ಕೋಲಾರ: ನಾನು ಬಡವ ಎಂದು ಜನರ ಮುಂದೆ ಕಣ್ಣೀರು ಸುರಿಸುವುದನ್ನೇ ವೋಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಗುಡುಗಿದರು.
ಶ್ರೀನಿವಾಸಪುರ ತಾಲೂಕಿನ ಮೀಸಗಾನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದ ವೆಂಕಟ ಶಿವಾರೆಡ್ಡಿ ಅವರು, ಎರಡು ಬಾರಿ ಸ್ಪೀಕರ್ ಆಗಿ, ಮಂತ್ರಿಯಾಗಿದ್ದ ಶಾಸಕ ಕೆ.ಆರ್. ರಮೇಶ್ ಕುಮಾರ್ ಅವರೇ ಶ್ರೀನಿವಾಸಪುರ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು? ನನ್ನ ಅವಧಿಯಲ್ಲಿಯೇ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. ನಿಮಗೆ ಬಡವರಿಗೆ ಸಹಾಯ ಮಾಡಬೇಕೆಂಬ ಮನಸ್ಸಿಲ್ಲ. ಈಗ 10 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಸಹ ಕ್ಷೇತ್ರದಲ್ಲಿ ಇದುವರೆಗೂ ಒಂದು ಬೋರ್ ವೆಲ್ ಕೊರೆಸಿಲ್ಲ, ಬಡವರಿಗೆ ಒಂದು ಲೋನ್ ಸಹ ಕೊಟ್ಟಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಮಹಿಳೆಯರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ:
ರಮೇಶ್ ಕುಮಾರ್ ಅವರು ಜೀವನದಲ್ಲಿ ಒಂದೇ ಒಂದು ಸತ್ಯ ಹೇಳಿದ್ದಾರೆ. ಅದೇನೆಂದರೆ ನಾಲ್ಕೈದು ತಲೆಮಾರುಗಳಿಗಾಗುವಷ್ಟು ನಾವು ಮಾಡಿಕೊಂಡಿದ್ದೇವೆ. ಹಾಗಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಋಣ ತೀರಿಸಬೇಕು ಅಂತ ಅವರು ಹೇಳಿದ್ದಾರೆ. ಆಗ ಇವರನ್ನು ಪಕ್ಷದಿಂದ ತೆಗೆದುಹಾಕಿ ಅಂತ ಪ್ರಿಯಾಂಕಾ ಗಾಂಧಿ ಹೇಳಿದ್ದರು ಎಂದರು.

ಅಲ್ಲದೆ ಮಹಿಳೆಯರ ಬಗ್ಗೆಯೇ ಕೆಟ್ಟದಾಗಿ ಮಾತಾಡಿದ್ದಾರೆ. ಮಹಿಳೆಯರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಇವರಿಗೆ? ರಮೇಶ್ ಕುಮಾರ್ ಎರಡು ಬಾರಿ ಸ್ಪೀಕರ್ ಆಗಿದ್ದವರು, ಸಚಿವರೂ ಆಗಿದ್ದವರು. ಆದರೂ ಸಹ ಬರೀ ಸುಳ್ಳು ಹೇಳುತ್ತಾರೆ. ಮಾತೆತ್ತಿದರೆ ಮಹಿಳೆಯರ ಸ್ತ್ರೀ ಶಕ್ತಿ ಸಂಘಗಳಿಗೆ ಲೋನ್ ನೀಡುವ ಮೂಲಕ ಸಹಾಯ ಮಾಡುತ್ತಿದ್ದೇನೆ ಎನ್ನುತ್ತಾರೆ. ರಮೇಶ್ ಕುಮಾರ್ ಗೂ ಸ್ತ್ರೀ ಶಕ್ತಿ ಸಂಘಗಳಿಗೂ ಯಾವುದೇ ಸಂಬಂಧ ಇಲ್ಲ. ಅದು ಕೇಂದ್ರದ ನಬಾರ್ಡ್ ಮೂಲಕ ಡಿಸಿಸಿ ಬ್ಯಾಂಕ್ ಗೆ ಬಂದು ಅದನ್ನು ಸೊಸೈಟಿಯ ಮೂಲಕ ಸ್ತ್ರೀ ಶಕ್ತಿ ಸಂಘಗಳ ಅಕೌಂಟ್ ಗೆ ನೀಡಲಾಗುತ್ತಿದೆ. ಇದರಲ್ಲೂ ಸಹ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸತ್ಯ ಹರಿಶ್ಚಂದ್ರರಂತೆ ಸದನದಲ್ಲಿ ಮಾತನಾಡುತ್ತಾರೆ:
ರಮೇಶ್ ಕುಮಾರ್ ಕೋಟ್ಯಾಂತರ ರೂ. ಹಣವನ್ನು ಅವರ ಸ್ವಂತಕ್ಕೆ ಉಪಯೋಗಿಸಿಕೊಂಡಿದ್ದಾರೆ. ಸರ್ಕಾರದಿಂದ ಬರುವ ಮನೆಗಳನ್ನು ಅವರ ಪಕ್ಷದವರಿಗೆ ಮಾತ್ರವೇ ಕೊಟ್ಟಿದ್ದಾರೆ. ಮನೆಗಳು ಇಲ್ಲದವರು ಟಾರ್ಪಲ್ ಹಾಕಿಕೊಂಡು ಜೀವನ ಮಾಡುತ್ತಿದ್ದಾರೆ. ಆದ್ರೂ ವಿಧಾನಸಭೆಯಲ್ಲಿ ಸತ್ಯ ಹರಿಶ್ಚಂದ್ರ ರೀತಿ ಗುಡಿಸಲು ಮುಕ್ತ ತಾಲೂಕು ಮಾಡುತ್ತೇನೆಂದು ಭಾಷಣ ಮಾಡುತ್ತಾರೆ ಎಂದು ಹರಿಹಾಯ್ದರು.
ವೆಂಕಟಶಿವಾರೆಡ್ಡಿ ತಲೆ ಬಾಚ್ಕೋತಾರೆ ಅಂತಾರೆ. ನನಗೆ ಕೂದಲಿದೆ ತಲೆ ಬಾಚುತ್ತೇನೆ, ಅವರಿಗೆ ಕೂದಲಿಲ್ಲ ಏನು ಮಾಡೋಕೆ ಆಗುತ್ತೆ?. ನಾನು ರಮೇಶ್ ಕುಮಾರ್ ತರ ಕಳ್ಳ ಅಲ್ಲ. ಕಷ್ಟ ಪಟ್ಟು ದುಡಿದ ಹಣದಲ್ಲಿ ಒಳ್ಳೆಯ ಬಟ್ಟೆ ಕೊಳ್ಳುತ್ತೇನೆ. ಅವರು ಬಡವರ ರಕ್ತ ಹೀರಿ ಬದುಕುತ್ತಿದ್ದಾರೆ. ಯಾಕೆ ಇಂತಹ ಜೀವನ ಮಾಡುತ್ತೀರ ಎಂದು ವ್ಯಂಗ್ಯವಾಡಿದರು.
ಈ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಕಾಡದೇವಂಡಹಳ್ಳಿ ರಾಮಚಂದ್ರೇಗೌಡ, ಕೆಎಂಎಫ್ ಮಾಜಿ ನಿರ್ದೇಶಕ ಪಾಳ್ಯ ಬೈರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಮೀಸಗಾನಹಳ್ಳಿ ವೆಂಕಟರೆಡ್ಡಿ, ಬಿ.ಎ.ಶಿವಾರೆಡ್ಡಿ, ಗೋಪಾಲಗೌಡ, ದಳಸನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಬು ಸೇರಿದಂತೆ ಹಲವರು ಉಪಸ್ಥಿತರಿದ್ದರು.