ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನ ಕಾಂಗ್ರೆಸ್ ಸಾಕಷ್ಟು ಭರವಸೆಗಳನ್ನು ನೀಡಿತ್ತು. ಈ ಹಿಂದಿನ ಬಿಜೆಪಿ ಸರ್ಕಾರ ಮಾಡಿರುವ ಭ್ರಷ್ಟಾಚಾರದ ಬಗ್ಗೆ ಕೂಲಂಕಷ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ತೇವೆ ಎಂದಿದ್ದರು. ಇದೀಗ ವಿರೋಧ ಪಕ್ಷದ ನಾಯಕನನ್ನೂ ಆಯ್ಕೆ ಮಾಡಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಬಿಜೆಪಿಗೆ ಸರ್ಕಾರ ಡಬಲ್ ಸ್ಟ್ರೋಕ್ ಕೊಟ್ಟಿದೆ. ನಿನ್ನೆಯಷ್ಟೇ ಬಿಟ್ ಕಾಯಿನ್ ಹಗರಣದ ಬಗ್ಗೆ ತನಿಖೆ ಮಾಡಲು ವಿಶೇಷ ತನಿಖಾ ತಂಡ ರಚನೆ ಮಾಡಿ ಆದೇಶ ಮಾಡಿದ್ದ ಸರ್ಕಾರ, ಇಂದು ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿದ್ದ ಆರೋಪದ ಬಗ್ಗೆ ತನಿಖೆ ನಡೆಸಲು ನ್ಯಾಯಾಂಗ ತನಿಖೆಗೆ ಆದೇಶ ಮಾಡುತ್ತಿದೆ. ಈ ಮೂಲಕ ಡಬಲ್ ಎಂಜಿನ್ ಸರ್ಕಾರ ಎನ್ನುತ್ತಿದ್ದ ಬಿಜೆಪಿ ಡಬಲ್ ಸ್ಟ್ರೋಕ್ ನೀಡಿದೆ.
ಹೇಗಿರಲಿದೆ ಬಿಟ್ ಕಾಯಿನ್ ಹಗರಣದ ತನಿಖೆ..!?
ಬಿಟ್ ಕಾಯಿನ್ ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡಿರುವ ರಾಜ್ಯ ಸರ್ಕಾರ, ಬಿಟ್ ಕಾಯಿನ್ ಪ್ರಕರಣದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವ್ಯಕ್ತಿಗಳು ಭಾಗಿಯಾಗಿರುವ ಸಾಧ್ಯತೆ ಇದೆ ಎನ್ನುವ ತಜ್ಞರ ಟೀಂ ರಚನೆ ಮಾಡಿದೆ. ಬಿಟ್ಕಾಯಿನ್ ಕೇಸ್ನಲ್ಲಿ ಭಾಗಿಯಾಗಿರುವ ಆರೋಪಿಗಳು ಸೈಬರ್ ವಿಷಯಗಳಲ್ಲಿ ಪರಿಣಿತರಾಗಿದ್ದು, ಬಿಟ್ ಕಾಯಿನ್ ಮತ್ತು ಡಾರ್ಕ್ ನೆಟ್ಗಳಲ್ಲಿ ವ್ಯವಹಾರ ಮಾಡಿರುವ ಮಾಹಿತಿ ಇದೆ. ಹೀಗಾಗಿ ಸಮಗ್ರವಾಗಿ ಪರಿಶೀಲಿಸಿ, ವಿಸ್ತೃತ ತನಿಖೆ ನಡೆಸುವ ಅವಶ್ಯಕತೆ ಇರುತ್ತದೆ. ಸಿಐಡಿ ಅಡಿಯಲ್ಲಿಯೇ ವಿಶೇಷ ತನಿಖಾ ತಂಡ ರಚಿಸುವ ಮೂಲಕ ತನಿಖೆ ಹೆಚ್ಚಿನ ತಾಂತ್ರಿಕ ಪರಿಣಿತಿವುಳ್ಳ ವಿಶೇಷ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ಎಡಿಜಿಪಿ ಮನೀಶ್ ಖರ್ಬೀಕರ್ ನೇತೃತ್ವದಲ್ಲಿ ಎಸ್ಐಟಿ ರಚಿಸಲಾಗಿದ್ದು, ತಂಡದಲ್ಲಿ ಸಿಐಡಿಯ ಆರ್ಥಿಕ ಅಪರಾಧ ವಿಭಾಗದ ಡಿಐಜಿ ಆಗಿರುವ ಕೆ. ವಂಶಿಕೃಷ್ಣ. ಡಿಸಿಪಿ ಅನೂಪ್ ಶೆಟ್ಟಿ, ಆರ್ಥಿಕ ಅಪರಾಧ ಮತ್ತು ಸೈಬರ್ ಕ್ರೈಮ್ನ ಶರತ್ರನ್ನು ಟೀಂಗೆ ಸೇರಿಸಲಾಗಿದೆ.
ಬಿಟ್ಕಾಯಿನ್ ತನಿಖೆಗೆ ನೋ ಟೈಂ ಲಿಮಿಟ್..
ಬಿಟ್ ಕಾಯಿನ್ ಪ್ರಕರಣದಲ್ಲಿ SIT ತಂಡ ಈಗಾಗಲೇ ತನಿಖೆ ಆರಂಭ ಮಾಡಿದೆ ಎಂದಿರುವ ಗೃಹ ಸಚಿವ ಡಾ ಜಿ ಪರಮೇಶ್ವರ್, SIT ತಂಡಕ್ಕೆ ಯಾವುದೇ ಸಮಯದ ಗಡುವು ನೀಡಿಲ್ಲ ಎಂದಿದ್ದಾರೆ. ಸಿಐಡಿ ಡಿಜಿಪಿ ಸಭೆ ನಡೆಸಿದ್ದು, ಯಾವೆಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಬೇಕು, ಈಗಾಗಲೇ ಕೋರ್ಟ್ಗೆ ಆರೋಪ ಪಟ್ಟಿ ಸಲ್ಲಿಕೆ ಆಗಿದ್ದು, ಕೋರ್ಟ್ ಅನುಮತಿ ಪಡೆದು ಮರು ತನಿಖೆ ಮಾಡುವುದು ಹೇಗೆ..? ವಿಶೇಷ ತನಿಖಾ ತಂಡದಲ್ಲಿ ಯಾವೆಲ್ಲಾ ಇನ್ಸ್ಪೆಕ್ಟರ್ಗಳನ್ನು ಸೇರಿಸಿಕೊಳ್ಳಬೇಕು..? ಎನ್ನುವ ಬಗ್ಗೆ ಚರ್ಚೆ ನಡೆಸಲಾಗಿದೆ. ಸೈಬರ್ ಕ್ರೈಂ ಮಾತ್ರವಲ್ಲದೆ, ಎಫ್ಎಸ್ಎಲ್ ತಜ್ಞರು, ತಾಂತ್ರಿಕ ನೈಪುಣ್ಯತೆ ಪಡೆದಿರುವ ಸಿಬ್ಬಂದಿ ವರ್ಗವನ್ನೇ ನಿಯೋಜನೆ ಮಾಡಿಕೊಂಡು ತನಿಖೆ ನಡೆಸುವ ನಿರ್ಧಾರ ಮಾಡಲಾಗಿದೆ. ಶೀಘ್ರದಲ್ಲೇ ಸಿಸಿಬಿ ತನಿಖಾ ವರದಿಯನ್ನು ಪಡೆದು ಎವಿಡೆನ್ಸ್, ಆರೋಪಿಗಳ ಹೇಳಿಕೆ, ಸಾಕ್ಷಿಗಳು ಕೊಟ್ಟ ಹೇಳಿಕೆಯನ್ನು ಮರು ಪರಿಶೀಲಿಸಲು ಯೋಜನೆ ಮಾಡಿಕೊಳ್ಳಲಾಗಿದೆ.
40 ಪರ್ಸೆಂಟ್ ವಿಚಾರದಲ್ಲಿ ನ್ಯಾಯಾಂಗ ತನಿಖೆ..!
ಬಿಜೆಪಿ ಸರ್ಕಾರದ 40 ಪರ್ಸೆಂಟ್ ಕಮಿಷನ್ ಪಡೆದ ಬಗ್ಗೆ ಆರೋಪ ಮಾಡಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ತನಿಖೆ ಮಾಡ್ತೇವೆ ಎಂದಿತ್ತು. ಅದರಂತೆ ನ್ಯಾಯಾಂಗ ತನಿಖೆಗೆ ಸಿಎಂ ಸಿದ್ದರಾಮಯ್ಯ ಶಿಫಾರಸು ಮಾಡಿದ್ದಾರೆ ಎನ್ನುವುದು ಪ್ರತಿಧ್ವನಿಗೆ ಸಿಕ್ಕಿರುವ ಮಾಹಿತಿ. ಈ ಬಗ್ಗೆ ಇಂದು ಸಿಎಂ ಅಧಿಕೃತ ಆದೇಶ ಹೊರಡಿಸಲಿದ್ದು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿದ್ದ ಆರೋಪದ ಬಗ್ಗೆ ನ್ಯಾಯಾಂಗ ತನಿಖೆ ಮಾಡಿಸಲಾಗ್ತಿದೆ. ಈ ಹಿಂದೆ ಸಿಎಂ ಸಿದ್ದರಾಮಯ್ಯ ವಿಪಕ್ಷ ಸ್ಥಾನದಲ್ಲಿ ಇದ್ದಾಗ ಸ್ವತಃ ಕೆಂಪಣ್ಣ ನೇತೃತ್ವದ ನಿಯೋಗ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತ್ತು. ಇದೀಗ ನ್ಯಾಯಾಂಗ ತನಿಖೆ ಸಂಬಂಧ ಸಿಎಂ ಆದೇಶ ಪ್ರತಿಗೆ ಸಿಎಂ ಸಿದ್ದರಾಮಯ್ಯ ಸಹಿ ಮಾಡಿದ್ದು, ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಲಿದ್ದಾರೆ ಎನ್ನಲಾಗ್ತಿದೆ.
ಕೃಷ್ಣಮಣಿ