ಹಿರಿಯ ರಾಜಕಾರಣಿ,ಮಾಜಿಸಚಿವ ಜೆಡಿಎಸ್‌ನ ಸಿ.ಎಸ್ ಮನಗೂಳಿಯವರ ನಿಧನದಿಂದ ತೆರವಾದ ಸ್ಥಾನಕ್ಕೆ ಅಕ್ಟೋಬರ್ 30ರಂದು ಸಿಂದಗಿ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ.
ಕಾಂಗ್ರೆಸ್, ಬಿಜೆಪಿ ಪಕ್ಷಗಳು ಅಭ್ಯರ್ಥಿಗಳನ್ನು ಫೈನಲ್ ಮಾಡಿವೆ. ತನ್ನ ಕೈಯಿಂದ ಕ್ಷೇತ್ರ ತಪ್ಪಿ ಹೋಗಬಾರದು ಎಂದು ಜೆಡಿಎಸ್ ತುಂಬಾ ಲೆಕ್ಕಾಚಾರ ಹಾಕುತ್ತಿದೆ. ಹೀಗಾಗಿ ಅದು ಇನ್ನು ತನ್ನ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ.
ಜೆಡಿಎಸ್ ಶಾಸಕರಾಗಿದ್ದ ಸಿ. ಎಸ್ ಮನಗೂಳಿಯವರ ನಿಧನದ ಒಂದು ತಿಂಗಳ ನಂತರ ಅವರ ಪುತ್ರ ಅಶೋಕ್ ಮನಗೂಳಿ ಕಾಂಗ್ರೆಸ್ ಸೇರಿದರು. ಆಗಲೇ ಅವರಿಗೆ ಟಿಕೆಟ್ ಪಕ್ಕಾ ಆಗಿತ್ತು. ಕಳೆದ ಸಲ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಪ್ಪ ಹೀನಾಯವಾಗಿ ಸೋತಿದ್ದರು. ಹಿಂದೊಮ್ಮೆ ತನ್ನ ಭದ್ರಕೋಟೆಯಾಗಿದ್ದ ಸಿಂದಗಿಯನ್ನು ಮರಳಿ ಪಡೆಯಲು ಕಾಂಗ್ರೆಸ್ ಮನಗೂಳಿಯವರ ಪುತ್ರನನ್ನು ಬರ ಮಾಡಿಕೊಂಡು ಟಿಕೆಟ್ ನೀಡಿದೆ.
2018ರಲ್ಲಿ ಜೆಡಿಎಸ್‌ನ ಸಿ.ಎಸ್ ಮನಗೂಳಿ 70 ಸಾವಿರ, ಬಿಜೆಪಿಯ ರಮೇಶ ಭೂಸನೂರು 62 ಸಾವಿರ ಮತ್ತು ಕಾಂಗ್ರೆಸ್‌ನ ಮಲ್ಲಪ್ಪ 20 ಸಾವಿರ ಮತ ಗಳಿಸಿದ್ದರು. ನಿರ್ಣಾಯಕ ಎನಿಸಿದ ಅಲ್ಪಸಂಖ್ಯಾತರ ಮತಗಳು ಮನಗೂಳಿಯವರ ಗೆಲುವಿಗೆ ಕಾರಣವಾಗಿದ್ದವು.
ಕಳೆದ ಸಲ 8 ಸಾವಿರ ಮತಗಳಿಂದ ಸೋತ ರಮೇಶ ಭೂಸನೂರು ಅವರಿಗೆ ಬಿಜೆಪಿ ಮತ್ತೊಂದು ಅವಕಾಶ ನೀಡಿದೆ. ಕಾಂಗ್ರೆಸ್ ಅಶೋಕ್ ಮನಗೂಳಿ ಮೂಲಕ ತನ್ನ ಹಳೆಯ ಭದ್ರಕೋಟೆಯನ್ನು ಪುನಃ ಪಡೆಯುವ ಉತ್ಸಾಹದಲ್ಲಿದೆ.
ಜೆಡಿಎಸ್‌ನಿಂದ ಯಾರು?
ಆದರೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಇನ್ನೂ ಘೋಷಣೆ ಮಾಡದೇ ಇರುವುದು ಕುತೂಹಲಕ್ಕೆ ಕಾರಣವಾಗಿದೆ. ಜೆಡಿಎಸ್‌ನಿಂದ ಸದ್ಯಕ್ಕೆ ಮೂರು ಹೆಸರು ಚಾಲ್ತಿಯಲ್ಲಿವೆ. ಇಂಡಿ ಕ್ಷೇತ್ರದಿಂದ ಎರಡು ಸಲ ಪಕ್ಷೇತರರಾಗಿ ಗೆದ್ದಿದ್ದ ರವಿಕಾಂತ್ ಪಾಟೀಲ್, ಹಿರಿಯ ವಕೀಲ ದಿ. ಐ.ಬಿ ಅಂಗಡಿಯವರ ಸೊಸೆ ನಾಜಿಯಾ ಶಕೀಲ್ ಅಂಗಡಿ ಮತ್ತು ಜಿಪಂ ಮಾಜಿ ಸದಸ್ಯ ಶರಣಪ್ಪ ಕಲ್ಮೇಶ್ವರ್ ಟಿಕೆಟ್ ಆಕಾಂಕ್ಷಿಗಳು.
ಹಿಂದೆ ಎರಡು ಸಲ ಇಂಡಿಯಿಂದ ಗೆದ್ದಾಗ ಸಿಂದಗಿ ತಾಲೂಕಿನ 40 ಹಳ್ಳಿಗಳು ಇಂಡಿ ಮತಕ್ಞೇತ್ರದ ವ್ಯಾಪ್ತಿಯಲ್ಲಿದ್ದವು. ಈ ಹಳ್ಳಿಗಳಲ್ಲಿ ರವಿಕಾಂತ್ ಪಾಟೀಲ್ ಸಾಕಷ್ಟು ಮುನ್ನಡೆ ಪಡೆದಿದ್ದರು. ಕ್ಷೇತ್ರ ಪುನರ್ವಿಂಗಡಣೆ ನಂತರ ಈ 40 ಹಳ್ಳಿಗಳು ಸಿಂದಗಿ ಕ್ಷೇತ್ರಕ್ಕೆ ಸೇರ್ಪಡೆಯಾಗಿವೆ. ಈ ಕಾರಣಕ್ಕೆ ರವಿಕಾಂತ್ ಪಾಟೀಲ್ ಇಲ್ಲಿಂದ ಜೆಡಿಎಸ್ ಅಭ್ಯರ್ಥಿಯಾಗಲು ಬಯಸಿದ್ದಾರೆ.
ಲಿಂಗಾಯತ ಗಾಣಿಗ ಸಮುದಾಯದ ಮತಗಳು ಜಾಸ್ತಿಯಿದ್ದು ನಂತರದಲ್ಲಿ ಅಲ್ಪಸಂಖ್ಯಾತರು ಮತ್ತು ಕೋಲಿ-ತಳವಾದ ಸಮುದಾಯದ ಮತಗಳಿವೆ.
ಇದು ಸದ್ಯದ ಚಿತ್ರಣ. ಜೆಡಿಎಸ್ ಕ್ಷೇತ್ರ ಉಳಿಸಿಕೊಳ್ಳುವುದೇ? ಕಾಂಗ್ರೆಸ್ ತನ್ನ ಹಳೆ ಭದ್ರಕೋಟೆ ಮತ್ತೆ ವಶ ಮಾಡಿಕೊಳ್ಳುವುದೇ? ಅಥವಾ ಆಡಳಿತರೂಢ ಬಿಜೆಪಿ ಬಾವುಟ ಹಾರಿಸಲಿದೆಯೇ ಎಂಬ ಕುತೂಹಲ ಜನರಲ್ಲಿದೆ.
ಭೀಮಾ ತೀರದ ಸಿಂದಗಿಯಲ್ಲಿ ಇನ್ನೂ ಚುನಾವಣಾ ಕಾವು ಏರಿಲ್ಲ.