ಸಿಎಂ ಸಿದ್ದರಾಮಯ್ನವರೇ (Cm Siddaramaiah),ನೀವು ಕಾಂಗ್ರೆಸ್ (Congress) ಶಾಸಕರಿಗೆ ಮುಖ್ಯಮಂತ್ರಿಯೋ ಅಥವಾ ಕರ್ನಾಟಕದ ಮುಖ್ಯಮಂತ್ರಿಯೋ? ಅಲುಗಾಡುತ್ತಿರುವ ನಿಮ್ಮ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು, ಕಾಂಗ್ರೆಸ್ ನ ಆಂತರಿಕ ಬೇಗುದಿಯನ್ನು ತಣ್ಣಗಾಗಿಸಲು, ಅತೃಪ್ತ ಕಾಂಗ್ರೆಸ್ ಶಾಸಕರನ್ನು ತೃಪ್ತಿಪಡಿಸಲು ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕೇವಲ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಮಾತ್ರ ₹50 ಕೋಟಿ ಅನುದಾನ (50 crores grant) ಬಿಡುಗಡೆ ಮಾಡುವ ಮೂಲಕ 17 ಬಾರಿ ಬಜೆಟ್ ಮಂಡಿಸಿದ್ದೇನೆಂದು ಬೀಗುವ ನೀವು ಬಜೆಟ್ ಪಾವಿತ್ರ್ಯತೆಯನ್ನು ಹಾಳು ಮಾಡಿದ್ದೀರಿ, ಸ್ವಜನ ಪಕ್ಷಪಾತ ಮೆರೆದು ನೀವೊಬ್ಬ ಡೋಂಗಿ ಸಮಾಜವಾದಿ ಎಂದು ತೋರಿಸಿಕೊಟ್ಟಿದ್ದೀರಿ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಸರ್ವರಿಗೂ ಸಮಬಾಳು- ಸರ್ವರಿಗೂ ಸಮಪಾಲು ಇದು ಸಮಸಮಾಜದ ಕಲ್ಪನೆ, ಆದರೆ ನಿಮ್ಮ ಸರ್ಕಾರದ ಅಂಗಳದಲ್ಲಿರುವುದು ‘ಒಂದು ಕಣ್ಣಿಗೆ ಬೆಣ್ಣೆ-ಮತ್ತೊಂದು ಕಣ್ಣಿಗೆ ಸುಣ್ಣ’ ಎಂಬ ಧೋರಣೆ, ಕಾಂಗ್ರೆಸ್ ಶಾಸಕರಿಗೆ “ಸಿಂಹಪಾಲು-ವಿರೋಧ ಪಕ್ಷದ ಶಾಸಕರಿಗೆ ಮೊಲದ ಪಾಲು” ಎಂಬಂತೆ ನಡೆದುಕೊಂಡಿದ್ದೀರಿ, ಸಂವಿಧಾನದ ಆಶಯ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಪಮಾನಿಸುವ ರೀತಿಯಲ್ಲಿ ನಿರ್ಧಾರ ಕೈಗೊಂಡಿದ್ದೀರಿ.

ನೀವು ರಾಜ್ಯಕ್ಕೆ ಮುಖ್ಯಮಂತ್ರಿ ಎನ್ನುವುದನ್ನು ಮರೆಯಬೇಡಿ, ವಿರೋಧ ಪಕ್ಷದ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಬೆಂಬಲಿಸಿದ ಮತದಾರರಿದ್ದಾರೆ ಎಂಬುದನ್ನು ನೀವು ಮರೆತಂತಿದೆ. ನಿಮ್ಮ ರಾಜಕಾರಣ ಹಾಗೂ ಕಾಂಗ್ರೆಸ್ ಪಕ್ಷದ ನಡವಳಿಕೆ ಮೋಸ, ಸಂಕುಚಿತ, ಅಸೂಯೆ ಹಾಗೂ ದ್ವೇಷ ಕಾರುವ ಪ್ರವೃತ್ತಿಯಿಂದ ಕೂಡಿದೆ ಎಂದು ಟೀಕಿಸಿದ್ದಾರೆ.
ಅಧಿಕಾರಕ್ಕೆ ಬಂದ ದಿನದಿಂದಲೂ ಅಭಿವೃದ್ಧಿಯ ಹಾದಿಯಲ್ಲಿ ಒಂದೇ ಒಂದು ಹೆಜ್ಜೆ ಇಡಲಾಗದ ನೀವು ಮುಖ್ಯಮಂತ್ರಿ ಸ್ಥಾನಕ್ಕೆ ಅಭದ್ರತೆಯ ಸ್ಥಿತಿ ಉದ್ಭವಿಸಿರುವ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಸ್ಥಾನ ಉಳಿಸಿಕೊಳ್ಳಲೇಬೇಕೆಂಬ ಹಠಕ್ಕೆ ಬಿದ್ದು ರಾಜನೀತಿಯನ್ನು ಗಾಳಿಗೆ ತೂರಿ ಸ್ವಜನ ಪಕ್ಷಪಾತದ ಸ್ವಾರ್ಥ ರಾಜಕಾರಣ ಮಾಡಲು ಹೊರಟಿದ್ದೀರಿ ಎಂದು ಬಿವೈ ವಿಜಯೇಂದ್ರ ಆರೋಪಿಸಿದ್ದಾರೆ.
ನಿಮ್ಮ ರಾಹುಲ್ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಪಕ್ಷ ಜನತಂತ್ರ ವ್ಯವಸ್ಥೆಯ ಸಂಸ್ಕಾರಗಳನ್ನು ಗೌರವಿಸುವ ಸಂಸ್ಕೃತಿಗೆ ತಿಲಾಂಜಲಿ ಬಿಟ್ಟಿದೆ. ಈ ಕಾರಣಕ್ಕಾಗಿಯೇ ಭಾರತದಲ್ಲಿ ನಿಮ್ಮ ಪಕ್ಷ ಬಹುತೇಕ ಮೂಲೋತ್ಪಾಟನೆಯಾಗಿದೆ. ಕರ್ನಾಟಕದಲ್ಲಿಯೂ ನಿಮ್ಮ ಕೆಟ್ಟ ಆಡಳಿತ ಹಾಗೂ ಸರ್ವಾಧಿಕಾರಿ ಧೋರಣೆಯ ವರ್ತನೆಯಿಂದಾಗಿ ನಿಮ್ಮ ಪಕ್ಷ ಮೂಲೆಗೆ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ.

‘ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದೆ’ ಎಂಬ ಮಾತು ನಿಮಗೆ ಅನ್ವಯಿಸುತ್ತದೆ, ಏಕೆಂದರೆ ಅಧಿಕಾರ ಬಿಟ್ಟುಕೊಡುವ ಅಂಚಿನಲ್ಲಿರುವ ನಿಮ್ಮನ್ನು ಅಸಹಿಷ್ಣುತೆ ಮುತ್ತಿಕೊಂಡಿದೆ, ಚರಿತ್ರೆಯಲ್ಲಿ ಈಗಾಗಲೇ ಸಾಕಷ್ಟು ಕಪ್ಪುಮಸಿ ಹಚ್ಚಿಕೊಂಡಿದ್ದೀರಿ, ಪ್ರಜಾಪ್ರಭುತ್ವದ ವ್ಯವಸ್ಥೆಗೆ ಅಪಚಾರ ಮಾಡಿದ ಅಪಕೀರ್ತಿ ಶಾಶ್ವತವಾಗಿ ನಿಮ್ಮನ್ನು ಬಾಧಿಸಲಿದೆ ಎಂಬ ಎಚ್ಚರಿಕೆ ನಿಮಗಿರಲಿ. ಈ ನಿಟ್ಟಿನಲ್ಲಿ ಜನರಿಂದ ಆಯ್ಕೆಯಾದ ಪ್ರತಿಯೊಬ್ಬ ಶಾಸಕರನ್ನು ಗೌರವದಿಂದ ಕಾಣಿ, ಪ್ರತಿ ಕ್ಷೇತ್ರದ ಅಭಿವೃದ್ಧಿಯೂ ಸಮಗ್ರ ಕರ್ನಾಟಕದ ಸಮೃದ್ಧತೆ ಮೆರೆಯಲಿದೆ ಎಂಬುದನ್ನು ನೀವು ಮರೆಯಬೇಡಿ, ನೀವು ಸಾಮಂತರೂ ಅಲ್ಲ, ಪಾಳೆಗಾರರೂ ಅಲ್ಲ, ಕರ್ನಾಟಕದ ಆರೂವರೆ ಕೋಟಿ ಜನರ ಮುಖ್ಯಮಂತ್ರಿ ಎಂಬ ಘನತೆಯ ಸ್ಥಾನಕ್ಕೆ ದಕ್ಕೆ ತಾರದಂತೆ ನಡೆದುಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.