ಮೈಸೂರಿನ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಸಮರ ಸಾರಿ ಸಂಕಷ್ಟ ತಂದಿಟ್ಟ ದೂರುದಾರ ಸ್ನೇಹಮಯಿ ಕೃಷ್ಣಗೆ ಸಂಕಷ್ಟ ಎದುರಾಗಿದೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ಸ್ನೇಹಮಯಿ ಕೃಷ್ಣಗೆ ಕೋರ್ಟ್ ಶಿಕ್ಷೆ ವಿಧಿಸಿದೆ. ಮೈಸೂರಿನ 3ನೇ JMFC ಕೋರ್ಟ್ ಶಿಕ್ಷೆ ಪ್ರಕಟ ಮಾಡಿದ್ದು, 2 ಲಕ್ಷ ರೂಪಾಯಿ ಹಣ ಪಾವತಿ ಮಾಡಿ, ಇಲ್ಲದಿದ್ದರೆ ಜೈಲು ಶಿಕ್ಷೆ ಅನುಭವಿಸಿ ಎಂದು ಕೊರ್ಟ್ ತೀರ್ಪು ನೀಡಿದೆ.
RTI ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಕುಮಾರ್ ಎಂಬುವರು ಚೆಕ್ ಬೌನ್ಸ್ ಕೇಸ್ ಹಾಕಿದ್ದರು. ಒಟ್ಟು ₹1.75 ಲಕ್ಷ ಹಣ ಪಡೆದಿದ್ದ ಬಗ್ಗೆ ಸ್ನೇಹಮಯಿ ಕೃಷ್ಣ ಚೆಕ್ ನೀಡಿದ್ದರು. ಸ್ನೇಹಮಯಿ ಕೃಷ್ಣ ನೀಡಿದ್ದ ಕೋ ಆಪರೇಟಿವ್ ಬ್ಯಾಂಕ್ನ ಚೆಕ್ ಬೌನ್ಸ್ ಆಗಿತ್ತು. ಆ ಬಳಿಕ ಸ್ನೇಹಮಯಿ ಕೃಷ್ಣ ವಿರುದ್ಧ ಕುಮಾರ್ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಕೋರ್ಟ್ ತೀರ್ಪು ನೀಡಿದ್ದು, ಹಣ ಪಾವತಿ ಮಾಡಿ ಇಲ್ಲವೇ ಜೈಲು ಶಿಕ್ಷೆ ಅನುಭವಿಸಿ ಎಂದು ಆದೇಶ ಮಾಡಿದೆ.
ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ಮೈಸೂರು ಕೋರ್ಟ್ ಆದೇಶ ಪ್ರಶ್ನಿಸಲು ಒಂದು ತಿಂಗಳ ಕಾಲ ಅವಕಾಶವಿದ್ದು, ನಾನು ಮೇಲ್ಮನವಿ ಸಲ್ಲಿಸುತ್ತೇನೆ. ಈ ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ಉದ್ದೇಶದಿಂದಲೇ ಕುಮಾರ್, ನನ್ನ ವಿರುದ್ಧ ಬೇಕು ಅಂತಲೇ ಚೆಕ್ ಬೌನ್ಸ್ ಕೇಸ್ ಹಾಕಿದ್ರು. ಚೆಕ್ ಡೇಟ್ ತಿದ್ದಿ ಬೌನ್ಸ್ ಮಾಡಿದ್ರು. ಈ ಕುರಿತು ನ್ಯಾಯಾಲಯಕ್ಕೆ ಸಾಕ್ಷಿ ಒದಗಿಸಿದ್ದೇನೆ. ಈಗ ಕೋರ್ಟ್ ತೀರ್ಪು ನೀಡಿದೆ. ಕೋರ್ಟ್ಗೆ ಮೇಲ್ಮನವಿ ಸಲ್ಲಿಸುತ್ತೇನೆ ಎಂದಿದ್ದಾರೆ.