ರಾಜ್ಯ ರಾಜಕಾರಣದಲ್ಲಿ ನಿರಂತರ ಸದ್ದು ಮಾಡುವ ಏಕೈಕ ಜಿಲ್ಲೆ ಬೆಳಗಾವಿ. ಇದಕ್ಕೆ ಕಾರಣ ಜಾರಕಿಹೊಳಿ ಕುಟುಂಬದ ರಾಜಕಾರಣ. ಬೆಳಗಾವಿ ಮತ್ತು ಕರ್ನಾಟಕದ ರಾಜಕಾರಣದಲ್ಲಿ ಕಳೆದ 2 ದಶಕದಿಂದ ಜಾರಕಿಹೊಳಿ ಕುಟುಂಬ ಕಡೆಗಣಿಸಲು ಸಾಧ್ಯವಿಲ್ಲದಂತೆ ಬೆಳೆದು ನಿಂತಿದೆ.
ಮಾಜಿ ಸಚಿವ ರಮೇಶ ಜಾರಕಿಹೊಳಿ ಗೋಕಾಕ ಕ್ಷೇತ್ರದಲ್ಲಿ, ಬಾಲಚಂದ್ರ ಜಾರಕಿಹೊಳಿ ಅರಬಾವಿ ಕ್ಷೇತ್ರದಲ್ಲಿ, ಸತೀಶ್ ಜಾರಕಿಹೊಳಿ ಯಮಕನಮರಡಿ ಕ್ಷೇತ್ರದಲ್ಲಿ ಹಿಡಿತ ಸಾಧಿಸಿ ಸತತವಾಗಿ ಗೆಲ್ಲುತ್ತಲೇ ಬಂದಿದ್ದಾರೆ. ಯಾವುದೇ ಸರ್ಕಾರ ಬಂದರೂ ಕುಟುಂಬದ ಒಬ್ಬರಿಗೆ ಸಚಿವ ಸ್ಥಾನ ಸಿಗಲಿದೆ. ಹಾಗಾಗಿ ಮೂವರು ಸಚಿವರಾಗಿ ಕೆಲಸ ನಿರ್ವಹಿಸಿದ್ದಾರೆ.
ಇದೇ ಮೊದಲ ಬಾರಿಗೆ ಜಾರಕಿಹೊಳಿ ಕುಟುಂಬದ ಸೈಲೆಂಟ್ ಮ್ಯಾನ್ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮುಂದಿನ 2023 ವಿಧಾನಸಭಾ ಚುನಾವಣೆಯನ್ನ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದಾರೆ. ಹೇಗಾದರು ಸರಿ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಬೇಕು ಎಂದು ಹೊರಟಿದ್ದಾರೆ. ಸತೀಶ್ ಜಾರಕಿಹೊಳಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ನಂತರ ಯಮಕನಮರಡಿ ಕ್ಷೇತ್ರವನ್ನು ಆಯ್ದುಕೊಂಡರು. ಕುಟುಂಬದ ಸಹೋದರರಲ್ಲಿ ಬೇರೆಲ್ಲರಿಗಿಂತ ಭಿನ್ನವಾಗಿ ಹೆಜ್ಜೆ ಹಾಕುತ್ತ ಬಂದಿರುವ ಸತೀಶ್ ಈಗ ಇಡೀ ಬೆಳಗಾವಿಯಲ್ಲಿ ಕಾಂಗ್ರೆಸ್ ಗೆಲ್ಲಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

2004ಕ್ಕಿಂತ ಮೊದಲು ಕಾಂಗ್ರೆಸ್ ಹಿಡಿತದಲ್ಲಿದ್ದ ಇಡೀ ಬೆಳಗಾವಿ ಜಿಲ್ಲೆಯನ್ನು ಮರಳಿ ಪಕ್ಷಕ್ಕೆ ತರುವ ಸವಾಲಿನೊಂದಿಗೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಕಳೆದ ಹತ್ತು ವರ್ಷಗಳಿಗಿಂತಲೂ ಈಗ ಕಾಂಗ್ರೆಸ್ಗೆ ಹಲವು ಕಾರಣಗಳಿಗಾಗಿ ಜಿಲ್ಲೆಗೆ ಹತ್ತಿರವಾಗಿದೆ.
ಬೆಲೆ ಏರಿಕೆ ನಿಯಂತ್ರಣದಲ್ಲಿ ವಿಫಲ, ಆಡಳಿತದಲ್ಲಿ ಭ್ರಷ್ಟಾಚಾರ, ಪಕ್ಷದೊಳಗಿನ ಭಿನ್ನಮತ, ಮೂಲ ಬಿಜೆಪಿಗರ ಕಡೆಗಣನೆ, ಬೆಳಗಾವಿ ಸುವರ್ಣ ವಿಧಾನಸೌಧವನ್ನು ಭೂತಬಂಗಲೆಯಾಗಿಸಿರುವುದು. ಹೀಗೆ ಹತ್ತಾರು ವಿಚಾರಗಳನ್ನು ಮುಂದಿಟ್ಟುಕೊಂಡು ಮುಂದೆ ಚುನಾವಣೆಗೆ ಹೋಗಲು ಸತೀಶ್ ಜಾರಕಿಹೊಳಿ 2023 ವಿಧಾನಸಭಾ ಚುನಾವಣೆಗೆ ಹೋಗಲು ಮುಂದಾಗಿದ್ದಾರೆ.
ಸತೀಶ್ ಜಾರಕಿಹೊಳಿ ಬೆಳಗಾವಿ ಕಾಂಗ್ರೆಸ್ ಪಾಲಿನ ಚಾಣಾಕ್ಯ ರಾಜಕಾರಣಿ. ಅಹಿಂದ ಸಂಘಟನೆಯಲ್ಲಿ ಮಹತ್ವದ ಪಾತ್ರವಹಿಸಿರುವ ಸತೀಶ್, 2023ರ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಇತ್ತೀಚೆಗೆ ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆಯ ಕೆಲಸ ಚುರುಕುಗೊಳಿಸಿದ್ದಾರೆ. ಉಪಚುನಾವಣೆ ವೇಳೆ ಮತ ಹಾಕಿದ ಜನರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಅಲ್ಪ ಮತದಲ್ಲಿ ಸೋತರೂ ಭವಿಷ್ಯದ ರಾಜಕಾರಣದಲ್ಲಿ ಮತ್ತಷ್ಟು ಗಟ್ಟಿಯಾಗಲು ಜಾರಕಿಹೊಳಿ ತಮ್ಮದೇ ಸರಳ ಶೈಲಿಯಲ್ಲಿ ಕ್ಷೇತ್ರದಾದ್ಯಂತ ಸಂಚಾರ ನಡೆಸುತ್ತಿದ್ದಾರೆ.
2023ರ ಚುನಾವಣೆಗೆ ಮಾಸ್ಟರ್ ಪ್ಲಾನ್ ಹೆಣೆದಿರುವ ಇವರು, ಸಮಯ ವ್ಯರ್ಥ ಮಾಡದೆ ಪ್ರತಿ ಹಳ್ಳಿಗೂ ಭೇಟಿ ನೀಡುತ್ತಿದ್ದಾರೆ. ಕಾರ್ಯಕರ್ತರು ಮತ್ತು ಜನರ ಜೊತೆ ಸಮಾಲೋಚಿಸುತ್ತಿದ್ದಾರೆ. ಈ ಮೂಲಕ ಮತದಾರರನ್ನು ಹಿಡಿದಿಟ್ಟುಕೊಳ್ಳಲು ಸತೀಶ್ ರಣತಂತ್ರ ಹೆಣೆದಿದ್ದಾರೆ.
ಸತೀಶ್ ಜಾರಕಿಹೊಳಿ ಮಹತ್ವಾಕಾಂಕ್ಷಿ ರಾಜಕಾರಣಿ. ಉನ್ನತ ಹುದ್ದೆಯ ಮೇಲೆ ಕಣ್ಣಿಟ್ಟು ಕುಳಿತಿರುವ ಹಿಂದುಳಿದ ಸಮುದಾಯದ ನಾಯಕ. ಮೊದಲು ಬೆಳಗಾವಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಕೆಲಸ ಚುರುಕುಗೊಳಿಸಬೇಕು. ಜಿಲ್ಲೆಯ 2 ಲೋಕಸಭಾ ಕ್ಷೇತ್ರಗಳಾದ ಬೆಳಗಾವಿ ಮತ್ತು ಚಿಕ್ಕೋಡಿ-ಸದಲಗಾ ಕ್ಷೇತ್ರದ ಮೇಲೆ ಹಿಡಿತ ಸಾಧಿಸಬೇಕು. ಇದರ ಜೊತೆಗೆ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ 10 ಸ್ಥಾನ ಕಾಂಗ್ರೆಸ್ ಮಡಿಲಿಗೆ ತುಂಬಿಸಬೇಕು ಅನ್ನೋದು ಇವರ ಗುರಿ.
ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಮಂಗಳಾ ಅಂಗಡಿ ವಿರುದ್ಧ ಅಲ್ಪಮತದಲ್ಲಿ ಸತೀಶ್ ಜಾರಕಿಹೊಳಿ ಸೋಲು ಕಂಡಿದ್ದರು. ಸೋತರು ಕಾಂಗ್ರೆಸ್ ಪಾಲಿಗೆ ಸತೀಶ್ ಗಳಿಸಿದ್ದ ಭಾರೀ ಮತಗಳು ಹೊಸ ಆಶಾಭಾವ ಹುಟ್ಟುಹಾಕಿದೆ. ಇದರ ಬೆನ್ನಲ್ಲೇ ಮುಂದಿನ 2023 ವಿಧಾನಸಭಾ ಚುನಾವಣೆಗೆ ಬೇಕಾದ ಅಗತ್ಯ ತಯಾರಿ ಶುರು ಮಾಡಿದ್ದಾರೆ.
ಕ್ಷೇತ್ರದಲ್ಲಿ ಜಾರಕಿಹೊಳಿ ಕುಟುಂಬದಿಂದ ನನ್ನದು ಮಾತ್ರ ಹಿಡಿತ ಇರಬೇಕು. ಅದಕ್ಕಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕನಿಷ್ಠ 10 ಅಭ್ಯರ್ಥಿಗಳನ್ನು ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಿಸಬೇಕು. ಈ ಮೂಲಕ ನನ್ನ ವಿರುದ್ಧ ಇರುವ ಜಾರಕಿಹೊಳಿ ಸಹೋದರರಿಗೆ ನಾನು ಏನು ಎಂದು ತೋರಿಸಬೇಕು. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳಬೇಕು ಎಂದು ಸತೀಶ್ ಹೊರಟಿದ್ದಾರೆ.


