ಹಿರಿಯ ಲೇಖಕ, ಸಮಾಜವಾದಿ ಚಿಂತಕ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಿ.ಎಸ್. ನಾಗಭೂಷಣ ಅವರು ಇಂದು ನಿಧನರಾಗಿದ್ದಾರೆ. ನಿಧನಕ್ಕೆ ಅನೇಕ ರಾಜಕೀಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ನಮ್ಮ ನಡುವಿನ ಹಿರಿಯ ಲೇಖಕ, ಚಿಂತಕ, ಹೋರಾಟಗಾರ ಡಿ.ಎಸ್.ನಾಗಭೂಷಣ್ ಅವರ ನಿಧನಕ್ಕೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸಂತಾಪ ವ್ಯಕ್ತಪಡಿಸಿದ್ದು, ಅನ್ಯಾಯ, ಅಸಮಾನತೆ ಮತ್ತು ಆತ್ಮವಂಚಕ ನಡವಳಿಕೆಗಳ ವಿರುದ್ಧದ ಹೋರಾಟಕ್ಕೆ, ಸಮಾಜವಾದಿ ಚಿಂತನೆಗಳನ್ನು ಅಸ್ತ್ರವಾಗಿ ಬಳಸುತ್ತಾ ಬಂದಿದ್ದ ಆತ್ಮೀಯರಾಗಿದ್ದ ಡಿ.ಎಸ್.ನಾಗಭೂಷಣ್ ಅವರ ಅಗಲಿಕೆಯಿಂದ ಆಘಾತಕ್ಕೀಡಾಗಿದ್ದೇನೆ. ಅವರ ಪತ್ನಿ ಮತ್ತು ಗೆಳೆಯರೆಲ್ಲರ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ಡಿ.ಎಸ್.ನಾಗಭೂಷಣ್ ಅವರ ‘ಗಾಂಧಿ ಕಥನ’ ವನ್ನು ಪ್ರೀತಿಯಿಂದ ಕಳಿಸಿಕೊಟ್ಟಿದ್ದರು. ಅದನ್ನು ಓದುತ್ತಿದ್ದೇನೆ ಎಂದಾಗ ಖುಷಿಪಟ್ಟಿದ್ದರು. ಲೋಹಿಯಾ ಚಿಂತನೆಯ ಪುಸ್ತಕಗಳೂ ಸೇರಿದಂತೆ ಅವರ ಎಲ್ಲ ಕೃತಿಗಳ ಮೂಲಕ ನಾಗಭೂಷಣ್ ನಮ್ಮ ನೆನಪಲ್ಲಿ ಸದಾ ಹಸಿರಾಗಿರುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬರಹಗಾರ ಹಾಗೂ ಸಾಮಾಜಿಕ ಚಿಂತಕ ಡಿ.ಎಸ್. ನಾಗಭೂಷಣ ಅವರು ಕಾಲವಾದ ವಿಷಯ ತಿಳಿದು ಬೇಸರವಾಯಿತು. ಗಾಂಧಿ ಚಿಂತನೆಗಳ ಬಗ್ಗೆ ಮತ್ತಷ್ಟು ಅರಿವು ಮೂಡಿಸಿದ ಅವರ ಅಗಲಿಕೆಯು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಸಂತಾಪಗಳು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
‘ಖ್ಯಾತ ವಿಮರ್ಶಕ, ‘ಗಾಂಧಿ ಕಥನ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದಿದ್ದ ಸಾಹಿತಿ ಡಿ.ಎಸ್. ನಾಗಭೂಷಣ ಅವರ ನಿಧನ ಸುದ್ಧಿ ದುಃಖ ತರಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇ ನೆ’ ಎಂದು ಕಾಂಗ್ರೆಸ್ ನಾಯಕ ಎಸ್.ಆರ್.ಪಾಟೀಲ ಟ್ವೀ ಟ್ ಮಾಡಿದ್ದಾರೆ.
ಕನ್ನಡದ ಹಿರಿಯ ಲೇಖಕ ಹಾಗೂ ಸಮಾಜವಾದಿ ಚಿಂತಕರಾದ ಡಿ.ಎಸ್.ನಾಗಭೂಷಣ ಅವರಿಗೆ ನಮ್ಮ ಅಂತಿಮ ನಮನಗಳು. ಬರಹಗಳ ಮೂಲಕ ಅವರು ನಮ್ಮ ಮನದಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಬೆಂಗಳೂರು ಅಧ್ಯಕ್ಷರು ಟ್ವೀಟ್ ಮಾಡಿದ್ದಾರೆ.
ಖ್ಯಾತ ಸಮಾಜವಾದಿ ಚಿಂತಕ ಲೇಖಕ ಹಾಗು ತಮ್ಮ ಜನಪ್ರಿಯ ‘ಗಾಂಧಿ ಕಥನ’ ಕೃತಿಗೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ಡಿ. ಎಸ್. ನಾಗಭೂಷಣ ರವರ ಅಕಾಲಿಕ ನಿಧನದಿಂದ ನಮ್ಮ ನಾಡು ಪ್ರಗತಿಪರ ಜನಪರ ಕಳಕಳಿಯ ಸಾಹಿತಿಯೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಮಾಜಿ ಸಂಸದ ಸಿ ನಾರಾಯಣಸ್ವಾಮಿ ಟ್ವೀಟ್ ಮಾಡಿದ್ದಾರೆ.
ಡಿ.ಎಸ್. ನಾಗಭೂಷಣ ಅವರ ಕಿರು ಪರಿಚಯ
ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ ನೆಲೆಸಿದ್ದ ನಾಗಭೂಷಣ ಅವರಿಗೆ 70 ವರ್ಷ ವಯಸ್ಸಾಗಿತ್ತು.ಮೃತರ ಅಂತ್ಯಕ್ರಿಯ ಇಂದು ಸಂಜೆ 4 ಗಂಟೆಗೆ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ನಡೆಯಲಿದೆ.
‘ಗಾಂಧಿ ಕಥನ ಕೃತಿ’ ಈಚೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪುರಸ್ಕೃತವಾಗಿತ್ತು. ಕೆ.ರಾಮದಾಸ್, ಕಡಿದಾಳು ಶಾಮಣ್ಣ ಸೇರಿದಂತೆ ಹಲವರ ಅಭಿನಂದನಾ ಗ್ರಂಥ ಹೊರತಂದಿದ್ದಾರೆ. ರಸಿಕ ರುದ್ರ ತಪಸ್ವಿ ಲೋಹಿಯಾ, ಸಮಾಜವಾದದ ಸಾಲುದೀಪಗಳು ಸೇರಿದಂತೆ ಹಲವು ಕೃತಿಗಳನ್ನು ಸಂಪಾದಿಸಿದ್ದಾರೆ.
ಅವರ ಸಂಪಾದಕತ್ವದಲ್ಲಿ ಸಮಾಜವಾದಿ ಮಾಸಿಕ ‘ಹೊಸ ಮನುಷ್ಯ’ ಪ್ರಕಟಗೊಳ್ಳುತ್ತಿತ್ತು. ಲೋಹಿಯಾ ಜನ್ಮಶತಾಬ್ಧಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಸಮಾಜವಾದಿ ಚಿಂತನೆಯ ಹಲವು ಕಾರ್ಯಾಗಾರಗಳನ್ನು ಆಯೋಜಿಸಿದ್ದರು. ಅವರಿಗೆ ಪತ್ನಿ, ಕವಯತ್ರಿ ಸವಿತಾ ನಾಗಭೂಷಣ ಇದ್ದಾರೆ. ಮೃತರ ಅಂತ್ಯ ಸಂಸ್ಕಾರ ಗುರುವಾರ ಸಂಜೆ 4ಕ್ಕೆ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ನೆರವೇರಲಿದೆ.
ರಾಜಕೀಯ ಗ್ರಹಿಕೆ ಮಾತ್ರವಲ್ಲ ಸಾಹಿತ್ಯ ಕೃತಿಗಳ ಸೂಕ್ಷ್ಮ ಓದುಗರಾಗಿದ್ದ ಇವರು ಎಂಥ ಅನಾರೋಗ್ಯದಲ್ಲಿಯೂ ‘ಹೊಸ ಮನುಷ್ಯ’ ಪತ್ರಿಕೆಯನ್ನು ನಿರಂತರವಾಗಿ ಹೊರತಂದಿದ್ದು ಅವರ ಬದ್ಧತೆಗೆ ಸಾಕ್ಷಿ. ಸಮಕಾಲೀನ ಚಿಂತನೆಗಳಿಗೆ ಸಂಬಂಧಿಸಿದ ಯಾವುದೇ ಗಂಭೀರ ವಿಷಯವನ್ನೂ ಕನ್ನಡದ ಜನರಿಗೆ ಓದಿಸಲೇಬೇಕು ಎಂದು ಹಟ ತೊಟ್ಟು ಅನುವಾದ ಮಾಡಿಸುತ್ತಿದ್ದರು.