2019ರಲ್ಲಿ ಉತ್ತರಪ್ರದೇಶಾದ್ಯಂತ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (CAA-NRC) ಪ್ರತಿಭಟನೆ ವೇಳೆ ಭಾಗವಹಿಸಿದ ಪ್ರತಿಭಟನಕಾರರಿಂದ ವಸೂಲಿ ಮಾಡಿರುವ ಕೋಟ್ಯಂತರ ರೂಪಾಯಿ ಹಣವನ್ನು ಹಿಂತಿರುಗಿಸುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ.
ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ನ ದ್ವಿಸದಸ್ಯ ಪೀಠ, ಪ್ರತಿಭಟನೆಯಲ್ಲಿ ಭಾಗಿಯಾದ ಜನರ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಕ್ರಮದಲ್ಲಿ ರಾಜ್ಯ ಸರ್ಕಾರವು ತನ್ನನು ತಾನು ಅತಿಕ್ರಮಿಸಿಕೊಂಡಿರಬಹುದು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
2019ರ ವರ್ಷಾಂತ್ಯದಲ್ಲಿ ನಡೆದ ಪ್ರತಿಭಟನೆಯ ಕೆಲವು ಸ್ಥಳಗಳಲ್ಲಿ ಹಿಂಸಾಚಾರ ಭುಗಿಲೆದ್ದ ಕಾರಣ ಉತ್ತರಪ್ರದೇಶದ ಅನೇಕ ಕಡೆ ಪ್ರತಿಭಟನಕಾರರು ಸಾರ್ವಜನಿಕ ಆಸ್ತಿಯನ್ನು ಧ್ವಂಸಗೊಳಿಸಿ ಸುಟ್ಟುಹಾಕಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಆರೋಪಿಸಿತ್ತು.
2011ರಲ್ಲಿ ನಡೆದ ಮೊಹಮ್ಮದ್ ಮುಜಾವುದ್ದೀನ್ ಪ್ರಕರಣದಲ್ಲಿ ಅಲಹಾಬಾದ್ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿ ಯುಪಿ ಸರ್ಕಾರವು ಹಾನಿಗೊಳಗಾದ ಅಸ್ತಿ ವೆಚ್ಚವನ್ನು ಪಡೆಯಲು ರಾಜ್ಯ ಸರ್ಕಾರವು ಪ್ರತಿಭಟನೆಯಲ್ಲಿ ಭಾಗಿಯಾದವರಿಗೆ ನೋಟಿಸ್ ಜಾರಿಗೊಳಿಸಿತ್ತು.