ನಕ್ಸಲ್ ಅಟ್ಟಹಾಸ ಮಲೆನಾಡಿನಲ್ಲಿ ಅದರಲ್ಲೂ ಪಶ್ಚಿಮ ಘಟ್ಟದಲ್ಲಿ ಬಹುತೇಖ ಮುಕ್ತಾಯ ಹಂತ ತಲುಪಿದೆ. ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಜನ್ಮತಳೆದ ನಕ್ಸಲ್ ಮುಖಂಡರು ಈಗಾಗಲೇ ಸಾಕಷ್ಟು ಜನ ಮುಖ್ಯವಾಹಿನಿಗೆ ಬಂದಿದ್ದರು. ಇನ್ನು ಕೆಲವರು ಕೇರಳ, ತಮಿಳುನಾಡಿನ ಕಾಡುಗಳಲ್ಲಿ ಅಲೆಯುತ್ತಿರು. ಅವರೆಲ್ಲಾ ಈಗ ಒಬ್ಬೊಬ್ಬರಾಗಿ ಸೆರೆ ಸಿಗುತ್ತಿದ್ದಾರೆ ಹಾಗೂ ಪೊಲೀಸರ ಮುಂದೆ ಹಾಜರಾಗುತ್ತಿದ್ದಾರೆ. ಕೇವಲ ಎರಡು ತಿಂಗಳ ಅವಧಿಯಲ್ಲಿ ಮಲೆನಾಡಿನ ಪ್ರಮುಖ ನಕ್ಸಲ್ ನಾಯಕರು ಪೊಲೀಸರ ಬಲೆಗೆ ಬಿದ್ದಿದ್ದರೆ.
ಕಳೆದ ಹನ್ನೊಂದು ವರ್ಷದ ಹಿಂದೆ ಆಗುಂಬೆಯ ಹೊಸಗದ್ದೆಯ ಪ್ರಭಾ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿತ್ತು. ಆದರೆ ಆಕೆ ಈಗ ತಮಿಳು ನಾಡು ಪೊಲೀಸರಿಗೆ ಶರಣಾಗಿದ್ದಾಳೆ. ಈ ಮೂಲಕ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಭಾಗದಲ್ಲಿ ನಕ್ಸಲ್ ಚಟುವಟಿಕೆಯ ಕಿಚ್ಚುಹಚ್ಚಿದ್ದ ಪ್ರಮುಖ ನಾಯಕರುಗಳು ಇದೀಗ ಪೊಲೀಸರ ವಶದಲ್ಲಿದ್ದಾರೆ. ಹೀಗಾಗಿ ಮಲೆನಾಡಿನ ನಕ್ಸಲ್ ಚಟುವಟಿಕೆಗೆ ಕೊನೆ ಮೊಳೆ ಬಿದ್ದಿದೆ ಎಂದೇ ಹೇಳಲಾಗುತ್ತಿದೆ. ಆದರೆ ವಿಕ್ರಂ ಗೌಡನನ್ನು ಮಾತ್ರ ಪೊಲೀಸರಿಗೆ ಇದುವರೆಗೆ ಬಂಧಿಸಲು ಸಾಧ್ಯವಾಗಿಲ್ಲ.
2002ರಿದಂಲೂ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಯ ಸಂಗಮದ ಸ್ಥಳಗಳಲ್ಲಿ ನಕ್ಸಲ್ ಚಟುವಟಿಕೆ ಎಲ್ಲೆ ಮೀರಿತ್ತು. ಪೊಲೀಸರ ಮೇಲೆಯೇ ನಕ್ಸಲರು ದಾಳಿ ನಡೆಸಲಾರಂಭಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಸಾಲು ಸಾಲು ಎನ್ ಕೌಂಟರ್ ನಡೆಸುವ ಮೂಲಕ ನಕ್ಸಲರನ್ನು ಸದೆಬಡಿಯುವ ಕೆಲಸ ಮಾಡಿದ್ದರು. ಆದರೆ ಇದೇ ವೇಳೆಗೆ ಇನ್ನಷ್ಟು ಉಗ್ರರಾದ ನಕ್ಸಲರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರನ್ನು ಬಲಿಪಡೆದಿದ್ದರು. ಬಳಿಕ ಎಎನ್ ಎಸ್ ಹಾಗೂ ಎಎನ್ ಎಫ್ ಕಾರ್ಯಾಚರಣೆ ಆರಂಭಿಸಿದ ಬಳಿಕ ನಕ್ಸಲರು ಕರ್ನಾಟಕದ ಮಲೆನಾಡನ್ನು ತೊರೆದಿದ್ದರು. ಆದರೆ ಆಗಾಗ ನಕ್ಸಲ್ ಬ್ಯಾನರ್ ಗಳು ಮಾತ್ರ ಕಾಣಸಿಗುತ್ತಿದ್ದವು.
ಮೆಣಸಿನ ಹಾಡ್ಯದಲ್ಲಿ ಸಾಕೇತ್ ರಾಜನ್ ಶೂಟೌಟ್ ಆದ ಬಳಿಕ ಮಲೆನಾಡಿನ ನಕ್ಸಲ್ ಚಟುವಟಿಕೆಗಳು ಕುಂದಲಾರಂಭಿಸಿದವು. ಆದರೆ ಬಳಿಕ ಮನೋಹರ್ ಹಾಗೂ ನವೀನ್ ಎನ್ ಕೌಟಂರ್ ಬಳಿಕ ನಕ್ಸಲ್ ಚಟುವಟಿಕೆ ತಣ್ಣಗಾಗಿತ್ತು. ಆದರೆ ಬಿ.ಜಿ.ಕೃಷ್ಣಮೂರ್ತಿ ಹಾಗೂ ಹೊಸಗದ್ದೆ ಪ್ರಭಾ ತೆರೆಮರೆಯಲ್ಲಿದ್ದೇ ನಕ್ಸಲ್ ಚಟುವಟಿಕೆಯನ್ನು ಮುನ್ನಡೆಸುತ್ತಿದ್ದರಲ್ಲದೆ, ತಲ್ಲೂರಂಗಡಿಯಲ್ಲಿ ಬಸ್ಸಿಗೂ ಬೆಂಕಿ ಹಚ್ಚಿದ್ದರು. ಜೊತೆಗೆ ಸ್ಫೋಟಕವನ್ನಿಟ್ಟು ಫಾರೆಸ್ಟ್ ಚೆಕ್ ಪೋಸ್ಟನ್ನು ಧ್ವಂಸಗೊಳಿಸಿದ್ದರು. ಅಂದಿನಿಂದಲೂ ಈ ಇಬ್ಬರು ನಕ್ಸಲ್ ಮುಖಂಡರು ತೆರೆಮರೆಯಿಂದಲೇ ತಮ್ಮ ಕೆಲಸ ಮುಂದುವರಿಸಿದ್ದರು.
ಮಲೆನಾಡಿನಲ್ಲಿ ಪೊಲೀಸರ ಕಾರ್ಯಾಚರಣೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಇಬ್ಬರೂ ಮಲೆನಾಡನ್ನು ತೊರೆದು ಕೇರಳ ಸೇರಿದ್ದರು. ಆದರೆ ಕೇರಳದಲ್ಲಿಯೇ ನಕ್ಸಲ್ ನಾಯಕ ಎರಡು ತಿಂಗಳ ಹಿಂದೆ ಸೆರೆಸಿಕ್ಕಿದ್ದ, ಇದೀಗ ಕೃಷ್ಣಮೂರ್ತಿ ಪತ್ನಿ 2010ರಲ್ಲಿಯೇ ಮೃತಪಟ್ಟಿದ್ದಾಳೆ ಎನ್ನಲಾಗಿದ್ದ ಹೊಸಗದ್ದೆ ಪ್ರಭ ಇದೀಗ ತಮಿಳುನಾಡು ಪೊಲೀಸರ ಎದುರು ಶರಣಾಗಿದ್ದಾಳೆ. ಹೀಗಾಗಿ ನಕ್ಸಲ್ ಸಂಘಟನೆಯ ಮಲೆನಾಡಿನ ಪ್ರಮುಖ ಕೊಂಡಿಗಳು ಇದೀಗ ಕಟ್ ಆದಂತಾಗಿದೆ. ಆದರೆ ವಿಕ್ರಂ ಗೌಡ ಮಾತ್ರ ಇನ್ನು ಪೊಲೀಸರಿಗೆ ಸಿಕ್ಕಿಲ್ಲ. ಹೀಗಾಗಿ ಈತ ಮತ್ತೆ ಮಲೆನಾಡನಲ್ಲಿ ನಕ್ಸಲ್ ಸಂಘಟನೆ ಸಕ್ರಿಯಗೊಳಿಸುತ್ತಿದ್ದಾನೆಯೇ ಎಂಬ ಅನುಮಾನ ಎಲ್ಲರಲ್ಲಿಯೂ ಆರಂಭಗೊಂಡಿದೆ.
ಕೇರಳ, ತಮಿಳು ನಾಡು ಹಾಗೂ ಆಂಧ್ರದಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರ ಕಾರ್ಯಾಚರಣೆಯೂ ಹೆಚ್ಚಾಗಿದೆ. ಹೀಗಾಗಿ ನಕ್ಸಲರು ಈ ರಾಜ್ಯಗಳನ್ನು ಬಿಡಬೇಕು, ಇಲ್ಲವೇ ಪೊಲೀಸರಿಗೆ ಸಿಕ್ಕಿಬೀಳಬೇಕು ಅಥವಾ ಶರಣಾಗಬೇಕು ಎಂಬ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ವಿಕ್ರಂ ಗೌಡ ತನ್ನ ಹಿಂದಿನ ಆವಾಸ ಸ್ಥಾನವಾದ ಮಲೆನಾಡಿಗೆ ಮರಳಿದರೂ ಆಶ್ಚರ್ಯವಿಲ್ಲ ಎನ್ನುವ ಮಾತುಗಳು ಕೇಳಿಬರಲಾರಂಭಿಸಿವೆ. ಒಂದು ವೇಳೆ ವಿಕ್ರಂ ಗೌಡ ತನ್ನ ನೆಲೆಯನ್ನು ಮಲೆನಾಡಿಗೆ ಬದಲಿಸಿದರೂ ಇಲ್ಲಿ ಮತ್ತೆ ಅಧಿಪತ್ಯ ಸಾಧಿಸುವುದು ಅಷ್ಟು ಸುಲಭವಿಲ್ಲ. ಏಕೆಂದರೆ ಇನ್ನೂ ಎಎನ್ ಎಸ್ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ನಕ್ಸಲರ ಬಗ್ಗೆ ಒಲವು ಹೊಂದಿರುವವ ಸಂಖ್ಯೆಯೂ ಇದೀಗ ಗಣನೀಯವಾಗಿ ತಗ್ಗಿದೆ.