ಪರ ಕೊಲೆಮಾಡುವ, ಅತ್ಯಾಚಾರ ಎಸಗುವ, ಸ್ಥಾವರಗಳನ್ನು ಧ್ವಂಸ ಮಾಡುವ ದುಷ್ಟಕೂಟಗಳು ಬೆಳೆಯುತ್ತಿರಲಿಲ್ಲ. ಧರ್ಮಗುರುಗಳ ಅಥವಾ ಆಧ್ಯಾತ್ಮಿಕ ಬೋಧಕರ ಈ ವೈಫಲ್ಯವೇ, ಅಸ್ತಿತ್ವವಾದಿ ರಾಜಕಾರಣಕ್ಕೆ, ಸಾಂಸ್ಕೃತಿಕ ರಾಜಕಾರಣದ ಅಸ್ಮಿತೆಯ ಸಂಘರ್ಷಗಳಿಗೆ ಬಂಡವಾಳವಾಗಿ ಪರಿಣಮಿಸಿದೆ. ಇದರ ಫಲಾನುಭವಿಗಳು ಮೇಲ್ಪದರದ ಸಮಾಜದಲ್ಲಿ ಕಂಡುಬಂದರೆ, ನೊಂದ ಸಂತ್ರಸ್ತರು ಬಡಜನತೆಯ ನಡುವೆ ಕಾಣುತ್ತಾರೆ.
ರಾಜಕಾರಣ-ಸಮಾಜದ ನೈತಿಕ ಹೊಣೆ
ಗ್ರಾಮ ಪಂಚಾಯತ್‌ಗಳಿಂದ ಸಂಸತ್ತಿನವರೆಗೂ ಆಳ್ವಿಕೆಯ ಕೇಂದ್ರಗಳನ್ನು ಪ್ರತಿನಿಧಿಸುವ , ಚುನಾಯಿತ-ಪರಾಜಿತ-ನಿವೃತ್ತ ರಾಜಕಾರಣಿಗಳು ಹಾಗೂ ಅವರ ಕೋಟ್ಯಂತರ ಬೆಂಬಲಿಗರು ಸಂವಿಧಾನವನ್ನು ಗೌರವಿಸಿ, ಸಂವಿಧಾನವನ್ನೇ ಪ್ರಮಾಣೀಕರಿಸಿ , “ ನಾನು ಯಾವುದೇ ಜಾತಿ-ಮತ-ಧರ್ಮ-ಸಂಸ್ಕೃತಿ-ಸಂಪ್ರದಾಯವನ್ನು ಹಾಗೂ ಅವುಗಳನ್ನು ಅನುಸರಿಸುವ ಸಹಮಾನವರನ್ನು ದ್ವೇಷಿಸುವುದಿಲ್ಲ ” ಎಂದು ಸಂಕಲ್ಪ ಮಾಡಲು ಸಾಧ್ಯವೇ ? ಇದು ಕಾಲ್ಪನಿಕವಾಗಿ (Utopian ) ಮತ್ತು ಆದರ್ಶವಾದಿ (Idealistic ) ಆಗಿ ಕಂಡರೂ, ಅಸಾಧ್ಯವೇನಲ್ಲ. ಇದೇ ರೀತಿಯ ಸಂಕಲ್ಪವನ್ನು ಎಲ್ಲ ಧಾರ್ಮಿಕ ನೇತಾರರೂ, ಉಪಾಸಕರೂ, ಮಠಾಧಿಪತಿಗಳೂ ಮತ್ತು ಇವರ ಅಸಂಖ್ಯಾತ ಅನುಯಾಯಿಗಳೂ, ಅವರು ನಂಬುವ ದೇವರನ್ನೇ ಪ್ರಮಾಣಿಸಿ ಮಾಡಲು ಸಾಧ್ಯವಿಲ್ಲವೇ ? ಹಾಗೊಮ್ಮೆ ಮಾಡಿದ್ದರೆ ಇಂದು ಭಾರತದ ಧರ್ಮ ಸಂಘರ್ಷದ ನೆಲೆಯಾಗುತ್ತಿರಲಿಲ್ಲ ಅಲ್ಲವೇ ?

ಈ ದೃಷ್ಟಿಯಿಂದ ನೋಡಿದಾಗ, ಆಧುನಿಕತೆಯ ಉತ್ತುಂಗದಲ್ಲಿರುವ ಹಾಗೂ ನಾಗರಿಕತೆಯ ಉನ್ನತ ಸ್ತರದಲ್ಲಿರುವ ಭಾರತೀಯ ಸಮಾಜ, ಈ 78 ವರ್ಷಗಳಲ್ಲಿ ಎಂತಹ ಸಮಾಜವನ್ನು ಕಟ್ಟಿದೆ ಎಂಬ ಜಿಜ್ಞಾಸೆ ನಮ್ಮ ಪ್ರಜ್ಞೆಯನ್ನು ಕಾಡುತ್ತದೆ. ಮೇಲ್ವರ್ಗ ಸಮಾಜದ ನಿರ್ಲಿಪ್ತತೆ ಮತ್ತು ಸಾಮಾಜಿಕ ನಿಷ್ಕ್ರಿಯತೆ ಹಾಗೂ ಕೆಳವರ್ಗಗಳ ಅಸಹಾಯಕತೆಯ ನಡುವೆ, ದ್ವೇಷ ರಾಜಕಾರಣಕ್ಕೆ ಸ್ತ್ರೀ ದ್ವೇಷಕ್ಕೆ ಜಾತಿ ದ್ವೇಷ-ಮತದ್ವೇಷದ ರಾಜಕೀಯ ದುಷ್ಕೃತ್ಯಗಳಿಗೆ ಬಲಿಯಾಗುತ್ತಿರುವ ಸಂತ್ರಸ್ತ ಜನರ ಸಂಖ್ಯೆ ಕಡಿಮೆಯಾಗುತ್ತಾ ಹೋಗುವುದು ಒಂದು ಪ್ರಬುದ್ಧ ಸಮಾಜದ ಲಕ್ಷಣ. ಈ ಸಂಖ್ಯೆ ಹೆಚ್ಚಾಗುತ್ತಾ ಹೋಗುವುದು, ಸಮಾಜದ ಹಿಮ್ಮುಖ ಚಲನೆಯ ಸಂಕೇತ. ಈ ಹಿಮ್ಮುಖ ಚಲನೆಯೇ ದ್ವೇಷ ರಾಜಕಾರಣ-ಸಾಮಾಜಿಕ ಬಹಿಷ್ಕಾರ ( ಪ್ರತಿಬಂಧಕ) ಕಾಯ್ದೆಯಂತಹ ಶಾಸನಗಳಿಗೆ ಅವಕಾಶ ನೀಡುತ್ತದೆ.
ಈ ಕಾಯ್ದೆಯನ್ನು ವಿರೋಧಿಸುವ ಸಾಂಪ್ರದಾಯಿಕ, ಧಾರ್ಮಿಕ ವ್ಯಕ್ತಿ-ಸಂಘಟನೆಗಳು ತಮ್ಮ ಸಾಮಾಜಿಕ ಅಸ್ತಿತ್ವ ಮತ್ತು ಪ್ರಭಾವ, ಪ್ರಾಬಲ್ಯವನ್ನು ಬಳಸಿಕೊಂಡು, ಈ ಕಾಯ್ದೆಯೇ ಅನಗತ್ಯ ಎನ್ನುವಂತಹ ವಾತಾವರಣವನ್ನು ಸೃಷ್ಟಿಸಲು ಸಾಧ್ಯವೇ ? ಇದು ಧರ್ಮಗ್ರಂಥಗಳನ್ನು ಉಲ್ಲೇಖಿಸುವ ಮೂಲಕ ಅಥವಾ ಅಲ್ಲಿರುವ ಮೌಲ್ಯಗಳ ವೈಭವೀಕರಣದ ಮೂಲಕ ಆಗುವಂತಹುದಲ್ಲ. ವರ್ತಮಾನದ ಸಮಾಜಕ್ಕೆ ಅರಿವು ಮೂಡುವ ರೀತಿಯಲ್ಲಿ, ಸುತ್ತಲಿನ ಸಮಾಜದಲ್ಲೇ ಕಾಣಿಸುವ ಉದಾಹರಣೆಗಳನ್ನು ಮುಂದಿಟ್ಟು, ಮನದಟ್ಟು ಮಾಡುವುದರಿಂದ ಸಾಧ್ಯವಾಗುತ್ತದೆ. ವ್ಯಕ್ತಿಗಳಲ್ಲಿ ಸಂಯಮ, ಸೌಜನ್ಯ, ಸಂಭಾವಿತ ನಡೆ, ಪ್ರೀತಿ ವಿಶ್ವಾಸಗಳ ಸಂಬಂಧಗಳನ್ನು ಕಟ್ಟಲು ನೆರವಾಗುವ ಸಮಾಜದ ಮತ್ತೊಂದು ಮಗ್ಗುಲಲ್ಲಿ ದ್ವೇಷ, ಅಸೂಯೆ, ಹಿಂಸೆ, ಕ್ರೌರ್ಯಗಳನ್ನು ಪೋಷಿಸುವ ದುಷ್ಟ ಪ್ರವೃತ್ತಿಯೂ ಇರುತ್ತದೆ.’

ಅಂತಿಮ ಗುರಿ ಮತ್ತು ಹಾದಿ
ಈ ಅವಲಕ್ಷಣಗಳನ್ನು ಗುರುತಿಸಿ ಹೋಗಲಾಡಿಸುವ ಜವಾಬ್ದಾರಿ ನಾಗರಿಕ ಜಗತ್ತಿನ ಮೇಲಿರುತ್ತದೆ. ಸ್ವತಂತ್ರ ಭಾರತ ಇಂತಹ ಸಮಾಜವನ್ನು ಕಟ್ಟುವುದರಲ್ಲಿ ಯಶಸ್ವಿಯಾಗಿದ್ದಿದ್ದರೆ , ನಮ್ಮ ನಡುವೆ ಬಿಲ್ಲಿಸ್ ಬಾನು, ಭಾವರಿ ದೇವಿ, ಸೌಜನ್ಯ, ಬಲೂನು ಮಾಡುವ ಬಾಲೆ, ರೋಹಿತ್ ವೇಮುಲ ಅವರಂತಹ ನತದೃಷ್ಟರು ಕಾಣುತ್ತಿರಲಿಲ್ಲ ಅಲ್ಲವೇ ? ನಾಗರಿಕತೆಯ ವಿವಿಧ ಹಂತಗಳನ್ನು ದಾಟಿ ಬಂದಿದ್ದೇವೆ, ಆಧುನಿಕತೆಯನ್ನು ಅಪ್ಪಿಕೊಂಡಿದ್ದೇವೆ, ತಂತ್ರಜ್ಞಾನವನ್ನು ಜೀವನದ ಒಂದು ಭಾಗವಾಗಿ ಅನುಸರಿಸುತ್ತಿದ್ದೇವೆ, ಅತ್ಯುನ್ನತ ಶಿಕ್ಷಣದ ಫಲಾನುಭವಿಗಳಾಗಿದ್ದೇವೆ , ಆದರೆ ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ, ಮಹಿಳಾ ದೌರ್ಜನ್ಯ, ದ್ವೇಷ ರಾಜಕಾರಣ, ಮತೀಯವಾದ-ಕೋಮುವಾದ, ಸಾಮಾಜಿಕ ಹಿಂಸೆ ಮತ್ತು ಕ್ರೌರ್ಯ ಮೊದಲಾದ ದುಷ್ಟ ಪ್ರವೃತ್ತಿಗಳನ್ನು ಮೀರಿ ಮಾನವರಾಗಿ ರೂಪುಗೊಳ್ಳಲು ಸಾಧ್ಯವಾಗಿಲ್ಲ. ಮಾನವೀಯ ಸಮಾಜವನ್ನು ಕಟ್ಟಲು ನಮ್ಮಿಂದ ಸಾಧ್ಯವಾಗಿಲ್ಲ. ಅಮಾನುಷ ಪ್ರಾಚೀನ ನಡವಳಿಕೆಗಳಿಂದ ದೂರ ಸರಿಯಲು ಸಾಧ್ಯವಾಗಿಲ್ಲ.
ಇಲ್ಲಿ ತಪ್ಪು ಯಾರದು ಎನ್ನುವ ಪ್ರಶ್ನೆಯಲ್ಲ. ಈ ದುರ್ಗುಣಗಳನ್ನು ದುಷ್ಟತನವನ್ನು ನಿಗ್ರಹಿಸಲು ಸರ್ಕಾರಗಳ ಶಾಸನಗಳನ್ನು ನಿರೀಕ್ಷಿಸುವುದು ಏಕೆ ಎನ್ನುವುದು ಮೂರ್ತ ಪ್ರಶ್ನೆ. ಧಾರ್ಮಿಕ-ಸಾಂಸ್ಕೃತಿಕ ಶ್ರೇಷ್ಠತೆಯ ಬಗ್ಗೆ ಬೆನ್ನು ತಟ್ಟಿಕೊಳ್ಳುವ ಸಂಪ್ರದಾಯವಾದಿಗಳು ಈ ಪ್ರಶ್ನೆಗೆ ಉತ್ತರಿಸಬೇಕು. ಹಾಗೆಯೇ ಸಂವಿಧಾನ ಒದಗಿಸಿರುವ ಅತ್ಯುನ್ನತ ಶಿಕ್ಷಣದ ಫಲಾನುಭವಿಗಳು ಯೋಚಿಸಬೇಕು. 78 ವರ್ಷಗಳಲ್ಲಿ ಭಾರತ ಉತ್ಪಾದಿಸಿರುವ ವಿದ್ವತ್ತು ಮತ್ತು ಲೋಕ ಜ್ಞಾನ, ಒಬ್ಬ ಅಂಬೇಡ್ಕರ್, ಒಬ್ಬ ಗಾಂಧಿ, ಒಬ್ಬ ವಿವೇಕಾನಂದರನ್ನು ರೂಪಿಸಲು ಸಾಧ್ಯವಾಗಿಲ್ಲ. ಈ ಸಾಮೂಹಿಕ ವೈಫಲ್ಯವನ್ನು ಗುರುತಿಸುವುದೇ ಅಲ್ಲದೆ, ಇದನ್ನು ಮೀರಿ ನಾಗರಿಕತೆಯತ್ತ ನಡೆಯುವ ಇಚ್ಛಾಶಕ್ತಿ ನಮ್ಮಲ್ಲಿ ಇರಬೇಕಾಗುತ್ತದೆ. ಭಾರತದ ಯುವ ಸಮಾಜ ಹಿರಿಯ ತಲೆಮಾರಿನಿಂದ ಇದನ್ನೇ ನಿರೀಕ್ಷಿಸುತ್ತದೆ ಅಲ್ಲವೇ ?











