ಬೆಂಗಳೂರು: ಸಾವಿರಾರು ಕೋಟಿ ರೂಪಾಯಿ ಆಸ್ತಿಯ ಒಡೆಯ ಸಿಜೆ ರಾಯ್ (CJ Roy) ನಿನ್ನೆ(ಜನವರಿ 30) ಸಾವಿಗೆ ಶರಣಾಗಿದ್ದಾರೆ. ಐಟಿ ದಾಳಿ (IT Raid) ನಡೆದ ಹೊತ್ತಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದ್ದು, ಅವರ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಸಿಜೆ ರಾಯ್ ಅವರ ಸಾವಿಗೆ ಐಟಿ ದಾಳಿಯ ಭಯವೇ ಆತ್ಮಹತ್ಯೆಗೆ ಕಾರಣವೇ? ಅಥವಾ ಇದರ ಹಿಂದೆ ಬೇರೆ ಕಾರಣವಿದೆಯೇ? ಎಂಬ ಪ್ರಶ್ನೆಗಳು ಈಗ ಎದುರಾಗಿದೆ.

ಶೂನ್ಯ ಸಾಲದ ಬಿಸಿನೆಸ್ ಮಾದರಿಯಿಂದ ಹೆಸರು ಗಳಿಸಿದ್ದ ಸಿಜೆ ರಾಯ್ ಅವರ ಅಕಾಲಿಕ ಸಾವಿಗೆ ಸಂಬಂಧಿಸಿ ಕುಟುಂಬದವರು ಹಾಗೂ ಸಾರ್ವಜನಿಕ ವಲಯದಲ್ಲಿ ಅನುಮಾನ ವ್ಯಕ್ತವಾಗಿದೆ. ಕಾನ್ಫಿಡೆಂಟ್ ಗ್ರೂಪ್ ಮೇಲೆ ಕಳೆದ ಮೂರು ತಿಂಗಳಿಂದ ಐಟಿ ಇಲಾಖೆ ದಾಳಿ ನಡೆಸುತ್ತಿತ್ತು ಎನ್ನಲಾಗಿದೆ. ಡಿಸೆಂಬರ್‌ನಲ್ಲಿ ಕೊಚ್ಚಿ ಹಾಗೂ ಬೆಂಗಳೂರಿನಲ್ಲಿ ರೇಡ್ ನಡೆದಿದ್ದು, ಅದರ ಮುಂದುವರಿದ ಭಾಗವಾಗಿ ಶುಕ್ರವಾರ ಮತ್ತೆ ಐಟಿ ಅಧಿಕಾರಿಗಳು ರಾಯ್ ಅವರ ಅಪಾರ್ಟ್‌ಮೆಂಟ್ ಕಚೇರಿಗೆ ಬಂದಿದ್ದರು. ಐಟಿ ಅಧಿಕಾರಿಗಳ ಮಾನಸಿಕ ಒತ್ತಡವೇ ಸಾವಿಗೆ ಕಾರಣ ಎನ್ನುವ ಆರೋಪ ಜೋರಾಗಿಯೇ ಕೇಳಿ ಬರುತ್ತಿದೆ.
ಇದನ್ನೂ ಓದಿ: ಗುಂಡು ಹಾರಿಸಿಕೊಂಡು ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಆತ್ಮಹತ್ಯೆ

ಐಟಿ ದಾಳಿ ವೇಳೆ ಸಾಮಾನ್ಯವಾಗಿ ಪರಿಶೀಲನೆ ಆರೋಪಿಯ ಮುಂದೆಯೇ ನಡೆಯುತ್ತದೆ. ಆದರೆ, ರಾಯ್ ಪ್ರತ್ಯೇಕವಾಗಿ ಕೊಠಡಿಗೆ ಹೋಗಿದ್ದು ಯಾಕೆ? ಯಾವ ದಾಖಲೆ ತರಲು ಹೋಗಿದ್ದರು? 15 ನಿಮಿಷಗಳ ಕಾಲ ಒಳಗೇ ಇರುವ ಅವಕಾಶ ಯಾಕೆ ನೀಡಲಾಯಿತು? ಎಂಬ ಪ್ರಶ್ನೆಗಳು ಉದ್ಭವಿಸಿವೆ. ಐಟಿ ನೋಟಿಸ್‌ಗೆ ಸಹಿ ಮಾಡಿದ ಬಳಿಕ ರಾಯ್ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಸುಮಾರು 15 ನಿಮಿಷಗಳ ನಂತರ ಗುಂಡಿನ ಸದ್ದು ಕೇಳಿಬಂದಿದೆ. ಈ ಅವಧಿಯಲ್ಲಿ ಅವರು ಯಾರಿಗೋ ಫೋನ್ ಕರೆ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ನೂರಾರು ಜನರು ಬರುವ ಕಚೇರಿಯಲ್ಲಿ ಎರಡು ತಿಂಗಳಿಂದ ಸಿಸಿಟಿವಿ ಕ್ಯಾಮರಾಗಳು ಆಫ್ ಆಗಿದ್ದವು ಎನ್ನಲಾಗಿದೆ. ಇದು ತಾಂತ್ರಿಕ ದೋಷವೇ ಅಥವಾ ಉದ್ದೇಶಪೂರ್ವಕವೇ ಎಂಬ ಅನುಮಾನವೂ ಮೂಡಿದೆ. ದುಬೈ, ಬೆಂಗಳೂರು ಸೇರಿದಂತೆ ಹಲವು ಕಡೆ ಆಸ್ತಿ ಹೊಂದಿದ್ದ ಸಿಜೆ ರಾಯ್ ಅವರಿಗೆ ಪೆನಾಲ್ಟಿ ಕಟ್ಟುವುದು ಕಷ್ಟವಾಗಿರಲಿಲ್ಲ. ಕಾನೂನು ಹೋರಾಟದ ಅವಕಾಶವೂ ಇದ್ದು, ಇಂತಹ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಏಕೆ ಬಂತು ಎಂಬ ಪ್ರಶ್ನೆ ಎದುರಾಗಿದೆ.

ಸಾವಿನ ದಿನ ಅಂದರೆ ಬೆಳಗ್ಗೆ 11 ಗಂಟೆಗೆ ಸಿಜೆ ರಾಯ್ ತಮ್ಮ ಸಹೋದರಿಗೆ ಫೋನ್ ಮಾಡಿ ಸಹಜವಾಗಿ ಮಾತನಾಡಿದ್ದರು. ಯಾವುದೇ ಒತ್ತಡದ ಲಕ್ಷಣಗಳು ಕಾಣಿಸಿರಲಿಲ್ಲ ಎಂದು ಅವರ ಸಹೋದರ ಹೇಳಿಕೊಂಡಿದ್ದಾರೆ. ಅಲ್ಲದೇ ಇತ್ತೀಚಿಗೆ ಜನವರಿ 26ರಂದು ಗಣರಾಜ್ಯೋತ್ಸವಕ್ಕೂ ಶುಭಾಶಯ ಪೋಸ್ಟ್ ಹಾಕಿದ್ದರು. ಈ ಎಲ್ಲ ಅಂಶಗಳನ್ನು ಗಮನಿಸಿದರೆ, 15 ನಿಮಿಷಗಳೊಳಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಏಕೆ ನಿರ್ಮಾಣವಾಯಿತು ಎಂಬುದು ಇನ್ನೂ ನಿಗೂಢವಾಗಿದೆ. ಸಿಜೆ ರಾಯ್ ಸಾವಿನ ನಿಜ ಕಾರಣ ತನಿಖೆಯಿಂದಲೇ ಹೊರಬರಬೇಕಿದೆ.











