ಆಪರೇಶನ್ ಹಸ್ತ ಭರದಿಂದ ಸಾಗುತ್ತಿದ್ದು, ಈಗಾಗಲೇ ಹೀನಾಯವಾಗಿ ಸೋತಿರುವ ಬಿಜೆಪಿ ಹಾಗೂ ಜೆಡಿಎಸ್‌ಗೆ ಭಾರೀ ಆತಂಕ ಶುರುವಾಗಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ 20 ಕ್ಷೇತ್ರಗಳನ್ನು ಗೆಲ್ಲಿಸಿಕೊಡುವುದಾಗಿ INDIA ಮೈತ್ರಿಕೂಟದ ನಾಯಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದ್ದರು. ಅದಕ್ಕೆ ಬೇಕಾದ ಸಿದ್ಧತೆ ಡಿಕೆಶಿ ಶುರು ಮಾಡಿದ್ದು, ಜೆಡಿಎಸ್, ಬಿಜೆಪಿಯಲ್ಲಿರುವ ನಾಯಕರನ್ನು ತಮ್ಮೆಡೆಗೆ ಸೆಳೆಯುತ್ತಿದ್ದಾರೆ.
ಶಿವಮೊಗ್ಗದ ಮಾಜಿ ರಾಜ್ಯ ಸಭಾ ಸದಸ್ಯ, ಮಾಜಿ ಶಾಸಕ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಅಯನೂರು ಮಂಜುನಾಥ್ ಒಂದು ಇಂದು ಬೆಂಗಳೂರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸೇರ್ಪಡೆಗೊಂಡಿದ್ದಾರೆ.
ರಾಜ್ಯದಲ್ಲಿರುವ ಕಾಂಗ್ರೆಸ್ ಪರ ಅಲೆಯನ್ನು ಸರಿಯಾಗಿ ಬಳಸಿಕೊಳ್ಳಲು ಕೈ ಪಾಳೆಯ ಹವಣಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಗೆಲ್ಲುವ ಸಾಮರ್ಥ್ಯದ ನಾಯಕನನ್ನು ಕಾಂಗ್ರೆಸ್ ಹುಡುಕುತ್ತಿತ್ತು.
ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರಿರುವುದರಿಂದ ಈ ಹುಡುಕಾಟ ಬಹುಷ ಕೊನೆಗೊಂಡಿರಬಹುದು ಎಂದು ಹೇಳಲಾಗಿದೆ.
ಕಳೆದ ವಿಧಾನಸಭೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದ ಆಯನೂರು ಮಂಜುನಾಥ್ ಅದಕ್ಕಾಗಿ ವಿಧಾನ ಪರಿಷತ್ ನ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದು ಪಕ್ಷವನ್ನೂ ತೊರೆದಿದ್ದರು. ಕೆಪಿಸಿಸಿ ಮಟ್ಟದಲ್ಲಿ ಅವರ ಸೇರ್ಪಡೆಗೆ ಒಪ್ಪಿಗೆ ಸಿಕ್ಕರೂ ಎಐಸಿಸಿಯಲ್ಲಿ ಅದಕ್ಕೆ ತಡೆ ಬಿದ್ದಿತ್ತು. ಹೀಗಾಗಿ ಜೆಡಿಎಸ್ ಸೇರಿ ಚುನಾವಣೆ ಸ್ಪರ್ಧಿಸಿದ್ದರು.
ಇದೀಗ ಜೆಡಿಎಸ್ ಬಿಜೆಪಿಯೊಂದಿಗೆ ಸೇರಲಿದೆ ಎಂಬ ಊಹಾಪೋಹಗಳು ಕೇಳಿ ಬಂದಿರುವುದರಿಂದ ಬಿಜೆಪಿ ತೊರೆದು ಜೆಡಿಎಸ್ ಸೇರಿರುವ ನಾಯಕರಲ್ಲಿ ತಳಮಳ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಆಯನೂರು ಮಂಜುನಾಥ್ ಅವರು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಜಂಪ್ ಆಗಿದ್ದಾರೆ.
“ಈ ಹಿಂದೆ ನಾನು ಬಿಜೆಪಿ ಬಿಡಬೇಕು ಎಂದು ನಿರ್ಧಾರ ಮಾಡಿದ್ದಾಗ ಕಾಂಗ್ರೆಸ್ ನಲ್ಲಿ ಅವಕಾಶ ಇರಲಿಲ್ಲ. ಆಗ ಹೆಚ್ ಡಿ ಕುಮಾರಸ್ವಾಮಿಯವರು ಅವಕಾಶ ಕೊಟ್ಟರು. ಬದಲಾದ ಸನ್ನಿವೇಶದಲ್ಲಿ ಮುಂದಿನ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ” ಆಯನೂರು ಹೇಳಿದ್ದಾರೆ.
ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಪಕ್ಷ ಬದಲಿಸುತ್ತಿದ್ದೇನೆ ಎಂದು ಆಯನೂರು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಲೋಕಸಭಾ ಕ್ಷೇತ್ರಕ್ಕೆ ಆಯನೂರು ಮಂಜುನಾಥ್ ಸಂಭಾವ್ಯ ಅಭ್ಯರ್ಥಿ ಎನ್ನಲಾಗಿದೆ.











