ಶಿವಮೊಗ್ಗದ ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆಪರಾಧಿಗಳು ಯಾವುದೇ ಸಂಘಟನೆಗೆ ಸೇರಿದ್ದರೂ ಅವರನ್ನು ಸರ್ಕಾರ ಬಂಧಿಸಿ ಗಲ್ಲು ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲಿ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ವಿಧಾನಸೌಧದ ಬಳಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಘಟನೆಯನ್ನು ಗಮನಿಸಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಸ್ಪಷ್ಟವಾಗುತ್ತದೆ. ಗೃಹ ಸಚಿವರ ಸ್ವಂತ ಜಿಲ್ಲೆಯಲ್ಲಿಯೇ ಕೊಲೆ ನಡೆದಿದೆ. ಹೀಗಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೂಡಲೇ ರಾಜಿನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನಾವು ಅಹಿಂಸೆಯಲ್ಲಿ ನಂಬಿಕೆ ಇಟ್ಟವರು. ಯಾರದ್ದೇ ಕೊಲೆಯಾದರೂ ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆಯಾಗಬೇಕು. ಹರ್ಷ ಅವರ ಕೊಲೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆಯಾಗಬೇಕು.
ಆರೋಪಿಗಳು ಯಾವುದೇ ಸಮುದಾಯ, ಸಂಘಟನೆಗೆ ಸೇರಿದ್ದರೂ ಸರ್ಕಾರ ಕಠಿಣವಾದ ಕ್ರಮ ಕೈಗೊಳ್ಳಬೇಕು. ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈಶ್ವರಪ್ಪ, ಯುಡಿಯೂರಪ್ಪ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಜಿಲ್ಲೆ ಇದು. ಇದು ಏನನ್ನು ಸೂಚಿಸುತ್ತದೆ. ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಹಾಳಾಗಿರುವುದಕ್ಕೆ ಇದು ಉದಾಹರಣೆ. ಈಶ್ವರಪ್ಪ, ಆರಗ ಜ್ಞಾನೇಂದ್ರ ಇದಕ್ಕೆ ಜವಾಬ್ದಾರರು.
ಪೊಲೀಸರು ಅಪರಾಧಿಗಳನ್ನು ಮೊದಲು ಬಂಧಿಸಿ ಕಠಿಣವಾದ ತನಿಖೆ ಮಾಡಲಿ. ಬೆಂಗಳೂರಿನಲ್ಲಿ ಕುಳಿತು ಕಾಂಗ್ರೆಸ್ ಅಥವಾ ಯಾರ ಮೇಲೋ ಆರೋಪ ಮಾಡುವುದಲ್ಲ.
ಆರೋಪಿಗಳು ಯಾರೇ ಆಗಿದ್ದರೂ ಬಂಧಿಸಿ ಶಿಕ್ಷೆಗೆ ಒಳಪಡಿಸಲಿ.
ಗೃಹ ಸಚಿವರು ಶಿವಮೊಗ್ಗ ಜಿಲ್ಲೆಯವರೇ ಆಗಿರುವುದರಿಂದ ಘಟನೆ ಹಿನ್ನೆಲೆಯಲಿ ಅವರು ರಾಜಿನಾಮೆ ಕೊಡಬೇಕು. ಆದರೆ, ಅವರು ಭಂಡರು. ರಾಜಿನಾಮೆ ಕೊಡುವುದಿಲ್ಲ. ನಮ್ಮ ಸರ್ಕಾರ ಇದ್ದಾಗ ಕೆ.ಜೆ. ಜಾರ್ಜ್ ಅವರು ರಾಜಿನಾಮೆ ಕೊಟ್ಟಿದ್ದರು. ರಾಜಿನಾಮೆ ಕೊಡುವುದೇ ಇಲ್ಲ ಎಂದು ಹೇಳಿದರೆ ಜನರೇ ತಕ್ಕ ಪಾಠ ಕಲಿಸುತ್ತಾರೆ.