ರೈತರು ಕಳೆದ ಹತ್ತು ತಿಂಗಳಿನಿಂದ, ತಮ್ಮ ಬಾಂಧವರನ್ನೇ ಕಳೆದುಕೊಂಡರೂ ಲೆಕ್ಕಿಸದೆ, ಚಳಿ ಮಳೆ ಗಾಳಿ ಲೆಕ್ಕಿಸದೆ, ಪೊಲೀಸರ ಲಾಠಿ ಏಟಿಗೆ ಜಗ್ಗದೆ, ಸರ್ಕಾರಗಳ ದಮನಕಾರಿ ಕ್ರಮಗಳಿಗೆ ಬಗ್ಗದೆ, ಸಮಸ್ತ ಕೃಷಿಕ ಸಮುದಾಯದ ಹಿತದೃಷ್ಟಿಯಿಂದ ಶಾಂತಿಯುತ ಮುಷ್ಕರ ನಡೆಸುತ್ತಿದ್ದಾರೆ. ಈ ಮುಷ್ಕರವನ್ನು ಹತ್ತಿಕ್ಕಲು, ರೈತರ ನಡುವೆ ಒಡಕು ಉಂಟು ಮಾಡಲು ಪ್ರಭುತ್ವ ಎಲ್ಲ ರೀತಿಯ ಅಸ್ತ್ರಗಳನ್ನೂ ಪ್ರಯೋಗಿಸಿದ್ದೂ ಆಗಿದೆ. ಕರಾಳ ಕೃಷಿ ಕಾಯ್ದೆಗಳು ರದ್ದಾಗುವವರೆಗೂ ಮುಷ್ಕರ ನಿಲ್ಲದು ಎಂದು ರೈತ ಮುಖಂಡರು ಘೋಷಿಸಿದ್ದಾರೆ.
ಇತಿಹಾಸ ಕಂಡರಿಯದ ಇಂತಹ ಜನಾಂದೋಲನವನ್ನು ಭಂಗಗೊಳಿಸಲು ಪ್ರಭುತ್ವಕ್ಕಿಂತಲೂ, ಸ್ಥಾಪಿತ ಶೋಷಕ ವ್ಯವಸ್ಥೆಯ ಪರ ಇರುವ ಹಿತಾಸಕ್ತಿಗಳು ತುದಿಗಾಲಲ್ಲಿ ನಿಂತಿರುತ್ತವೆ. ಹೋರಾಟಗಳಲ್ಲಿ ಒಳಗಿನ ಶತ್ರುಗಳನ್ನು ಸೃಷ್ಟಿಸುವ ಮೂಲಕ ಹೋರಾಟಗಾರರ ಐಕ್ಯತೆಗೆ, ಹೋರಾಟದ ಮಾರ್ಗಕ್ಕೆ ಭಂಗ ತರುವ ಪ್ರಯತ್ನಗಳೂ ಈ ಒಳಗಣ ಶತ್ರುಗಳಿಂದಲೇ ನಡೆಯುತ್ತವೆ. ಎಲ್ಲ ಜನಾಂದೋಲನಗಳೂ ಎದುರಿಸುವ ಸಮಸ್ಯೆ ಇದು. ಬಹುಶಃ ರೈತ ಮುಷ್ಕರವನ್ನು ಹತ್ತಿಕ್ಕಲು ವಿಫಲವಾಗುತ್ತಿರುವ ಸ್ಥಾಪಿತ ಹಿತಾಸಕ್ತಿಗಳಿಗೆ ಇಂತಹ ಹಿತಶತ್ರುಗಳು ನೆರವಾಗುತ್ತಾರೆ.
ಸಿಂಘು ಗಡಿಯಲ್ಲಿ ರೈತ ಮುಷ್ಕರದ ನಡುವೆಯೇ, ಲಖ್ಬೀರ್ ಸಿಂಗ್ ಎಂಬ, ರವಿದಾಸ ಪರಂಪರೆಗೆ ಸೇರಿದ ದಲಿತ ವ್ಯಕ್ತಿಯೊಬ್ಬನನ್ನು, ನಿಹಾಂಗ್ ಪಂಥದ ಕೆಲವು ಮತಾಂಧರು, ಆತ ಪವಿತ್ರ ಗ್ರಂಥವನ್ನು ಹಿಡಿದಿದ್ದನೆಂಬ ಕಾರಣಕ್ಕೆ ಭೀಕರ ಹತ್ಯೆ ಮಾಡಿದ್ದಾರೆ. ಇದು ಖಂಡನೀಯ, ಅಕ್ಷಮ್ಯ ಮತ್ತು ಯಾವುದೇ ಸಂವೇದನಾಶೀಲ ಮನಸು ಒಪ್ಪಲಾಗದ ಹೀನ ಕೃತ್ಯ. ಹತ್ಯೆ ಮಾಡಿದ ವ್ಯಕ್ತಿ ಹೆಮ್ಮೆಯಿಂದ ತಪ್ಪೊಪ್ಪಿಕೊಂಡು ಶರಣಾಗತನಾಗಿದ್ದಾನೆ. ಜಾತಿ ಶ್ರೇಷ್ಠತೆಯ ಅಹಮಿಕೆ ಮತ್ತು ಮೇಲ್ಜಾತಿ ಮನಸ್ಥಿತಿಯ ಪಾರಮ್ಯವೇ ಈ ಬರ್ಬರ ಹತ್ಯೆಗೆ ಕಾರಣ ಎನ್ನುವುದು ಸ್ಪಷ್ಟ.
ರೈತ ಮುಷ್ಕರದ ಮುಖಂಡರು ತಮಗೂ ಹತ್ಯೆಗೂ ಸಂಬಂಧವಿಲ್ಲ ಎಂದು ಸ್ಪಷ್ಟೀಕರಣ ನೀಡಿರುವುದೇ ಅಲ್ಲದೆ, ಈ ಘಟನೆಯ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ಮುಷ್ಕರನಿರತರಾಗಿರುವ ಸಿಖ್ ಸಮುದಾಯ ತನ್ನ ನೈತಿಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲೂ ಆಗುವುದಿಲ್ಲ. ಆದರೆ ಈ ಘಟನೆಗೆ ಇಡೀ ರೈತಮುಷ್ಕರವನ್ನೇ ಹೊಣೆ ಮಾಡುವುದು ಅಪಚಾರವಾಗುತ್ತದೆ. ದಲಿತ ವ್ಯಕ್ತಿಯ ಬರ್ಬರ ಹತ್ಯೆ ಸಹಜವಾಗಿಯೇ ಜಾತಿ ದೌರ್ಜನ್ಯದ ಪರಿಭಾಷೆಯಲ್ಲಿ ಚರ್ಚೆಗೊಳಗಾಗುತ್ತದೆ. ಇದು ಕಟು ವಾಸ್ತವ. ಲಖ್ಬೀರ್ ಸಿಂಗ್ ದಲಿತ ಎಂಬ ಕಾರಣಕ್ಕಾಗಿಯೇ ಹತ್ಯೆಗೀಡಾಗಿರುವುದೂ ಕಟು ಸತ್ಯ. ಆದರೆ ರೈತ ಮುಷ್ಕರದ ಧ್ಯೇಯೋದ್ದೇಶಗಳ ವ್ಯಾಪ್ತಿ ದಲಿತ-ದಲಿತೇತರ, ಭೂಸಹಿತ- ಭೂರಹಿತ ರೈತಾಪಿಯನ್ನೂ ಮೀರಿರುವುದಾಗಿದೆ.

ಈ ಘಟನೆಗೆ ಜಾತಿ ಲೇಪನ ಪ್ರತ್ಯೇಕವಾಗಿ ನೀಡಬೇಕಿಲ್ಲ. ಜಾತಿಯ ನೆಲೆಯಲ್ಲೇ ಸಂಭವಿಸಿರುವ ಅಮಾನುಷ ಕೃತ್ಯ ಇದು. ಆದರೆ ಈ ಕಾರಣಕ್ಕಾಗಿ ರೈತಮುಷ್ಕರದ ಔಚಿತ್ಯವಾಗಲೀ, ಉದ್ದೇಶವಾಗಲೀ ಪ್ರಶ್ನಾರ್ಹವಾಗಕೂಡದು. ಇಡೀ ಮುಷ್ಕರವನ್ನು ದಲಿತ ಪರ – ದಲಿತ ವಿರೋಧಿ ಎಂದು ವಿಂಗಡಿಸುವುದರಿಂದ, ಈ ಮುಷ್ಕರದ ವೈಫಲ್ಯವನ್ನು ಎದುರುನೋಡುತ್ತಿರುವ ವ್ಯವಸ್ಥೆಯ ಪರ ಇರುವ ಹಿತಾಸಕ್ತಿಗಳಿಗೆ ಮತ್ತಷ್ಟು ನೈತಿಕ ಬಲ ನೀಡಿದಂತಾಗುತ್ತದೆ. ರೈತ ಮುಷ್ಕರದಲ್ಲಿ ನಿರತರಾಗಿರುವವರ ನಡುವೆ ಜಾತಿ ಪ್ರಜ್ಞೆ ಜೀವಂತವಾಗಿರುವಷ್ಟೇ ಊಳಿಗಮಾನ್ಯ ಧೋರಣೆಯೂ ಇದೆ, ಬಂಡವಾಳಶಾಹಿ ಪ್ರವೃತ್ತಿಯೂ ಇದೆ, ಮತಾಂಧತೆಯೂ ಇದ್ದರೆ ಅಚ್ಚರಿಯೇನಲ್ಲ. ಏಕೆಂದರೆ ರೈತ ಸಮುದಾಯವೂ ಭಾರತೀಯ ಶ್ರೇಣೀಕೃತ ಸಾಂಪ್ರದಾಯಿಕ ಸಮಾಜದ ಒಂದು ಭಾಗ ಅಲ್ಲವೇ ?
ಆದರೆ ಈ ಸಂದರ್ಭದಲ್ಲಿ, ಕರಾಳ ಕೃಷಿ ಕಾಯ್ದೆಗಳ ವಿರುದ್ಧ ತಮ್ಮ ಸಾಮುದಾಯಿಕ, ಪಂಥೀಯ, ಪ್ರಾಂತೀಯ, ರಾಜಕೀಯ ಮತ್ತು ಪ್ರಾದೇಶಿಕ ವೈರುಧ್ಯಗಳನ್ನು, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಹೋರಾಟಕ್ಕೆ ಧುಮುಕಿರುವ ರೈತ ಸಮೂಹ, ಈ ಮುಷ್ಕರದ ಮೂಲಕ ಸಮಸ್ತ ರೈತಾಪಿಯ ಹಿತರಕ್ಷಣೆಗೆ ಬದ್ಧವಾಗಿದೆ. ಇಲ್ಲಿ ನಡೆದಿರುವ ಬರ್ಬರ ಹತ್ಯೆಯನ್ನು ಖಂಡಿಸುತ್ತಲೇ, ಅಪರಾಧಿಗಳಿಗೆ ಕಠಿಣ ಶಿಕ್ಷೆಗಾಗಿ ಆಗ್ರಹಿಸುತ್ತಲೇ, ರೈತ ಮುಷ್ಕರದ ಒಟ್ಟಾರೆ ಆಶಯಗಳಿಗೆ ಭಂಗ ಉಂಟುಮಾಡದಂತೆ ಜಾಗ್ರತೆ ವಹಿಸಬೇಕಿದೆ. ನಮ್ಮ – ಅಂದರೆ ರೈತ ಹೋರಾಟದ ಪರ ಇರುವ – ಪ್ರಗತಿಪರ ಮನಸುಗಳ ನಡುವೆ ಉಂಟಾಗುವ ಕೂದಲೆಳೆಯ ವಿಘಟನೆಯೂ ಸಹ ಮುಷ್ಕರ ಭಂಜಕರಿಗೆ, ಸ್ಥಾಪಿತ ವ್ಯವಸ್ಥೆಗೆ ಮತ್ತು ಸರ್ಕಾರಕ್ಕೆ ವರದಾನವಾಗುತ್ತದೆ. ನಮ್ಮ ದಲಿತ ಪರ ಸಂವೇದನೆಗಳನ್ನು ಜೀವಂತವಾಗಿಟ್ಟುಕೊಂಡೇ, ಹತ್ಯೆಗೊಳಗಾದ ಅಮಾಯಕ ವ್ಯಕ್ತಿಗೆ ನ್ಯಾಯ ದೊರಕಿಸಲು ಬಯಸೋಣ. ಹಾಥ್ರಸ್ ಅಥವಾ ಊನ ದಲ್ಲಿ ಕಾಣದ ದಲಿತ ಪರ ಕಾಳಜಿ ಈಗ ಸರ್ಕಾರದಲ್ಲಿ ಕಾಣುತ್ತದೆ ಎನ್ನುವುದನ್ನು ಗಮನಿಸುತ್ತಲೇ, ನಮ್ಮ ಭಾವನಾತ್ಮಕ ಸಂವೇದನೆಗಳು, ಒಂದು ವಿಶಾಲ ವ್ಯಾಪ್ತಿಯ ಜನಪರ ಚಳುವಳಿಗೆ ಭಂಗ ತರಲು ನೆರವಾಗದಂತೆ ಎಚ್ಚರ ವಹಿಸಬೇಕಿದೆ.
ಇಡೀ ಘಟನೆಯ ಹಿಂದೆ ಕಾಣದ ಕೈಗಳು ಇರುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗದು. ಭಾರತದ ವಿದ್ಯುನ್ಮಾನ ಸುದ್ದಿಮನೆಗಳಂತೆ ಅಂತಿಮ ತೀರ್ಪು ನೀಡುವ ಕಾತರ, ಆತುರವೂ ಅಗತ್ಯವಿಲ್ಲ. ಲಖೀಂಪುರಕ್ಕೂ ಇಂದಿನ ಘಟನೆಗೂ ಮತ್ತು ಅದರ ಸುತ್ತಲಿನ ಬೆಳವಣಿಗೆಗಳಿಗೂ ಇರುವ ಸೂಕ್ಷ್ಮ ಸಂಬಂಧಗಳನ್ನೂ ಗಮನಿಸಬೇಕಿದೆ. ಜಾತಿಯ ಕಾರಣಕ್ಕಾಗಿಯೇ ಒಬ್ಬ ದಲಿತ ವ್ಯಕ್ತಿಯ ಬರ್ಬರ ಹತ್ಯೆ ನಡೆದಿರುವುದನ್ನು ಗಮನದಲ್ಲಿಟ್ಟುಕೊಂಡೇ, ಈ ಹತ್ಯೆಯನ್ನು ಖಂಡಿಸುತ್ತಲೇ, ಮುಷ್ಕರ ಭಂಜಕರ ಕೈಗೆ ಗುರಾಣಿ ನೀಡದಿರುವ ಎಚ್ಚರ ನಮ್ಮಲ್ಲಿರಬೇಕು. ಇಲ್ಲವಾದಲ್ಲಿ ಆಳುವ ವರ್ಗಗಳ ವಿಭಜಕ ರಾಜಕಾರಣಕ್ಕೆ ದಲಿತ vs ರೈತ, ಸಿಖ್ vs ದಲಿತ ಎಂಬ ಹೊಸ ಆಯುಧಗಳನ್ನು ನಾವೇ ಪೂರೈಸಿದಂತಾಗುತ್ತದೆ.

ರೈತ ಹಿತಾಸಕ್ತಿಯನ್ನು ಪ್ರಧಾನವಾಗಿ ಪ್ರತಿನಿಧಿಸುವ ಸಿಖ್ ಸಮುದಾಯವಷ್ಟೇ ಅಲ್ಲ, ಎಲ್ಲ ಮೇಲ್ಜಾತಿ ಸಮುದಾಯಗಳಲ್ಲೂ ಈ ಘಟನೆ ಜಾಗೃತಿ ಮೂಡಿಸಬೇಕಿದೆ. ಈ ಮುಷ್ಕರದಲ್ಲಿ ರೈತರು ಮುಂಚೂಣಿಯಲ್ಲಿದ್ದಾರೆ ಆದರೆ ಈ ಮುಷ್ಕರದ ಆಶಯಗಳು ಸಮಸ್ತ ದುಡಿಯುವ ವರ್ಗಗಳನ್ನು ಪ್ರತಿಧಿಸುತ್ತದೆ ಎನ್ನುವ ಪ್ರಜ್ಞೆಯೂ ನಮ್ಮೊಳಗೆ ಸದಾ ಜಾಗೃತವಾಗಿರಲಿ.