ರಾಜ್ಯದಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸಿರುವ ಮಂಗಳೂರು ಆಟೋರಿಕ್ಷಾ ಸ್ಫೋಟ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು ಕೃತ್ಯ ಎಸಗುವ ಮುನ್ನ ಶಾರಿಕ್ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಒಡಾಡಿದ್ದ ಎಂದು ತಿಳಿದು ಬಂದಿದೆ.
ಮೈಸೂರಿನಲ್ಲಿ ಕೆಲದಿನ ವಾಸಿಸಿದ್ದ ಉಗ್ರ ಶಾರಿಖ್ ದೊಡ್ಡ ಬ್ಲಾಸ್ಟ್‌ಗೆ ಸಂಚು ರೂಪಿಸಿದ್ದ ಎಂಬ ಸಂಗತಿ ಪೊಲೀಸ್ ವಿಚಾರಣೆ ವೇಳೆ ತಿಳಿದು ಬಂದಿದೆ. 25ಕ್ಕೂ ಹೆಚ್ಚು ದಿನಗಳ ಕಾಲ ಮೊಬೈಲ್ ರಿಪೇರಿ ಟ್ರೈನಿಂಗ್ ಪಡೆದಿದ್ದ ಎಂಬ ಅಂಶ ಹೊರಬಂದಿದೆ.
ಮೊದಲಿಗೆ ಮೈಸೂರಿಗೆ ಬಂದ ಶಾರಿಖ್ ಲೋಕನಾಯಕನಗರದಲ್ಲಿ ಪ್ರೇಮ್ ರಾಜ್ ಅನ್ನೋ ನಕಲಿ ಆಧಾರ್ ಕಾರ್ಡ್ ನೀಡಿ ಮೋಹನ್ ಕುಮಾರ್ ಎಂಬುವರಿಗೆ ಸೇರಿದ ರೂಮ್ ಬಾಡಿಗೆ ಪಡೆದು ಜೀವನ ನಡೆಸಿದ್ದ. ಕೆಲದಿನಗಳ ಬಳಿಕ ಮೈಸೂರಿನ ಕೆಆರ್ ಮೊಹಲ್ಲಾದಲ್ಲಿರೋ SMM ಮೊಬೈಲ್ ರಿಪೇರಿ ಅಂಗಡಿಯಲ್ಲಿ ಮೊಬೈಲ್ ರಿಪೇರಿ ತರಬೇತಿಗೆ ಸೇರಿಕೊಂಡಿದ್ದ. ಒಟ್ಟು 45 ದಿನಗಳ ಕಾಲ ನಡೆಯೋ ಟ್ರೈನಿಂಗ್ ಗೆ ಆಗ್ಗಾಗ್ಗೆ ಮಾತ್ರ ಆಗಮಿಸಿ ಕಡಿಮೆ ಅವಧಿಯಲ್ಲಿ ರಿಪೇರಿ ಮಾಡೋದನ್ನ ಕಲಿತಿದ್ದ ಎಂದು ತಿಳಿದು ಬಂದಿದೆ.

ಎಲ್ಲರ ಜೊತೆ ಸೌಮ್ಯವಾಗಿ ವರ್ತಿಸುತ್ತಿದ್ದ. ಒಟ್ಟು 45 ದಿನಗಳ ಕ್ಲಾಸ್ ಗೆ ಪದೇ ಪದೇ ಚಕ್ಕರ್ ಹಾಕುತ್ತಿದ್ದನಂತೆ. ಒಟ್ಟು 25 ದಿನಗಳ ಕಾಲ ಕ್ಲಾಸ್ ಗೆ ಹಾಜರಾಗಿದ್ದ. ಹಾಗೆಯೇ ತನಗೆ ಬರುವ ಮೊಬೈಲ್ ಕರೆಗಳನ್ನ ಕನ್ನಡದಲ್ಲೇ ಉತ್ತರಿಸುತ್ತಿದ್ದ ಎಂದು ವಿಚಾರಣೆ ವೇಳೆ ಅಂಗಡಿ ಮಾಲೀಕ ಪ್ರಸಾದ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ತನಿಖೆಗೆ ಅಗಮಿಸಿದ ವೇಳೆ ಎಲ್ಲ ಸತ್ಯ ಸಂಗತಿಗಳನ್ನು ಬಾಯಿಬಿಟ್ಟಿದ್ದಾರೆ. ಶಾರಿಕ್ ಚಲನವಲನ ಹಾಗೂ ಆತನ ಬಗ್ಗೆ ಗೊತ್ತಿದ್ದ ಪ್ರತಿಯೊಂದು ಮಾಹಿತಿಯನ್ನು ಪೊಲೀಸರ ಮುಂದೆ ತೆರೆದಿಟ್ಟಿದ್ದಾರೆ.ಮುಂದಿನ ದಿನಗಳಲ್ಲಿ ವಿಚಾರಣೆಗೆ ಸಹಕಾರ ನೀಡುವ ಭರವಸೆ ನೀಡಿದ್ದಾರೆ.
ಕೇರಳ ಹಾಗೂ ತಮಿಳುನಾಡು ಭಾಗಕ್ಕೆ ಮೈಸೂರು ಹತ್ತಿರವಾಗಿದೆ. ಹೀಗಾಗಿಯೇ ಉಗ್ರವಾದ ಚಟುವಟಿಕೆಗೆ ಮೈಸೂರನ್ನ ಹೆಚ್ಚು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪ ಮುಂಚಿನಿಂದಲೂ ಇದೆ. ಶಾರಿಕ್ ಕೃತ್ಯ ಬೆಳಕಿಗೆ ಬಂದ ಮೇಲೆ ಈ ಮಾತಿಗೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ. ಪೊಲೀಸರು ಸೆಕ್ಯೂರಿಟಿ ಟೈಟ್ ಮಾಡಿ ಇನ್ನಷ್ಟು ನಿಗಾವಹಿಸಬೇಕಾಗಿದೆ.