ಪ್ರಭುತ್ವ ವಿರೋಧಿಯಾಗಿ ಆಪರೇಷನ್ ಕಮಲ ಮೂಲಕ ಅಧಿಕಾರದ ಗದ್ದುಗೆ ಹಿಡಿದ ಬಿಜೆಪಿ ನಾಗ್ಪುರದಿಂದ ಬರುವ ಎಲ್ಲಾ ನಿಯಮಗಳನ್ನು ಕಾರ್ಯಗತಕ್ಕೆ ತರುವ ದಿಕ್ಕಿನಲ್ಲಿದೆ. ಅಭಿವೃದ್ದಿ, ಜನ ಸೇವೆ ಬದಿಗಿಟ್ಟು ಸಂವಿಧಾನ ವಿರೋಧಿಯಾದ ಎಲ್ಲವನ್ನೂ ಮಾಡಿ ಜನರ ಮಧ್ಯೆ ಧರ್ಮದ ನೆಲೆಯಲ್ಲಿ ಧ್ವೇಷ ಬಿತ್ತು ಒಡೆದಾಳುವ ನೀತಿ ಪ್ರಯೋಗ ಮಾಡುತ್ತಿದೆ. ಒಂದು ಕಡೆ ಹಿಜಾಬ್, ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ನಿರ್ಬಂಧ, ಅಝಾನ್ ಹೀಗೆ ನೂರೆಂಟು ವಿವಾದಗಳನ್ನು ಹುಟ್ಟು ಹಾಕಿ ತಮ್ಮ ಹಿಡನ್ ಅಜೆಂಡಾಗಳನ್ನು ಜಾರಿ ಮಾಡುವತ್ತ ಹೆಜ್ಜೆ ಇಡುತ್ತಿದೆ. ಇದೀಗ 1 ರಿಂದ 10 ನೇ ತರಗತಿಗೆ ಮತ್ತೆ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಸದ್ಯ ಇರುವ ಪಠ್ಯಗಳಲ್ಲಿ ಟಿಪ್ಪು ಸೇರಿದಂತೆ ಹಲವು ದಿಗ್ಗಜರನ್ನು ವೈಭವೀಕರಿಸಲಾಗಿದೆ ಎಂದು ನೆಪಕೊಟ್ಟು ತಮ್ಮ ಹಿಡನ್ ಅಜೆಂಡಾ ಜಾರಿ ಮಾಡುವತ್ತ ಹೆಜ್ಜೆ ಇಟ್ಟಿದೆ.
ಹೌದು, ಸದ್ಯಕ್ಕೆ ಪಠ್ಯ ಪರಿಷ್ಕೃತ ವಿಚಾರ ಭಾರೀ ಸಂಚಲನ ಸೃಷ್ಟಿ ಮಾಡಿದೆ. ಶಾಲ ಮಟ್ಟದ ಪಠ್ಯಗಳನ್ನು ಬದಲಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಧರ್ಮದ ಹೆಸರಿನಲ್ಲಿ ಪಠ್ಯಗಳಲ್ಲಿ ಅನೇಕ ಸಿಲೆಬಸ್‌ಗಳಿಗೆ ಕತ್ತರಿ ಹಾಕಲು ತಯಾರಾಗಿದೆ. ಇದಕ್ಕೆ ಮಕ್ಕಳಿಗೆ ಓದಲು ಗೊಂದಲ ಸೃಷ್ಟಿಯಾಗ್ತಿದ್ದು, ವೈಭವೀಕರಣ ಸರಿ ಅಲ್ಲ ಎಂಬ ಕುಂಟು ನೆಪವನ್ನು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ರಚನಾ ಸಮಿತಿ ತಿಳಿಸಿದೆ.
ʻʻಸದ್ಯಕ್ಕೆ ಇರುವ ಪುಸ್ತಕಗಳಲ್ಲಿ ಟಿಪ್ಪುವನ್ನು ಬಹಳ ವೈಭವೀಕರಿಸಿ ಅನೇಕ ಪುರಾವೆ ಇಲ್ಲದನ್ನು ಬರೆಯಲಾಗಿದೆ. ಇದು ಸರಿಯಲ್ಲ. ಹಾಗೇ ಮೈಸೂರು ಹುಲಿ ಎಂಬ ಬಿರುದು ಕೂಡಾ ಯಾರು ಕೊಟ್ಟಿದ್ದು..? ಅನ್ನೋದನ್ನ ಪರಿಶೀಲಿಸಿ ನೋಡಲಾಗುವುದು. ಅಂತಹ ಬಿರುದನ್ನು ತೆಗೆಯಲಾಗುವುದು ಎಂದು ಪಠ್ಯ ಪರಿಷ್ಕೃತ ಸಮಿತಿಯಿಂದ ಹೇಳಲಾಗಿದೆ. ಟಿಪ್ಪುವಿನ ವಿಚಾರವಾಗಿ ಸತ್ಯಕ್ಕೆ ದೂರವಾದ ಅಂಶಗಳನ್ನ ತೆಗೆದು ಹಾಕಲಾಗಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಇಟ್ಟಿದ್ದು ಟಿಪ್ಪು ಎನ್ನುವಂತಹ ವಿಚಾರಗಳಿಗೆ ಸಂಪೂರ್ಣ ಕತ್ತರಿ ಬೀಳಲಿದ್ದು, ಕೇವಲ ಟಿಪ್ಪು ಸುಲ್ತಾನ ಮಾತ್ರವಲ್ಲ ಶಿವಾಜಿ ವೈಭವಕ್ಕೂ ಕತ್ತರಿ ಹಾಕುತ್ತೇವೆ. ಯಾವುದೇ ವ್ಯಕ್ತಿ ಯ ವೈಭವೀಕರಣ ಹಾಗೂ ಉತ್ಪ್ರೇಕ್ಷೆ ಬೇಡ ಎಂದು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ತಿಳಿಸಿದ್ದಾರೆ.
ಇತಿಹಾಸದ ಪಠ್ಯ ಪುಸ್ತಕಗಳಲ್ಲಿ ಇದ್ದ ಇತಿಹಾಸಕಾರರ ವೈಯುಕ್ತಿಕ ಅಭಿಪ್ರಾಯ ತೆಗೆಯಲಾಗಿದೆ. ಕೇವಲ ಇತಿಹಾಸವನ್ನಷ್ಟೇ ಪಠ್ಯ ಪುಸ್ತಕಗಳಲ್ಲಿ ನೀಡಲಾಗಿದೆ. ಜೊತೆಗೆ ಹೊಸ ಪಠ್ಯಗಳನ್ನು ಕೂಡಾ ಈ ಪ್ರಸಕ್ತ ಸಾಲಿನಿಂದ ಸೇರಿಸಲು ನಿರ್ಧರಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ, ಕಾಶ್ಮೀರದಲ್ಲಿನ ಕಾರ್ಕೋಟ ರಾಜವಂಶದ ಬಗ್ಗೆ, ಕಾಶ್ಮೀರದಲ್ಲಿ 36 ವರ್ಷ ಆಳ್ವಿಕೆ ಮಾಡಿದಂತಹ ಲಲಿತಾಧಿತ್ಯ ರಾಜನ ಬಗ್ಗೆ ಪಠ್ಯ ಸೇರಿಸಲಾಗಿದೆ. ಜೊತೆಗೆ ಈಶಾನ್ಯ ಭಾರತದಲ್ಲಿ ಆಳ್ವಿಕೆ ನಡೆಸಿದ ಅಹೋಮ್ ರಾಜ್ಯವಂಶದ ಬಗ್ಗೆ ಮಾಹಿತಿ ನೀಡಲಾಗಿದೆ. ಹಾಗೇ ಸದ್ಯಕ್ಕೆ ದತ್ತ ಪೀಠಕ್ಕೆ ಸಂಬಂದಿಸಿದ ಯಾವುದೇ ಹೊಸ ಪಾಠಗಳನ್ನು ನೀಡಲಾಗಿಲ್ಲ. ದತ್ತಪೀಠಕ್ಕೆ ಸಂಬಂಧಿಸಿದಂತೆ ಯಾವುದೇ ದಾರ್ಮಿಕ ವಿಷಯ ಉಲ್ಲೇಖ ಮಾಡಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.
ಹೀಗೆ ಟಿಪ್ಪುವಿನ ಸಾಹಸಗಾಥೆಗಳು ಮಕ್ಕಳ ಮನಸ್ಸಿನಿಂದ ದೂರತಳ್ಳುವ ಕುತಂತ್ರಗಳನ್ನು ಜಾರಿ ಮಾಡಲಾಗಿದೆ. ಬ್ರಿಟೀಷರ ಮುಂದೆ ಕೊನೆಯುಸಿರು ಇರುವವರೆಗೆ ಹೋರಾಡಿ ದೇಶಕ್ಕಾಗಿ ಮಡಿದ ಟಿಪ್ಪುವಿನಂಥಾ ವೀರರ ಯಶೋಗಾಥೆಗಳನ್ನು ವೈಭವೀಕರಿಸಲಾಗಿದೆ ಎಂದು ನೆಪಕೊಟ್ಟು ಪಠ್ಯಪುಸ್ತಗಳಿಂದ ಅಳಿಸಿಹಾಕಲಾಗುತ್ತಿದೆ. ಆದರೆ ಇತಿಹಾಸದಿಂದ ಅಳಿಸಲಾಗದ ವ್ಯಕ್ತಿತ್ವ ಹೊಂದಿರುವ ಟಿಪ್ಪು ಎಂದಿಗೂ ಈ ನೆಲದ ಹಾಗೂ ಜನರ ನೆಚ್ಚಿನ ಸ್ಪೂರ್ತಿ. ಒಟ್ಟಾರೆ ಧರ್ಮದ ವಿಚಾರವನ್ನಿಟ್ಟುಕೊಂಡು ಪಠ್ಯಗಳಲ್ಲಿ ವೈಭವೀಕರಣ ಬೇಡ ಎನ್ನಲಾಗುತ್ತಿದ್ದು, ಹೇಗಿರಲಿದೆ ಪಠ್ಯ ಪುಸ್ತಕಗಳು ಎಂಬುದನ್ನು ಕಾದು ನೋಡಬೇಕಿದೆ.