2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಈಗಾಗಲೇ ರಾಜಕೀಯ ನಾಯಕರು ಅಖಾಡಕ್ಕಿಳಿದು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇಂದು ಕಾಗವಾಡದ ಅನಂತಪುರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಮತಪ್ರಚಾರ ನಡೆಸಿದ್ದು, ಪ್ರಚಾರದ ವೇಳೆ ಮತ್ತೆ ಲಕ್ಷ್ಮಣ ಸವದಿ ವಿರುದ್ದ ಹರಿಹಾಯ್ದರು. ʻಅಥಣಿ ಜನ ಒಳಗಿಂದೊಳಗೆ ತಯಾರಿ ಆಗಿ ಕುಳಿತಿದ್ದಾರೆ. ಸವದಿಯನ್ನ ಕೆಡವೋಕೆ ಜನ ಒಳಗಿಂದೊಳಗೆ ತಯಾರಾಗಿದ್ದಾರೆ. ಅಂಬಾದೇವಿಯ ಆಶೀರ್ವಾದದಿಂದ ಅದೊಂದು ಆದರೆ ಸವದಿ ಹೆಣ ಬಿದ್ದಂಗೆ ಲೆಕ್ಕ. ಸವದಿ ದುಡ್ಡು ಕೊಟ್ಟರೆ ತೆಗೆದುಕೊಳ್ಳೊ ದುಡ್ಡು ಅವಂದಲ್ಲ, ಅದು ನಮ್ಮದು.. ನಾವು ಸರ್ಕಾರ ತಂದಿದ್ದರಿಂದ ಆತ ಮಂತ್ರಿಯಾದ. ಅವನಲ್ಲಿರೋದು ನಮ್ಮ ದುಡ್ಡು. ಆ ದುಡ್ಡು ತಗೊಂಡು ಬಿಜೆಪಿಗೆ ಮತ ನೀಡಿ. ಕಡೆಯ ಘಳಿಗೆಯಲ್ಲಿ ಸವದಿಗೆ ಸ್ವಾಭಿಮಾನ ಕಾಡ್ತಿದೆ. ಎರಡು ವರ್ಷ ಆತ ಆರಾಮಾಗಿದ್ದ. ಚುನಾವಣೆ ಘೋಷಣೆ ಆದ ಬಳಿಕ ಅವನಿಗೆ ಸ್ವಾಭಿಮಾನ ಕಾಡ್ತಿದೆ.
ಗಂಡಸಾಗಿದ್ರೆ ಶ್ರೀಮಂತ ಪಾಟೀಲ್, ಮಹೇಶ ಕುಮಟಳ್ಳಿ ರಮೇಶ ತಂದ ಸರ್ಕಾರದಲ್ಲಿ ಮಂತ್ರಿ ಆಗೊಲ್ಲ ಅಂತ ಹೇಳ್ಬೇಕಿತ್ತು. ಮುಂದೆ ಆರಿಸಿ ಬಂದು ಮಂತ್ರಿ ಆಗ್ತಿನಿ ಅಂದಿದ್ರೆ ಅವನಿಗೆ ಗಂಡ್ಸು ಅಂತ ಅಂತಿದ್ವಿ, ಸವದಿ ಸಾಯ್ಕೊಂಡು ಓಡಿಹೋಗಿ ಮಂತ್ರಿಯಾದ. ಕೊನೆಗೆ ಚುನಾವಣೆ ಘೋಷಣೆಯಾದ ಬಳಿಕ ಅವನಿಗೆ ಸ್ವಾಭಿಮಾನ ಕಾಡಿತು, ಇಂತಹ ಬೋಗಸ್ ಸ್ವಾಭಿಮಾನ ಸವದಿಯದ್ದು ಅಂತ ಲಕ್ಷ್ಮಣ ಸವದಿ ವಿರುದ್ಧ ರಮೇಶ್ ಜಾರಕಿಹೊಳಿ ಕಿಡಿಕಾರಿದರು. ʻಸವದಿ ದ್ವೇಷ ರಾಜಕಾರಣ ಮಾಡ್ತಾನೆ ಅವನನ್ನ ನಂಬಬೇಡಿ. ಅವನನ್ನ ಪೂರ್ಣ ಪ್ರಮಾಣಲ್ಲಿ ಮುಗಿಸಿ ಉಗಾರ ಸಕ್ಕರೆ ಕಾರ್ಖಾನೆಗೆ ಕಬ್ಬು ಕಳಿಸೋಕೆ ಕಳಿಸ್ತಿನಿ, ನಮಗೆ ವಯಕ್ತಿಕವಾಗಿ ದ್ರೋಹ ಮಾಡಿದ್ದಾನೆʼ ಅಂತ ರಮೇಶ್ ಜಾರಕಿಹೊಳಿ ಲಕ್ಷ್ಮಣ ಸವದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.