ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಡೆದ ಹಿಂದೂ ಸಂಘಟನೆಯ ನಾಯಕರ ಹತ್ಯೆ, ಟಿಪ್ಪು ಜಯಂತಿ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದರು. “ನಾನು ನಿಮ್ಮಿಂದ ಆಡಳಿತ ಮತ್ತು ಪೊಲೀಸಿಂಗ್ ಬಗ್ಗೆ ತಿಳಿಯಬೇಕಿಲ್ಲ” ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದರು.
ಬೊಮ್ಮಾಯಿ ಅವರ ಹೇಳಿಕೆಗೆ ತಿರುಗೇಟು ನೀಡಿ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನನ್ನಿಂದ ಆಡಳಿತವನ್ನಾಗಲಿ, ಪೊಲೀಸಿಂಗ್ ಆಗಲಿ ಕಲಿಯಬೇಕಿಲ್ಲ ಎಂದು ಹೇಳಿದ್ದೀರಿ, ಧನ್ಯವಾದಗಳು. ನನ್ನಿಂದಾಗಲಿ, ನಿಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಅವರಿಂದಾಗಲಿ ನೀವು ಏನಾದರೂ ಕಲಿತಿದ್ದರೆ, ಕೇವಲ ಅಧಿಕಾರಕ್ಕಾಗಿ ಕೋಮುವಾದಿ ಪಕ್ಷದ ಜೊತೆ ಹೇಗೆ ಸೇರಿಕೊಳ್ಳುತ್ತಿದ್ದೀರಿ ಅಲ್ಲವೇ?
ನಾನೇ ಹಿಂದೂಗಳನ್ನು ಕೊಲ್ಲಿಸಿದೆ ಎಂದು ನಿಮ್ಮ ಪರಿವಾರದ ಕೂಗುಮಾರಿಗಳ ರೀತಿ ಆರೋಪ ಮಾಡಿದ್ದೀರಿ. ಇಂತಹ ಬೇಜವಾಬ್ದಾರಿ ಹೇಳಿಕೆಗಿಂತ ಮೊದಲು ನೀವು ಕೂತಿದ್ದ ಕುರ್ಚಿಯ ಘನತೆ ಬಗ್ಗೆ ಯೋಚಿಸಬೇಕಿತ್ತು. ಈ ಆರೋಪಕ್ಕಾಗಿ ನಾನು ಕಾನೂನುಕ್ರಮಕ್ಕೆ ಮುಂದಾಗಬಹುದು. ಕಿರಿಯರಿದ್ದೀರಿ ತಿದ್ದಿಕೊಳ್ಳಿ ಎಂದಷ್ಟೇ ಹೇಳಬಲ್ಲೆ.
ನೀವು ಗೃಹಸಚಿವರಾಗಿದ್ದವರು, ಈಗ ಮುಖ್ಯಮಂತ್ರಿ ಆಗಿದ್ದೀರಿ. ನನ್ನ ಸರ್ಕಾರದ ಕಾಲದಲ್ಲಿ ನೂರಾರು ಹಿಂದೂಗಳ ಹತ್ಯೆಯಾಯಿತು ಎಂದು ಕಾಗಕ್ಕ-ಗುಬ್ಬಕ್ಕ ಕತೆ ಹೇಳುತ್ತಾ ಕೂರಬೇಡಿ, ನಾವೇ ಪ್ರಕಟಿಸಿದ ಅಧಿಕೃತ ಮಾಹಿತಿ ಕೊಡುತ್ತೇನೆ. ತನಿಖೆ ಮಾಡಿ ಜನರಿಗೆ ಸತ್ಯ ತಿಳಿಸಿ.
2013-18ರ ಅವಧಿಯಲ್ಲಿ ಕೋಮು ಸಂಘರ್ಷದಲ್ಲಿ ಹತ್ಯೆಗೀಡಾಗಿದ್ದ ಹತ್ತು ಹಿಂದುಗಳ ಹತ್ಯೆಯ ಆರೋಪಿಗಳು ಎಸ್ ಡಿಪಿಐ/ಪಿಎಫ್ಐ ಸಂಘಟನೆಯವರು. ಹನ್ನೊಂದು ಮುಸ್ಲಿಮ್ ಮತ್ತು ಹತ್ತು ಹಿಂದುಗಳ ಹತ್ಯೆಯ ಆರೋಪಿಗಳು ಭಜರಂಗದಳ ಮತ್ತು ಹಿಂದು ಜಾಗರಣಾ ವೇದಿಕೆಗೆ ಸೇರಿದವರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಹತ್ಯೆಗೀಡಾಗಿದ್ದಾರೆಂದು ಆರೋಪಿಸಿ ನಿಮ್ಮ ಪಕ್ಷದವರೇ ಕೇಂದ್ರ ಸರ್ಕಾರಕ್ಕೆ ಕಳಿಸಿದ್ದ ಪಟ್ಟಿಯಲ್ಲಿದ್ದ ಜೀವಂತವಾಗಿ ಇರುವ ಅಶೋಕ್ ಪೂಜಾರಿ ಅವರ ಹೆಸರನ್ನು ಸೇರಿಸಿರುವ ನಿಮ್ಮ ಪಕ್ಷ ತನ್ನ ಬಣ್ಣ ತಾನೇ ಬಯಲು ಮಾಡಿಕೊಂಡು ನಗೆಪಾಟಲಿಗೀಡಾಗಿದ್ದು ನೆನಪಿದೆಯೇ?
ಹಿಂದೂಗಳ ಹತ್ಯೆ ಬಗ್ಗೆ ಕಣ್ಣೀರು ಸುರಿಸುತ್ತಿರುವ ನೀವು ಹೊನ್ನಾವರದ ಪರೇಶ್ ಮೇಸ್ತಾ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ನಿಮ್ಮ ಪ್ರಭಾವ ಬೀರಿ ಶೀಘ್ರವಾಗಿ ಈ ಹತ್ಯೆಯ ಅಪರಾಧಿಗಳನ್ನು ಪತ್ತೆಹಚ್ಚಿ ಶಿಕ್ಷಿಸಿ. ಒಬ್ಬ ಹಿಂದು ಯುವಕನ ಸಾವಿಗೆ ನ್ಯಾಯಕೊಡಿಸಲು ಪ್ರಯತ್ನಿಸುವಿರಾ?
ದಕ್ಷಿಣ ಕನ್ನಡದ ಪ್ರಕಾಶ್ ಕುಳಾಯಿ, ಕೇಶವ ಶೆಟ್ಟಿ, ಹರೀಶ್ ಪೂಜಾರಿ, ಬ್ರಹ್ಮಾವರದ ಪ್ರವೀಣ್ ಪೂಜಾರಿ, ಚಿಕ್ಕಮಗಳೂರಿನ ಕಲ್ಲಪ್ಪ ಹಂಡಿಬಾಗ್,ಮತ್ತು ಧನ್ಯಶ್ರೀ ಹಾಗೂ ವಿಜಯಪುರದ ದಾನಮ್ಮ ಹತ್ಯೆಯ ಆರೋಪಿಗಳನ್ನು ಕೂಡಾ ದಯವಿಟ್ಟು ಶಿಕ್ಷಿಸಿ. ಇವರೆಲ್ಲರೂ ಹಿಂದುಗಳು ಎನ್ನುವುದು ನೆನಪಲ್ಲಿರಲಿ.
ಮಂಗಳೂರಿನ ವಿನಾಯಕ ಬಾಳಿಗಾ ಅವರ ಹತ್ಯೆಯ ಪ್ರಮುಖ ಆರೋಪಿಯಾದ ನರೇಶ್ ಶೆಣೈಯ ಖಾಸಾ ದೋಸ್ತ್ ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್. ಕಟ್ಟಾ ಹಿಂದೂ ಆಗಿದ್ದ ಬಾಳಿಗಾ ಅವರ ಕೊಲೆಗಡುಕರನ್ನು ಶಿಕ್ಷಿಸಲು ಹೋರಾಡುತ್ತಿರುವ ಸೋದರಿಯರಿಗೆ ದಯವಿಟ್ಟು ನೀವಿಬ್ಬರೂ ಕೂಡಿ
ನ್ಯಾಯ ಕೊಡಿಸಿ.
ನೀವು ಮತ್ತು ನಿಮ್ಮ ಪಕ್ಷದ ನಾಯಕರು ಆಗಾಗ ಟಿಪ್ಪು ಸುಲ್ತಾನ ಹೆಸರಿನ ಜಪ ಮಾಡುವ ಮೊದಲು ನಿಮ್ಮದೇ ನಾಯಕರಾದ ಬಿ.ಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಆರ್. ಅಶೋಕ್ ಸೇರಿದಂತೆ ನಿಮ್ಮದೇ ಪಕ್ಷದ ನಾಯಕರು ಟಿಪ್ಪು ವೇಷ ಹಾಕಿ ಖಡ್ಗಹಿಡಿದು ಕುಣಿದಾಡಿದ ಪೋಟೊಗಳನ್ನು ನೋಡಿ ಕಣ್ತುಂಬಿಕೊಳ್ಳಿ. ಎಂದು ಟ್ವೀಟ್ ಮಾಡಿದ್ದಾರೆ.