
ಮೈಸೂರು ವಿಶ್ವವಿದ್ಯಾಲಯ ನಿವೃತ್ತ ಪ್ರೊಫೆಸರ್ ಮಹೇಶ್ ಚಂದ್ರ ಗುರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ನಿವೃತ್ತ ಪ್ರಾಧ್ಯಾಪಕ ಮಹೇಶ್ ಚಂದ್ರ ಗುರು, ಸಾಮಾಜಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು.
ಸಿಎಂ ಸಿದ್ದರಾಮಯ್ಯ ಆತ್ಮೀಯ ಬಳಗದಲ್ಲಿ ಗುರತಿಸಿಕೊಂಡಿದ್ದ ಮಹೇಶ್ ಚಂದ್ರ ಗುರು ನೇರ ಮಾತುಗಳಿಂದಲೇ ಖ್ಯಾತಿ ಅಪಖ್ಯಾತಿ ಪಡೆದುಕೊಂಡಿದ್ದರು. ಮಹಿಷಾ ದಸರಾ ಸೇರಿದಂತೆ ಹಿಂದುಳಿದ ವರ್ಗಗಳ ವಿಚಾರಗಳು ಬಂದಾಗ ನೇರ ಮಾತುಗಳಿಂದ ಚಾಟಿ ಬೀಸುತ್ತಿದ್ದರು. ಮಹಿಳೆಯರು ಪುರುಷನಷ್ಟೇ ಸಮಾನರು ಎಂದು ಪ್ರತಿಪಾದಿಸುತ್ತಿದ್ದ ಮಹೇಶ್ ಚಂದ್ರ ಗುರು ಸಾಕಷ್ಟು ವಿದ್ಯಾರ್ಥಿ ಬಳಗವನ್ನು ಅಗಲಿದ್ದಾರೆ.

ಪ್ರೊ.ಮಹೇಶ್ ಚಂದ್ರ ಗುರು ನಿಧನಕ್ಕೆ ಸಿಎಂ ಕಂಬನಿ ಮಿಡಿದಿದ್ದಾರೆ. ಮಹೇಶ್ ಚಂದ್ರ ಗುರು ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಪ್ರಾಧ್ಯಾಪಕರಾಗಿದ್ದ ಮಹೇಶ್ ಚಂದ್ರ ಗುರು, ತರಗತಿಗಳಿಂದ ಹೊರಗೂ ಸಮಾಜಕ್ಕೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದರು. ಬುದ್ದ, ಬಸವ, ಅಂಬೇಡ್ಕರ್ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. ಎಂದೂ ಮೌನಕ್ಕೆ ಮೊರೆ ಹೋಗದೆ, ಪರಿಣಾಮವನ್ನೂ ಲೆಕ್ಕಿಸದೆ ನೇರ, ನಿಷ್ಠುರವಾಗಿ ತಮ್ಮ ಅಭಿಪ್ರಾಯ ಮಂಡಿಸುತ್ತಿದ್ದರು ಎಂದಿದ್ದಾರೆ.
ಮಹೇಶ್ ಚಂದ್ರ ಗುರು ನಿಧನದಿಂದ ಸಮಾಜ ಒಬ್ಬ ಚಿಂತನಶೀಲ ಮಾರ್ಗದರ್ಶಕನನ್ನು ಕಳೆದುಕೊಂಡಿದೆ. ಅವರ ಕುಟುಂಬ, ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು X ಪೋಸ್ಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ವಿಶೇಷ ಅಂದ್ರೆ ಸಿಎಂ ಸಿದ್ದರಾಮಯ್ಯ ಅವರಿಗಿಂತ ಚಿಕ್ಕವರಾಗಿದ್ದರೂ ಸಿದ್ದರಾಮಯ್ಯನ ಜೊತೆಗೆ ಸಲುಗೆಯಿಂದ ಇರುತ್ತಿದ್ದರು. ಆತ್ಮೀಯ ಸ್ನೇಹಿತರಾಗಿದ್ದರು. ಅನಾರೋಗ್ಯಕ್ಕೆ ಈಡಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಹೇಶ್ ಚಂದ್ರ ಗುರುಗಳು, ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ವಿಚಾರ ಗೊತ್ತಾದ ಬಳಿಕ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎನ್ನಲಾಗ್ತಿದೆ.
