ವಿಧಾನಪರಿಷತ್ ಪ್ರತಿಪಕ್ಷ ನಾಯಕರಾಗಿದ್ದ ಎಸ್ ಆರ್ ಪಾಟೀಲ್ ಅವರನ್ನು ಮೇಲ್ಮನೆ ಸ್ಥಾನಕ್ಕೆ ಮತ್ತೊಮ್ಮೆ ಕಳುಹಿಸುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧಿಸಿದರು ಎಂಬ ವಿಚಾರ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಹೌದು, ಲಿಂಗಾಯತ ಸಮುದಾಯದ ಪ್ರಬಲ ನಾಯಕರೂ, ಪರಿಷತ್ ನ ಹಿರಿಯ ಸದಸ್ಯರೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಲ್ಲೂ ಒಬ್ಬರಾಗಿರುವ ಎಸ್ ಆರ್ ಪಾಟೀಲ್ ಸ್ವತಃ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ವಿಧಾನಪರಿಷತ್ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು.
ಇಂತಹ ಎಸ್ ಆರ್ ಪಾಟೀಲ್ ಅವರಿಗೆ ಮೇಲ್ಮನೆ ಸದಸ್ಯತ್ವ ತಪ್ಪಿಸಲು ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿ ಹರಡುತ್ತಿದೆ. ಆದರೆ ವಾಸ್ತವವಾಗಿ ಸಿದ್ದರಾಮಯ್ಯ ಎಸ್ ಆರ್ ಪಾಟೀಲ್ ಅವರ ಮೇಲ್ಮನೆ ಸ್ಥಾನಕ್ಕೆ ವಿರೋಧಿಸಿಲ್ಲ. ಬದಲಾಗಿ ಅವರಿಗೆ ಮತ್ತಷ್ಟು ಉನ್ನತ ಸ್ಥಾನ ನೀಡುವ ಉದ್ದೇಶವನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ ಎಂಬುದು ಬಹುತೇಕ ಮಂದಿಗೆ ತಿಳಿದಿಲ್ಲ.
ಎಸ್ ಆರ್ ಪಾಟೀಲ್ ಹಿರಿಯ ನಾಯಕರು ಮಾತ್ರವಲ್ಲ. ಉತ್ತರ ಕರ್ನಾಟಕದಲ್ಲಿ ಪ್ರಬಲ ಲಿಂಗಾಯತ ಸಮುದಾಯದವರು. ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್ ಸೆಳೆಯಬೇಕಾದರೆ ಎಸ್ ಆರ್. ಪಾಟೀಲ್ ಮೇಲ್ಮನೆಗೆ ಹೋಗುವುದಕ್ಕಿಂತ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಲಿಂಗಾಯತ ಮತಗಳನ್ನು ಸೆಳೆಯಬಹುದು. ಈ ಮೂಲಕ ಬಿಜೆಪಿಗೆ ದೊಡ್ಡ ಹೊಡೆತ ನೀಡಬಹುದು ಎಂಬುದು ಸಿದ್ದರಾಮಯ್ಯ ಲೆಕ್ಕಾಚಾರವಾಗಿದೆ.
ಎಸ್ ಆರ್ ಪಾಟೀಲ್ ನಾಯಕತ್ವದಲ್ಲಿ ಉತ್ತರ ಕರ್ನಾಟಕ ಮಾತ್ರವಲ್ಲದೇ ರಾಜ್ಯದೆಲ್ಲೆಡೆ ಇರುವ ಲಿಂಗಾಯತ ಸಮುದಾಯ ಸೆಳೆಯಬಹುದು. ಇದರಿಂದ ದೂರವಾಗಿದ್ದ ಲಿಂಗಾಯತರನ್ನು ಸೆಳೆಯಬಹುದು. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಸ್ ಆರ್ ಪಾಟೀಲ್ ಅವರಿಗೆ ಲಿಂಗಾಯತ ಸಮುದಾಯದಿಂದ ಸಚಿವ ಸ್ಥಾನವನ್ನೂ ನೀಡಬಹುದು ಎಂದು ಸಿದ್ದರಾಮಯ್ಯ ಲೆಕ್ಕಾಚಾರ ಎನ್ನಲಾಗಿದೆ.