ಉಕ್ರೇನ್ನಲ್ಲಿ (Ukraine) ವಾಸವಿದ್ದ ಹಲವು ಭಾರತೀಯರು, ವಿದ್ಯಾರ್ಥಿಗಳು ರಷ್ಯಾ ದಾಳಿಯಿಂದ (Russia War) ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಸದ್ಯ ಸುರಕ್ಷಿತ ಪ್ರದೇಶ, ಬಂಕರ್ಗಳಲ್ಲಿ (Bunkar) ಆಶ್ರಯ ಪಡೆಯುತ್ತಿರುವ ಅವರು, ವಿಡಿಯೋ ಮೂಲಕ ಸಹಾಯಕ್ಕಾಗಿ ಮನವಿ ಮಾಡುತ್ತಿದ್ದಾರೆ.
ಯುದ್ಧ ಪೀಡಿತ ಪೂರ್ವ ಉಕ್ರೇನ್ನಲ್ಲಿ ಸಿಲುಕಿ, ಸಂಕಷ್ಟದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ವಿಡಿಯೋ ಕ್ಲಿಪ್ ಅನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಟ್ವೀಟ್ ಮಾಡಿದ್ದು, ಆದಷ್ಟು ಬೇಗ ಸಂಕಷ್ಟದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ತುತ್ತು ಸಹಾಯಕ್ಕೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ವಿಡಿಯೋದಲ್ಲಿರುವ ಇಬ್ಬರು ವಿದ್ಯಾರ್ಥಿನಿಯರು ಬೆಂಗಳೂರು ಮೂಲದವರಾಗಿದ್ದಾರೆ. ತಮ್ಮನ್ನು ಬೆಂಗಳೂರಿನ ಮೇಘನಾ ಎಂದು ಪರಿಚಯಿಸಿಕೊಂಡಿರುವ ಯುವತಿ, ದೇಶದ ವಿವಿಧ ಭಾಗಗಳ ಭಾರತೀಯರು ಆಹಾರ, ನೀರು ಇಲ್ಲದೇ, ಉಸಿರುಗಟ್ಟಿಸುವ ವಾತಾವರಣದಲ್ಲಿ ಕಳೆದ 24 ಗಂಟೆಗಳಿಂದ ಬಂಕರ್ನಲ್ಲಿ ಸಿಲುಕಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ತಮಗೆ ಯಾವುದೇ ಸಹಾಯ ದೊರೆಯುತ್ತಿಲ್ಲವೆಂದೂ ತಿಳಿಸಿ, ರಕ್ಷಣೆ ಕೋರಿ ಭಾರತೀಯ ರಾಯಭಾರ ಕಚೇರಿಗೆ ಮನವಿ ಮಾಡಿದ್ದಾರೆ.