ಕಾಂಗ್ರೆಸ್ ಪಕ್ಷಕ್ಕೆ ಸಾಲು ಸಾಲು ಸೋಲುಗಳು ಮಾತ್ರವಲ್ಲ, ನಾನಾ ರೀತಿಯ ಸಮಸ್ಯೆಗಳು ಸುತ್ತಿಕೊಂಡಿವೆ. ಮುಖ್ಯವಾಗಿ ಪಕ್ಷ ಮುನ್ನಡೆಸುವ ನಾಯಕನಿಲ್ಲ. ಹಂಗಾಮಿ ಅಧ್ಯಕ್ಷೆ ಆಗಿರುವ ಸೋನಿಯಾ ಗಾಂಧಿ ಅವರಿಗೆ ವೃದ್ದಾಪ್ಯ ಮತ್ತು ಅನಾರೋಗ್ಯದ ಸಮಸ್ಯೆಗಳು ಪಕ್ಷದ ಕೆಲಸ ಮಾಡಲು ಬಿಡುತ್ತಿಲ್ಲ. ಇಷ್ಟು ದಿನ ಪಕ್ಷ ಮತ್ತು ಸರ್ಕಾರಗಳಲ್ಲಿ ಅಧಿಕಾರ ಅನುಭವಿಸಿದ ಹಿರಿಯ ನಾಯಕರು ಈಗ ಸೆಟೆದು ನಿಂತಿದ್ದಾರೆ. ಅವರಿಗೆ ಪಕ್ಷ ಅನುಭವಿಸುತ್ತಿರುವ ಕಡುಕಷ್ಟವೂ ಕಾಣದಾಗಿದೆ. ಸಾಲದೆಂಬಂತೆ 2024ರ ಲೋಕಸಭಾ ಚುನಾವಣೆ ಬರುತ್ತಿದೆ. ಅದಕ್ಕೂ ಮೊದಲು ಕರ್ನಾಟಕವೂ ಸೇರಿದಂತೆ ಒಟ್ಟು ಎಂಟು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಬರುತ್ತಿವೆ.
ಇಂಥ ಸಂದಿಗ್ಧ ಸ್ಥಿತಿಯಲ್ಲಿ ಪಕ್ಷದ ನೊಗ ಹೊತ್ತಿರುವ ಸೋನಿಯಾ ಗಾಂಧಿ ಆರಾಮಾಗಿರಲಿ, ಅನಾರೋಗ್ಯದಿಂದ ಬಳಲುತ್ತಿರಲಿ ಪಕ್ಷದ ಕೆಲಸಕ್ಕೆ ಧಾವಿಸಲೇಬೇಕಾಗಿದೆ. ಅವರು ಈಗಾಗಲೇ ಹೇಳಿದಂತೆ ಪಕ್ಷ ಕಡುಕಷ್ಟದಲ್ಲಿದ್ದಾಗ ‘ಬಿದ್ದವನ ಮೇಲೆ ಆಳಿಗೊಂದು ಕಲ್ಲು’ ಎಂಬಂತೆ ಕುಟುಕುತ್ತಿರುವ ‘ಜಿ 23 ನಾಯಕರನ್ನು’ ಬಿಟ್ಟು ಇರುವವರಲ್ಲೇ ಸೂಕ್ತರಾಗಿರುವವರನ್ನು ಹುಡುಕಿ ಮಾತನಾಡಲು ಆರಂಭಿಸಿದ್ದಾರೆ. ಸೂಕ್ತ ವ್ಯಕ್ತಿಗಳಿಂದ ಸಲಹೆ, ಶಿಫಾರಸುಗಳನ್ನು ಪಡೆದು ಮುಂದಡಿ ಇಡಲು ಮನಸ್ಸು ಮಾಡಿದ್ದಾರೆ. ಸೋನಿಯಾ ಗಾಂಧಿ ಈ ಕೈಂಕರ್ಯಕ್ಕೆ ಮೊದಲು ಆಯ್ಕೆ ಮಾಡಿಕೊಂಡಿರುವುದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು.
ಸೋನಿಯಾ ಗಾಂಧಿ – ಸಿದ್ದರಾಮಯ್ಯ ಭೇಟಿ
ಸದ್ಯ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಲು ಒಪ್ಪುತ್ತಿಲ್ಲ. ಸೋನಿಯಾ ಗಾಂಧಿ ಪಕ್ಷದ ಎಲ್ಲಾ ವ್ಯವಹಾರಗಳನ್ನೂ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಾಲ್ಕು ದಿಕ್ಕಿಗೆ ನಾಲ್ಕು ಮಂದಿ ಕಾರ್ಯಾಧ್ಯಕ್ಷರನ್ನು ನೇಮಿಸಬೇಕು. ಎಐಸಿಸಿ ಪುನರ್‌ರಚನೆ ಮಾಡಿ ಹೊಸದಾಗಿ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಬೇಕು. ಅರ್ಹತೆಗಳಿಗೆ ಅನುಗುಣವಾಗಿ ಜವಾಬ್ದಾರಿಗಳನ್ನು ಹಂಚಬೇಕು. ಜೊತೆಗೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ರೂಪಿಸಬೇಕು. ಪಕ್ಷ ಸಂಘಟನೆ ಮಾಡಿ ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಬೇಕು. ಇಷ್ಟೆಲ್ಲವೂ ಸಾಧ್ಯವಾಗಲು ಮಾಡಬೇಕಾದ ಕೆಲಸಗಳೇನು? ಅನುಸರಿಸಬೇಕಾದ ತಂತ್ರಗಳೇನು? ಎಂಬಿತ್ಯಾದಿ ಚರ್ಚಿಸುವುದು ಸೋನಿಯಾ ಗಾಂಧಿ ಅವರ ಉದ್ದೇಶ. ಅದರ ಭಾಗವಾಗಿ ಮಂಗಳವಾರ ದಿಢೀರನೆ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆಸಿಕೊಂಡ ಸೋನಿಯಾ ಗಾಂಧಿ ಅವರು ಅರ್ಧ ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಆಹ್ವಾನಿಸಿದರೇ?
ಈ ಹಿಂದೆ ರಾಹುಲ್ ಗಾಂಧಿ ಅವರೇ ಖುದ್ದಾಗಿ ಸಿದ್ದರಾಮಯ್ಯ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗುವಂತೆ ಕೇಳಿದ್ದರು. ಆಗಲೇ ಸಿದ್ದರಾಮಯ್ಯ ತಾನು ರಾಜ್ಯ ರಾಜಕಾರಣದಲ್ಲೇ ಇರುವೆ, ರಾಷ್ಟ್ರ ರಾಜಕಾರಣಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಹಾಗಾಗಿ ಹಿಂದಿ ಭಾಷಾ ಜ್ಞಾನವಿಲ್ಲದ, 70 ಧಾಟಿರುವ ಸಿದ್ದರಾಮಯ್ಯ ಅವರನ್ನು ಸೋನಿಯಾ ಗಾಂಧಿ ಅವರು ರಾಷ್ಟ್ರ ರಾಜಕಾರಣಕ್ಕೆ ಆಹ್ವಾನಿಸಿರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ. ಬದಲಿಗೆ ಮೇಲೆ ಹೇಳಿದ ವಿಚಾರಗಳ ಬಗ್ಗೆ ಸಿದ್ದರಾಮಯ್ಯ ಜೊತೆ ಚರ್ಚಿಸಿದ್ದಾರೆ. ಚರ್ಚೆ ವೇಳೆ ‘ತಾವು ರಾಷ್ಟ್ರ ರಾಜಕಾರಣಕ್ಕೆ ಬಾರದೇ ಇದ್ದರೂ ಇರುವಲ್ಲಿಂದಲೇ ಅಭಿಪ್ರಾಯ, ಸಲಹೆ, ಶಿಫಾರಸುಗಳ ಮೂಲಕ ಹೈಕಮಾಂಡ್ ನಾಯಕರ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರಿ’ ಎಂದು ಸೋನಿಯಾ ಗಾಂಧಿ ಸೂಚಿಸಿದ್ದಾರೆ ಎನ್ನಲಾಗಿದೆ.
ರಾಜ್ಯದಿಂದ ಎಐಸಿಸಿಗೆ ಯಾರು?
ಅದೊಂದು ಕಾಲ ಇತ್ತು. ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ಕರಾವಳಿ ನಾಯಕರಿಂದ ತುಂಬಿರುತ್ತಿತ್ತು. ಆಸ್ಕರ್ ಫರ್ನಾಂಡೀಸ್, ಬಿ.ಕೆ. ಹರಿಪ್ರಸಾದ್, ವೀರಪ್ಪ ಮೊಯ್ಲಿ, ಜನಾರ್ಧನ ಪೂಜಾರಿ, ಮನೋರಮಾ ಮಧ್ವರಾಜ್, ಮಾರ್ಗರೇಟ್ ಆಳ್ವಾ ಮುಂತಾದವರು ಇರುತ್ತಿದ್ದರು. ಒಂದೊಂದು ಕಾಲ ಘಟ್ಟದಲ್ಲಿ ಒಬ್ಬೊಬ್ಬರು ಪ್ರಭಾವಿಗಳಾಗಿಯೂ ಇದ್ದರು. ಈಗ ಪರಿಸ್ಥಿತಿ ಹಾಗಿಲ್ಲ. ಎಚ್.ಕೆ. ಪಾಟೀಲ್ ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿಯಾಗಿದ್ದಾರೆ. ದಿನೇಶ್ ಗುಂಡೂರಾವ್ ತಮಿಳುನಾಡು ಮತ್ತು ಗೋವಾ ಉಸ್ತುವಾರಿಯಾಗಿದ್ದಾರೆ. ಆಯಾ ರಾಜ್ಯಗಳಾಚೆಗೆ ಅವರಿಗೆ ಹೈಕಮಾಂಡ್ ಮಟ್ಟದಲ್ಲಿ ಯಾವ ಜವಾಬ್ದಾರಿಯೂ ಇಲ್ಲ. ಹಾಗಾಗಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ಕರ್ನಾಟಕಕ್ಕೆ ಕೊಡಬೇಕೆಂಬ ಚಿಂತನೆ ಹೈಕಮಾಂಡಿಗೆ ಇದೆ. ಅದು ಯಾರಾಗಬಹುದು ಎಂಬ ಬಗ್ಗೆ ಕೂಡ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿರುವ ಸಾಧ್ಯತೆ ಇದೆ.
ಇದೇ ರೀತಿ ದಕ್ಷಿಣದಿಂದ ಕಾರ್ಯಾಧ್ಯಕ್ಷ ಹುದ್ದೆಗೆ ಯಾರನ್ನು ಪರಿಗಣಿಸಬಹುದು ಎಂಬ ಬಗ್ಗೆ ಕೂಡ ಸಿದ್ದರಾಮಯ್ಯ ಅವರ ಅಭಿಪ್ರಾಯ ಕೇಳಿರುವ ಸಾಧ್ಯತೆಗಳಿವೆ. ದಿಢೀರನೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಸಿದ್ದರಾಮಯ್ಯ ದೆಹಲಿಗೆ ತೆರಳಿದಾಗಲೇ ನಾನಾ ರೀತಿಯ ಚರ್ಚೆಗಳು ಆರಂಭವಾಗಿದ್ದವು. ಅವರು ರಾಷ್ಟ್ರ ರಾಜಕಾರಣ ಪ್ರವೇಶ ಮಾಡುತ್ತಾರೆ. ಅದೇ ಕಾರಣಕ್ಕೇ ಮೇಡಂ ಸೋನಿಯಾ ಗಾಂಧಿ ಕರೆಸಿಕೊಂಡಿದ್ದಾರೆ ಎಂದೆಲ್ಲಾ ಹೇಳಲಾಗುತ್ತಿತ್ತು. ಆದರೀಗ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಬೇರೆಯದೇ ರೀತಿಯಲ್ಲಿ ಬಳಸಿಕೊಳ್ಳಲೊರಟಂತೆ ಕಾಣುತ್ತಿದೆ.