ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2ನೇ ಬಾರಿ ಬಜೆಟ್ ಮಂಡಿಸುತ್ತಿದ್ದು, ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರು ಕಿವಿ ಮೇಲೆ ಕೇಸರಿ ಬಣ್ಣದ ಹೂವು ಇಟ್ಟುಕೊಂಡು ಸದನಕ್ಕೆ ಆಗಮಿಸಿದ್ದ ಕಾರಣಕ್ಕೆ ಕಲಾಪದಲ್ಲಿ ಗದ್ದಲ ಉಂಟಾಯಿತು.
ಸಿದ್ಧರಾಮಯ್ಯ ಅವರ ಈ ನಡೆಗೆ ಸಚಿವ ಆರ್.ಅಶೋಕ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿದರು.
ಇಷ್ಟು ದಿನ ಅವರು ಜನರ ಕಿವಿ ಮೇಲೆ ಹೂವಿಟ್ಟಿದ್ಧಾರೆ. ಈಗ ಅವರೇ ಕಿವಿ ಮೇಲೆ ಹೂವು ಇಟ್ಟುಕೊಂಡಿದ್ದಾರೆ. ಮುಂದೆ ಜನ ಇವರ ಕಿವಿ ಮೇಲೆ ಹೂವಿಡುತ್ತಾರೆ ಎಂದು ಮುಖ್ಯಮಂತ್ರಿಗಳು ಹರಿಹಾಯ್ದರು.
ಇದಕ್ಕೆ ಗರಂ ಆದ ಸಿದ್ದರಾಮಯ್ಯ, ನೀವು ಜನರ ಕಿವಿ ಮೇಲೆ ಹೂವಿಡುತ್ತಿದ್ದೀರಿ. ನಾನು ಹೂವು ಇಟ್ಟುಕೊಂಡಿದ್ದು, ಈ ಬಜೆಟ್ ಮೂಲಕ ಇವರು 7 ಕೋಟಿ ಜನರ ಕಿವಿ ಮೇಲೆ ಹೂ ಇಡುತ್ತಿದ್ದಾರೆ ಅಂತ ತಿಳಿಸಲು ಎಂದು ಅಸಮಾಧಾನ ಹೊರಹಾಕಿದರು.
ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಮಧ್ಯಪ್ರವೇಶ ಮಾಡಿದ ಸಭಾಧ್ಯಕ್ಷ ಕಾಗೇರಿಯವರು, ಇಷ್ಟುದಿನ ಕೇಸರಿ ಬಣ್ಣ ನಿಮ್ಮ ಪಕ್ಷದ್ದು ಎನ್ನುತ್ತಿದ್ದ ಸಿದ್ದರಾಮಯ್ಯನವರೇ ಇಂದು ಕೇಸರಿ ಬಣ್ಣದ ಹೂ ಇಟ್ಟುಕೊಂಡು ಬಂದಿದ್ದಾರೆ ಎಂದರು.
ನಂತರ ಸದಸ್ಯರನ್ನು ಸಮಾಧಾನಪಡಿಸಿ ಬಜೆಟ್ ಮಂಡನೆಗೆ ಅವಕಾಶ ಕಲ್ಪಿಸಿದರು.