ನವರಾತ್ರಿಯ ದಿನ ಭಾರತದ ಹಲವೆಡೆ ಬಾಂಬ್ ಬ್ಲಾಸ್ಟ್ ಮಾಡಲು ಸಂಚು ರೂಪಿಸಿದ್ದರು ಎನ್ನಲಾದ ಉಗ್ರರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಹಲವು ವಿಫಲ ಪ್ರಯತ್ನದಿಂದ ಕಂಗೆಟ್ಟಿದ್ದ ಇವರು, ಈ ಬಾರಿ ಭಾರೀ ತಯಾರಿಯೊಂದಿಗೆ ಯೋಜನೆ ಹಾಕಿಕೊಂಡಿದ್ದರು. ಈ ಶಂಕಿತ ಉಗ್ರರಿಗೆ ಬೆನ್ನೆಲುಬಾಗಿ ನಿಂತಿದ್ದು ಭಾರತದಿಂದ ಪಾಕಿಸ್ತಾನಕ್ಕೆ ಪರಾರಿಯಾದ ಒಬ್ಬನ ಸಹೋದರ ಎಂದು ವರದಿಯಾಗಿದೆ.
ಎರಡು ದಿನಗಳ ಹಿಂದೆಯಷ್ಟೇ ಸೆಪ್ಟೆಂಬರ್ 14ನೇ ತಾರೀಕಿನಂದು ದೆಹಲಿ ಪೊಲೀಸರು ಆರು ಮಂದಿಯನ್ನು ಅರೆಸ್ಟ್ ಮಾಡಿದ್ದರು. ಒಂದು ವೇಳೆ ಇವರನ್ನು ಬಂಧಿಸದೇ ಹೋಗಿದ್ದರೆ ದೇಶದಲ್ಲಿ 2008ರ ಮುಂಬೈ ಟೆರರಿಸ್ಟ್ ಅಟ್ಯಾಕ್ ಬಳಿಕ, ಇನ್ನೊಂದು ರಕ್ಕಸ ಕೃತ್ಯ ನಡೆಯುವ ಸಾಧ್ಯತೆ ಇತ್ತು ಎಂದು ಪೊಲೀಸ್ ಮೂಲಗಳು ತಿಳಿಸಿದೆ.
6 ಮಂದಿ ಶಂಕಿತ ಉಗ್ರರನ್ನು ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ಅರೆಸ್ಟ್ ಮಾಡಿದೆ. ಲಖನೌ ನಿವಾಸಿ ಮೊಹಮ್ಮದ್ ಅಮೀರ್ ಜಾವೇದ್, ದೆಹಲಿ ನಿವಾಸಿ ಒಸಾಮಾ ಅಲಿಯಾಸ್ ಸಮಿ, ಮಹಾರಾಷ್ಟ್ರದ ಜಾನ್ ಮೊಹಮ್ಮದ್ ಶೈಖ್, ಅಲ್ಲಾಹಾಬಾದ್ನ ಜೀಶನ್ ಖಮಾರ್, ರಾಯ್ ಬರೇಲಿಯಾ ಮೂಲ್ಚಂದ್ ಅಲಿಯಾಸ್ ಸಾಜು ಹಾಗೂ ಉತ್ತರ ಪ್ರದೇಶದ ಮೊಹಮ್ಮದ್ ಅಬು ಬಕಾರ್ ಬಂಧಿತ ಉಗ್ರರಾಗಿದ್ದಾರೆ. ಪೊಲೀಸರು ವಿಚಾರಣೆ ವೇಳೆ ಶಂಕಿತ ಉಗ್ರರು ಸ್ಫೋಟಕ ಮಾಹಿತಿಗಳನ್ನು ಹೊರಹಾಕಿದ್ದಾರೆ.
ಬಂಧಿತ ಉಗ್ರರಲ್ಲಿ ಜೀಶನ್ ಹಾಗೂ ಒಸಾಮಾ ಎಂಬ ಇಬ್ಬರು ಪಾಕ್ನಲ್ಲಿ ಟ್ರೇನಿಂಗ್ ಪಡೆದಿದ್ದರು. ದಾವೂದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ಈ ವರ್ಷದ ಏಪ್ರಿಲ್ನಲ್ಲಿ 15 ದಿನಗಳ ಕಾಲ ಇಬ್ಬರಿಗೆ ತರಬೇತಿ ನೀಡಿದ್ದ. ಪ್ರಮುಖವಾಗಿ ಎ.ಕೆ 47 ಆಪರೇಟ್ ಮಾಡೋದು ಹೇಗೆ ಅನ್ನೋದರ ಬಗ್ಗೆ ಹೇಳಿದ್ದ. ಜೊತೆಗೆ ಐಇಡಿ ಬಳಸಿ ಸ್ಫೋಟ ನಡೆಸಲು ಐಎಸ್ಐ ಇವರಿಗೆ ಸೂಚನೆ ನೀಡಿತ್ತು. ಈ ಹಿಂದೆ ಮುಂಬೈನಲ್ಲಿ ಬಾಂಬ್ ಸ್ಫೋಟಿಸಿದ್ದ ಉಗ್ರ ಅಜ್ಮಲ್ ಕಸಬ್ಗೂ ಕೂಡ ಈ ಹಿಂದೆ ಇದೇ ಸ್ಥಳದಲ್ಲಿ ಟ್ರೇನ್ ಮಾಡಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು ಈ ಇಬ್ಬರು ಪಾಕಿಸ್ತಾನಕ್ಕೆ ಯಾವ ಮಾರ್ಗದ ಮೂಲಕ ಹೋದ್ರು? ಇವರ ಜೊತೆ ಮತ್ಯಾರು ಇದ್ರು? ಪ್ಲ್ಯಾನ್ ಏನಾಗಿತ್ತು ಎಂಬ ಬಗ್ಗೆ ಕೂಡ ಪೊಲೀಸ್ ತನಿಖೆಯಲ್ಲಿ ಉಗ್ರರು ಬಾಯಿಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಇವರು ಈ ಬಾರಿ ಎರಡು ತಂಡಗಳಾಗಿ ಕಾರ್ಯ ನಿರ್ವಹಿಸಲು ಮುಂದಾಗಿದ್ದರು. ಯೋಜನೆ ಪ್ರಕಾರ ಮೊದಲ ತಂಡದಲ್ಲಿ ತಲೆ ಮರೆಸಿಕೊಂಡಿರುವ ಉಗ್ರ ದಾವೂದ್ ಇಬ್ರಾಹಿಂನ ಸಹೋದರ, ಅನೀಸ್ ಇಬ್ರಾಹಿಂ ಸ್ಫೋಟಕಗಳನ್ನು ಗಡಿದಾಟಿಸಿ ಹಸ್ತಾಂತರಿಸುತ್ತಿದ್ದ. ಈ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು 6 ಉಗ್ರರ ತಂಡ ದೇಶದೊಳಗೆ ಸಾಗಿಸಬೇಕಿತ್ತು ಎನ್ನುತ್ತಿವೆ ಮೂಲಗಳು.
ತಮ್ಮ ನೆಟ್ವರ್ಕ್ ಮೂಲಕ ದೇಶಾದ್ಯಂತ ಇವುಗಳನ್ನು ಸಾಗಿಸಿ ಬಚ್ಚಿಡಬೇಕಿತ್ತು. ಆದೇಶ ಬಂದಾಗ ಸ್ಫೋಟಿಸುವ ಟಾರ್ಗೆಟ್ ನೀಡಲಾಗ್ತಿತ್ತು. ಇನ್ನು ಎರಡನೇ ತಂಡವನ್ನು ಉಗ್ರ ಚಟುವಟಿಕೆಗಳಿಗೆ ಬೇಕಾಗಿದ್ದ ಹಣಕಾಸಿನ ವ್ಯವಸ್ಥೆ ಮಾಡಲು ನಿಯೋಜನೆ ಮಾಡಲಾಗಿತ್ತು. ಈ ತಂಡ ಹವಾಲಾ ಮತ್ತು ಅಂಡರ್ವರ್ಲ್ಡ್ ನೆಟ್ವರ್ಕ್ ಮೂಲಕ ಬಹುಕೋಟಿ ಹಣಕಾಸಿನ ವ್ಯವಸ್ಥೆ ಮಾಡಲು ಮುಂದಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಹೀಗೆ ಬೆಚ್ಚಿಬೀಳಿಸುವ ನೀಲಿನಕ್ಷೆಯೊಂದಿಗೆ ಇಡೀ ಭಾರತದ ನಿದ್ದೆಗೆಡಿಸಲು ಮುಂದಾಗಿದ್ದರು ಎನ್ನಲಾದ ಶಂಕಿತ ಉಗ್ರರಿಗೆ ದೆಹಲಿ ಪೊಲೀಸರು ಬೆವರಿಳಿಸಿದ್ದಾರೆ. ಇವರ ಯೋಜನೆಯನ್ನು ಪೊಲೀಸರು ಬೇಧಿಸಿದ್ದು, ಇಡೀ ದೇಶ ನಿಟ್ಟುಸಿರು ಬಿಟ್ಟಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.