ಧ್ವಜ ಖರೀದಿಸದೇ ಇದ್ದರೆ ರೇಷನ್ ಕೊಡಲ್ಲ ಎಂದು ಕೆಲವು ರೇಷನ್ ಅಂಗಡಿ ಮಾಲೀಕರು ಹೇಳುತ್ತಿರುವ ವೀಡಿಯೋ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.
ರೇಷನ್ ಕಾರ್ಡ್ ಹೊಂದಿದವರು ರೇಷನ್ ಪಡೆಯಲು ಅಂಗಡಿಗೆ ಹೋದಾಗ 20 ರೂ. ಕೊಟ್ಟು ಧ್ವಜ ಖರೀದಿಸಬೇಕು ಎಂದು ಷರತ್ತು ಹಾಕಿದ್ದಾರೆ. ಒಂದು ವೇಳೆ ರಾಷ್ಟ್ರಧ್ವಜ ಖರೀದಿಸದೇ ಇದ್ದರೆ ರೇಷನ್ ಕೊಡಲ್ಲ ಎಂದು ಅಂಗಡಿ ಮಾಲೀಕರು ಗ್ರಾಹಕರಿಗೆ ಹೇಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೇಶ ೭೫ನೇ ಸ್ವಾತಂತ್ರ್ಯ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಧ್ವಜ ಖರೀದಿಸಲಿಲ್ಲ ಅಂತ ರೇಷನ್ ಕೊಡದೇ ಇರುವುದು ದೇಶದ ಬಡವರಿಗೆ ಮಾಡುವ ಅಪಮಾನ. ಈ ರೀತಿ ಸ್ವಾತಂತ್ರ್ಯೋತ್ಸವ ಆಚರಿಸುವುದು ಬಡವರಿಗೆ ಹೊರೆ ಆಗುತ್ತಿರುವುದು ವಿಷಾದನೀಯ ಎಂದು ವರುಣ್ ಗಾಂಧಿ ಹೇಳಿದರು.

ದೇಶದ ಧ್ವಜ ಪ್ರತಿಯೊಬ್ಬರ ಹೃದಯದಲ್ಲಿದೆ. ಆದರೆ ಧ್ವಜ ಖರೀದಿಸದೇ ಬೇಳೆ-ಕಾಳು ಕೊಡುವುದಿಲ್ಲ ಎಂದು ಹಣ ವಸೂಲು ಮಾಡುವುದು ಸರಿಯಲ್ಲ. ಈ ನೆಪದಲ್ಲಿ ಬಡವರನ್ನು ದೋಚುವುದು ಅಪರಾಧ ಎಂದು ವರುಣ್ ಗಾಂಧಿ ಅಸಮಾಧಾನ ಹೊರಹಾಕಿದ್ದಾರೆ.
ನಮಗೆ ಮೇಲಿಂದ ಆದೇಶ ಬಂದಿದೆ. ರೇಷನ್ ಪಡೆಯುವ ಪ್ರತಿಯೊಬ್ಬ ವ್ಯಕ್ತಿಗೆ ೨೦ ರೂ.ಗೆ ಧ್ವಜ ಮಾರಾಟ ಮಾಡಬೇಕು. ಯಾರೂ ಖರೀದಿಸುವುದಿಲ್ಲವೋ ಅವರಿಗೆ ರೇಷನ್ ನೀಡಬೇಡಿ ಎಂದು ಹರಿಯಾಣದ ಕರ್ನಲ್ ನ ರೇಷನ್ ಅಂಗಡಿ ಮಾಲೀಕ ಹೇಳಿಕೆ ನೀಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲೆಡೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.