ತಿರುವನಂತಪುರಂ: ಕೇರಳದ ಕಲಮಸ್ಸೆರಿಯ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 23 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾರ್ಥನಾ ಸಭೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಕನಿಷ್ಠ ಮೂರು ಸ್ಫೋಟಗಳು ನಡೆದಿರವುದಾಗಿ ವರದಿಯಾಗಿವೆ.
ಕೊಚ್ಚಿಯಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಕಲಮಸ್ಸೆರಿಯ ಕೇಂದ್ರದಲ್ಲಿ ನಡೆದ ʼಯೆಹೋವನ ಸಾಕ್ಷಿಗಳ್ʼ ಎಂಬ ಸಮಾವೇಶದಲ್ಲಿ ಈ ಘಟನೆ ನಡೆದಿದೆ. ಪ್ರಾರ್ಥನಾ ಸಭೆಯಲ್ಲಿ ಸುಮಾರು 2,000 ಜನರು ಭಾಗವಹಿಸಿದ್ದರು.
ಪ್ರಾರ್ಥನೆಯ ಮಧ್ಯೆ ಮೊದಲ ಸ್ಫೋಟ ಸಂಭವಿಸಿದೆ ಎಂದು ಕನ್ವೆನ್ಷನ್ ಸೆಂಟರ್‌ನಲ್ಲಿದ್ದ ಜನರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಂತರ, ನಾವು ಇನ್ನೂ ಎರಡು ಸ್ಫೋಟಗಳನ್ನು ಕೇಳಿದ್ದೇವೆ ಎಂದು ಕೇಂದ್ರದ ಒಳಗಿದ್ದ ವೃದ್ಧೆಯೊಬ್ಬರು ಹೇಳಿದರು.
ಕೇರಳದ ಮುಖ್ಯಸ್ಥ ಪಿಣರಾಯಿ ವಿಜಯನ್ ಸ್ಫೋಟಗಳನ್ನು ‘ದುರದೃಷ್ಟಕರ’ ಎಂದು ಬಣ್ಣಿಸಿದ್ದಾರೆ ಮತ್ತು ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ರಾಜ್ಯದ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಫೋಟದ ಸ್ಥಳಕ್ಕೆ ತೆರಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಸ್ಫೋಟದ ಹಿನ್ನೆಲೆಯಲ್ಲಿ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ.
ಸ್ಫೋಟದ ಕಾರಣ ಇನ್ನೂ ತಿಳಿದುಬಂದಿಲ್ಲ, ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಯಲಿದೆ. ಏಜೆನ್ಸಿಯ ಫೊರೆನ್ಸಿಕ್ ತಂಡ ಈಗಾಗಲೇ ಘಟನಾ ಸ್ಥಳಕ್ಕೆ ತಲುಪಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ.












