ಬೆಳಗಾವಿ: ಪ್ರತಿಯೊಬ್ಬ ಶಾಸಕ, ಮಂತ್ರಿ, ಅಧ್ಯಕ್ಷರಿಗೆ ಲಂಚ ಸಂಗ್ರಹಿಸುವ ಮೊತ್ತವನ್ನು ನಿಗದಿ ಮಾಡಿದ್ದಾರೆ. ಚುನಾವಣೆಯನ್ನು ದುಡ್ಡಲ್ಲಿ ಗೆಲ್ಲಲು ಹೊರಟಿದ್ದಾರೆ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬೆಳಗಾವಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವು, ಬೊಮ್ಮಾಯಿ ಅವರು ತಮ್ಮ ಭ್ರಷ್ಟಾಚಾರಕ್ಕೆ ದಾಖಲಾತಿ ಕೇಳುತ್ತಾರೆ. ಗುತ್ತಿಗೆದಾರರ ಸಂಘದವರು ಪತ್ರ ಬರೆದಿರುವುದು ದಾಖಲಾತಿ ಅಲ್ಲವಾ? ಸರ್ಕಾರ ಪ್ರಾಮಾಣಿಕವಾಗಿದ್ದರೆ ತನಿಖೆ ಮಾಡಿಸಬಹುದಿತ್ತಲ್ವಾ? ನಿನ್ನೆ ಚನ್ನಗಿರಿ ಶಾಸಕರಾದ ವಿರೂಪಾಕ್ಷಪ್ಪ ಮಾಡಾಳ್ ಅವರ ಮಗ, ಬಿಡಬ್ಲ್ಯುಎಸ್’ಎಸ್’ಬಿ ಯಲ್ಲಿ ಸರ್ಕಾರಿ ಅಧಿಕಾರಿ ಆಗಿರುವ ಪ್ರಶಾಂತ್ ಮಾಡಾಳ್ ಅವರು ಗುತ್ತಿಗೆದಾರರಿಂದ ಲಂಚ ಸ್ವೀಕರಿಸುವಾಗ ಹಣದ ಸಮೇತ ಸಿಕ್ಕಿಬಿದ್ದಿದ್ದಾರೆ. ಇವೆಲ್ಲ ಸಾಕ್ಷಿಗಳಲ್ಲವಾ? ಎಂದು ಪ್ರಶ್ನಿಸಿದರು
ಚುನಾವಣೆಯನ್ನು ದುಡ್ಡಲ್ಲಿ ಗೆಲ್ಲಲು ಹೊರಟಿದ್ದಾರೆ
ಈಗ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ, ಪ್ರತಿ ಸಚಿವರಿಗೆ, ನಿಗಮ ಮಂಡಳಿ ಅಧ್ಯಕ್ಷರಾದವರಿಗೆ ಇಷ್ಟಿಷ್ಟು ಲಂಚ ಕಲೆಕ್ಷನ್ ಮಾಡಿಕೊಡಬೇಕು ಎಂದು ನಿಗದಿ ಮಾಡಿದ್ದಾರೆ. ಇದರ ಭಾಗವೇ ವಿರೂಪಾಕ್ಷಪ್ಪ ಮಾಡಾಳ್ ಮಗ 81 ಲಕ್ಷ ಲಂಚ ಕೇಳಿ, 40 ಲಕ್ಷ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿರುವುದು. 6 ಕೋಟಿ ಹಣ ಬೇರೆ ಸಿಕ್ಕಿದೆ. ಎಲ್ಲಿಂದ ಬಂತು ಇಷ್ಟು ಹಣ? ಈ ಹಣ ಯಾರದ್ದು? ನನ್ನ ಪ್ರಕಾರ ಇದು ಲೂಟಿ ಮಾಡಿದ ಹಣ ಎಂದು ಅರೋಪಿಸಿದರು.
ಅಪ್ಪನ ಅಧಿಕಾರ ನೋಡಿ ಮಗನಿಗೆ ಲಂಚ
ಮಾಧುಸ್ವಾಮಿ ಅವರು ಕಾನೂನು ಸಚಿವರಾದ ಮೇಲೆ ಸರ್ಕಾರದ ಎಲ್ಲಾ ತಪ್ಪನ್ನು ಕೂಡ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ವಿರೂಪಾಕ್ಷಪ್ಪ ಮಾಡಾಳ್ ಅವರು ಅಧ್ಯಕ್ಷರಾಗಿರುವ ಕಾರಣಕ್ಕೆ ತಾನೆ ಮಗ ಲಂಚ ಪಡೆದು ಗುತ್ತಿಗೆ ಕೆಲಸ ಕೊಡಿಸಲು ಸಾಧ್ಯವಾಗುತ್ತಿರುವುದು. ಅಪ್ಪ ಸೋಪ್ ಅಂಡ್ ಡೆಟೆರ್ಜೆಂಟ್ ನಲ್ಲಿ ಅಧ್ಯಕ್ಷರಾಗಿದ್ದಾರೆ. ಅಲ್ಲಿಗೆ ಕಚ್ಚಾ ವಸ್ತು ಸಪ್ಲೈ ಮಾಡಲು ಲಂಚ ಪಡೆದಿದ್ದು ಅಲ್ವಾ? ಯಾರೋ ದಾರಿಯಲ್ಲಿ ಹೋಗುವವರು ಗುತ್ತಿಗೆ ಕೆಲಸ ಕೊಡಿಸುತ್ತಾರೆ ಎಂದು ಲಂಚ ಕೊಟ್ಟಿದ್ದಾರ? ಅಪ್ಪನ ಅಧಿಕಾರ ನೋಡಿಯೇ ಮಗನಿಗೆ ಲಂಚ ನೀಡಿದ್ದಾರೆ.
ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ
ಎರಡನೇ ಹಂತದ ಪ್ರಜಾಧ್ವನಿ ಯಾತ್ರೆ ಆರಂಭ ಮಾಡಿ ಇಂದಿಗೆ ಒಂದು ತಿಂಗಳಾಗಿದೆ. ಈಗಾಗಲೇ ಜಿಲ್ಲಾ ಹಂತದ ಪ್ರಜಾಧ್ವನಿ ಯಾತ್ರೆ ಮುಗಿದಿದ್ದು, ಎರಡನೇ ಹಂತದಲ್ಲಿ ಎರಡು ಗುಂಪುಗಳಾಗಿ ಮಾಡಿಕೊಂಡು ಯಾತ್ರೆ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ಬಂದಿದೆ. ಇಂದು ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಬಿರುಗಾಳಿ ಬೀಸಲು ಆರಂಭವಾಗಿದೆ ಎಂದರು.
ಡಿಕೆಶಿಗೆ ಸಿಎಂ ಆಸೆ ಇದ್ದರೆ ತಪ್ಪೇನು ?
ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಹೌದು, ಹಾಗೆಯೇ ಡಿ.ಕೆ ಶಿವಕುಮಾರ್ ಅವರಿಗೂ ಆಸೆ ಇದ್ದರೆ ಅದರಲ್ಲಿ ತಪ್ಪೇನು? ಅಂತಿಮವಾಗಿ ಗೆದ್ದ ಶಾಸಕರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು. ಮುಖ್ಯಮಂತ್ರಿ ಹುದ್ದೆಯ ಆಸೆಯನ್ನೇ ಪಡಬೇಡಿ ಎನ್ನಲು ಇದು ಸರ್ವಾಧಿಕಾರಿ ವ್ಯವಸ್ಥೆಯೇ? ಪ್ರಹ್ಲಾದ್ ಜೋಷಿಗೆ ಪ್ರಜಾಪ್ರಭುತ್ವ ಸಿದ್ಧಾಂತದ ಬಗ್ಗೆ ಜ್ಞಾನವೇ ಇಲ್ಲ, ಕಾರಣ ಬಿಜೆಪಿಯಲ್ಲಿ ಪ್ರಜಾಪ್ರಭುತ್ವ ಇಲ್ಲ. ಯಡಿಯೂರಪ್ಪ ಅವರನ್ನು ಕಿತ್ತು ಬೊಮ್ಮಾಯಿಯನ್ನು ತಂದು ಕೂರಿಸಿದ್ರು, ಇದನ್ನು ಮಾಡುವಾಗ ಶಾಸಕರ ಅಭಿಪ್ರಾಯ ಕೇಳಿದ್ರಾ? ಇಲ್ಲ ಅಲ್ವಾ? ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ, ಕಾಂಗ್ರೆಸ್ ನಲ್ಲಿ ಆಂತರಿಕೆ ಪ್ರಜಾಪ್ರಭುತ್ವ ಇದೆ, ಜಾತ್ಯತೀತತೆ ಇದೆ ಎಂದು ತಿಳಿಸಿದರು.