ಮುಂದಿನ ವರ್ಷ ನಡೆಯಲಿರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ವಿರೋಧ ಪಕ್ಷಗಳ ಒಗ್ಗಟ್ಟಿಗೆ ತಯಾರಿ ನಡೆಸಿದ್ದಾರೆ. ಅದರ ಭಾಗವಾಗಿ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಜೊತೆ ಸಭೆ ನಡೆಸಿರುವ ಪವಾರ್ ವಿರೋಧ ಪಕ್ಷಗಳ ಸಭೆ ಕರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಜಂಟಿ ಹೋರಾಟದ ಕುರಿತು ಚರ್ಚಿಸಲು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಶರದ್ ಪವಾರ್ ವಿರೋಧ ಪಕ್ಷಗಳ ಸಭೆ ಕರೆದಿದ್ದಾರೆ ಎಂದು ಎನ್‌ಸಿಪಿ ತಿಳಿಸಿದೆ.

ಬಂಗಾಳ ಚುನಾವಣೆಗೂ ಕೆಲವೇ ದಿನಗಳ ಮೊದಲು ಟಿಎಂಸಿ ಸೇರಿದ ಬಿಜೆಪಿ ಮಾಜಿ ನಾಯಕ ಯಶವಂತ ಸಿನ್ಹಾ ಹಾಗೂ ಶರದ್ ಪವಾರ್ ಪರವಾಗಿ ಹಲವಾರು ಪಕ್ಷಗಳಿಗೆ ಈ ಸಭೆಗೆ ಆಹ್ವಾನ ಹೋಗಿದೆ.
ಶರದ್ ಪವಾರ್ ಹಾಗೂ ಯಶವಂತ್ ಸಿನ್ಹಾ ಅಧ್ಯಕ್ಷತೆಯಲ್ಲಿ ಪ್ರಸ್ತುತ ರಾಷ್ಟ್ರೀಯ ರಾಜಕೀಯದ ಕುರಿತು ಚರ್ಚೆ ನಡೆಯಲಿದೆ. ಸಭೆಯಲ್ಲಿ ನಿಮ್ಮ ಉಪಸ್ಥಿತಿಗೆ ಯಶವಂತ್ ಸಿನ್ಹಾ ಅವರು ಮನವಿ ಮಾಡಿದ ಆಹ್ವಾನ ಪತ್ರಗಳು ಪಕ್ಷಗಳಿಗೆ ತಲುಪಿದೆ.
ಆರ್‌ಜೆಡಿ ನಾಯಕ ಮನೋಜ್ ಜ್ಹಾ, ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್, ಕಾಂಗ್ರೆಸ್ ನಾಕರುಗಳಾದ ವಿವೇಕ್ ತನ್ಹಾ, ಕಪಿಲ್ ಸಿಬಲ್, ಜಮ್ಮು ಕಾಶ್ಮೀರ ರಾಜಕಾರಣಿ ಫಾರೂಕ್ ಅಬ್ದುಲ್ಲಾ ಮೊದಲಾದ ಪ್ರಮುಖ ನಾಯಕರಿಗೆ ಆಹ್ವಾನ ಹೋಗಿದೆ. ತಮಿಳುನಾಡಿನ ಆಡಳಿತರೂಢ ಪಕ್ಷ ಡಿಎಂಕೆಯನ್ನು ತಿರುಚಿ ಶಿವ ಪ್ರತಿನಿಧಿಸಲಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಎನ್‌ಸಿಪಿಯ ನವಾಬ್ ಮಲಿಕ್ ಮಾಡಿದ ಟ್ವೀಟ್ ಪ್ರಕಾರ, ನಿವೃತ್ತ ನ್ಯಾಯಮೂರ್ತಿ ಎಪಿ ಸಿಂಗ್, ಕವಿ ಜಾವೇದ್ ಅಖ್ತರ್, ಕೆಟಿಎಸ್ ತುಳಸಿ, ಅಶುತೋಷ್, ಮಾಜಿ ಚುನಾವಣಾ ಆಯುಕ್ತ ಎಸ್‌ವೈ ಖುರೇಷಿ, ವಕೀಲ ಕಾಲಿನ್ ಗೊನ್ಸಾಲ್ವೆಸ್ ಮತ್ತು ಪತ್ರಕರ್ತ ಕರಣ್ ಥಾಪರ್ ಮತ್ತು ಪ್ರಿತೀಶ್ ನಂದಿ ಮೊದಲಾದ ಘಟಾನುಘಟಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಜೊತೆಗೆ ಶರದ್ ಪವಾರ್ ಚರ್ಚಿಸಿದ ಬಳಿಕ ವಿರೋಧ ಪಕ್ಷಗಳ ಸಭೆಯ ವಿವರಗಳು ಹೊರಬಂದಿದೆ. 2024 ರ ಲೋಕಸಭೆಯ ಚುನಾವಣೆಯಲ್ಲಿ ಎನ್‌ಡಿಎ ವಿರುದ್ಧವಾಗಿ ವಿರೋಧ ಪಕ್ಷಗಳು ʼಮಿಷನ್ 2024ʼ ಎಂಬ ಊಹಾಪೋಹಗಳು ರಾಷ್ಟ್ರ ರಾಜಕಾರಣದಲ್ಲಿ ಈಗಾಗಲೇ ಹರಿದಾಡತೊಡಗಿದೆ. ಈ ಊಹಾಪೋಹಗಳ ನಡುವೆಯೇ, ಜೂನ್ 11 ರಂದು ಪವಾರ್ ಮನೆಯಲ್ಲಿ ಪ್ರಶಾಂತ್ ಕಿಶೋರ್ ಭೇಟಿಯಾಗಿ 3 ಗಂಟೆಗಳ ಕಾಲ ಚರ್ಚಿಸಿದ್ದರು.
ಮೂಲಗಳ ಪ್ರಕಾರ, ಶರದ್ ನೇತೃತ್ವದ ವಿರೋಧ ಪಕ್ಷಗಳ ಸಭೆಯು ಆರಂಭಿಕವಾಗಿ ಉತ್ತರಪ್ರದೇಶವನ್ನು ಗುರಿ ಮಾಡಲಿದೆ. ಆಡಳಿತ ವಿರೋಧಿ ಅಲೆ ಹಾಗೂ ಯೋಗಿ ವಿರುದ್ಧದ ಬಿಜೆಪಿ ನಾಯಕರ ಭಿನ್ನಮತವನ್ನು ಶರದ್ ಪವಾರ್ ಉಪಯೋಗಿಸಲು ತಂತ್ರ ಹೂಡಿದ್ದಾರೆನ್ನಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ತನ್ನ ಕಾರ್ಯತಂತ್ರದ ಮೂಲಕ ಮಮತಾ ಗೆಲುವಿಗೆ ಸಹಕಾರಿಯಾಗಿದ್ದ ಪ್ರಶಾಂತ್ ಕಿಶೋರ್, ಎನ್‌ಡಿಎ ವಿರುದ್ಧದ ಹೋರಾಟಕ್ಕೆ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಸಾಕಷ್ಟು ಕುತೂಹಲ ಮೂಡಿಸಿದೆ. ಎನ್‌ಡಿಎ ವಿರುದ್ಧ ಬಿಜೆಪಿಯೇತರ ಪಕ್ಷಗಳ ಒಗ್ಗಟ್ಟಿನ ಕುರಿತಂತೆ ಈ ಹಿಂದೆ ಮಮತಾ ಬ್ಯಾನರ್ಜಿ ಹಾಗೂ ಶಿವಸೇನೆ ನಾಯಕ ಸಂಜಯ್ ರಾವತ್ ದನಿಯೆತ್ತಿರುವ ಹಿನ್ನೆಲೆಯಲ್ಲಿ ಈ ಸಭೆಯು ಮಹತ್ವಪೂರ್ಣದ್ದೆನಿಸಿದೆ.












