
ರಾಜ್ಯ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತ ಶಾಸಕರಲ್ಲಿ ಒಬ್ಬರಾಗಿರುವ ಶಾಸಕ ಬಿ.ಆರ್ ಪಾಟೀಲ್ ರಾಜೀನಾಮೆ ಸಲ್ಲಿಸಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ರಾಜೀನಾಮೆ ಪತ್ರ ನೀಡಿರುವ ಶಾಸಕ ಬಿ.ಆರ್.ಪಾಟೀಲ್, ಸರ್ಕಾರಿ ವಾಹನ, ಸವಲತ್ತು ಸೇರಿದಂತೆ ಎಲ್ಲವನ್ನೂ ವಾಪಾಸ್ ನೀಡಿದ್ದಾರೆ.
ಕಲಬುರಗಿ ಜಿಲ್ಲೆ ಆಳಂದ ಮತಕ್ಷೇತ್ರದ ಕಾಂಗ್ರೆಸ್ ಶಾಸಕ B. R ಪಾಟೀಲ್, ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದರು. ಆದರೆ ಸಚಿವ ಸ್ಥಾನ ಸಿಗದ ಬಳಿಕ ಸಿಎಂ ಸಲಹೆಗಾರ ಹುದ್ದೆ ನೀಡಲಾಗಿತ್ತು. ಈ ಹಿಂದೆ ರಾಜ್ಯ ಸರ್ಕಾರದ ವಿರುದ್ಧವೇ ಬಹಿರಂಗ ಪತ್ರ ಬರೆದಿದ್ದ B.R. ಪಾಟೀಲ್, ಸಚಿವರ ಕಾರ್ಯವೈಖರಿ ಬಗ್ಗೆ ಬಹಿರಂಗ ಪತ್ರ ಬರೆದು ಸಿಡಿದೆದ್ದಿದ್ದರು. ಆ ಬಳಿಕ ಸಿಎಂ ಸಲಹೆಗಾರ ಸ್ಥಾನ ನೀಡಲಾಗಿತ್ತು. ಇದೀಗ ರಾಜೀನಾಮೆ ಸಲ್ಲಿಸಿದ್ದಾರೆ.
ಸಿಎಂ ರಾಜಕೀಯ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಪರೋಕ್ಷವಾಗಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಜೆಟ್‌ನಲ್ಲಿ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಆಗದಿರೋದು ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದಲೂ ಸಮರ್ಪಕವಾಗಿ ಅನುದಾನ ಸಿಗುತ್ತಿಲ್ಲ. ಅನುದಾನ ಇಲ್ಲದೇ ಕ್ಷೇತ್ರದ ಅಭಿವೃದ್ಧಿ ಹೇಗೆ ಸಾಧ್ಯ..? ಅನ್ನೋದು ಬಿಆರ್ ಪಾಟೀಲ್ ಪ್ರಶ್ನೆಯಾಗಿದೆ.

ಬಿ ಆರ್ ಪಾಟೀಲ್ ರಾಜೀನಾಮೆ ವಿಚಾರಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಟುವಾಗಿ ಟೀಕೆ ಮಾಡಿದ್ದು, ರಾಜ್ಯ ಸರ್ಕಾರ ಅನುದಾನ ಕೊಡದಿದ್ದ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಅಧಿಕಾರಿಗಳು ಮಾತನ್ನ ಕೇಳಲ್ಲ ಎನ್ನುವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಬಿ ಆರ್ ಪಾಟೀಲ್‌ಗೆ ಮನವಿ ಮಾಡ್ತೇನೆ ಸಿದ್ದರಾಮಯ್ಯ ಮೇಲೆ ಮುಗಿ ಬೀಳ್ಬೇಡಿ. ಸಿಎಂ ಮಾತನ್ನೂ ಯಾರೂ ಕೇಳ್ತಾ ಇಲ್ಲ. ಬೀಡಾಡಿ ದನದ ಸರ್ಕಾರ ಇದು. ಮುಂದಿನ ದಿನಗಳಲ್ಲಿ ಈ ರೀತಿಯ ರಾಜೀನಾಮೆ ಹೆಚ್ಚಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.