ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಕುರಿತು ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಕಾಂಗ್ರೆಸ್ Vs ಬಿಜೆಪಿ ಹಗ್ಗಜಗ್ಗಾಟ ಇನ್ನೂ ಮುಗಿದಿಲ್ಲ. ಈ ಚರ್ಚೆಗೆ ಈಗ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
“ತುರ್ತುಪರಿಸ್ಥಿತಿಯ ಮೂಲಕ ಪ್ರಜಾಪ್ರಭುತ್ವಕ್ಕೆ ದ್ರೋಹ ಎಸಗಿದವರ ಹೆಸರನ್ನು ಯಾವುದೇ ಸರ್ಕಾರಿ ವ್ಯವಸ್ಥೆಗೆ ಇಡುವುದೇ ಈ ದೇಶದ ಪ್ರಜೆಗಳಿಗೆ ಮಾಡುವ ದ್ರೋಹ” ಎಂದು ಕ್ಯಾಂಟೀನ್‌ಗೆ ಇಂದಿರಾ ಗಾಂಧಿಯ ಹೆಸರಿಟ್ಟಿರುವುದನ್ನು ನಳಿನ್ ಕುಮಾರ್ ಕಟೀಲ್ ವಿರೋಧಿಸಿದ್ದಾರೆ.
“ಅನ್ನಪೂರ್ಣೇಶ್ವರಿ ಕ್ಯಾಂಟಿನ್ ಎಂದು ಹೆಸರಿಟ್ಟರೆ ಅಲ್ಪಸಂಖ್ಯಾತರಿಗೆ ಬೇಸರ ಆಗುತ್ತದೆ ಎಂದು ಹೆದರಿದ ಸಿದ್ದರಾಮಯ್ಯ, ಇಂದಿರಾ ಗಾಂಧಿ ಮೇಲೆ ಕಪಟ ಅಭಿಮಾನ ತೋರಿಸಲು ಹೊರಟಿದ್ದಾರೆ.” ಎಂದು ಕಟೀಲ್ ಹೇಳಿದ್ದಾರೆ.
ಈ ಮೊದಲು, ಸಿಟಿ ರವಿಯವರ ಹಿಂದಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಕಟುವಾಗಿ ಪ್ರತಿಕ್ರಿಯಿಸಿದ್ದರು. ಕ್ಯಾಂಟೀನ್ ಬದಲು ಬಾರ್, ಹುಕ್ಕಾ ಬಾರ್‌ಗಳಿಗೆ ಇಂದಿರಾ ಗಾಂಧಿ, ನೆಹರೂ ಅವರ ಹೆಸರಿಡಲಿ ಎಂಬ ಸಿಟಿ ರವಿ ಹೇಳಿಕೆಗೆ “ಯಾರಿಗೆ ಏನು ಪ್ರಿಯವೋ ಅದೇ ನೆನಪಾಗುತ್ತೆ. ನಮಗೆ ಬಡವರನ್ನು ಕಂಡಾಗ ತಿನ್ನುವ ಅನ್ನ ನೆನಪಾಗಿ ಇಂದಿರಾ ಕ್ಯಾಂಟೀನ್ ಮಾಡಿದ್ದೇವೆ. ಸಿಟಿ ರವಿ ಅವರಿಗೆ, ಅವರ ಆಸಕ್ತಿ-ಸಂಸ್ಕೃತಿಗೆ ತಕ್ಕ ಹಾಗೆ ಬಾರ್-ಹುಕ್ಕಾಬಾರ್ ನೆನಪಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಸಿಟಿ ರವಿಯನ್ನು ಅಬಕಾರಿ ಸಚಿವರಾಗಿ ಮಾಡಿ ಅವರ ಆಸೆ ಈಡೇರಿಸಬೇಕು.” ಎಂದು ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದರು.
ಇದೀಗ, ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ಸಿದ್ದರಾಮಯ್ಯ ಹೇಗೆ ಪ್ರತಿಕ್ರಿಯಿಸುತ್ತಾರೆಂದು ಕಾದು ನೋಡಬೇಕಿದೆ.
Also Read: ಕ್ಯಾಂಟೀನ್ ಅಲ್ಲ, ಇಂದಿರಾ ಬಾರ್, ನೆಹರು ಹುಕ್ಕಾಬಾರ್ ಬೇಕಾದರೆ ತೆರೆಯಲಿ: ಮತ್ತೆ ನಾಲಗೆ ಹರಿಬಿಟ್ಟ ಸಿ.ಟಿ. ರವಿ!
Also Read: ಸಿ.ಟಿ ರವಿ ನಾಲಿಗೆ ಬಿಗಿ ಹಿಡಿದು ಮಾತಾಡಲಿ: ರಾಮಲಿಂಗಾ ರೆಡ್ಡಿ