ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಕೊರೋನಾ ವೈರಸ್ ಸೋಂಕಿಗೆ ಒಳಗಾದ ವಿದ್ಯಾರ್ಥಿಗಳ ಮತ್ತು ಸಿಬ್ಬಂದಿಗಳ ಸಂಖ್ಯೆ ಇಂದು 182 ಕ್ಕೆ ಏರಿದ್ದು, ಕಾಲೇಜ್ ಕ್ಯಾಂಪಸ್ ಈಗ ಕೋವಿಡ್ ಸೂಪರ್ ಸ್ಪ್ರೆಡರ್ ಸ್ವರೂಪ ಪಡೆದಿದೆ.
ನಿನ್ನೆ 66 ಪ್ರಕರಣಗಳು ಪತ್ತೆಯಾಗಿದ್ದು, ಒಂದೇ ದಿನದಲ್ಲಿ ಅದು 182ಕ್ಕೆ ಏರಿದ್ದು, ಕ್ಯಾಂಪಸ್‌ನಲ್ಲಿ ಆತಂಕ ಮೂಡಿಸಿದೆ.
ನವೆಂಬರ್ 17 ರಂದು ನಡೆದ ಫ್ರೆಶರ್ಸ್ ಪಾರ್ಟಿಯೇ ಈ ದಿಢೀರ್ ಉಲ್ಬಣಕ್ಕೆ ಕಾರಣವಾಗಿದೆ. ಸೋಂಕಿತರ ಪೈಕಿ ಹೆಚ್ಚಿನವರು ಇದೀಗ ಎಂಬಿಬಿಎಸ್ ಮೊದಲ ವರ್ಷಕ್ಕೆ ಸೇರಿದವರು.
ವೈದ್ಯಕೀಯ ಕಾಲೇಜು ಈಗ ಕೊವಿಡ್-19 ಕ್ಲಸ್ಟರ್ ಆಗಿದೆ ಎಂದು ತಿಳಿಸಿರುವ ಅಧಿಕಾರಿಗಳು, ,ಸೋಂಕಿತರಾದ ಹೆಚ್ಚಿನ ಜನರು ಸಂಪೂರ್ಣವಾಗಿ ಲಸಿಕೆ (ಎರಡೂ ಡೋಸ್) ಪಡೆದವರಾಗಿದ್ದರು ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಕ್ಯಾಂಪಸ್‌ನಲ್ಲಿ ಆಯೋಜಿಸಲಾದ ಫ್ರೆಶರ್ಸ್ ಪಾರ್ಟಿ ಕೋವಿಡ್ ಉಲ್ಬಣಕ್ಕೆ ಕಾರಣವಾಯಿತು. ಗುರುವಾರ, 300 ವಿದ್ಯಾರ್ಥಿ-ಸಿಬ್ಬಂದಿಗಳನ್ನು ಕೊವಿಡ್ ಪರೀಕ್ಷೆಗೆ ಒಳಪಡಿಸಿದಾಗ, ಸಂಪೂರ್ಣ ಲಸಿಕೆ (ಎರಡೂ ಡೋಸ್) ಪಡೆದ 66 ಜನರಲ್ಲಿ ಪಾಸಿಟಿವ್ ಕಂಡು ಬಂದಿತ್ತು. ಇಂದು ಕಾಲೇಜಿನಿಂದ ಹೆಚ್ಚಿನ ಜನರನ್ನು ಪರೀಕ್ಷಿಸಲಾಗುತ್ತಿದೆ. ಕೊರೋನಾದ ಹೊಸ ರೂಪಾಂತರ ಇರಬಹುದೇ ಎಂಬುದನ್ನು ತಿಳಿಯಲು ಸೋಂಕಿತರ ಮಾದರಿಗಳನ್ನು ಜೀನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಆಯುಕ್ತ ಡಿ ರಣದೀಪ್ ಹೇಳಿದ್ದಾರೆ. ನವೆಂಬರ್ 17 ರಂದು ಕಾಲೇಜಿನಲ್ಲಿ ನಡೆದ ಫ್ರೆಶರ್ಸ್ ಪಾರ್ಟಿ ಇದಕ್ಕೆಕಾರಣವಾಗಿದೆ ಎಂದು ಆರೋಗ್ಯ ಆಯುಕ್ತರು ತಿಳಿಸಿದ್ದಾರೆ.
ಸೋಂಕಿತರನ್ನು ಕ್ಯಾಂಪಸ್‌ನಲ್ಲಿಯೇ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಹಾಸ್ಟೆಲ್‌ಗಳನ್ನು ಸೀಲ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರಲ್ಲಿ ಹೆಚ್ಚಿನವರು ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ಅವರೆಲ್ಲರನ್ನೂ ಕ್ಯಾಂಪಸ್‌ನಲ್ಲಿಯೇ ಪ್ರತ್ಯೇಕಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯಶವಂತ್ ತಿಳಿಸಿದ್ದಾರೆ. ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ನಿನ್ನೆ ಕಾಲೇಜಿಗೆ ಭೇಟಿ ನೀಡಿ ಕಾಲೇಜು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೋಂಕು ಹರಡದಂತೆ ಕ್ರಮಗಳನ್ನು ಕೈಗೊಂಡಿದ್ದಾರೆ.
ಕೋವಿಡ್ ಪಾಸಿಟಿವ್ ರೋಗಿಗಳು ಸೌಮ್ಯ ಲಕ್ಷಣ ಹೊಂದಿದ್ದಾರೆ ಅಥವಾ ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ. ಅವರೆಲ್ಲ ಕ್ಯಾಂಪಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆಯು ಇಂದು ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಕ್ಲಿನಿಕಲ್ ಮತ್ತು ನಾನ್ ಕ್ಲಿನಿಕಲ್) ಸುಮಾರು 3,000 ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಪರೀಕ್ಷಿಸಲು ನಿರ್ಧರಿಸಿದೆ. ಇಲ್ಲಿಯವರೆಗೆ ಕನಿಷ್ಠ 1,000 ಜನರನ್ನು ಪರೀಕ್ಷಿಸಲಾಗಿದೆ ಮತ್ತು ಅವರ ವರದಿಗಳಿಗಾಗಿ ಕಾಯಲಾಗುತ್ತಿದೆ.
ಧಾರವಾಡ ಜಿಲ್ಲೆಯು ಶೂನ್ಯ ಧನಾತ್ಮಕತೆಯತ್ತ (ಜೀರೊ ಪಾಸಿಟಿವಿಟಿ) ಹೊರಳುತ್ತಿರುವ ಸಂದರ್ಭದಲ್ಲಿ ಕಾಲೇಜ್ ಪ್ರಕರಣವು ಹೊಸ ಆತಂಕ ಸೃಷ್ಟಿಸಿದೆ.
ಕಳೆದ ಕೆಲವು ವಾರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಹಲವಾರು ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ. ರಾಜ್ಯದಲ್ಲಿ ಇಂದು 306 ಹೊಸ ಪ್ರಕರಣಗಳು ವರದಿಯಾಗಿದ್ದು, ಶೇಕಡಾ 0.36 ರ ಪಾಸಿಟಿವಿಟಿ ದರವಿದೆ.