ದಾವಣಗೆರೆ: ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ(Shamanur Shivashankarappa) ನಿನ್ನೆ ಸಂಜೆ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ನಿನ್ನೆ ತಡರಾತ್ರಿ ಬೆಂಗಳೂರಿನಿಂದ ದಾವಣಗೆರೆಯ ನಿವಾಸಕ್ಕೆ ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರರವನ್ನು ರವಾನೆ ಮಾಡಲಾಗಿದೆ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ ನಿವಾಸ ಹಾಗೂ ದ್ವಿತೀಯ ಪುತ್ರ ಎಸ್.ಎಸ್.ಗಣೇಶ್ ನಿವಾಸದಲ್ಲಿ ಪೂಜೆ ಬಳಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ದರ್ಶನದ ಬಳಿಕ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರರಕ್ಕೆ ರಾಷ್ಟ್ರಧ್ವಜ ಹೊದಿಸಿ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು.

ಪಂಚಪೀಠ ಜಗದ್ಗುರುಗಳ ಸಮಕ್ಷಮದಲ್ಲಿ ಅವರಗೊಳ್ಳದ ಓಂಕಾರೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಣವಕೊಪ್ಪ ಸ್ವಾಮೀಜಿ ನೇತೃತ್ವದಲ್ಲಿ ಅಂತಿಮ ವಿಧಿವಿಧಾನ ನಡೆದಿದ್ದು, ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆದಿದೆ. ಕಲ್ಲೇಶ್ವರ ಮಿಲ್‌ನಲ್ಲಿ ಧರ್ಮಪತ್ನಿ ಪಾರ್ವತಮ್ಮ ಸಮಾಧಿ ಪಕ್ಕದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆ ನಡೆದಿದ್ದು, ವಿಭೂತಿ, ಬಿಲ್ವಪತ್ರೆ ಹಾಗೂ ಗಂಗಾಜಲ ಹಾಕಿ ಮಣ್ಣು ಹಾಕದೇ ಕ್ರಿಯಾ ಸಮಾಧಿ ಮಾಡಲಾಗಿದೆ. ಶಿವೈಕ್ಯರಾದ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆಗೆ ಸಿದ್ದಗಂಗಾ ಮಠದಿಂದ ಬಂದ ಸುಮಾರು 100 ವಿಶೇಷ ವಿಭೂತಿ ಗಟ್ಟಿಯನ್ನು ಬಳಸಲಾಗಿದೆ ಎನ್ನುವುದು ಗಮನಾರ್ಹ.










