ಕಾಂಗ್ರೆಸ್ನಲ್ಲಿ ಇಷ್ಟು ದಿನಗಳ ಕಾಲ ಒಟ್ಟಾಗಿಯೇ ಕಾಣಿಸಿಕೊಂಡು ಒಗ್ಗಟ್ಟು ಪ್ರದರ್ಶನ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ಇದೀಗ ದೆಹಲಿಯ ಹೈಕಮಾಂಡ್ ಅಂಗಳದಲ್ಲಿ ಅಜಾತ ಶತ್ರುಗಳ ರೀತಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ತನ್ನದೇ ಆದ ರೀತಿಯಲ್ಲಿ ಪೈಪೋಟಿ ನಡೆಸುತ್ತಿದ್ದಾರೆ. ಸರಣಿ ಸಭೆಗಳ ಬಳಿಕವೂ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದ ಕಾಂಗ್ರೆಸ್ ಹೈಕಮಾಂಡ್, ಯಾರನ್ನು ಸಿಎಂ ಮಾಡಿದರೂ ಮುಂದಿನ ದಿನಗಳಲ್ಲಿ ಸರ್ಕಾರದಲ್ಲೇ ಸಂಕಷ್ಟ ಎದುರಾಗುವ ಸಂದೇಶ ರವಾನೆ ಆಗಿದೆ. ಇದೀಗ ಅಳೆದೂ ತೂಗಿ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ಜೊತೆಗೆ ವೈಯಕ್ತಿಕವಾಗಿ ಪ್ರತ್ಯೇಕ ಚರ್ಚೆ ನಡೆಸಿದ್ದಾರೆ. ಆದರೆ ಉಭಯ ನಾಯಕರೂ ಸಿಎಂ ಸ್ಥಾನಕ್ಕಾಗಿಯೇ ಪಟ್ಟು ಹಿಡಿದಿದ್ದು, ತಮ್ಮದೇ ಆದ ರೀತಿಯಲ್ಲಿ ಸಮರ್ಥನೆ ಕೂಡ ಮಾಡಿಕೊಂಡಿದ್ದಾರೆ ಅನ್ನೋ ಮಾಹಿತಿ ಹೊರ ಬಿದ್ದಿದೆ.
ನಾನೇ ಸಿಎಂ ಆಗಬೇಕು, ಶಾಸಕರ ನಿರ್ಧಾರ ಕೇಳಿ..
ಮಾಜಿ ಸಿಎಂ ಸಿದ್ದರಾಮಯ್ಯನೇ ಮುಖ್ಯಮಂತ್ರಿ ಆಗ್ತಾರೆ ಅನ್ನೋ ಮಾತಿತ್ತು. ಆದರೆ ಇದೀಗ ಅಸಲಿ ಆಟ ಬದಲಾಗಿದೆ. ಡಿ.ಕೆ ಶಿವಕುಮಾರ್ ನಾನೂ ಕೂಡ ಮುಖ್ಯಮಂತ್ರಿ ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಹೇಳಿದಂತೆ ನಿರ್ಧಾರ ತೆಗೆದುಕೊಳ್ಳಿ. ಶಾಸಕರ ಬಲ ಯಾರ ಪರವಾಗಿ ಹೆಚ್ಚಿದೆ..? ಅವರನ್ನೇ ಶಾಸಕಾಂಗ ಪಕ್ಷದ ನಾಯಕನಾಗಿ ಘೋಷಣೆ ಮಾಡಿ. ಬಹುತೇಕ ಶಾಸಕರು ನನ್ನ ಪರವಾಗಿ ಅಭಿಪ್ರಾಯ ತಿಳಿಸಿದ್ದಾರೆ. ಹೀಗಾಗಿ ಶಾಸಕರು ನನ್ನ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ ಎಂದೇ ಅರ್ಥ. ಶಾಸಕರ ಅಭಿಪ್ರಾಯವನ್ನು ಗೌರವಿಸುವಂತೆ ಮಲ್ಲಿಕಾರ್ಜುನ ಖರ್ಗೆಯವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದೆ ನಾಳೆ ಮತ್ತೊಂದು ಸುತ್ತಿನ ಸಭೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಈ ನಡುವೆ ಸಿದ್ದರಾಮಯ್ಯ, ಮಂಗಳವಾರ ರಾತ್ರಿ ವೇಣುಗೋಪಾಲ್ ಜೊತೆಗೆ ಚರ್ಚೆ ನಡೆಸಿದ ಬಳಿಕ ಸುರ್ಜೇವಾಲ ಭೇಟಿ ಮಾಡಿದ್ದಾರೆ.

ಸೋನಿಯಾ ಗಾಂಧಿ ಹೇಳಿದವರು ಸಿಎಂ ಆಗೋಣ..!
ನಾನು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಸಾಕಷ್ಟು ಶ್ರಮ ಪಟ್ಟಿದ್ದೇನೆ. ನಾನು ಸಿಎಂ ಆಗ್ತೇನೆ ಎನ್ನುವ ಕಾರಣಕ್ಕೇ ಹಳೇ ಮೈಸೂರು ಭಾಗದ ಒಕ್ಕಲಿಗ ಸಮುದಾಯದ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಈಗ ನಾನು ಹೇಳಿದಂತೆ ಕಾಂಗ್ರೆಸ್ ಪಕ್ಷಕ್ಕೆ ಜನರು ಅಭೂತಪೂರ್ವ ಬೆಂಬಲ ನೀಡಿದ್ದಾರೆ. ನಾನು ಮುಖ್ಯಮಂತ್ರಿ ಆಗಲೇಬೇಕು. ಒಂದು ವೇಳೆ ನಾನು ಮುಖ್ಯಮಂತ್ರಿ ಆಗುವುದು ಬೇಡ ಅನ್ನೋದಾದ್ರೆ ನೀವೇ ಮುಖ್ಯಮಂತ್ರಿ ಆಗಿ, ನಾನು ನಿಮ್ಮನ್ನು ಬೆಂಬಲಿಸ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಬಲಿಸಿದ್ದಾರೆ ಎನ್ನಲಾಗಿದೆ. ಇಷ್ಟು ಮಾತ್ರವಲ್ಲದೆ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ ಬಳಿಕ ಯಾವೆಲ್ಲಾ ಅಧಿಕಾರ ಅನುಭವಿಸಿದ್ದಾರೆ..? ಪಕ್ಷ ಹಾಗು ಸರ್ಕಾರದಲ್ಲಿ ಮಾಡಿರುವ ಎಡವಟ್ಟುಗಳು ಏನು..? ಅನ್ನೋ ಬಗ್ಗೆ ಕಂಪ್ಲೀಟ್ ಮಾಹಿತಿಯ ಪಟ್ಟಿಯನ್ನೇ ನೀಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಕಾಂಗ್ರೆಸ್ ಶಾಸಕರ ಗುಂಪಿನ ಜೊತೆಗೆ ಸಿದ್ದರಾಮಯ್ಯ ಸಭೆ ನಡೆಸಿರುವುದೂ ಕೂಡ ವಿರೋಧಕ್ಕೆ ಕಾರಣವಾಗಿದೆ.
ಯಾರು ಸಿಎಂ ಆದರೆ ಏನಾಗಲಿದೆ ಭವಿಷ್ಯ..?
ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆ ಆದರೆ ಬಿಜೆಪಿ ಪಾಲಿಗೆ ಅಷ್ಟೊಂದು ದೊಡ್ಡ ಪ್ರಮಾಣದ ಅಸ್ತ್ರ ಸಿಕ್ಕಂತೆ ಆಗುವುದಿಲ್ಲ. ಅಷ್ಟು ಮಾತ್ರವಲ್ಲದೆ ಸಿದ್ದರಾಮಯ್ಯ ಈಗಾಗಲೇ ಮುಖ್ಯಮಂತ್ರಿ ಆಗಿ ಕೆಲಸ ಮಾಡಿರುವ ಅನುಭವ ಇದ್ದು, ಅಧಿಕಾರಿಗಳ ಜೊತೆಗೆ ಹೇಗೆ ಕೆಲಸ ಮಾಡಬೇಕು ಅನ್ನೋ ಚಾಕಚಕ್ಯತೆ ಇದೆ. ಆದರೆ ಡಿಕೆ ಶಿವಕುಮಾರ್ ಒಂದು ವೇಳೆ ಮುಖ್ಯಮಂತ್ರಿ ಆದರೆ ಕೇಸರಿ ಪಾಳಯಕ್ಕೆ ಹಾಲು ಅನ್ನ ಉಂಡಂತೆ ಆಗುವುದು ಶತಸಿದ್ಧ. ಡಿ.ಕೆ ಶಿವಕುಮಾರ್ ವಿರುದ್ಧ ಈಗಾಗಲೇ ಜಾರಿನಿರ್ದೇಶನಾಲಯ, ಸಿಬಿಐ, ಐಟಿ ಹೀಗೆ ಸಾಕಷ್ಟು ಕೇಸ್ಗಳಿದ್ದು, ಯಾವ ಸಮಯದಲ್ಲಿ ಆದರೂ ವಿಚಾರಣೆಗೆ ಕರೆಯಬಹುದು. ಒಂದು ವೇಳೆ ವಿಚಾರಣೆ ನೆಪದಲ್ಲಿ ಬಂಧಿಸಿದರೂ ಅಚ್ಚರಿಯಿಲ್ಲ. ಸಿದ್ದರಾಮಯ್ಯ ಬಿಟ್ಟು ಡಿ.ಕೆ ಶಿವಕುಮಾರ್ ಆಯ್ಕೆ ಮಾಡುವುದು ಹೈಕಮಾಂಡ್ಗೂ ಕಷ್ಟ. ಸಿದ್ದರಾಮಯ್ಯ ಮನವೊಲಿಕೆ ಕಷ್ಟ ಎನ್ನುವ ಕಾರಣಕ್ಕಾದರೂ ಡಿ.ಕೆ ಶಿವಕುಮಾರ್ ಮನವೊಲಿಸಲು ಹೈಕಮಾಂಡ್ ಭಾರೀ ಸರ್ಕಸ್ ನಡೆಸುತ್ತಿದೆ. ಇಂದು ಬೆಳಗ್ಗೆ 11 ಗಂಟೆಗೆ ಇಬ್ಬರನ್ನೂ ಮುಖಾಮುಖಿ ಕೂರಿಸಿ ಮಾತನಾಡುವ ನಿರ್ಧಾರ ಹೊರ ಬಿದ್ದಿದೆ.
ಕೃಷ್ಣಮಣಿ