ನಿರ್ಮಾಪಕ ಕೆ.ಮಂಜು ಅವರ ಪುತ್ರ, ಯುವನಟ ಶ್ರೇಯಸ್ ಮಂಜು ಅಭಿನಯದ ವಿಷ್ಣುಪ್ರಿಯ ಚಿತ್ರ ಬಿಡುಗಡೆಯ ಸಿದ್ದತೆಯಲ್ಲಿದೆ. ಅದರ ಬೆನ್ನಲ್ಲೇ ಶ್ರೇಯಸ್ ತಮ್ಮ ಮುಂದಿನ ವರ್ಷ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿತ್ರೀಕರಿಸಲಾದ ಆಕ್ಷನ್ ಚಿತ್ರಕ್ಕಾಗಿ ಸಿದ್ದತೆ ನಡೆಸಿದ್ದಾರೆ. ಕಳೆದ ಎರಡು ವಾರಗಳಿಂದ ಅಮೆರಿಕಾದ ಚಿಕಾಗೋ ಮತ್ತು ನ್ಯೂಯಾರ್ಕ್‌ನ ಫಿಲಂ ಸಿಟಿಯ ವಿವಿಧ ನಟನಾ ಶಾಲೆಗಳಲ್ಲಿ ಮಾಸ್ಟರ್ ಕ್ಲಾಸ್ ತರಬೇತಿ ಪಡೆಯುತ್ತಿದ್ದಾರೆ.
ಕೆಲವು ಪಾರ್ಕರ್ ಮತ್ತು ಹೊಸ ಆಕ್ಷನ್ ತಂತ್ರಗಳ ಬಗ್ಗೆ ತರಬೇತಿ ಪಡೆಯುತ್ತಿರುವ ಶ್ರೇಯಸ್, ಅಲ್ಲಿನ ಹೊಸ ಜಾಗ, ಜನರ ಜೊತೆಗಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ತೊಡಗಿರುವ ಹೊಸ ವ್ಯಕ್ತಿಗಳ ಭೇಟಿ, ಅವರ ಜತೆಗಿನ ಚರ್ಚೆಗಳಿಂದ ನನಗೆ ಹೊಸ ಉತ್ಸಾಹ ಬಂದಿದೆ. ಚಿತ್ರರಂಗದಲ್ಲಿ ದಿನೇ ದಿನೇ ಹೊಸತನದ ಅವಿಷ್ಕಾರವಾಗುತ್ತಿದೆ. ಕಲಾವಿದರಾಗಿ ನಾವೂ ಕೂಡ ಹೊಸತನವನ್ನು ಕಲಿಯಬೇಕಿದೆ. ಆ ನಿಟ್ಟಿನಲ್ಲಿ ತುಂಬಾ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಎಸ್. ನಾರಾಯಣ್ ಅವರ ನಿರ್ದೇಶನದಲ್ಲಿ ದುನಿಯಾ ವಿಜಯ್ ಮತ್ತು ಶ್ರೇಯಸ್ ಮಂಜು ಕಾಂಬಿನೇಶನ್, ಚಿತ್ರದ ಕೆಲಸವೂ ಪ್ರಗತಿಯಲ್ಲಿದೆ. ವಿಷ್ಣು ಪ್ರಿಯಾ ಚಿತ್ರ ಬಿಡುಗಡೆಯಾದ ನಂತರ ಶೀಘ್ರದಲ್ಲೇ ಈ ಸಿನಿಮಾ ಬಗ್ಗೆ ಘೋಷಿಸುತ್ತೇವೆ ಎಂದೂ ಶ್ರೇಯಸ್ ಹೇಳಿದ್ದಾರೆ.