ಮನುಜ ಸಮಾಜದ ಸ್ವಾಸ್ಥ್ಯ ಕಾಪಾಡಲು ಇರುವ ಒಂದೇ ಸಿದ್ಧೌಷಧ ಎಂದರೆ ಮಾನವೀಯತೆ ಮತ್ತು ಈ ಮಾನವೀಯತೆಯನ್ನು ರೂಪಿಸಬಹುದಾದ, ನಾವೇ ಕಟ್ಟಿಕೊಂಡ ಮತ್ತು ನಾವೇ ಪೋಷಿಸುವ ಕೆಲವು ಸಮಾಜೋ ಸಾಂಸ್ಕೃತಿಕ ಮೌಲ್ಯಗಳು. ಈ ಮೌಲ್ಯಗಳು ಕುಸಿಯುತ್ತಿರುವಂತೆಲ್ಲಾ ಮನುಜ ಸಂಬಂಧಗಳು ವ್ಯಾವಹಾರಿಕವಾಗುತ್ತಾ ಹೋಗುತ್ತವೆ. ಮಾರುಕಟ್ಟೆ ಅರ್ಥವ್ಯವಸ್ಥೆ ಪೋಷಿಸುವ ಗ್ರಾಹಕ ಸಂಸ್ಕೃತಿಯಲ್ಲಿ ಕೊಡು- ಕೊಳ್ಳುವಿಕೆಯ ಸುಳಿಗೆ ಸಿಲುಕಿಬಿಡುತ್ತದೆ. ಸಂಯಮ, ಸಂವೇದನೆ ಮತ್ತು ಸೂಕ್ಷ್ಮತೆ ಈ ಮೂರು ತಂತುಗಳಿಂದ ಕಡಿದುಕೊಂಡ ಒಂದು ವಿಕೃತ ವ್ಯವಸ್ಥೆಯನ್ನು ನಾವೇ ಪೋಷಿಸುತ್ತಾ ಬಂದಿದ್ದೇವೆ. ಇಂದು ಈ ವ್ಯವಸ್ಥೆಯ ಬ್ರಹ್ಮರಾಕ್ಷಸ ಸ್ವರೂಪವನ್ನು ಕಂಡು ಸ್ವತಃ ನಾವೇ ಬೆರಗಾಗುತ್ತಿದ್ದೇವೆ.
ಏಕೆ ಹೀಗಾಗಿದೆ ಎನ್ನುವ ಪ್ರಶ್ನೆ ಮನುಜ ಪ್ರಜ್ಞೆ ಇರುವ ಪ್ರತಿಯೊಬ್ಬರಲ್ಲೂ ಮೂಡಲು ಸಾಧ್ಯ , ಆದರೆ ಇದು ಹೀಗಾಗಿರುವುದಲ್ಲ, ಇರುವುದೇ ಹೀಗೆ ಎಂಬ ಅರಿವು ಎಷ್ಟು ಜನರಲ್ಲಿ ಮೂಡಿರಲು ಸಾಧ್ಯ ? ನಾವು ಬದುಕುತ್ತಿರುವುದು ಒಂದು ಲೌಕಿಕ ವ್ಯಾವಹಾರಿಕ ಪ್ರಪಂಚದಲ್ಲಿ. ಇಲ್ಲಿ ಎಲ್ಲವೂ ಬೇಕು-ಬೇಡ, ಒಪ್ಪಿತ-ತಿರಸ್ಕೃತ, ಅವಶ್ಯಕ-ಅನವಶ್ಯಕ, ಸಹಜ-ಅಸಹಜ ಹೀಗೆ ಯುಗ್ಮ ಪ್ರಶ್ನೆಗಳ ಸಂಘರ್ಷದಲ್ಲೇ ಅರ್ಥ ಕಂಡುಕೊಳ್ಳುತ್ತವೆ. ಸಾವಿರಾರು ವರ್ಷಗಳ ಭವ್ಯ ಪರಂಪರೆ, ಇತಿಹಾಸ ಇರುವ ಭಾರತೀಯ ಸಮಾಜ 21ನೆಯ ಶತಮಾನದಲ್ಲೂ ಸಹ ಇದೇ ಯುಗ್ಮ ಪ್ರಶ್ನೆಗಳ ನಡುವೆ ತನ್ನ ಆಧುನಿಕತೆಯ ಪೋಷಾಕು ಧರಿಸಿದೆ.
ಈ ಜಾತಿ ವ್ಯವಸ್ಥೆಯೂ ಶೂನ್ಯದಿಂದ ಉಧ್ವವಿಸಿದ ಒಂದು ವಿದ್ಯಮಾನವಲ್ಲ. ಈ ನೆಲದ ಮಣ್ಣಿನಲ್ಲೇ ಹುಟ್ಟಿ ಬೆಳೆದ ಒಂದು ಸಂಸ್ಕೃತಿಯನ್ನೇ ಮೈಗೂಡಿಸಿಕೊಂಡು ನಮ್ಮ ನಡುವಿನ ಅಸ್ಪೃಶ್ಯತೆ, ಜಾತಿ ತಾರತಮ್ಯ ಮತ್ತು ಜಾತಿ ದ್ವೇಷಗಳು ಉಗಮಿಸಿವೆ. ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಕುರಿತು ಪರಾಮರ್ಶೆ ನಡೆಸುವ ಸಂದರ್ಭಗಳಲ್ಲಿ ನಾವು ಬಾಹ್ಯ ಸಮಾಜದ ಅವಶ್ಯಕತೆಗೆ ಅನುಗುಣವಾದ ಕೆಲವು ಬದಲಾವಣೆಗಳನ್ನು ಹೆಚ್ಚಾಗಿ ಬಯಸುತ್ತೇವೆ. ಆಂತರಿಕವಾಗಿ ಕೊಳೆತುಹೋಗಿರುವ ಮನಸ್ಥಿತಿಯನ್ನು ಯಥಾಸ್ಥಿತಿಯಲ್ಲಿರಿಸಿಕೊಂಡೇ, ನಮ್ಮ ನಡುವಿನ ಭೇದಗಳನ್ನು, ತಾರತಮ್ಯಗಳನ್ನು ಹೋಗಲಾಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಹಾಗಾಗಿ ಅಂತರ್ಯದಲ್ಲಿ ಬೇರುಬಿಟ್ಟಿರುವ ಒಂದು ಮನಸ್ಥಿತಿ ಕ್ರಮೇಣ ಒಂದು ಬೃಹತ್ ಸಂಸ್ಕೃತಿಯಾಗಿ ಹೊರಹೊಮ್ಮುತ್ತದೆ. ನಾವು ಆ ಸಂಸ್ಕೃತಿಯ ದಾಸರಾಗಿಬಿಡುತ್ತೇವೆ. ಪ್ರಜ್ಞಾಪೂರ್ವಕವಾಗಿಯೇ ಸಂಕೋಲೆಗಳಲ್ಲಿ ಬಂದಿಯಾಗಿಬಿಡುತ್ತೇವೆ.
ಈ ಮನಸ್ಥಿತಿಯೇ ಇಡೀ ವ್ಯವಸ್ಥೆಯನ್ನೂ ಆವರಿಸಿರುತ್ತದೆ. ಸಹಿಷ್ಣುತೆ ನಮಗೆ ರಕ್ತಗತವಾಗಿ ಬಂದಿರುವ ಗುಣ ಎಂದು ಎದೆತಟ್ಟಿ ಹೇಳಿಕೊಳ್ಳುವ ಪ್ರತಿಯೊಬ್ಬರ ಮನಸಿನಲ್ಲೂ ಅಸಹಿಷ್ಣುತೆಯ ಒಂದು ಸೂಕ್ಷ್ಮ ತಂತು ಸದಾ ಜಾಗೃತವಾಗಿರುತ್ತದೆ. ಏಕೆಂದರೆ ಶ್ರೇಣೀಕೃತ ವ್ಯವಸ್ಥೆಯ ಗರ್ಭದಲ್ಲಿ ಬೆಳೆದಿರುವ ಶ್ರೇಷ್ಠತೆಯ ಅಹಮಿಕೆ ನಮ್ಮ ಸಾಮಾಜಿಕ ಬದುಕಿನ ಒಂದು ಭಾಗವಾಗಿರುತ್ತದೆ. ಈ ಅಹಮಿಕೆಯನ್ನು ಕಳೆದುಕೊಳ್ಳುವುದೆಂದರೆ ನಮ್ಮ ಅಸ್ತಿತ್ವವನ್ನೇ ಕಳೆದುಕೊಂಡಂತೆ ಎನ್ನುವ ಒಂದು ಮನೋಭಾವ ಈ ದೇಶದ ಜನಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಜಾತಿ ಅಥವಾ ಜಾತಿ ಅಸ್ಮಿತೆ ಎನ್ನುವುದು ಈ ಅಹಮಿಕೆಯನ್ನು ಪೋಷಿಸಿ, ಸಲಹುವ ಒಂದು ಬಲಿಷ್ಟ ಕೋಟೆಯಂತೆ ಕಾರ್ಯನಿರ್ವಹಿಸುತ್ತದೆ. ಡಾ. ಬಿ ಆರ್ ಅಂಬೇಡ್ಕರ್ ಅವರ ಜಾತಿ ವಿನಾಶದ ಪರಿಕಲ್ಪನೆಯನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ.
ನಮ್ಮ ಸಾಮಾಜಿಕ ಚೌಕಟ್ಟಿನಲ್ಲಿ ಕ್ರೌರ್ಯದ ಬೇರುಗಳಿವೆ. ನಮ್ಮ ಸಾಂಸ್ಕೃತಿಕ ಚರಿತ್ರೆಯಲ್ಲಿ ಕ್ರೌರ್ಯದ ಸುಳಿಗಳಿವೆ. ನಮ್ಮ ಸಾಮುದಾಯಿಕ ಬದುಕಿನಲ್ಲಿ ಕ್ರೌರ್ಯದ ಛಾಯೆ ಶಾಶ್ವತವಾಗಿ ನೆಲೆಸಿದೆ. ಒಂದು ರೀತಿಯಲ್ಲಿ ಇದು ಎಲ್ಲ ಸಮಾಜಗಳಲ್ಲೂ ಕಾಣುವ ಮಾನವ ಸಹಜ ಗುಣವೇ ಆದರೂ ನಮ್ಮ ನಡುವಿನ ಕ್ರೌರ್ಯ ಶ್ರೇಣೀಕರಣದ ಪ್ರಭಾವಕ್ಕೊಳಗಾಗಿದೆ. ಅಹಮಿಕೆಯ ಬಂಧನಕ್ಕೊಳಗಾಗಿದೆ ಮತ್ತು ಸಾಮಾಜಿಕ ಮೇಲು ಕೀಳುಗಳ ಸ್ತರದಲ್ಲಿ ಒಪ್ಪಿತ ಮತ್ತು ತಿರಸ್ಕೃತ ವ್ಯಾಖ್ಯಾನಗಳಿಗೆ ಒಳಗಾಗಿವೆ. ಹಾಗಾಗಿಯೇ ನಾವು ಕೆಲವು ಕ್ರೂರ ಪದ್ಧತಿಗಳನ್ನು, ಕ್ರೂರ ಸಂಪ್ರದಾಯಗಳನ್ನು ಮತ್ತು ಕೆಲವೊಮ್ಮೆ ಕ್ರೂರ ಮನಸ್ಥಿತಿಯನ್ನೂ ಸಹ ಸಹಜ-ಸ್ವಾಭಾವಿಕತೆಯ ಚೌಕಟ್ಟಿನಲ್ಲಿ ಒಪ್ಪಿಕೊಂಡುಬಿಡುತ್ತೇವೆ. ಮನುಸ್ಮೃತಿಯಂತಹ ವಿಕೃತಿಗಳು ಇಂತಹ ಮನಸ್ಥಿತಿಯನ್ನು ಪೋಷಿಸಿರುವುದೂ ಚಾರಿತ್ರಿಕ ಸತ್ಯ.
ಈ ಹಿನ್ನೆಲೆಯಲ್ಲಿ ನಾವು ನಮ್ಮ ನಡುವಿನ ಮತ್ತು ಸುತ್ತಲಿನ ಕ್ರೌರ್ಯವನ್ನು ಗಮನಿಸಬೇಕಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಆರೋಪಿ ಯುವಕನೊಬ್ಬನಿಗೆ ಪೊಲೀಸ್ ಅಧಿಕಾರಿಯೊಬ್ಬರು ಮೂತ್ರ ಕುಡಿಸಿರುವ ಪ್ರಕರಣ ಕರ್ನಾಟಕದ ಪ್ರಜ್ಞಾವಂತ ಸಮಾಜಕ್ಕೆ ಆಘಾತಕಾರಿಯಾಗಿ ಪರಿಣಮಿಸಿದೆ. ಮಾಮೂಲಿನಂತೆ ಸಾರ್ವಜನಿಕ ಪ್ರತಿಭಟನೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ಆಕ್ರೋಶಕ್ಕೆ ಮಣಿದು ಸರ್ಕಾರ ಸಂಬಂಧಪಟ್ಟ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಿದೆ. ನ್ಯಾಯಾನ್ಯಾಯಗಳ ಪ್ರಶ್ನೆ ಇತ್ಯರ್ಥವಾಗುವ ವೇಳೆಗೆ ಇಂತಹುದೇ ಮತ್ತೊಂದು ಪ್ರಕರಣ ದಾಖಲಾದರೂ ಅಚ್ಚರಿಪಡಬೇಕಿಲ್ಲ. ಏಕೆಂದರೆ ಭಾರತದ ಆಡಳಿತ ವ್ಯವಸ್ಥೆಯಲ್ಲಿ ಮನುಜ ಸೂಕ್ಷ್ಮತೆ ಎಂದೋ ಕಳೆದುಹೋಗಿದೆ.
ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿನ ಕ್ರೌರ್ಯ ಮತ್ತು ಈ ಕ್ರೌರ್ಯ ಅನಾವರಣಗೊಳ್ಳುವ ವಿವಿಧ ಸ್ತರಗಳು ಸ್ಪಷ್ಟವಾಗಿ ಕಾಣುತ್ತವೆ. ಒಂದು ದೇಶದ ರಾಜಕೀಯ ವ್ಯವಸ್ಥೆ ರೂಪುಗೊಳ್ಳುವುದು ಅಲ್ಲಿನ ಸಾಮಾಜಿಕ ಮತ್ತು ಸಾಂಸ್ಕೃತಿಯ ಪರಂಪರೆಯ ಭೂಮಿಕೆಯ ಮೇಲೆ. 73 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರವೂ ನಮ್ಮ ದೇಶದಲ್ಲಿ ಆಡಳಿತ ವ್ಯವಸ್ಥೆಯ ಕ್ರೌರ್ಯವನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲವೇಕೆ ? ಈ ಪ್ರಶ್ನೆ ನಮ್ಮನ್ನು ಕಾಡಬೇಕಿದೆ. ಈ ಪೊಲೀಸ್ ಅಧಿಕಾರಿಯ ಕೃತ್ಯ ಕಾನೂನು-ನ್ಯಾಯಾಂಗ ಮತ್ತು ನ್ಯಾಯಶಾಸ್ತ್ರಗಳನ್ನೂ ಮೀರಿದ ಒಂದು ಅಮಾನವೀಯ ವರ್ತನೆ. ಆದರೆ ಈತನಿಗೆ ಶಿಕ್ಷೆಯಾಗುವುದು ಕಾನೂನಿನ ಚೌಕಟ್ಟಿನಲ್ಲಿ ಮಾತ್ರ. ಪೊಲೀಸ್ ಅಧಿಕಾರಿಗೆ ಆರೋಪಿಯನ್ನು ದೈಹಿಕವಾಗಿ ದಂಡಿಸುವ ಅಧಿಕಾರ ಇದೆಯೋ ಅಲ್ಲವೋ ಅಥವಾ ಈ ರೀತಿಯ ಅಮಾನುಷ ಚಿತ್ರಹಿಂಸೆಗೆ ಪೊಲೀಸ್ ನಿಯಮಾವಳಿಗಳಲ್ಲಿ ಅವಕಾಶ ಇದೆಯೋ ಇಲ್ಲವೋ, ಈ ಪ್ರಶ್ನೆಗಳು ಇತ್ಯರ್ಥವಾಗುತ್ತವೆ.
ನಮ್ಮನ್ನು ಕಾಡಬೇಕಿರುವ ಪ್ರಶ್ನೆ ಈ ನ್ಯಾಯಶಾಸ್ತ್ರವನ್ನು ಮೀರಿದ್ದು. ಮಹಿಳೆಯೊಬ್ಬರ ಅಪಹರಣದ ಹಿನ್ನೆಲೆಯಲ್ಲಿ ಪುನೀತ್ ಎಂಬ ಯುವಕನ ಮೇಲೆ ಈ ದುಷ್ಕೃತ್ಯ ನಡೆದಿದೆ. ಈ ಯುವಕ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದಾನೆ. ಒಂದು ವೇಳೆ ಆರೋಪಿ ಸಾಮಾಜಿಕವಾಗಿ ಅಥವಾ ಆರ್ಥಿಕವಾಗಿ ಮೇಲ್ ಸ್ತರದ ಸಮಾಜಕ್ಕೆ ಸೇರಿದವನಾಗಿದ್ದಲ್ಲಿ ಇದೇ ಶಿಕ್ಷೆ ಕೊಡಲಾಗುತ್ತಿತ್ತೇ ? ಪೊಲೀಸ್ ನಿಯಮಾವಳಿಗಳ ಅನುಸಾರ ಆರೋಪಿಗಳಿಗೆ, ಅಪರಾಧಿಗಳಿಗೆ ದೈಹಿಕ ಚಿತ್ರಹಿಂಸೆ ನೀಡುವುದೇ ಅಪರಾಧ ಎಂದು ಹೇಳಲಾಗುತ್ತದೆ. ಆದರೆ ದಂಡನೆಯ ಅಧಿಕಾರವನ್ನು ನಮ್ಮ ವ್ಯವಸ್ಥೆಯೇ ಪೊಲೀಸರಿಗೆ ನೀಡಿದೆ. ಈ ಅಧಿಕಾರವನ್ನೇ ಪೊಲೀಸ್ ಕಾನೂನು ವ್ಯವಸ್ಥೆಯ ಆಚೆಗೂ ನಮ್ಮ ಸಮಾಜದಲ್ಲಿ ಕೆಲವು ಸಮುದಾಯಗಳಿಗೆ ನೀಡಲಾಗಿದೆಯಲ್ಲವೇ ? ಅಮಾಯಕರಿಗೆ ಮಲ ತಿನ್ನಿಸುವ ಎಷ್ಟೊಂದು ಹೇಯ ಕೃತ್ಯಗಳಿಗೆ ನಾವೇ ಸಾಕ್ಷಿಯಾಗಿದ್ದೇವೆ ಅಲ್ಲವೇ ?
ಏಕೆ ಹೀಗೆ ? ಒಂದು ದೇಶದ ರಾಜಕೀಯ ವ್ಯವಸ್ಥೆಯನ್ನು ಮತ್ತು ಈ ರಾಜಕೀಯ ಚೌಕಟ್ಟಿನಲ್ಲಿನ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವುದು ನಾವೇ ನಿರ್ಮಿಸಿಕೊಂಡಿರುವ ಸಾಮಾಜಿಕ ತಳಹದಿಗಳು. ಈ ತಳಹದಿಯನ್ನೇ ನಾವು ಕ್ರೌರ್ಯ, ಅಸಹನೆ, ಶ್ರೇಷ್ಠತೆ ಮತ್ತು ಅಹಮಿಕೆಯ ಇಟ್ಟಿಗೆಗಳನ್ನು ಬಳಸಿ ಸುಭದ್ರವಾಗಿ ನಿರ್ಮಿಸಿಬಿಟ್ಟಿದ್ದೇವೆ. ಈ ಅಡಿಪಾಯದ ಮೇಲೆ ನಿರ್ಮಿತವಾಗುವ ಸೌಧದಲ್ಲಿ ನಮ್ಮದೇ ಪ್ರತಿನಿಧಿಗಳು ಆಡಳಿತ ನಡೆಸುತ್ತಿದ್ದಾರೆ. ಇವರಿಗೆ ಕ್ರೌರ್ಯ ಮತ್ತು ಕಣ್ಣೀರು ಅಂತರ್ ಸಂಬಂಧಿತ ವಿದ್ಯಮಾನಗಳಾಗಿಬಿಡುತ್ತವೆ. ಚಿಕ್ಕಮಗಳೂರಿನ ಮೂತ್ರ ಕುಡಿಸಿದ ಪ್ರಕರಣ ಸಂವೇದನಾಶೀಲ ಮನಸುಗಳನ್ನು ಪ್ರಕ್ಷುಬ್ಧಗೊಳಿಸುತ್ತವೆ. ಈ ಮನಸುಗಳೇ ಅಪರಾಧಿಗೆ ಶಿಕ್ಷೆ ನೀಡುವಂತೆ ಒತ್ತಾಯಿಸುತ್ತವೆ.
ಆದರೆ ಕಾನೂನು ಪಾಲನೆಯ ದೃಷ್ಟಿಯಿಂದ ಆಡಳಿತ ವ್ಯವಸ್ಥೆಗೆ ಇದು ಮತ್ತೊಂದು ಘಟನೆ ಮಾತ್ರವಾಗುತ್ತದೆ. ಒಬ್ಬ ಪೊಲೀಸ್ ಅಧಿಕಾರಿಯ ವಜಾ, ಅಮಾನತು ಅಥವಾ ವರ್ಗಾವಣೆಯಲ್ಲಿ ಇಡೀ ಪ್ರಕರಣ ಪರ್ಯವಸಾನ ಹೊಂದುತ್ತದೆ. ಏಕೆಂದರೆ ಆಡಳಿತ ವ್ಯವಸ್ಥೆಗೆ ಮನುಜ ಸಂವೇದನೆ ಇರುವುದಿಲ್ಲ. ಸಂಯಮ, ಮನುಜ ಸೂಕ್ಷ್ಮತೆಗಳ ಪರಿವೆ ಇರುವುದಿಲ್ಲ. ಯಾವುದೋ ಒಂದು ಗ್ರಾಮದಲ್ಲಿ ದಲಿತ ಯುವಕನಿಗೆ ಮಲ ತಿನ್ನಿಸುವ ಘಟನೆ ನಡೆದಾಗಲೂ ಇದೇ ತಣ್ಣನೆಯ ಕ್ರೌರ್ಯವನ್ನು ಗಮನಿಸಬಹುದು. ಇಂತಹ ಘಟನೆಗಳು ನಮ್ಮ ಜನಪ್ರತಿನಿಧಿಗಳಿಗೆ ಕ್ಷುಲ್ಲಕ ಎನಿಸಿಬಿಡುತ್ತವೆ. ಪೊಲೀಸ್ ಅಧಿಕಾರಿ ಪ್ರಭಾವಿ ವಲಯದಲ್ಲಿ ಗುರುತಿಸಿಕೊಂಡಿದ್ದರೆ ಶಿಕ್ಷೆಯಿಂದಲೂ ಪಾರಾಗುತ್ತಾನೆ. ಚಾಮರಾಜ ನಗರದ 24 ಸಾವುಗಳು ನಮ್ಮ ಕಣ್ಣೆದುರಿನಲ್ಲೇ ಇದೆ.
ನಾವು ಕ್ರೌರ್ಯ ಮತ್ತು ಅಸೂಕ್ಷ್ಮತೆಯನ್ನು ಗುರುತಿಸಬೇಕಿರುವುದು ನಮ್ಮ ಆಡಳಿತ ವ್ಯವಸ್ಥೆಯಲ್ಲಿ. ಜಾತಿ ಶ್ರೇಣೀಕರಣ ಸೃಷ್ಟಿಸುವ ಶ್ರೇಷ್ಠತೆಯ ಅಹಮಿಕೆಯೇ ಅಧಿಕಾರ ರಾಜಕಾರಣದ ಮತ್ತು ಆಡಳಿತ ನಿರ್ವಹಣೆಯ ಶ್ರೇಷ್ಠತೆಯನ್ನೂ ಕಲ್ಪಿಸುತ್ತದೆ. ಸಾಂವಿಧಾನಿಕ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಪ್ರತಿನಿಧಿಸಿದರೂ ನಮ್ಮ ಆಳುವ ವರ್ಗಗಳು ಮೂಲತಃ ಈ ಶ್ರೇಷ್ಠತೆಯ ಅಹಮಿಕೆಯ ಚೌಕಟ್ಟಿನಲ್ಲೇ ಆಡಳಿತ ನಡೆಸುತ್ತಿರುವುದನ್ನೂ ಗಮನಿಸುತ್ತಿದ್ದೇವೆ. ಹಾಗಾಗಿಯೇ ಹಥ್ರಾಸ್, ಕಂಬಾಲಪಲ್ಲಿ, ಖೈರ್ಲಾಂಜಿ, ಊನ, ಕಥುವಾ ಮುಂತಾದ ಘಟನೆಗಳು ಮನುಜ ಸೂಕ್ಷ್ಮತೆಗೆ ನಿಲುಕದೆಯೇ ಕಾನೂನು ವ್ಯವಸ್ಥೆಯ ಚೌಕಟ್ಟಿಗೆ ಸಿಲುಕಿ ನಲುಗಿಹೋಗುತ್ತದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿನ ಮೇಲ್ ಸ್ತರದ ಅಹಮಿಕೆ ಕೆಳಸ್ತರದ ಅಮಾಯಕರಿಗೆ ಮಲ ತಿನ್ನಿಸುವುದರ ಮೂಲಕ ವ್ಯಕ್ತವಾದರೆ, ಆಡಳಿತ ವ್ಯವಸ್ಥೆಯಲ್ಲಿನ ಇದೇ ಅಹಮಿಕೆ ಸ್ಟಾನ್ ಸ್ವಾಮಿ, ಸಾಯಿಬಾಬಾ, ವರಾವರರಾವ್ ಮುಂತಾದವರ ಸಂದರ್ಭದಲ್ಲಿ ವ್ಯಕ್ತವಾಗುತ್ತದೆ.
ಈ ಎರಡೂ ಕ್ರೌರ್ಯಗಳನ್ನು ಸಮೀಕರಿಸುವುದು ತರವೇ ? ಖಂಡಿತವಾಗಿಯೂ ಸಮಂಜಸವೇ. ಏಕೆಂದರೆ ಇಲ್ಲಿ ಕ್ರೌರ್ಯ ಮೂಲ ಧಾತು. ಅನುಸರಿಸುವ ವಿಧಾನಗಳು ವಿಭಿನ್ನ. ತನ್ನೊಳಗಿನ ಜಾತಿ ಶ್ರೇಷ್ಠತೆಯ ಅಹಮಿಕೆ ಜಾಗೃತವಾಗದೆ ಹೋಗಿದ್ದರೆ ಗೋಣಿಬೀಡು ಠಾಣೆಯ ಪೊಲೀಸ್ ಅಧಿಕಾರಿ ದಲಿತ ಯುವಕನಿಗೆ ಮೂತ್ರ ಕುಡಿಯುವಂತೆ ಮಾಡುತ್ತಿರಲಿಲ್ಲ. ಇದೇ ಅಹಮಿಕೆಯೇ ಹಥ್ರಾಸ್ ಸಂತ್ರಸ್ಥೆಯ ಅರ್ಧರಾತ್ರಿಯ ದಹನದ ಬಗ್ಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಲ್ಲೂ ಜಾಗೃತವಾಗಿರುತ್ತದೆ, ಪ್ರಧಾನಿ ನರೇಂದ್ರ ಮೋದಿಯವರಲ್ಲೂ ಜಾಗೃತವಾಗಿರಬಹುದು. ಹಾಗಾಗಿಯೇ ಹಥ್ರಾಸ್ ಕುರಿತು ಆ ದಿವ್ಯ ಮೌನವನ್ನು ಕಾಣಲು ಸಾಧ್ಯ.
ಜಾತಿ ಶ್ರೇಷ್ಠತೆಯ ಅಹಮಿಕೆ ಅಧಿಕಾರ ರಾಜಕಾರಣದಲ್ಲಿ ಹೀಗೆಯೇ ವ್ಯಕ್ತವಾಗುತ್ತದೆ. ಶ್ರೇಣೀಕೃತ ವ್ಯವಸ್ಥೆ ಅಧಿಕಾರ ಮೇಲರಿಮೆಯನ್ನು ಹೀಗೆಯೇ ಸೃಷ್ಟಿಸುತ್ತದೆ. ಈ ಮನಸ್ಥಿತಿಗೆ ಶೂದ್ರರಾದಿಯಾಗಿ ಎಲ್ಲರೂ ಬಲಿಯಾಗಿರುವುದನ್ನೂ ಕಾಣುತ್ತಿದ್ದೇವೆ. ನಮ್ಮಲ್ಲಿ ಅಂತರ್ಗತವಾಗಿರುವ ಈ ಕ್ರೌರ್ಯವೇ ನಮ್ಮ ತಣ್ಣನೆಯ ಮೌನಕ್ಕೂ ಕಾರಣವಾಗುತ್ತದೆ. ಹಾಗಾಗಿಯೇ ಅಸಂಖ್ಯಾತ ಸಾವುಗಳೂ ನಮ್ಮನ್ನು ವಿಚಲಿತಗೊಳಿಸುವುದಿಲ್ಲ. ಸಾವಿನ ಹಿಂದಿರುವ ಕಾರಣಗಳು ನಮ್ಮ ಮನಸುಗಳನ್ನು ಪ್ರಕ್ಷುಬ್ಧಗೊಳಿಸುತ್ತವೆ. ಅಥವಾ ಮೃತಾತ್ಮರ ಅಸ್ಮಿತೆಗಳು ನಮ್ಮ ಪ್ರಜ್ಞೆಯನ್ನು ಬಡಿದೆಬ್ಬಿಸುತ್ತವೆ. ಇಲ್ಲಿ ಜೀವ ನಗಣ್ಯವಾಗಿಬಿಡುತ್ತದೆ. ಈ ಜೀವ ಪ್ರೀತಿಗಾಗಿ ಹಂಬಲಿಸುವ ಮನಗಳು ಅಮಾಯಕರ ಸಾವು ನೋವುಗಳಿಗೆ ಮಿಡಿಯುತ್ತಲೇ ಇರುತ್ತವೆ.
ಈ ಮಿಡಿಯುವ ಮನಗಳ ಮೂಲಕವೇ ನಾವು ಅಂಬೇಡ್ಕರ್ ಕನಸಿನ, ಗಾಂಧಿ ಕನಸಿನ ಸಮ ಸಮಾಜವನ್ನು ಕಟ್ಟಲು ಮುನ್ನಡೆಯಬೇಕಿದೆ. ಮಲ ತಿನ್ನಿಸುವ, ಮೂತ್ರ ಕುಡಿಸುವ, ಚರ್ಮ ಸುಲಿಯುವ, ಜೀವಂತ ದಹನ ಮಾಡುವ, ಮಧ್ಯರಾತ್ರಿ ಶವ ಸಂಸ್ಕಾರ ಮಾಡುವ ಎಲ್ಲ ಪ್ರಕ್ರಿಯೆಗಳಲ್ಲೂ ಒಂದೇ ಸಾಮಾಜಿಕ ನೆಲೆಯನ್ನು, ಸಾಂಸ್ಕೃತಿಕ ಛಾಯೆಯನ್ನು ಕಾಣಬಹುದಲ್ಲವೇ ? ಈ ಸಾಮಾಜಿಕ ನೆಲೆಯನ್ನು ಅಸ್ಥಿರಗೊಳಿಸುವುದು ನಮ್ಮ ಆದ್ಯತೆಯಾಗಬೇಕಿದೆ. ಈ ಸಾಂಸ್ಕೃತಿಕ ಚೌಕಟ್ಟನ್ನು ಭಂಗಗೊಳಿಸುವುದು ನಮ್ಮ ಧ್ಯೇಯವಾಗಬೇಕಿದೆ. ಪ್ರಸ್ತುತ ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸದೆ, ಅಧಿಕಾರ ರಾಜಕಾರಣದ ಸಂಕೋಲೆಗಳನ್ನು ನಮ್ಮನ್ನು ನಾವೇ ಬಂಧಿಸಿಕೊಂಡು, ಈ ಸಮಾಜದಲ್ಲಿ ಬೇರೂರಿರುವ ಸಾಂಸ್ಕೃತಿಕ ಶ್ರೇಷ್ಠತೆಯ ಅಹಮಿಕೆಯ ವಿರುದ್ಧ ಹೋರಾಡುತ್ತೇವೆ ಎನ್ನುವುದು ಆತ್ಮವಂಚಕ ಸ್ವಾರ್ಥರಾಜಕಾರಣದ ಮತ್ತೊಂದು ಆಯಾಮ. ಅಧಿಕಾರ ರಾಜಕಾರಣದ ಫಲಾನುಭವಿಗಳಿಗೆ ಇದು ಅರ್ಥವಾಗಬೇಕಷ್ಟೆ.
ಕಂಬಾಲಪಲ್ಲಿಯಿಂದ ಗೋಣಿಬೀಡಿನವರೆಗೆ, ತ್ಸುಂಡೂರಿನಿಂದ ಹಥ್ರಾಸ್‍ವರೆಗೆ, ನಮ್ಮೊಳಗಿನ ಆಂತರಿಕ ಕ್ರೌರ್ಯದ ವಿಭಿನ್ನ ಅವತಾರಗಳನ್ನು ಕಂಡಿದ್ದೇವೆ. ಇದು ಶ್ರೇಷ್ಠತೆಯ ವ್ಯಸನ ಮತ್ತು ಮೇಲ್ ಸ್ತರದ ಅಹಮಿಕೆಯ ಫಲ. ಪ್ರತಿಯೊಬ್ಬ ನಾಗರಿಕನಿಗೂ, ವಿಶೇಷವಾಗಿ ಪ್ರತಿಯೊಬ್ಬ ಜನಸೇವಕರಿಗೂ ಈ ಸೂಕ್ಷ್ಮ ಸಂವೇದನೆಗಳನ್ನು ಮನಮುಟ್ಟುವಂತೆ ಅರ್ಥಮಾಡಿಸುವ ನಿಟ್ಟಿನಲ್ಲಿ ನಾವು ಮುನ್ನಡೆಯಬೇಕಿದೆ.