ಚಂದ್ರಯಾನ 3 ಯೋಜನೆ ರಾಕೆಟ್ ಉಡಾವಣೆ ವೇಳೆ ಕೌಂಟ್ಡೌನ್ ಹಿಂದಿನ ಧ್ವನಿಯಾಗಿದ್ದ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವಿಜ್ಞಾನಿ ಎನ್. ವಲರ್ಮತಿ (64) (N Valarmathi) ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಸೋಮವಾರ (ಸೆಪ್ಟೆಂಬರ್ 4) ವರದಿಯಾಗಿದೆ.
ತಮಿಳುನಾಡಿನ ಅರಿಯಾಲೂರ್ ಮೂಲದ ಇವರು ಶನಿವಾರ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಚಂದ್ರಯಾನ 3 ರಾಕೆಟ್ ಉಡಾವಣೆ ವೇಳೆ ಅಂತಿಮ ಕ್ಷಣಗಳಿಗೆ ಅವರು ಕೊನೆಯ ಬಾರಿ ವಲರ್ಮತಿ ಧ್ವನಿ ನೀಡಿದ್ದರು.
ಇಸ್ರೊ ಮಾಜಿ ನಿರ್ದೇಶಕ ಪಿ.ವಿ ವೆಂಕಟಕೃಷ್ಣನ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ, “ಶ್ರೀಹರಿಕೋಟಾದಿಂದ ಇಸ್ರೋ ಭವಿಷ್ಯದ ಮಿಷನ್ಗಳ ಕ್ಷಣಗಣನೆಗೆ ವಲರ್ಮತಿ ಮೇಡಂ ಅವರ ಧ್ವನಿ ಇರುವುದಿಲ್ಲ. ಚಂದ್ರಯಾನ-3ರ ಅಂತಿಮ ಕ್ಷಣಗಣನೆ ಅವರ ಕೊನೆಯ ಘೋಷಣೆಯಾಗಿತ್ತು. ಅನಿರೀಕ್ಷಿತ ನಿಧನ. ತುಂಬಾ ದುಃಖವಾಗುತ್ತಿದೆ. ಪ್ರಣಾಮಗಳು” ಎಂದು ಬರೆದುಕೊಂಡಿದ್ದಾರೆ.
ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಸ್ಮರಣಾರ್ಥವಾಗಿ ತಮಿಳುನಾಡು ಸರ್ಕಾರ ನೀಡುವ ಪ್ರತಿಷ್ಠಿತ ಅಬ್ದುಲ್ ಕಲಾಂ ಪ್ರಶಸ್ತಿಗೆ ವಲರ್ಮತಿ ಅವರು ಭಾಜನರಾಗಿದ್ದರು.
1959ರ ಜುಲೈ 31 ರಂದು ಜನಿಸಿದ ವಲರ್ಮತಿ ಅವರು 1984 ರಲ್ಲಿ ಇಸ್ರೋಗೆ ಸೇರಿ, ಹಲವಾರು ಕಾರ್ಯಾಚರಣೆಗಳಲ್ಲಿ ಭಾಗವಹಿಸಿದರು. ಅವರು RISAT-1 ರ ಪ್ರಾಜೆಕ್ಟ್ ಡೈರೆಕ್ಟರ್ ಆಗಿದ್ದರು, ಇದು ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ರಾಡಾ ಇಮೇಜಿಂಗ್ ಉಪಗ್ರಹ (RIS) ಮತ್ತು ದೇಶದ ಎರಡನೇ ಉಪಗ್ರಹವಾಗಿದೆ. ಏಪ್ರಿಲ್ 2012 ರಲ್ಲಿ RISAT-1 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.