
ಬೆಂಗಳೂರು:ಶಾಲೆಯಲ್ಲಿ ನೀಡಿದ್ದ ಐರನ್ ಮಾತ್ರೆ ಸೇವಿಸಿದ ವಿದ್ಯಾರ್ಥಿಗಳು ತೀವ್ರ ಅಸ್ವಸ್ಥರಾದ ಘಟನೆ ನೆಲಮಂಗಲ ನಗರದ ಕೋಟೆಬೀದಿ ಸರ್ಕಾರಿ ಶಾಲೆಯಲ್ಲಿ ಇಂದು ನಡೆದಿದೆ.

ಇಂದು ಬೆಳಗ್ಗೆ ಶಾಲೆಯಲ್ಲಿ ಎಲ್ಲಾ ಮಕ್ಕಳಿಗೆ ಐರನ್ ಮಾತ್ರೆಗಳನ್ನು ಶಿಕ್ಷಕರು ನೀಡಿದ್ದು, ಮಾತ್ರೆ ಸೇವಿಸಿದ ಮಕ್ಕಳು ಕೆಲ ಗಂಟೆಯಲ್ಲಿ ವಿಪರೀತ ವಾಂತಿಯಿಂದ ನರಳಿ ಅಸ್ವಸ್ಥರಾಗಿದ್ದಾರೆ.ಬಳಿಕ ಅವರನ್ನು ನೆಲಮಂಗಲದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಶಾಲೆಯಲ್ಲಿ ಮಕ್ಕಳಿಗೆ ತಲಾ ಒಂದು ಮಾತ್ರೆ ನೀಡಲಾಗಿತ್ತು ಕೆಲ ಮಕ್ಕಳು ಹೆಚ್ಚು ಮಾತ್ರೆ ಸೇವಿಸಿದ್ದರಿಂದ ಅಸ್ವಸ್ಥರಾಗಿದ್ದು, ಇದಕ್ಕೆ ಶಿಕ್ಷಕರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಮಕ್ಕಳ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ನೆಲಮಂಗಲದ ಆಸ್ಪತ್ರೆಯಲ್ಲಿ ಇಬ್ಬರು ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಮೂವರು ಮಕ್ಕಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.