ಕೋವಿದ್ 19 ಸಂದರ್ಭದಲ್ಲಿ ಒಕ್ಕೂಟ ಸರ್ಕಾರ ಘೋಷಿಸಿದ ಹಠಾತ್ ಲಾಕ್‍ಡೌನ್ ಕೇವಲ ಅಂಗಡಿ ಮುಗ್ಗಟ್ಟುಗಳನ್ನು, ಉದ್ದಿಮೆಗಳನ್ನು, ಕಚೇರಿಗಳನ್ನು ಮುಚ್ಚಿಸಲಿಲ್ಲ. ಈ ದೇಶದ ಲಕ್ಷಾಂತರ ವಲಸೆ ಕಾರ್ಮಿಕರ ಬದುಕಿನ ಪ್ರವೇಶ ದ್ವಾರಗಳನ್ನೇ ಮುಚ್ಚಿಬಿಟ್ಟಿತ್ತು. ತಮ್ಮ ವೇತನ ಹೆಚ್ಚಳಕ್ಕಾಗಿ ಮುಷ್ಕರ ಹೂಡಿ ಒಂದು ದಿನದ ವೇತನ ಕಳೆದುಕೊಂಡರೆ ಹುಯಿಲೆಬ್ಬಿಸುವ ಮಧ್ಯಮ ವರ್ಗದ ಹಿತವಲಯಗಳಿಗೆ, ದುಡಿಮೆಯ ನೆಲೆ ಕಳೆದುಕೊಳ್ಳುವುದರಿಂದ ಶ್ರಮಜೀವಿಯೊಬ್ಬ ಏನೆಲ್ಲಾ ಅನುಭವಿಸುತ್ತಾನೆ ಎಂದು ಅರ್ಥಮಾಡಿಸುವಲ್ಲಿ ಈ ಕಥನ ಯಶಸ್ವಿಯಾಗುತ್ತದೆ. ಲಾಕ್ ಡೌನ್ ಸಂದರ್ಭದಲ್ಲಿ ಎಷ್ಟು ಮಂದಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಿದರು, ಎಷ್ಟು ಜನ ಮನೆ ತಲುಪಿದರು, ಎಷ್ಟು ಮಂದಿ ರಸ್ತೆಯಲ್ಲೇ ಸಾವನ್ನಪ್ಪಿದರು, ಎಷ್ಟು ಜನ ಕಾಣೆಯಾದರು ಈ ಯಾವುದೇ ಮಾಹಿತಿ ಸರ್ಕಾರದ ಬಳಿ ಇಲ್ಲ. ಸಾವಿರಾರು ಕಿಲೋಮೀಟರ್ ದೂರ ನಡೆಯುತ್ತಾ ರಸ್ತೆ ಅಪಘಾತಗಳಿಗೀಡಾಗಿ, ಹಸಿವಿನಿಂದ ಬಳಲಿ, ಆಘಾತಕ್ಕೀಡಾಗಿ ಮಡಿದವರ ಸಂಖ್ಯೆಯೂ ಸರ್ಕಾರದ ಬಳಿ ಇಲ್ಲ. ಪೌರತ್ವವನ್ನು ಸಾಬೀತುಪಡಿಸಲು ಹೊಸ ನೀತಿಯನ್ನೇ ಜಾರಿಗೊಳಿಸಲು ಮುಂದಾಗಿದ್ದ ಒಂದು ಸರ್ಕಾರಕ್ಕೆ, ಈ ದೇಶದಲ್ಲಿ ವಲಸೆ ಕಾರ್ಮಿಕರು ಎಷ್ಟಿದ್ದಾರೆ, ಎಲ್ಲೆಲ್ಲಿದ್ದಾರೆ ಎಂಬ ಮಾಹಿತಿಯೇ ಇಲ್ಲ !!!
ಈ ದುರಂತದ ನಡುವೆಯೇ ಲಕ್ಷಾಂತರ ಕಾರ್ಮಿಕರು ಲಾಕ್ ಡೌನ್ ಸಂದರ್ಭದಲ್ಲಿ ಕಾಲ್ನಡಿಗೆಯಲ್ಲಿ ತಮ್ಮ ತವರು ಮನೆಗಳಿಗೆ ತೆರಳಿದರು. ವ್ಯವಸ್ಥೆಯ ದೃಷ್ಟಿಯಲ್ಲಿ ಈ ಕಾಲ್ನಡಿಗೆಯ ಪಯಣಿಗರೂ ಅಪರಾಧಿಗಳಾಗಿಯೇ ಕಂಡರು. ಪೊಲೀಸರ ಲಾಠಿ ಇವರಿಗೇನೂ ವಿನಾಯಿತಿ ನೀಡಲಿಲ್ಲ. ಈ ಏಳು ಮಂದಿ ವಲಸೆ ಕಾರ್ಮಿಕರು ಕೆಲವೊಮ್ಮೆ ಕಾನೂನು ಉಲ್ಲಂಘಿಸುವ ಅಪರಾಧಿಗಳಾಗಿಯೂ ಕಂಡುಬರುತ್ತಾರೆ. ದೂರದ ಊರಿನಲ್ಲಿರುವ ತನ್ನ ಮಗುವಿಗಾಗಿ ಕೊಂಡಿರುವ ಚಪ್ಪಲಿ ಮತ್ತು ಆಟದ ಗೊಂಬೆಗಾಗಿ ಆಶಿಶ್ ಪರದಾಡುವುದನ್ನು ನೋಡಿದಾಗ, “ ಇಲ್ಲ ಸಾರ್, ಮನೆಯಲ್ಲಿ ಅಮ್ಮ ಊಟ ಮಾಡದೆ ನಮಗಾಗಿ ಕಾಯುತ್ತಾ ಅಳುತ್ತಿದ್ದಾರೆ ” ಎಂದು ರೀತೇಶ್ ಅಲವತ್ತುಕೊಂಡರೂ “ ತಾಯ್ಗಂಡ್ರಾ, ನಿಮ್ಮ ಅಮ್ಮಂದಿರಿಗೆ ಗಿರಾಕಿ ಹುಡುಕಿಕೊಂಡು ಹೊರಬಂದಿದ್ದೀರಾ ” ಎಂದು ಅಬ್ಬರಿಸುವ ಪೊಲೀಸರನ್ನು ನೋಡಿದಾಗ, ನಮ್ಮ ದೇಶ ಇನ್ನೂ ನಾಗರಿಕತೆಯ ಹಂತ ತಲುಪಿಲ್ಲ ಎಂದು ಸ್ಪಷ್ಟವಾಗುತ್ತದೆ.
ಪೊಲೀಸರ ಭೀತಿಯ ನಡುವೆಯೇ ನಡೆಯುತ್ತಾ ಹಾದಿ ಸವೆಸುವ ಏಳು ಮಂದಿ ನಡುನಡುವೆ ತಪ್ಪಿಸಿಕೊಳ್ಳುತ್ತಾರೆ, ಅವಿತುಕೊಳ್ಳುತ್ತಾರೆ, ಕಳ್ಳಹಾದಿಯನ್ನು ಹಿಡಿಯುತ್ತಾರೆ, ಅಪಾಯಕಾರಿ ನದಿ ದಾಟುತ್ತಾರೆ. ಈ ಪಯಣದ ನಡುವೆ ಅಲ್ಲಲ್ಲಿ ಮಾನವೀಯತೆಯ ಸ್ಪರ್ಶವನ್ನೂ ಪಡೆಯುತ್ತಾರೆ. ಕೆಲವು ಪೊಲೀಸ್ ಅಧಿಕಾರಿಗಳು, ಲಾರಿ ಚಾಲಕರು, ಪಂಕ್ಚರ್ ಅಂಗಡಿಯವರು ಜೀವ ಭಯದ ನಡುವೆಯೇ ಜೀವ ರಕ್ಷಣೆಗೆ ಮುಂದಾಗುವುದನ್ನು ನೋಡಿದಾಗ ನಮ್ಮ ಕ್ರೂರ ವ್ಯವಸ್ಥೆಯಲ್ಲೂ ಮಾನವೀಯ ತುಡಿತ ಜೀವಂತವಾಗಿದೆ ಎಂದು ಖುಷಿಯಾಗುತ್ತದೆ. ಒಂದೇ ರಾಜ್ಯದವರಾದರೂ ವಿಭಿನ್ನ ಹಿನ್ನೆಲೆಯಿಂದ ಬಂದಿರುವ ಏಳು ಮಂದಿ ವಲಸೆ ಕಾರ್ಮಿಕರು, ದಾರಿಯುದ್ದಕ್ಕೂ ತೋರುವ ಸಮನ್ವಯ, ಸಂಯಮ ಮತ್ತು ಸೌಹಾರ್ದತೆ ನಮ್ಮ ಸಮಾಜದಲ್ಲಿ ಶಿಥಿಲವಾಗುತ್ತಿರುವ ಸಂವೇದನೆಯನ್ನು ಕೊಂಚಮಟ್ಟಿಗಾದರೂ ಬಡಿದೆಬ್ಬಿಸುವಂತೆ ಕಾಣುತ್ತದೆ.
1232 ಕಿಲೋಮೀಟರ್ ದೂರದ ಊರನ್ನು ತಲುಪಲು ತಮ್ಮ ಸೈಕಲ್ಲುಗಳನ್ನು ಆಶ್ರಯಿಸಿದ ಈ ಏಳು ಮಂದಿ ವಲಸೆ ಕಾರ್ಮಿಕರನ್ನು ಪ್ರಾತಿನಿಧಿಕವಾಗಿ ನೋಡಿದಾಗ ಮಾತ್ರ ನಮಗೆ ವಲಸೆ ಕಾರ್ಮಿಕರ ಬವಣೆ ಅರ್ಥವಾಗಲು ಸಾಧ್ಯ. ನಡು ಹಾದಿಯಲ್ಲೇ ನಿರ್ಗಮಿಸಿದ ನೂರಾರು ವಲಸೆ ಕಾರ್ಮಿಕರ ಕುಟುಂಬಗಳಲ್ಲಿ ಇದ್ದಿರಬಹುದಾದ ಹತಾಶೆ, ಆತಂಕ, ವೇದನೆ ಮತ್ತು ನೋವಿನ ಕ್ಷಣಗಳನ್ನು ಈ ಏಳು ಜನರ ಪಯಣದ ಸಂದರ್ಭದಲ್ಲೇ ಗುರುತಿಸಲು ಸಾಧ್ಯ. ಒಂದು ದುರಂತ ಕಥನವನ್ನು ಮನಮುಟ್ಟುವಂತೆ ಲೇಖಕ ವಿನೋದ್ ಕಾಪ್ರಿ ಮಂಡಿಸುತ್ತಾ ಹೋಗುತ್ತಾರೆ. ಈ ವಲಸೆ ಕಾರ್ಮಿಕರ ದಿಟ್ಟತನ, ಧೈರ್ಯ, ಸಾಹಸ ಮತ್ತು ಮನೆ ತಲುಪುವ ಛಲ ಯಾವುದೇ ಶ್ರಮಜೀವಿ ವರ್ಗದಲ್ಲಿ ಕಾಣಬಹುದಾದ ಅಂತಃಶಕ್ತಿಯೇ ಆಗಿದೆ. ಅಧಿಕಾರ ಕೇಂದ್ರಗಳಲ್ಲಿರುವ ಪರಾವಲಂಬಿ ಜೀವಿಗಳಿಗೆ ಈ ಕಾರ್ಮಿಕರ ಬದುಕು ಮತ್ತು ಬವಣೆ ಅರ್ಥವಾದಾಗ ಮಾತ್ರವೇ ಭಾರತ ಒಂದು ಮಾನವೀಯ ದೇಶ ಎನಿಸಿಕೊಳ್ಳುತ್ತದೆ.
ವಲಸೆ ಕಾರ್ಮಿಕರ ಬವಣೆಯನ್ನು ಹೃದಯ ಕಲಕುವಂತೆ ವಿವರಿಸುವ ಅಧ್ಯಾಯ “ಭರವಸೆಯ ನೆಲ ” ಈ ಪಯಣದ ಆರನೆಯ ದಿನ. ಆ ಸಂದರ್ಭದಲ್ಲಿ ಕಾರ್ಮಿಕರು ಅನುಭವಿಸುವ ಹಸಿವಿನ ಯಾತನೆ, ಪೊಲೀಸರ ನಿರ್ದಯಿ ಧೋರಣೆ, ಅಧಿಕಾರಿಗಳ ಅಸಡ್ಡೆ ಮತ್ತು ಆಡಳಿತ ವ್ಯವಸ್ಥೆಯ ಕ್ರೌರ್ಯ , ನಾಗರಿಕತೆಯುಳ್ಳ ಯಾವುದೇ ವ್ಯಕ್ತಿಯನ್ನು ನಾಚಿ ತಲೆ ತಗ್ಗಿಸುವಂತೆ ಮಾಡುತ್ತದೆ. ತಮ್ಮ ಊರುಗಳಿಂದ ಕೇವಲ 50 ಕಿ.ಮೀ ದೂರದಲ್ಲಿದ್ದರೂ ಅನ್ನಾಹಾರಕ್ಕಾಗಿ ಹಾತೊರೆದು, ಬೇಡುವ ವಲಸೆ ಕಾರ್ಮಿಕರ ಪಾಡನ್ನು ಗಮನಿಸಿದಾಗ, ನಮ್ಮ ಪ್ರಭುತ್ವ ಮತ್ತು ಆಡಳಿತ ವ್ಯವಸ್ಥೆ ಬೌದ್ಧಿಕವಾಗಿ ಶಿಲಾಯುಗದಲ್ಲಿದೆ ಎನಿಸುತ್ತದೆ. ಈ ಧೋರಣೆಗೆ, ದುರವಸ್ಥೆಗೆ, ಅಟ್ಟಹಾಸಗಳಿಗೆ ಯಾರು ಕಾರಣ ? ಚುನಾಯಿತ ಸರ್ಕಾರವೇ, ಜನಪ್ರತಿನಿಧಿಗಳೇ, ಆಡಳಿತ ವ್ಯವಸ್ಥೆಯೇ ಅಥವಾ ಇವೆಲ್ಲವನ್ನೂ ನಿಯಂತ್ರಿಸುವ ಪ್ರಭುತ್ವವೇ ?
ಈ ಪ್ರಶ್ನೆ, ಜಿಜ್ಞಾಸೆಗಳ ನಡುವೆಯೇ ರೀತೇಶ್ ಮತ್ತವನ ಆರು ಸಂಗಡಿಗರು ತಮ್ಮ ಊರುಗಳನ್ನು ತಲುಪುತ್ತಾರೆ. ಲಾಕ್ ಡೌನ್ ಮುಗಿದ ನಂತರ ತಮ್ಮ ಕೆಲಸದ ಕ್ಷೇತ್ರಗಳಿಗೆ ಮರಳಿ ಬರುತ್ತಾರೆ. ಆದರೆ 1232 ಕಿಲೋಮೀಟರ್ ಕಾಲ್ನಡಿಗೆ, ಸೈಕಲ್ ಪಯಣದ ಸಂದರ್ಭದಲ್ಲಿ ಈ ವಲಸೆ ಕಾರ್ಮಿಕರು ಕಂಡ ಒಂದು “ ಭಾರತ ” ಎಲ್ಲಿಗೆ ತಲುಪುತ್ತಿದೆ ? ಕೋವಿದ್ ಒಂದು ಸಾಂಕ್ರಾಮಿಕವಾಗಿ ಜನರ ಬದುಕಿಗೆ ಮಾರಕವಾದರೆ, ನಮ್ಮ ಆಡಳಿತ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರ, ದಬ್ಬಾಳಿಕೆ, ಕ್ರೌರ್ಯ, ನಿಷ್ಕ್ರಿಯತೆ ಮತ್ತು ನಿರ್ದಯಿ ಮನೋಭಾವ ಇವೆಲ್ಲವೂ ಶ್ರಮಜೀವಿಗಳ ಬದುಕಿಗೆ ಮಾರಕವಾಗಿಯೇ ಕಾಣುತ್ತದೆ. ವಿನೊದ್ ಕಾಪ್ರಿ ಅವರ ಕ್ಯಾಮರಾ ಕಣ್ಣುಗಳು ಈ ಬದುಕಿನ ಒಂದು ಆಯಾಮವನ್ನು ಹಿಡಿದಿಟ್ಟು ಪುಸ್ತಕದ ರೂಪದಲ್ಲಿ ಹೊರಬಂದಿದೆ.
ರೀತೇಶ್ ಮತ್ತು ಅವನ ಆರು ಮಂದಿ ಸಂಗಡಿಗರ 1232 ಕಿಲೋಮೀಟರ್ ಪಯಣ, ಏಳು ದಿನಗಳ ಬವಣೆ ಈ ದೇಶದ ಕೋಟ್ಯಂತರ ಶ್ರಮಜೀವಿಗಳ ಬದುಕಿಗೆ ಕನ್ನಡಿ ಹಿಡಿದಂತೆಯೇ ಕಾಣುತ್ತದೆ. ಒಳಹೊಕ್ಕು ನೋಟುವ ಮುಕ್ತ ಮನಸ್ಸಿದ್ದವರಿಗೆ ಈ ಅದ್ಭುತ ಕೃತಿ ಕಣ್ತೆರೆಸುತ್ತದೆ. ಪಾಪಪ್ರಜ್ಞೆಯನ್ನು ಬಡಿದೆಬ್ಬಿಸುತ್ತದೆ. ಕಣ್ಣಂಚಿನ ಕಂಬನಿಗಳಲ್ಲೇ ಮತ್ತೊಂದು “ ಭಾರತದ ” ನೈಜ ಚಿತ್ರಣವನ್ನೂ ನೀಡುತ್ತದೆ.
ಈ ಚಿತ್ರಣವನ್ನು ನೀಡಿರುವ ವಿನೋದ್ ಕಾಪ್ರಿ ಮತ್ತು ಕನ್ನಡೀಕರಿಸಿರುವ ಜಿ ಟಿ ಸತೀಶ್ ಅಭಿನಂದನಾರ್ಹರು.