ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಮಸೀದಿಗಳ ಮೇಲೆ ಆಕ್ಷೇಪಾರ್ಹ ಬರಹಗಳು ಹಾಗು ವಸ್ತುಗಳನ್ನು ಎಸೆದು ಶಾಂತಿ ಸುವ್ಯವಸ್ಥೆಗೆ ಭಂಗ ತಂದ ಆರೋಪದ ಮೇಲೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಹೇಶ್ ಕುಮಾರ್ ಮಿಶ್ರಾ, ಪ್ರತ್ಯುಶ್ ಶ್ರೀವಾಸ್ತವ, ನಿತಿನ್ ಕುಮಾರ್, ದೀಪಕ್ ಕುಮಾರ್, ಬ್ರಿಜೇಶ್ ಪಾಂಡೆ, ಶತ್ರುಘ್ಞ ಪ್ರಜಾಪತಿ ಹಾಗೂ ವಿಮಲ್ ಪಾಂಡೆ ಎಂದು ಗುರುತಿಸಲಾಗಿದೆ. ಇವರೆಲ್ಲರು ಅಯೋಧ್ಯೆಯ ನಿವಾಸಿಗಳೆಂದು ತಿಳಿದು ಬಂದಿದೆ.
ಈ ಕುರಿತು ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಕುಮಾರ್ ಪಾಂಡೆ, ಘಟನೆಯಲ್ಲಿ ಒಟ್ಟು 11 ಜನ ಭಾಗಿಯಾಗಿದ್ದು ಈಗಾಗಲೇ 7 ಜನರನ್ನು ಬಂಧಿಸಲಾಗಿದೆ ಮಿಕ್ಕ ನಾಲ್ವರು ಆರೋಪಿಗಳು ತಲೆಮಾರಿಸಿಕೊಂಡಿದ್ದು ಅವರ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೊದಲು ನಾಲ್ಕು ದ್ವಿಚಕ್ರ ವಾಹನಗಳಲ್ಲಿ ಬಂದ ಎಂಟು ಆರೋಪಿಗಳು ಮಸೀದಿಯ ಹೊರಗೆ ಆಕ್ಷೇಪಾರ್ಹ ವಸ್ತುಗಳನ್ನು ಎಸೆದು ಪೋಸ್ಟರ್ಗಳನ್ನು ಅಂಟಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಘಟನೆ ನಡೆದ ಪ್ರದೇಶದ ಸುತ್ತಮುತ್ತವಿರುವ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಮೊಬೈಲ್ ಫೋನ್ ಹಾಗೂ ದ್ವಿಚಕ್ರವಾಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ದ ವಿವಿಧ ಮೊಕದ್ದಮೆಗಳಡಿಯಲ್ಲಿ ಪ್ರಕರಣವನ್ನ ದಾಖಲಿಸಲಾಗಿದೆ.
ದೆಹಲಿಯಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ನಡೆದ ಗಲಭೆಗೆ ಪ್ರತೀಕಾರವಾಗಿ ಗಲಭೆ ನಡೆಸಲು ಈ ತಂಡ ಸಂಚು ರೂಪಿಸಿತ್ತು ಎಂದು ತಿಳಿದು ಬಂದಿದೆ. ಮೊದಲು ಬೆನ್ನಿಗಂಜ್ ತಿಹಾರಾದಲ್ಲಿರುವ ಮಸೀದಿಯ ಬಳಿ ಹೋದಾಗ ಅಲ್ಲಿ ಪೊಲೀಸ್ ವಾಹನ ಇದಿದ್ದನ್ನು ನೋಡಿ ವಾಪಸ್ ತೆರಳಿದ್ದಾರೆ. ಆ ನಂತರ ಅಯೋಧ್ಯೆಯ ಕಾಶ್ಮೀರಿ ಮೊಹಲ್ಲಾ, ತತ್ಕಾ ಮಸೀದಿ, ಘೋಸಿಯಾನ ಮಸೀದಿ, ಈದ್ಗಾ ಸಿವಿಲ್ ಲೈನ್ ಮಸೀದಿ ಮತ್ತು ದರ್ಗಾ ಜೈಲ್ಲಿನ ಹಿಂಭಾಗದಲ್ಲಿರುವ ಮಸೀದಿಗಳ ಮೇಲೆ ಆಕ್ಷೇಪಾರ್ಹ ಪೋಸ್ಟರ್ಗಳನ್ನು ಅಂಟಿಸಿ ಕೆಲವು ವಸ್ತುಗಳನ್ನು ಎಸೆದು ಹೋಗಿದ್ದಾರೆ ಎಂದು ಶೈಲೇಶ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಬಂಧಿತ ಏಳು ಮಂದಿ ಪೈಕಿ ಮೂವರ ವಿರುದ್ದ ಈಗಾಗಲೇ ಹಲವು ಅಪರಾಧ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಮುಖ್ಯ ಆರೋಪಿ ಮಹೇಶ್, ವಿಮಲ್ ಹಾಗೂ ನಿತನ್ ವಿರುದ್ದ ಈಗಾಗಲೇ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ವಿರುದ್ದ ಐಪಿಸಿ ಸೆಕ್ಷನ್ 295, 295-A ಅಡಿಯಲ್ಲಿ ಪ್ರಕರಣ ದಾಖಲಿಸಿಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.