ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಾಯಕ ಶಿವಮೊಗ್ಗ ಸುಬ್ಬಣ್ಣ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
83 ವರ್ಷ ವಯಸ್ಸಿನ ಶಿವಮೊಗ್ಗ ಸುಬ್ಬಣ್ಣಗೆ ಹೃದಯಾಘಾತವಾಗಿ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
1979ರಲ್ಲಿ ‘ಕಾಡು ಕುದುರೆ’ ಚಲನಚಿತ್ರಕ್ಕೆ ಕಾಡು ಕುದುರೆ ಓಡಿ ಬಂದಿತ್ತಾ ಹಾಡನ್ನು ಸುಬ್ಬಣ್ಣ ಹಾಡಿದ್ದರು. ಈ ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ರಜತ ಕಮಲ ರಾಷ್ಟ್ರ ಪ್ರಶಸ್ತಿ ಅವರಿಗೆ ಒಲಿದಿತ್ತು. ರಜತ ಕಮಲ ರಾಷ್ಟ್ರ ಪ್ರಶಸ್ತಿಗೆ ಭಾಜನರಾದ ಮೊದಲ ಕನ್ನಡಿಗ ಸುಬ್ಬಣ್ಣರಾಗಿದ್ದರು.
1985ರಲ್ಲಿ ರಾಜ್ಯೋತ್ಸವ ಪುರಸ್ಕಾರ, 1988ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪುರಸ್ಕಾರ, 1999ರಲ್ಲಿ ಸಂತ ಶಿಶುನಾಳ ಷರೀಫ ಪ್ರಶಸ್ತಿ ಲಭಿಸಿದ್ದು, 2008ರಲ್ಲಿ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಸುಬ್ಬಣ್ಣ ಪಡೆದಿದ್ದರು.
ಸುಬ್ಬಣ್ಣ ಅವರು ಶಿವಮೊಗ್ಗ ಜಿಲ್ಲೆಯ ನಗರ ಎಂಬ ಸಣ್ಣ ಊರಿನಲ್ಲಿ 1938ರ ಡಿಸೆಂಬರ್ 14ರಂದು ಜನಿಸಿದರು. ತಂದೆ ಗಣೇಶರಾಯರು, ತಾಯಿ ರಂಗನಾಯಕಿ. ತಾತ ಶಾಮಣ್ಣ, ನಂತರ ಎಂ. ಪ್ರಭಾಕರ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದರು. ಕವಿಗೀತೆಗಳನ್ನು ಹಾಡುವುದರಲ್ಲಿ ಆಕರ್ಷಿತರಾದ ಸುಬ್ಬಣ್ಣ ಅವರು, ಕುವೆಂಪು, ಬೇಂದ್ರೆ ಹಾಗೂ ನಾಡಿನ ಇನ್ನಿತರ ಶ್ರೇಷ್ಠ ಕವಿಗಳ ಕವಿತೆಗಳನ್ನು ರಾಗ ಸಂಯೋಜಿಸಿ ಹಾಡುವುದರ ಮೂಲಕ ಮನೆ ಮಾತಾದರು.
ಬಿ.ಎ, ಬಿ.ಕಾಂ ಮತ್ತು ಎಲ್ಎಲ್ಬಿ ಪದವೀಧರಾದ ಶಿವಮೊಗ್ಗ ಸುಬ್ಬಣ್ಣ ಅವರು 1982ರಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ನೆಲೆಸಿದರು.
ಆಕಾಶವಾಣಿ ಎಂ.ಎಸ್.ಐ.ಎಲ್. ಪ್ರಾಯೋಜಕತ್ವದಲ್ಲಿ ಪ್ರಸಾರ ಮಾಡಿದ ಜನಪ್ರಿಯ ಕರ್ಯಕ್ರಮದಲ್ಲಿ ‘ಕೋಡಗನ ಕೋಳಿ ನುಂಗಿತ್ತಾ..’, ‘ಅಳಬೇಡಾ ತಂಗಿ ಅಳಬೇಡ…’ ‘ಬಿದ್ದೀಯಬ್ಬೇ ಮುದುಕಿ..’ ಮೊದಲಾದ ಶಿಶುನಾಳ ಷರೀಫರ ಗೀತೆಗಳನ್ನು ಹಾಡಿದ ಸುಬ್ಬಣ್ಣ ಮನೆ ಮಾತಾದರು.