ಅರಣ್ಯಪ್ರದೇಶಗಳಲ್ಲಿ ನಡೆಯುತ್ತಿದ್ದ ಮರಗಳ ಕಳ್ಳಸಾಗಾಣಿಕೆ ಪ್ರಕರಣಗಳನ್ನು ನಾವು ಗಮನಿಸಿರುತ್ತೇವೆ, ಆದರೆ ಇದೀಗ ಸಿಲಿಕಾನ್ ಸಿಟಿಯಲ್ಲಿಯೇ ಎಗ್ಗಿಲ್ಲದೆ ನಡೆಯುತ್ತಿದೆ ಮರಗಳ ಕಳ್ಳಸಾಗಾಣಿಕೆ. ಹೌದು, ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಶ್ರೀಗಂಧದ ಮರ ಕಳ್ಳಸಾಗಾಣಿಕೆ ನಡೆಯುತ್ತಿದೆ ಎಂದು ವಿಶ್ವ ವಿದ್ಯಾನಿಲಯದ ಅಧಿಕಾರಿಗಳು ಮಂಗಳವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ತಿಳಿಸಿದ್ದಾರೆ. ಈ ವಿಚಾರ ಭಾರೀ ಗದ್ದಲ ಸೃಷ್ಟಿಸಲು ಕಾರಣವಾಗಿದೆ.
ಸಾರ್ವಜನಿಕರಿಗೆ ಕ್ಯಾಂಪಸ್ಗೆ ಒಳಗೆ ಪ್ರವೇಶಿಸಲು ಅವಕಾಶವಿರುವುದರಿಂದ ವಿಶ್ವವಿದ್ಯಾನಿಲಯದ ಸಿಬ್ಬಂದಿಗಳು ಅಸಹಾಯಕರಾಗಿದ್ದೇವೆ, ಕಾಲೇಜು ಆವರಣದಲ್ಲಿ ಮನಬಂದಂತೆ ಮರಗಳನ್ನು ಕಡಿದು ಸಾಗಿಸಲಾಗುತ್ತದೆ. ಇಲ್ಲಿ ಯಾವುದೇ ರೀತಿಯ ಬಿಗಿ ಭದ್ರತೆಯೇ ಇಲ್ಲ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಹಿರಿಯ ಸಿಂಡಿಕೇಟ್ ಸದಸ್ಯರು ಹೇಳುವ ಪ್ರಕಾರ, ಕಳೆದ ಎರಡು ತಿಂಗಳಲ್ಲಿ ಕ್ಯಾಂಪಸ್ನಿಂದ ಕನಿಷ್ಠ 25 ಶ್ರೀಗಂಧದ ಮರಗಳು ನಾಪತ್ತೆಯಾಗಿವೆ. ಅಕ್ಟೋಬರ್ನಲ್ಲಿ ತಿಂಗಳಲ್ಲಿ ಜೀವಶಾಸ್ತ್ರ ವಿಭಾಗದ ಆವರಣದಲ್ಲಿರುವ ಎರಡು ಮರಗಳು ನಾಪತ್ತೆಯಾಗಿವೆ ಎಂದಿದ್ದಾರೆ. ಅರಣ್ಯ ಪ್ರದೇಶಗಳಿಂದ ಮರಗಳನ್ನು ಸಾಗಾಣಿಕೆ ಮಾಡುತ್ತಿದ್ದ ಕಾಲ ಸರಿದು ಹೋದ ನಂತರ, ಇದೀಗ ವಿಶ್ವ ವಿದ್ಯಾನಿಲಯದ ಆವರಣಗಳಿಂದಲೇ ಮರಗಳನ್ನು ಕದ್ದು ಸಾಗಿಸುವಷ್ಟರ ಮಟ್ಟಿಗೆ ಪರಿಸ್ಥಿತಿ ಬಂದೊದಗಿರುವುದು ವಿಪರ್ಯಾಸವಾಗಿದೆ.

ವಿಶ್ವವಿದ್ಯಾನಿಲಯಕ್ಕೆ ಯಾವುದೇ ಭದ್ರತೆಯಿಲ್ಲ!
ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ನಡೆಯುತ್ತಿರವ ಕಳ್ಳಸಾಗಾಣಿಕೆಗೆ ಮುಖ್ಯ ಕಾರಣವೇ ಇಲ್ಲಿ ಯಾವುದೇ ಭದ್ರತೆಯಿಲ್ಲದಿರುವುದಾಗಿದೆ. ಸಾರ್ವಜನಿಕರಿಗೆ ಸುಲಭವಾಗಿ ಆವರಣದೊಳಗೆ ಕಾಲಿಡಬಹುದು. ಸಿಸಿಕ್ಯಾಮರಾವಿದ್ದೂ ಉಪಯೋಗಕ್ಕೆ ಬರುತ್ತಿಲ್ಲ ಎನ್ನುತ್ತಾರೆ ವಿಶ್ವ ವಿದ್ಯಾನಿಲಯದ ಅಧಿಕಾರಿಗಳು.
ಕ್ಯಾಂಪಸ್ ಆವರಣದಲ್ಲಿ 6,000 ಕ್ಕಿಂತಲೂ ಹೆಚ್ಚು ಶ್ರೀಗಂಧದ ಮರಗಳಿವೆ!
ವಿಶ್ವವಿದ್ಯಾನಿಲಯವು 6,000 ಕ್ಕಿಂತ ಹೆಚ್ಚಿನ ಶ್ರೀಗಂಧದ ಮರಗಳನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಅವುಗಳಲ್ಲಿ ಹೆಚ್ಚಿನವು ಪರಿಸರ ವಿಜ್ಞಾನ ವಿಭಾಗದ ಹತ್ತಿರ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರದ (SAI) ಪಕ್ಕದಲ್ಲಿರುವ ಬಯೋಪಾರ್ಕ್ನಲ್ಲಿವೆ.
ಬಯೋಪಾರ್ಕ್ನಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಕಷ್ಟ!
ಕ್ಯಾಂಪಸ್ನ ಆವರಣ ಕ್ಯಾಮರಾಗಳ ಕಣ್ಗಾವಲಿನಲ್ಲಿರುತ್ತದೆ. ಖಾಸಗಿ ಮತ್ತು ಗೃಹರಕ್ಷಕರು ವೀಕ್ಷಿಸಿದರೆ, ಬಯೋಪಾರ್ಕ್ ಪ್ರದೇಶವು ಕಡಿಮೆ ಸಿಸಿಟಿವಿ ಕವರೇಜ್ ಹೊಂದಿದೆ. ಬಯೋಪಾರ್ಕ್ ದಟ್ಟವಾದ ಮರಗಳಿಂದ ಆವೃತವಾಗಿದೆ, ಆದ್ದರಿಂದ ಅಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಸ್ಥಾಪಿಸುವುದೇ ಕಷ್ಟ ಎಂದು ವಿಶ್ವವಿದ್ಯಾನಿಲಯದ ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರೋರಾತ್ರಿ ಮರಗಳ ಕಳ್ಳಸಾಗಾಣಿಕೆ!
ಕಳ್ಳ ಸಾಗಾಣಿಕೆದಾರರು ಬ್ಯಾಟರಿ ಚಾಲಿತ, ಶಬ್ದವಿಲ್ಲದೆ ಮರವನ್ನು ಕತ್ತರಿಸುವ ಯಂತ್ರಗಳನ್ನು ಬಳಸುತ್ತಾರೆ. ಅನಂತರ ಮರಗಳನ್ನು ಒಣಗಳು ಬಿಟ್ಟು,ಮರಗಳು ಹಗುರವಾದ ಬಳಿಕ ಸುಲಭವಾಗಿ ಸಾಗಾಣಿಕೆ ಮಾಡಬಹುದು. ಪ್ರತಿ ಮರವು ನಾಲ್ಕರಿಂದ ಆರು ಅಡಿ ಗಂಧವನ್ನು ನೀಡುತ್ತದೆ. ಹೆಚ್ಚಿನ ಸಾಗಾಣಿಕೆಗಳು ರಾತ್ರಿಯ ವೇಳೆ ನಡೆದಿರುತ್ತದೆ. ಈ ಕಳ್ಳಸಾಗಾಣಿಕೆಯ ಹಿಂದೆ ವಿಶ್ವವಿದ್ಯಾನಿಲಯದವರದ್ದೇ ಕೈವಾಡವಿದೆ, ರಾತ್ರಿ 9 ಗಂಟೆಯ ನಂತರ ಕ್ಯಾಂಪಸ್ ಒಳಗೆ ಬರಲು ಸಾರ್ವಜನಿಕರಿಗೆ ಅವಕಾಶವೇ ಇರುವುದಿಲ್ಲ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ ವಿಶ್ವ ವಿದ್ಯಾನಿಲಯದ ಅಧಿಕಾರಿಗಳು.
ಮರ ನಿರ್ವಹಣೆಗಾಗಿ ತಂದ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ!
ಕೆಲವು ವರ್ಷಗಳ ಹಿಂದೆ, ವಿಶ್ವವಿದ್ಯಾನಿಲಯವು ಕ್ಯಾಂಪಸ್ನಲ್ಲಿರುವ ಶ್ರೀಗಂಧದ ಮರಗಳ ನಿರ್ವಹಣೆಯನ್ನು ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ಗೆ ವಹಿಸಲು ನಿರ್ಧರಿಸಿತ್ತು ಆದರೆ ಯೋಜನೆ ಎಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ. ಮುಂದಿನ ಮೂರು ತಿಂಗಳಲ್ಲಿ ಇನ್ನೂ 300 ಶ್ರೀಗಂಧದ ಗಿಡಗಳು ಮರಗಳಾಗಿ ಬೆಳೆಯುತ್ತವೆ. ಇದರಿಂದ ಆ ಗಿಡಗಳನ್ನು ಸುರಕ್ಷಿತವಾಗಿ ಬೆಳೆಸುವ ಬಗ್ಗೆ ಕಾಳಜಿ ವಹಿಸಲಾಗುತ್ತದೆ ಎಂದು ಸಿಂಡಿಕೇಟ್ ಸದಸ್ಯರು ತಿಳಿಸಿದ್ದಾರೆ.
ಆಡಳಿತ ಮಂಡಳಿಯ ಜ್ಯೋತಿ ಕೆ ಮಾತನಾಡಿ, ಕ್ಯಾಪಸ್ ಒಳಗೆ ಪ್ರವೇಶಿಸುವ ಸಮಯದಲ್ಲಿ ಕಟ್ಟುನಿಟ್ಟಾದ ಕ್ರಮಗಳನ್ನು ಹೊಂದಿರಬೇಕು. ಯಾರೇ ಸಂದರ್ಶಕರು ಪ್ರವೇಶಿಸಿದರೂ ಅವರ ಗುರುತಿನ ಚೀಟಿಯನ್ನು ತೋರಿಸಬೇಕು. ಅವರ ಪ್ರತೀ ದಾಖಲೆಯನ್ನು ನಮೂದಿಸಬೇಕಾದರೆ, ಐಐಎಸ್ ಸಿ ನಂತಹ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದು ಸಭೆಯಲ್ಲಿ ತಿಳಿಸಿದರು.

ಶ್ರೀಗಂಧದ ಮರಗಳಲ್ಲಿ ಚಿಪ್ಗಳನ್ನು ಅಳವಡಿಸಲು ಮತ್ತು ಪ್ರತಿಯೊಂದು ಮರಕ್ಕೂ ನಂಬರ್ ಗಳನ್ನು ನಮೂದಿಸಬೇಕು. ಈ ಬಗ್ಗೆ ಇನ್ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿಯೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಆ ಆವರಣದಲ್ಲಿ ಮರಗಳ ಸಾಗಾಣಿಕೆಗೆ ಪ್ರಯತ್ನ ನಡೆದರೆ ವಿಭಾಗದ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜೀವವೈವಿಧ್ಯಗಳಿಂದ ತುಂಬಿದೆ ಜ್ಞಾನಭಾರತಿ ಆವರಣ!
ಸಿಲಿಕಾನ್ ಸಿಟಿಯಲ್ಲಿ ಜೀವವೈವಿಧ್ಯದಿಂದ ತುಂಬಿ ತುಳುಕಾಡುತ್ತಿರುವ ಏಕೈಕ ಸ್ಥಳವೆಂದರೆ, ಜ್ಞಾನಭಾರತಿ ಆವರಣ. ಇಲ್ಲಿ ಹಲವು ವಿಶೇಷ ಗಿಡಗಳನ್ನು ಆರಿಸಿ ತಂದು ಅನೇಕ ವನಗಳನ್ನು ನಿರ್ಮಿಸಲಾಗಿದೆ. ನಿತ್ಯಹರಿದ್ವರ್ಣ ಒಂದು ಕಡೆಯಾದರೆ, ಇನ್ನೊಂದೆಡೆ ತ್ರಿಫಲ ವನವಿದೆ. ಗಂಧವೊಂದು ಕಡೆಯಾದರೆ ಬಿದಿರೊಂದು ಕಡೆ. ಈ ರೀತಿಯಾಗಿ ಸಾವಿರಾರು ಜಾತಿಯ ಮರಗಿಡಗಳ ವೈಭವವಿಲ್ಲಿದೆ. ಇಂತಹ ವಿಶ್ವ ವಿದ್ಯಾನಿಲಯಗಳ ಆವರಣದಿಂದಲೇ ಮರಗಳ ಕಳ್ಳಸಾಗಾಣಿಕೆ ನಡೆಯುತ್ತಿರುವುದು ಕ್ಯಾಂಪಸ್ ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ.