ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷಕ್ಕೆ ಬಲಿಯಾದ ನಾಲ್ವರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 25 ಲಕ್ಷ ರೂಪಾಯಿಯನ್ನು ಪರಿಹಾರದ ರೂಪದಲ್ಲಿ ಘೋಷಣೆ ಮಾಡಿದೆ . ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹಾಗೂ ಮುಸ್ಲಿಂ ಸಮುದಾಯದ ಮೂವರು ಯುವಕರ ಕುಟುಂಬಕ್ಕೆ ಈ ಪರಿಹಾರ ಸಿಗಲಿದೆ.
ಮಂಗಳೂರಿನಲ್ಲಿ 2018ರ ಜನವರಿ ಮೂರರಂದು ಕೊಲೆಯಾದ ಕಾಟಿಪಳ್ಳದ ದೀಪಕ್ ರಾವ್, 2022ರ ಜುಲೈ 19ರಂದು ಮೃತಪಟ್ಟ ಬೆಳ್ಳಾರೆಯ ಮಸೂದ್,ಜುಲೈ 28ರಂದು ಕೊಲೆಯಾದ ಮಂಗಳಪೇಟೆಯ ಮಹಮ್ಮದ್ ಫಾಜಿಲ್, ಡಿಸೆಂಬರ್ 24ರಂದು ಹತ್ಯೆಗೀಡಾದ ಕಾಟಿಪಳ್ಳದ ಅಬ್ದುಲ್ ಜಲೀಲ್ ಕುಟುಂಬಕ್ಕೆ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಣೆಯಾಗಿದೆ.
ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 25 ಲಕ್ಷ ರೂ. ಪರಿಹಾರ ಘೋಷಣೆಯಾಗಿದ್ದು, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಪರಿಹಾರ ಘೋಷಿಸಲು ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜೂ.19ರಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಪರಿಹಾರ ಚೆಕ್ ಪಡೆಯಲು ಸಂಬಂಧಿಸಿದ ಕುಟುಂಬಗಳಿಗೆ ಸೂಚನೆ ನೀಡಲಾಗಿದೆ.