ಗೌತಮ್ ಅದಾನಿ ಕಂಪನಿಯನ್ನು ಆರೋಪ ಮುಕ್ತಗೊಳಿಸಿದ್ದ ಭಾರತದ ಭದ್ರತೆಗಳು ಮತ್ತು ವಿನಿಮಯ ಮಂಡಳಿ (ಸೆಬಿ) ಅಧಿಕಾರಿಯೊಬ್ಬರು ತಿಳಿದಿತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಗುರುವಾರ (ಆಗಸ್ಟ್ 31) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಅದಾನಿ ಕಂಪನಿಗಳನ್ನು ಆರೋಪ ಮುಕ್ತಗೊಳಿಸಿದ್ದ ಸೆಬಿಯ ಅಧಿಕಾರಿಯೊಬ್ಬರು ಈಗ, ಕಂಪನಿ ಒಡೆತನದ ಸುದ್ದಿ ಚಾನೆಲ್ವೊಂದರ ನಿರ್ದೇಶಕರಾಗಿದ್ದಾರೆ. ಅದಾನಿ ಸಮೂಹ ವಿರುದ್ಧ ತನಿಖೆ ನಡೆಸಿದ್ದ ವ್ಯಕ್ತಿಯೇ ಈಗ ಆ ಕಂಪನಿಯ ಉದ್ಯೋಗಿ. ಪರಿಸ್ಥಿತಿ ಹೀಗಿರುವಾಗ, ತನಿಖೆ ಯಾವ ರೀತಿ ಇರಲಿದೆ ಎಂಬುದನ್ನು ಊಹಿಸಬಹುದು” ಎಂದು ರಾಹುಲ್ ಟೀಕಿಸಿದ್ದಾರೆ.
ಅದಾನಿ ಸಮೂಹವು ಬದಲಿ ಕಂಪನಿಗಳ ಮೂಲಕ ಹಲವು ವರ್ಷಗಳ ಕಾಲ ತನ್ನದೇ ಷೇರುಗಳಲ್ಲಿ ಹೂಡಿಕೆ ಮಾಡಿತ್ತು ಎಂಬ ಆರೋಪಗಳ ಕುರಿತು ಜಂಟಿ ಸದನ ಸಮಿತಿಯಿಂದ (ಜೆಪಿಸಿ) ತನಿಖೆ ನಡೆಸುವಂತೆ ರಾಹುಲ್ ಗಾಂಧಿ ಗುರುವಾರ ಹೊಸ ಬೇಡಿಕೆ ಮುಂದಿಟ್ಟಿದ್ದಾರೆ.
‘ಇಂಡಿಯಾ’ ಮೈತ್ರಿಕೂಟದ ಸಭೆಯಲ್ಲಿ ಪಾಲ್ಗೊಳ್ಳಲು ಮುಂಬೈಗೆ ತೆರಳಿದ್ದ ರಾಹುಲ್, ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಅದಾನಿ ಸಮೂಹ ಕುರಿತ ಯಾವುದೇ ತನಿಖೆಯನ್ನು ಪ್ರಧಾನಿ ನರೇಂದ್ರ ಮೋದಿ ತಡೆಯುತ್ತಿದ್ದಾರೆ’ ಎಂದು ಆರೋಪಿಸಿದರು.
ಅದಾನಿ ಸಮೂಹದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಹಾಗೂ ಉದ್ಯಮಿ ಗೌತಮ್ ಅದಾನಿ ಅವರೊಂದಿಗಿನ ಪ್ರಧಾನಿ ನಂಟಿನ ಬಗ್ಗೆ ನಿರಂತರವಾಗಿ ಪ್ರಶ್ನೆಗಳನ್ನು ಕೇಳುತ್ತಿರುವ ರಾಹುಲ್, ‘ಅದಾನಿ ಹೆಸರನ್ನು ಪ್ರಸ್ತಾಪಿಸಿದ ಕೂಡಲೇ ಪ್ರಧಾನಿ ಅವರಿಗೆ ಮುಜುಗರವಾಗುತ್ತದೆ’ ಎಂದು ಛೇಡಿಸಿದರು.
`ಭಾರತ ಮತ್ತು ಮೋದಿ ಅವರ ಖ್ಯಾತಿಗೆ ಈಗ ಅಪಾಯ ಎದುರಾಗಿದೆ. ಇನ್ನೊಂದೆಡೆ, ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಿ- 20 ನಾಯಕರು ಭಾರತಕ್ಕೆ ಬರುತ್ತಿದ್ದಾರೆ. ಹಾಗಾಗಿ, ಶೃಂಗಸಭೆ ಆರಂಭವಾಗುವುದಕ್ಕೂ ಮುನ್ನವೇ ಅದಾನಿ ಕಂಪನಿ ಕುರಿತು ಎದ್ದಿರುವ ಸಂಶಯಗಳನ್ನು ಮೋದಿ ನಿವಾರಿಸಬೇಕು’ ಎಂದು ರಾಹುಲ್ ಒತ್ತಾಯಿಸಿದರು.
‘ಕೋಟ್ಯಂತರ ರೂಪಾಯಿ ಭಾರತದಿಂದ ಹೊರಗೆ ಹೋಗಿ, ಮತ್ತೆ ದೇಶದೊಳಗೆ ಹರಿದು ಬಂದಿದೆ. ಈ ರೀತಿ ಬಂದ ಹಣವನ್ನು ದೇಶದ ಮೂಲಸೌಕರ್ಯಗಳ ಖರೀದಿಗೆ ಅದಾನಿ ಸಮೂಹ ಬಳಸಿಕೊಂಡಿರುವುದಾಗಿ ವಿಶ್ವದ ಕೆಲ ಪ್ರಸಿದ್ಧ ವಿತ್ತ ಪತ್ರಿಕೆಗಳು ವರದಿ ಮಾಡಿವೆ’ ಎಂದು ರಾಹುಲ್ ಹೇಳಿದರು.
‘ಈ ಹಣ ಯಾರಿಗೆ ಸೇರಿದ್ದು ಎಂಬ ಪ್ರಶ್ನೆ ಎದುರಾಗಿದೆ. ಇದು ಅದಾನಿ ಅಥವಾ ಬೇರೆಯವರಿಗೆ ಸೇರಿದ ಹಣವೇ’ ಎಂದು ಪ್ರಶ್ನಿಸಿದರು.
`ಗೌತಮ್ ಅದಾನಿ ಅಣ್ಣ ವಿನೋದ್ ಅದಾನಿ, ನಾಸರ್ ಅಲಿ ಶಬನ್ ಅಪ್ಲಿ ಹಾಗೂ ಚೀನಿ ಪ್ರಜೆ ಚಾಂಗ್ ಚುಂಗ್-ಲಿಂಗ್ ಎಂಬುವವರು ಈ ಎಲ್ಲ ವ್ಯವಹಾರಗಳ ಸೂತ್ರಧಾರರಾಗಿದ್ದಾರೆ’ ಎಂದು ಆರೋಪಿಸಿದ ಅವರು, ‘ದೇಶದ ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡಲು ವಿದೇಶಿ ಪ್ರಜೆಗಳಿಗೆ ಏಕೆ ಅನುಮತಿ ನೀಡಲಾಯಿತು’ ಎಂದು ಪ್ರಶ್ನಿಸಿದರು.
‘ಕಂಪನಿಯ ಷೇರುಗಳಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಲು ಪ್ರಧಾನಿಗೆ ಆಪ್ತರಾಗಿರುವ ಈ ವ್ಯಕ್ತಿಗೆ (ಗೌತಮ್ ಅದಾನಿ) ಮಾತ್ರ ಏಕೆ ಅವಕಾಶ ನೀಡಲಾಗುತ್ತಿದೆ? ಈ ಬಗ್ಗೆ ಯಾವುದೇ ತನಿಖೆಯಾಗುತ್ತಿಲ್ಲ ಏಕೆ’ ಎಂದು ಪ್ರಶ್ನಿಸಿದ ಅವರು, ‘ಈ ಎಲ್ಲ ಆರೋಪಗಳ ಕುರಿತು ತನಿಖೆಗೆ ಜಂಟಿ ಸದನ ಸಮಿತಿಯನ್ನೇ ರಚಿಸಬೇಕು’ ಎಂದು ಆಗ್ರಹಿಸಿದರು.
‘ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಿ-20 ನಾಯಕರು ಭಾರತಕ್ಕೆ ಬಂದಿಳಿಯಲಿದ್ದಾರೆ. ಅದಾನಿ ಕಂಪನಿಯ ವಿಶೇಷತೆ ಹಾಗೂ ಅದಕ್ಕೆ ಹೆಚ್ಚು ಅನುಕೂಲ ಮಾಡಿಕೊಟ್ಟಿರುವ ಕುರಿತು ಜಿ-20 ನಾಯಕರು ಪ್ರಶ್ನಿಸಬಹುದು. ಹೀಗಾಗಿ, ಅದಾನಿ
ಕಂಪನಿ ವಿರುದ್ಧ ತನಿಖೆಗೆ ಪ್ರಧಾನಿ ಒಲವು ಹೊಂದಿಲ್ಲ’ ಎಂದು ರಾಹುಲ್ ಆರೋಪಿಸಿದರು.
`ಭಾರತದಲ್ಲಿ ಎಲ್ಲರಿಗೂ ಸಮಾನವಾದ ಅವಕಾಶಗಳು ಸಿಗುತ್ತಿಲ್ಲ. ವಿಮಾನ ನಿಲ್ದಾಣದಿಂದ ಹಿಡಿದು ಸಿಮೆಂಟ್ ಕಾರ್ಖಾನೆಗಳ ವರೆಗೆ ಅದಾನಿ ಏನನ್ನಾದರೂ ಖರೀದಿಸಬಹುದಾಗಿದೆ’ ಎಂದೂ ಟೀಕಿಸಿದರು.