ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಇನ್ನೂ ಸರಿಯಾಗಿ ಟೇಕಾಪ್ ಆಗಿಲ್ಲ. ಒಂದೆಡೆ ಕೊರೋನಾ ಮೂರಲೇ, ಇನ್ನೊಂದೆಡೆ ಪ್ರವಾಹಕ್ಕೆ ತತ್ತರಿಸಿದ ಉತ್ತರ ಕರ್ನಾಟಕದ ಜನ ಬದುಕು. ಇವರಿಗೆ ಪರಿಹಾರ ನೀಡದೇ ರಾಜ್ಯ ಸರ್ಕಾರ ಕಥೆ ಹೊಡೆಯುತ್ತಿದೆ. ಅಲ್ಲದೇ ಸಚಿವ ಸಂಪುಟ ರಚನೆ ವಿಚಾರದಲ್ಲೇ ಇನ್ನೂ ಕಿತ್ತಾಡುತ್ತಿದೆ. ಹೀಗಿರುವಾಗ ಸರ್ಕಾರವನ್ನ ಎಚ್ಚರಿಸಬೇಕಾದ ಕಾಂಗ್ರೆಸ್ ಮುಸುಕಿನ ಗುದ್ದಾಟದಲ್ಲೇ ಮುಳುಗಿದೆ. ಬಸವರಾಜ್ ಬೊಮ್ಮಾಯಿ ಸಿಎಂ ಆಗಿ ವಾರ ಕಳೆದರೂ ಕಾಂಗ್ರೆಸ್ ಏನು ಮಾಡುತ್ತಿಲ್ಲ. ಈ ಮಧ್ಯೆ ಕಾಂಗ್ರೆಸ್ ಹಿರಿಯ ನಾಯಕರು ವಿರೋಧ ಪಕ್ಷದ ನಾಯಕ ಸ್ಥಾನದಿಂದ ಸಿದ್ದರಾಮಯ್ಯರನ್ನು ಕೆಳಗಿಳಿಸಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರಂತೆ. ಇದಕ್ಕಾಗಿ ಮಾಜಿ ಸಿದ್ದರಾಮಯ್ಯ ವಿರುದ್ಧವೇ ಚಕ್ರವ್ಯೂಹ ಹೆಣೆದಿದ್ದಾರೆ ಎನ್ನಲಾಗಿದೆ.
ಬಸವರಾಜ್ ಬೊಮ್ಮಾಯಿ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಏನು ಮಾಡುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೈಕಮಾಂಡ್ಗೆ ದೂರು ನೀಡಿದ್ದರು. ಈ ಬೆನ್ನಲ್ಲೀಗ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ನ ಇಬ್ಬರು ನಾಯಕರು ಸಿಡಿದೆದಿದ್ದಾರೆ. ಸದ್ದಿಲ್ಲದೇ ಮಾಜಿ ಸಿಎಂ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಎರಡು ವರ್ಷಗಳ ಹಿಂದೆ ದಕ್ಷಿಣ ಭಾರತದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಏಕೈಕ ಮೈತ್ರಿ ಸರ್ಕಾರ ಪತನವಾಯ್ತು. ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯನವರೇ. ಈಗ ಬಿಜೆಪಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಎಲ್ಲಾ ಲಕ್ಷಣಗಳು ಇವೆ. ಹೀಗಿರುವಾಗ ಸಿದ್ದರಾಮಯ್ಯ ಏನು ಮಾಡದೇ ಸುಮ್ಮನೇ ಕೂತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕರು ಹೈಕಮಾಂಡ್ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಸಿದ್ದರಾಮಯ್ಯಗೆ ಇಲ್ಲಿಯವರೆಗೂ ಅಧಿಕಾರ ನೀಡಿದ್ದು ಸಾಕು. ಕಳೆದ ಅವಧಿಯಲ್ಲೂ ಅವರೇ ಐದು ವರ್ಷ ಸಿಎಂ ಆಗಿದ್ದರು, ಈಗಲೂ ವಿಪಕ್ಷದ ನಾಯಕರು ಆಗಿದ್ದರು. ಮುಂದಿನ ಚುನಾವಣೆ ದೃಷ್ಟಿಯಿಂದ ಸಿದ್ದರಾಮಯ್ಯರನ್ನು ವಿರೋಧ ಪಕ್ಷ ನಾಯಕ ಸ್ಥಾನದಿಂದ ತೆಗೆಯಿರಿ, ಬೇರೆ ಯಾರಿಗಾದರೂ ಅವಕಾಶ ನೀಡಬೇಕೆಂದು ಕಾಂಗ್ರೆಸ್ ಹಿರಿಯ ನಾಯಕರು ಒತ್ತಾಯಿಸಿದ್ದಾರೆ.
ಪಕ್ಷದ ಎಲ್ಲಾ ನಾಯಕರಿಗೂ ಅವಕಾಶ ಸಿಗಬೇಕು. ಇನ್ನೂ ಅವರೇ ವಿಪಕ್ಷ ನಾಯಕರಾಗಿ ಮುಂದುವರಿಯಬೇಕು ಎಂದರೆ ಹೇಗೆ. ತಾವು ಸ್ಥಾನದಲ್ಲಿ ಇದ್ದರೇ ಮಾತ್ರ ಪಕ್ಷಕ್ಕಾಗಿ ಕೆಲಸ ಮಾಡೋದಲ್ಲ. ಅಧಿಕಾರ ಇಲ್ಲದೆಯೂ ಕೆಲಸ ಮಾಡಲಿ. ಸಿದ್ದರಾಮಯ್ಯ ಬದಲಿಗೆ ಬೇರೆ ಯಾರಿಗಾದರೂ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಸಂಸದ ಕೆಎಚ್ ಮುನಿಯಪ್ಪ ದೂರು ನೀಡಿದ್ದಾರಂತೆ.
ಇನ್ನೊಂದೆಡೆ ನನ್ನನ್ನು ವಿಪಕ್ಷ ನಾಯಕರನ್ನಾಗಿ ನೇಮಕ ಮಾಡಬೇಕೆಂದು ಹೆಚ್.ಕೆ ಪಾಟೀಲ್ ಪಟ್ಟು ಹಿಡಿದಿದ್ದಾರೆ. ಮುಂದಿನ ಚುನಾವಣೆಗೆ ಸಿದ್ದರಾಮಯ್ಯ ಸರಿಯಾದ ತಯಾರಿ ಮಾಡಿಕೊಳ್ಳುತ್ತಿಲ್ಲ. ಹಾಗಾಗಿ ನನಗೆ ಕೊಡಿ ಎಂದು ಹೈಕಮಾಂಡ್ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಒಟ್ನಲ್ಲಿ ಈ ಬಾರಿ ಕಾಂಗ್ರೆಸ್ ಹಿರಿಯ ನಾಯಕರ ಆರೋಪ ಗಂಭೀರವಾಗಿ ಪರಿಗಣಿಸಿ ಹೈಕಮಾಂಡ್ ಸಿದ್ದರಾಮಯ್ಯ ತೆಗೆದು ಬೇರೆ ಯಾರನ್ನಾದರೂ ವಿಪಕ್ಷ ನಾಯಕರನ್ನು ಮಾಡಲಿದ್ದಾರಾ ಅಥವಾ ಮುಂದುವರಿಸಲಿದ್ದಾರಾ? ಎಂಬ ಚರ್ಚೆಯೂ ನಡೆಯುತ್ತಿದೆ.