ಭಾರತವನ್ನು ಮತ್ತು ಭಾರತೀಯರ ಮನಸುಗಳನ್ನು ದಟ್ಟವಾಗಿ ಆವರಿಸಿರುವ ಸಾಂಸ್ಕೃತಿಕ ರಾಜಕಾರಣದ ಸೂಕ್ಷ್ಮ ನೆಲೆಗಳು ಈಗ ಸಮಸಮಾಜದ ಅಡಿಪಾಯವನ್ನೇ ಅಲುಗಾಡಿಸುವಂತೆ ಕಾಣುತ್ತಿದೆ. ಮತ, ಧರ್ಮ ಮತ್ತು ಧಾರ್ಮಿಕ ಆಚರಣೆಗಳು ಜನಸಾಮಾನ್ಯರ ನಿತ್ಯ ಜೀವನದಲ್ಲಿ ಬಹುದೊಡ್ಡ ತೊಡಕಿನಂತೆ ಕಾಣತೊಡಗಿವೆ. ಅಸ್ಮಿತೆಗಳ ಮೂಲಕವೇ ಮಾನವ ಸಮಾಜದಲ್ಲಿ ಅಸ್ತಿತ್ವವನ್ನು ಗುರುತಿಸಿಕೊಳ್ಳುವ ಒಂದು ಸಾಂಸ್ಕೃತಿಕ ಅನಿವಾರ್ಯತೆಯನ್ನು ನಾವೇ ನಮ್ಮ ಸುತ್ತಲೂ ನಿರ್ಮಿಸಿಕೊಂಡುಬಿಟ್ಟಿದ್ದೇವೆ ಎನಿಸುತ್ತದೆ. ಸ್ವಾತಂತ್ರ್ಯಾನಂತರದಲ್ಲಿ ಭಾರತವನ್ನು ಒಂದು ಜಾತ್ಯತೀತ ರಾಷ್ಟ್ರವನ್ನಾಗಿ ರೂಪಿಸುವ ಕನಸು ಕಂಡ ಡಾ ಬಿ ಆರ್ ಅಂಬೇಡ್ಕರ್, ಗಾಂಧಿ, ನೆಹರೂ ಮತ್ತಿತರ ನೇತಾರರಿಗೆ ಜಾತ್ಯತೀತತೆ ಕೇವಲ ಒಂದು ರಾಜಕೀಯ ಘೋಷಣೆ ಅಥವಾ ಸಾಧನವಾಗಿ ಕಂಡಿರಲಿಲ್ಲ. ಅದು ಭಾರತವನ್ನು ಕುವೆಂಪು ಕವಿವಾಣಿಯಂತೆ “ಸರ್ವ ಜನಾಂಗದ ಶಾಂತಿಯ ತೋಟ”ವನ್ನಾಗಿ ರೂಪಿಸುವ ಮಾರ್ಗವಾಗಿ ಕಂಡಿತ್ತು.
ಸ್ವತಂತ್ರ ಭಾರತದ ಸಾರ್ವಭೌಮ ಪ್ರಜೆಗಳು ತಮ್ಮ ನಿತ್ಯ ಜೀವನದಲ್ಲಿ ವ್ಯಕ್ತಿಗತ ನೆಲೆಯಲ್ಲಿ ಯಾವುದೇ ಒಂದು ನಿರ್ದಿಷ್ಟ ಮತ, ಧರ್ಮ, ಅಥವಾ ಜಾತಿಯ ನೆಲೆಗಳಲ್ಲಿ ಗುರುತಿಸಿಕೊಂಡರೂ, ಸಾಮಾಜಿಕ ನೆಲೆಯಲ್ಲಿ ಎಲ್ಲವನ್ನೂ ಬದಿಗಿಟ್ಟು, ಒಂದು ಮಾನವೀಯ ಸಮ ಸಮಾಜವನ್ನು ಕಟ್ಟುವ ಕನಸಿನೊಂದಿಗೇ ಭಾರತದ ಸಂವಿಧಾನವನ್ನೂ ರಚಿಸಲಾಗಿದೆ. ವಿಭಿನ್ನ ಕಾರಣಗಳಿಗಾಗಿ ಜಾತ್ಯತೀತ ಮೌಲ್ಯಗಳು ರಾಜಕೀಯ ಪರಿಷ್ಕರಣೆಗೊಳಪಟ್ಟು, ವಿಕೃತವಾಗಿರುವುದು ದಿಟವೇ ಆದರೂ, ಸಂವಿಧಾನ ಶಿಲ್ಪಿಗಳ ಉನ್ನತ ಧ್ಯೇಯಗಳು ಮತ್ತು ಜಾತ್ಯತೀತೆಯ ಮೌಲ್ಯಗಳು ಶಿಥಿಲವಾಗದಂತೆ ನೋಡಿಕೊಳ್ಳುವ ನೈತಿಕ ಹೊಣೆಗಾರಿಕೆ ಈ ದೇಶದ ಜನತೆಯ ಮೇಲಿದೆ, ಯುವ ಪೀಳಿಗೆಯ ಮೇಲಿದೆ. ಕಾನೂನು ನಿಯಮಗಳ ಮೂಲಕ ಜಾತ್ಯತೀತತೆಯನ್ನು ಜನಜೀವನದಲ್ಲಿ ಅಳವಡಿಸಲಾಗುವುದಿಲ್ಲವಾದರೂ ಭಾರತದ ಸಂವಿಧಾನದಲ್ಲಿ ಆಳುವ ಪ್ರಭುತ್ವವು ಒಂದು ಸಮ ಸಮಾಜವನ್ನು ನಿರ್ಮಿಸುವ ಹಾದಿಯಲ್ಲಿ ಹೇಗೆ ಜಾತ್ಯತೀತ ಮೌಲ್ಯಗಳನ್ನು ಸಂರಕ್ಷಿಸಬೇಕು ಎನ್ನುವುದಕ್ಕೆ ಸಾಕಷ್ಟು ಮಾರ್ಗದರ್ಶಿ ಸೂತ್ರಗಳನ್ನು ನೀಡುತ್ತದೆ.
ಎಲ್ಲ ಮತಗಳನ್ನೂ, ಎಲ್ಲ ರೀತಿಯ ಧಾರ್ಮಿಕ ಆಚರಣೆಗಳನ್ನೂ ಸಮಾನವಾಗಿ ನೋಡುವ ಆಳುವ ವರ್ಗಗಳ ಜಾತ್ಯತೀತ ನಿಲುವುಗಳು ಈಗಾಗಲೇ ಸಾಕಷ್ಟು ಭಗ್ನವಾಗಿದ್ದು ಕಳೆದ ಏಳು ವರ್ಷಗಳಲ್ಲಿ ಈ ಅನುಕೂಲಕರ ಪರಿಕಲ್ಪನೆಯನ್ನೇ ಅಲ್ಲಗಳೆಯುವ ಪ್ರಯತ್ನಗಳು ನಡೆಯುತ್ತಿವೆ. ಈ ಸಮಾನವಾಗಿ ನೋಡುವ ಹಾದಿಯಲ್ಲೇ ಎಲ್ಲ ಮತಾಚರಣೆಗಳನ್ನು ಮತ್ತು ಧಾರ್ಮಿಕ ಕಟ್ಟಳೆಗಳನ್ನು ಸಮಾನವಾಗಿ ಮಾನ್ಯ ಮಾಡುವ ಒಂದು ಪ್ರವೃತ್ತಿಯೂ ಭಾರತದ ಜಾತ್ಯತೀತ ಪರಂಪರೆಯಲ್ಲಿ ಬೆಳೆದುಬಂದಿದೆ. ಮತಾಚರಣೆಗಳು ಮತ್ತು ಧಾರ್ಮಿಕ ಆಚಾರ ವಿಚಾರಗಳನ್ನು ವೈಜ್ಞಾನಿಕವಾಗಿ ಪರಾಮರ್ಶಿಸಿ, ವೈಚಾರಿಕ ಮನೋಭಾವದ ನೆಲೆಯಲ್ಲಿ ನಿಷ್ಕರ್ಷೆ ಮಾಡುವ ಒಂದು ವಿವೇಕಯುತ ಮಾರ್ಗವನ್ನು ಅನುಸರಿಸುವುದರ ಮೂಲಕ ನಾಗರಿಕರ ನಿತ್ಯ ಜೀವನದಲ್ಲಿ ಸಮಾನತೆಯ ಆಶಯಗಳನ್ನು ಸಾಧಿಸುವುದು ಸಾಧ್ಯ. ಈ ವೈಚಾರಿಕತೆಗೆ ಮತ್ತು ವೈಜ್ಞಾನಿಕ ಧೋರಣೆಗೆ ಮತಾಚರಣೆ ಮತ್ತು ಶಾರ್ಮಿಕ ಕಟ್ಟುಪಾಡುಗಳೇ ತೊಡಕಾಗಿ ಪರಿಣಮಿಸಿವೆ.

ತಾವು ವಿಧಿಸುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಟ್ಟಳೆಗಳು, ಹೇರುವ ಆಚರಣಾತ್ಮಕ ವಿಧಿ ವಿಧಾನಗಳು ಸದಾ ಕಾಲಕ್ಕೂ ಶ್ರೇಷ್ಠವಾದುದು ಎಂಬ ಅಹಮಿಕೆಯೊಂದಿಗೇ ಹಿಂದೂ, ಇಸ್ಲಾಂ ಮತ್ತು ಕ್ರೈಸ್ತ ಮತಗಳು ಜನಸಾಮಾನ್ಯರನ್ನು ಆಕರ್ಷಿಸುತ್ತವೆ. ಈ ಶ್ರೇಷ್ಠತೆಯ ಮೇಲರಿಮೆಯ ಪರಿಣಾಮವಾಗಿಯೇ ಅನ್ಯಮತಗಳನ್ನು ನಿಕೃಷ್ಟವಾಗಿ ನೋಡುವ ಮನೋಭಾವವನ್ನೂ ಅಂತರ್ಗತವಾಗಿರುವಂತೆ ಬೆಳೆಸಲಾಗುತ್ತದೆ. ಆಚರಣೆಗಳಿಂದಾಚೆಗೂ ಒಂದು ಮತ ಬದುಕುಳಿಯಲು ಸಾಧ್ಯ ಎನ್ನುವ ವಾಸ್ತವವನ್ನು ಮನಗಾಣಲು ಒಪ್ಪದ ಎಲ್ಲ ಮತಗಳ ಸಾಂಸ್ಥಿಕ ನೆಲೆಗಳು ತಮ್ಮ ಮತೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಆಚರಣೆಗಳ ಮೂಲಕ, ವಿಧಿವಿಧಾನಗಳ ಮೂಲಕ ಅಸ್ಮಿತೆಯ ಚಿಹ್ನೆಗಳನ್ನು ಹೇರಲಾರಂಭಿಸುತ್ತವೆ. ಈ ಚಿಹ್ನೆಗಳನ್ನೊಪ್ಪದ ಮನಸುಗಳು ಬಹಿಷ್ಕೃತವಾಗುವ ಸಂಭವವೂ ಇತ್ತೀಚೆಗೆ ಹೆಚ್ಚಾಗುತ್ತಿದೆ. ಮತಾಚರಣೆಯನ್ನೊಪ್ಪದ ಮತ್ತು ಧಾರ್ಮಿಕ ಕಟ್ಟಳೆಗಳನ್ನು ವಿರೋಧಿಸುವ ಒಂದು ಹೊಸ ಪೀಳಿಗೆ ಎಲ್ಲ ಕಾಲಘಟ್ಟದಲ್ಲೂ ತನ್ನ ಗಟ್ಟಿ ಧ್ವನಿಯನ್ನು ದಾಖಲಿಸುತ್ತಲೇ ಬಂದರೂ, ಈ ಧ್ವನಿಗಳನ್ನು ಅಡಗಿಸುವ ಸಲುವಾಗಿಯೇ ಸಾಂಸ್ಕೃತಿಕ ರಾಜಕಾರಣವು ಅಸ್ಮಿತೆ ಆಧಾರಿತ ಸಾಮಾಜಿಕ-ಸಾಂಸ್ಕೃತಿಕ ಚೌಕಟ್ಟುಗಳನ್ನು ನಿರ್ಮಿಸುತ್ತಾ ಬಂದಿದೆ.
ತಮ್ಮ ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಉಪನ್ಯಾಸದಲ್ಲಿ ರಾಷ್ಟ್ರಕವಿ ಕುವೆಂಪು “ ಮತ ನಮಗೊಂದು ದೊಡ್ಡ ಬಂಧನವಾಗಿದೆ, ನಾಡಿನ ಏಳ್ಗೆಯ ಕುತ್ತಿಗೆಗೆ ಉರುಳಾಗಿದೆ,,,, ಈಗ ನಾವು ಮತ ಎಂದು ಕರೆದುಕೊಳ್ಳುವ ಆಚಾರ ಸಮೂಹ ಬರಿಯ ಸಾಮಾಜಿಕ ಕಟ್ಟಳೆಗಳ ಕಾಟವಾಗಿದೆ ,,,” ಎಂದು ಹೇಳುತ್ತಲೇ ತಮ್ಮ ವಿಶ್ವಮಾನವ ಸಂದೇಶವನ್ನು ಸಾರುತ್ತಾರೆ. ಇದೇ ಉಪನ್ಯಾಸದಲ್ಲಿ ಕುವೆಂಪು ಅವರು “ ಮತೀಯ ಮತ್ತು ಸಾಮಾಜಿಕ ಅಂಧಶ್ರದ್ಧೆ ಮತ್ತು ಅಂಧಾಚಾರಗಳಿಂದ ನಾವು ಪಾರಾಗದಿದ್ದರೆ ನಮಗೆ ಉಳಿಗಾಲವಿಲ್ಲ,,,,, ಮತಾಂಧತೆ, ಮತಭ್ರಾಂತಿ, ಮತದ್ವೇಷ ಮತ್ತು ಮತಸ್ವಾರ್ಥತೆ ಇವು ವೈಜ್ಞಾನಿಕ ದೃಷ್ಟಿ ಮತ್ತು ವಿಚಾರವಾದಕ್ಕೆ ಕೊಟ್ಟ ಕೊಡಲಿ ಪೆಟ್ಟು ,,,,,” ಎಂದು ಹೇಳುತ್ತಾರೆ. ಮತಶ್ರದ್ಧೆಗೂ, ಮತಾಚರಣೆಗೂ ಮತ್ತು ಮತೀಯ ಭಾವನೆಗಳಿಗೂ ಇರುವ ಸೂಕ್ಷ್ಮ ಎಳೆಯ ಅಂತರವನ್ನು ಗ್ರಹಿಸದೆ ಹೋದರೆ ಯಾವುದೇ ಮತ ಆದರೂ ಮತಾಂಧರ ತಂಗುದಾಣವಾಗಿಬಿಡುತ್ತದೆ. ಜಾತ್ಯತೀತೆಯ ಮೌಲ್ಯಗಳನ್ನೂ ಈ ನೆಲೆಯಲ್ಲೇ ಗ್ರಹಿಸಬೇಕಲ್ಲವೇ ?
ಮತಶ್ರದ್ಧೆ ಹೆಚ್ಚಾದಂತೆಲ್ಲಾ ಮತಾಚರಣೆಯಲ್ಲಿರಬಹುದಾದ ಅಥವಾ ಧಾರ್ಮಿಕ ಆಚರಣೆಗಳಲ್ಲಿರಬಹುದಾದ ಅವೈಚಾರಿಕತೆಯನ್ನು ಅನುಸರಿಸುವ ಜನಸಮುದಾಯಗಳ ಮೇಲೆ ಹೇರುವ ಒಂದು ಪ್ರವೃತ್ತಿಯನ್ನು ಸಾಂಸ್ಥಿಕ ಮತಗಳಲ್ಲಿ ಕಾಣಬಹುದು. ಸಾಂಸ್ಥಿಕವಲ್ಲದ ಹಿಂದೂ ಮತದಲ್ಲೂ ಸಹ ವೈದಿಕ ಆಚರಣೆಗಳ ಮೂಲಕ, ಕಟ್ಟಳೆಗಳ ಮೂಲಕ, ನಂಬಿಕೆಗಳ ಮೂಲಕ ಈ ಆಚರಣೆಗಳನ್ನು ಹೇರುವುದನ್ನು ಕಾಣುತ್ತಿದ್ದೇವೆ. ಹಲವು ಜಾತಿಗಳ ಒಕ್ಕೂಟದಂತಿರುವ ಹಿಂದೂ ಎನ್ನಲಾಗುವ ಒಂದು ಮತವನ್ನು ಸಾಂಸ್ಥೀಕರಿಸುವ ಧ್ಯೇಯದೊಂದಿಗೇ ಹಿಂದುತ್ವ ಮತ್ತು ಹಿಂದೂರಾಷ್ಟ್ರದ ಪರಿಕಲ್ಪನೆಯನ್ನು ಹುಟ್ಟುಹಾಕಿರುವ ಸಂಘಪರಿವಾರ, ತನ್ನ ಈ ಕಾರ್ಯಸೂಚಿಯಲ್ಲಿ, ಅನ್ಯಮತ ದ್ವೇಷವನ್ನೂ ಒಂದು ಭಾಗವಾಗಿಯೇ ಪರಿಗಣಿಸುತ್ತದೆ. ಹಾಗಾಗಿಯೇ ಧಾರ್ಮಿಕ ಆಚರಣೆಗಳೊಂದಿಗೇ ಕೆಲವು ಚಿಹ್ನೆಗಳೂ ಸಹ ಮತೀಯ ಅಸ್ಮಿತೆಯನ್ನು ಸ್ಥಾಪಿಸುವ ಸಂಕೇತವಾಗಿಬಿಡುತ್ತವೆ.
(ಮುಂದುವರೆಯುತ್ತದೆ…)