ಶಿವಮೊಗ್ಗ ಮಲೆನಾಡಿನ ಹೆಬ್ಬಾಗಿಲಷ್ಟೇ ಅಲ್ಲ ಅಪರಾಧಗಳಿಗೂ ಕುಖ್ಯಾತಿ ಪಡೆದಿದ್ದ ಜಿಲ್ಲೆ. ಕರ್ನಾಟಕದಲ್ಲಿ ಅಪರಾಧ ಪ್ರಕರಣಗಳಿಗಾಗಿ ಎರಡು ಅಥವಾ ಮೂರನೇ ಸ್ಥಾನದಲ್ಲಿದ್ದ ಜಿಲ್ಲೆಯಲ್ಲಿಗ ಬದಲಾವಣೆಯ ಗಾಳಿ ಬೀಸುತ್ತಿದೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್‌ಪಿ ಬಿಎಂ ಲಕ್ಷ್ಮಿ ಪ್ರಸಾದ್ ನೇತೃತ್ವದಲ್ಲಿ ಅಪರಾಧ ಪ್ರಕರಣಗಳಿಗೆ ರಚನಾತ್ಮಕ ಕೆಲಸಗಳ ಮೂಲಕ ಕಡಿವಾಣ ಹಾಕುವ ಪ್ರಯತ್ನಗಳೂ ನಿರಂತರವಾಗಿ ಸಾಗಿವೆ. ಶಿವಮೊಗ್ಗ ನಗರವೊಂದನ್ನೇ ತೆಗೆದುಕೊಂಡರೆ ಪ್ರತಿದಿನ ಗಾಂಜಾ ಪ್ರಕರಣಗಳು, ಕೊಲೆ ಸುಲಿಗೆ, ದರೋಢೆ, ಗ್ಯಾಂಗ್ ವಾರ್ ಸರ್ವೇ ಸಾಮಾನ್ಯವೆಂಬಂತಿತ್ತು. ಈಗೀಗ ಡ್ರಗ್ ಪೆಡ್ಲರ್‌ಗಳು, ರೌಡಿ ಶೀಟರ್‌ಗಳು ಜೈಲು ಸೇರುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳು ಅಪರಾಧ ಜಗತ್ತಿಗೆ ಬೇಗನೆ ಪದಾರ್ಪಣೆ ಮಾಡುತ್ತಿರುವ ಪ್ರಕರಣಗಳು ಆತಂಕ ಮೂಡಿಸಿವೆ. ಇದಕ್ಕೆಲ್ಲಾ ಇತಿಶ್ರೀ ಹಾಡಲು ಜಿಲ್ಲಾ ಪೊಲೀಸ್ ಸನ್ನದ್ಧವಾಗಿದೆ.
ಶಿವಮೊಗ್ಗ ಈ ಹಿಂದೆ ಮಾದಕ ವಸ್ತು ಬೀಡಾಗಿತ್ತು. ಮಲೆನಾಡಿನ ರೈತರು ಉಪಬೆಳೆಯಾಗಿ ಬೆಳೆಯುತ್ತಿದ್ದ ಕಾಲವೂ ಇತ್ತು. ದಶಕದ ಪರಿಶ್ರಮದಿಂದ ಗಾಂಜಾ ಪಿಡುಗನ್ನ ಪೊಲೀಸರು ಬೇರು ಸಮೇತ ಕಿತ್ತು ಹಾಕಿದ್ದಾರೆ. ಆದರೆ ಆಂಧ್ರಪ್ರದೇಶದಿಂದ ಅಗ್ಗದ ಗಾಂಜಾ ಶಿವಮೊಗ್ಗಕ್ಕೆ ದಾಂಗುಡಿ ಇಟ್ಟಿದೆ. ಇದರ ಜೊತೆ ಅಪರಾಧ ಜಗತ್ತು ಪುನಃ ಚಿಗುರೊಡೆಯುತ್ತಿದೆ. ಬಹಳ ಮುಖ್ಯವಾಗಿ ಶಾಲಾ-ಕಾಲೇಜಿನ ಅಂಗಳಕ್ಕೆ ಇದು ಕಾಲಿರಿಸಿದೆ. ಇದರ ಜೊತೆ ಕ್ರಿಮಿನಲ್ ಹಿನ್ನೆಲೆಯುಳ್ಳವರು ಮಕ್ಕಳನ್ನ ಹಾಗೂ ವಿದ್ಯಾರ್ಥಿಗಳನ್ನ ಅಪರಾಧ ಕೃತ್ಯಕ್ಕೆ ಬಳಸುತ್ತಿರುವುದು ಆತಂಕಕ್ಕೀಡು ಮಾಡಿದೆ. ಬಾಲಾರೋಪ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ ಶಿವಮೊಗ್ಗ ಪೊಲೀಸರು ನೇರವಾಗಿ ಶಾಲೆಗಳತ್ತ ವಿವಿಧ ಅರಿವು ಕಾರ್ಯಕ್ರಮಗಳ ಮೂಲಕ ತೆರಳುತ್ತಿದ್ದಾರೆ. ಅದರಲ್ಲಿ ವಾಟ್ಸ್‌ಆಪ್ ಗ್ರೂಪ್ ಮೂಲಕ ಅಪರಾಧಗಳ ಮೇಲೆ ನಿಗಾ ಹಾಗೂ ವಿದ್ಯಾರ್ಥಿಗಳಿಗೆ ಕಾನೂನು ಅರಿವಿಗಾಗಿ ಉಪನ್ಯಾಸ. ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಹೀಗೆ ಗಂಟೆಗಳ ಕಾಲ ಮಕ್ಕಳಿಗೆ ಕಾನೂನು ಅರಿವು ಹಾಗೂ ಭವಿಷ್ಯದ ಬಗ್ಗೆ ಪಾಠ ಮಾಡುತ್ತಾರೆ. ಇದಕ್ಕೆ ಕಾರಣ ಶಿವಮೊಗ್ಗ ಎಸ್‌ಪಿ ಲಕ್ಷ್ಮಿ ಪ್ರಸಾದ್.
ಈ ಬಗ್ಗೆ ಮಾತನಾಡಿದ ಲಕ್ಷ್ಮಿ ಪ್ರಸಾದ್ ಶಾಲಾ ಮಕ್ಕಳು ಗಾಂಜಾ ಕಡೆ ವಾಲುತ್ತಿದ್ದಾರೆಂದು ಮಾಹಿತಿ ಬರುತ್ತಿದೆ. ಈ ಬಗ್ಗೆ ದೂರುಗಳೂ ಸಹ ದಾಖಲಾಗಿದ್ದವು. ಈ ಬೆಳವಣಿಗೆಗಳನ್ನ ಅವಲೋಕಿಸದ ಮೇಲೆ ಆಯಾ ಠಾಣಾ ವ್ಯಾಪ್ತಿಯಲ್ಲಿ ಬರುವ ಶಾಲಾ ಕಾಲೇಜಿನ ಆಡಳಿತ ಮಂಡಳಿ ಹಾಗೂ ದೈಹಿಕ ಶಿಕ್ಷರನ್ನೊಳಗೊಂಡ ವಾಟ್ಸ್ ಆಪ್ ಗ್ರೂಪ್ ರಚಿಲಾಗಿದೆ. ಆ ಗ್ರೂಪ್‌ಗಳಲ್ಲಿ ಅಪರಾಧ, ಹಾಗೂ ಕಾನೂನು ಸಲಹೆ ಬಗ್ಗೆ ಚರ್ಚೆಗಳನ್ನ ಮಾಡಬಹುದು. ಶಾಲಾ ಕಾಲೇಜಿನೊಳಗಡೆ ಕಿಡಿಗೇಡಿಗಳು ಪ್ರವೇಶ ಮಾಡಿ ದಾಂಧಲೆ ಮಾಡುತ್ತಿದ್ದರೆ, ಮಕ್ಕಳ ಮೇಲೆ ಪ್ರಭಾವ ಬೀರುತ್ತಿದ್ದರೆ ಮಾಹಿತಿ ನೀಡಬಹುದು. ಆ ಪ್ರಕರಣಗಳನ್ನ ಪೊಲೀಸರು ಚಾಚೂ ತಪ್ಪದೇ ನಿರ್ವಹಿಸುತ್ತಾರೆ ಹಾಗೂ ಫಾಲೋಅಪ್ ಕೂಡ ಮಾಡಿಸುತ್ತೇವೆ. ಎಷ್ಟೋ ಶಾಲೆಗಳಲ್ಲಿ ಶಾಲಾ ಆವರಣದಲ್ಲೇ ಮದ್ಯ ಸೇವನೆ ಮಾಡೋದು, ಸಿಸಿಟಿವಿಗಳನ್ನ ಕದಿಯೋ ಪ್ರಕರಣಗಳು ದಾಖಲಾಗಿವೆ. ಬಹಳ ಮುಖ್ಯವಾಗಿ ಶಾಲೆಗಳ ಎದುರು ಟ್ರಾಫಿಕ್ ಸಮಸ್ಯೆ ಹೇಳ ತೀರದಂತಿದೆ. ವೇಗವಾಗಿ ವಾಹನ ಚಾಲನೆ ಮಾಡೋದು, ಅಡ್ಡಲಾಗಿ ನಿಲ್ಲಿಸೋದು ಕಂಡು ಬಂದರೆ ತಕ್ಷಣ ಮಾಹಿತಿ ನೀಡಲು ಮನವಿ ಮಾಡಿಕೊಂಡಿದ್ದೇವೆ. ಅದರ ಜೊತೆ ಆಯ್ದ ಪೊಲೀಸ್ ಅಧಿಕಾರಿಗಳು ಮಕ್ಕಳಿಗೆ ಅರಿವಿನ ಪಾಠವನ್ನೂ ಮಾಡುತ್ತಾರೆ ಎಂದು ಎಸ್ ಪಿ ಹೇಳಿದರು.